ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಾಧ ತಡೆಗೆ ಬೀಟ್‌ ಪೊಲೀಸ್‌ ವ್ಯವಸ್ಥೆ

ರಾಜ್ಯ ಪೊಲೀಸ್ ಮಹಾ ನಿರ್ದೇಶಕ ರೂಪಕ್‌ ಕುಮಾರ್ ದತ್ತ ಹೇಳಿಕೆ
Last Updated 22 ಏಪ್ರಿಲ್ 2017, 3:55 IST
ಅಕ್ಷರ ಗಾತ್ರ
ದಾವಣಗೆರೆ: ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಹಾಗೂ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯಾಗಿಸಲು ಪ್ರತಿಯೊಂದು ಠಾಣಾ ವ್ಯಾಪ್ತಿಯಲ್ಲಿ ‘ಬೀಟ್‌ ಪೊಲೀಸ್‌’ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ರೂಪಕ್‌ ಕುಮಾರ್ ದತ್ತ ತಿಳಿಸಿದರು.
 
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನೂತನ ಪೊಲೀಸ್ ಸಭಾಂಗಣ ಹಾಗೂ ಜಿಲ್ಲಾ ಪೊಲೀಸ್‌ ವೆಬ್‌ಸೈಟ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಬೀಟ್‌ ಪೊಲೀಸ್‌ ವ್ಯವಸ್ಥೆಯಡಿ ಶೇ 90ರಷ್ಟು ಸಿಬ್ಬಂದಿಗೆ ಹೆಚ್ಚಿನ ಜವಾಬ್ದಾರಿ ವಹಿಸಲಾಗುವುದು.
 
ಪ್ರತಿ ಠಾಣಾ ವ್ಯಾಪ್ತಿಯಲ್ಲಿರುವ ಜನಸಂಖ್ಯೆ ಆಧರಿಸಿ ಬಡಾವಣೆಗಳನ್ನು ವಿಂಗಡಿಸಿ, ಪ್ರತಿ ಸಿಬ್ಬಂದಿಗೂ ಒಂದೊಂದು ಬಡಾವಣೆಯ ಉಸ್ತುವಾರಿ ನೀಡಲಾಗುವುದು’ ಎಂದು ತಿಳಿಸಿದರು.
 
‘ವಾರ್ಡ್‌ವಾರು ಅಧಿಕಾರಿಗಳ ನಿಯೋಜನೆಯ ಮಾಹಿತಿ ಪೊಲೀಸ್ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದ್ದು, ಸಾರ್ವಜನಿಕರು ಮಾಹಿತಿ ಪಡೆಯಬಹುದು. ನಿಮ್ಮ ಬಡಾವಣೆಯ ಬೀಟ್‌ ಅಧಿಕಾರಿಯ ಬಳಿ ದೂರುಗಳನ್ನು ಸಲ್ಲಿಸಬಹುದು’ ಎಂದರು.
 
‘ಫ್ರೆಂಡ್‌ ಕಮ್‌ ಪೊಲೀಸ್‌’: ಪೊಲೀಸ್‌ ಠಾಣೆಗಳು ಹೆಚ್ಚು ಜನಸ್ನೇಹಿಯಾಗದ ಕಾರಣ ಇಂದಿಗೂ ಸಾರ್ವಜನಿಕರು ಠಾಣೆ ಮೆಟ್ಟಿಲು ಹತ್ತಲು ಹೆದರುತ್ತಾರೆ. ಪೊಲೀಸರ ಹಾಗೂ ನಾಗರಿಕರ ಮಧ್ಯೆ ಇರುವ ಅಂತರ ತಗ್ಗಿಸಲು ಬೀಟ್‌ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇಲ್ಲಿ ಪೊಲೀಸರು ದೂರು ದಾಖಲಿಸಿಕೊಳ್ಳುವುದು ಮಾತ್ರವಲ್ಲ, ನಿಮ್ಮ ಸ್ನೇಹಿತನಾಗಿ ನೈತಿಕ ಸ್ಥೈರ್ಯವನ್ನೂ ತುಂಬಲಿದ್ದಾರೆ’ ಎಂದರು.
 
‘ಆಯಾ ಬಡಾವಣೆಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ ಹೊಣೆಗಾರಿಕೆ ಬೀಟ್‌ ಅಧಿಕಾರಿಯ ಮೇಲಿರುತ್ತದೆ. ಕಾನೂನು ಬಾಹಿರ ಕೃತ್ಯಗಳು ನಡೆದಾಗ ಮೇಲಧಿಕಾರಿಗೆ ಮಾಹಿತಿ ನೀಡಿ, ದೂರು ದಾಖಲಿಸಲು ದೂರುದಾರರಿಗೆ ನೆರವಾಗಬೇಕು. ಈ ಹಂತದಲ್ಲಿ ಕರ್ತವ್ಯ ಲೋಪ ಎಸಗಿದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
 
ಸೈಬರ್ ಅಪರಾಧ ತಡೆಗೆ ಕ್ರಮ: ‘ರಾಜ್ಯದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು, ಭವಿಷ್ಯದಲ್ಲಿ ಸವಾ ಲಾಗಿ ಪರಿಣಮಿಸಲಿವೆ. ಈ ನಿಟ್ಟಿನಲ್ಲಿ ಸೈಬರ್ ತಜ್ಞ ಸಿಬ್ಬಂದಿಯ ನೇಮಕಕ್ಕೆ ಹಾಗೂ ಅತ್ಯಾಧುನಿಕ ಉಪಕರಣಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.
 
‘2015ರಲ್ಲಿ ಸರ್ಕಾರ 41 ಸೈಬರ್ ಠಾಣೆಗಳನ್ನು ಮಂಜೂರು ಮಾಡಿತ್ತು. ಅದರಂತೆ, ಜಿಲ್ಲೆಗೊಂದು ಹಾಗೂ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಎರಡು ಸೈಬರ್ ಠಾಣೆಗಳು ಕಾರ್ಯ ನಿರ್ವಹಿಸುತ್ತಿವೆ. ಎಲ್ಲ ಠಾಣೆಗಳಿಗೂ ಹೆಚ್ಚಿನ ಸೌಲಭ್ಯ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.
 
ಶನಿವಾರ ಅಧಿಕಾರಿಗಳ ಜತೆ ಸಭೆ ನಡೆಸಿ ಪೂರ್ವವಲಯ ವ್ಯಾಪ್ತಿಯ ಸಮಸ್ಯೆಗಳ ಕುರಿತು ಚರ್ಚಿಸಲಾಗುವುದು. ಬಳಿಕ ಶಿವಮೊಗ್ಗಕ್ಕೆ ತೆರಳಲಾಗುವುದು ಎಂದು ಡಿಜಿಪಿ ತಿಳಿಸಿದರು.

ಪೂರ್ವವಲಯ ಐಜಿಪಿ ಡಾ.ಎಂ.ಎ. ಸಲೀಂ, ಎಸ್‌ಪಿ ಡಾ.ಭೀಮಾಶಂಕರ ಎಸ್‌.ಗುಳೇದ ಮಾತನಾ ಡಿದರು. ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
***
‘ಎಚ್‌ಸಿ, ಎಎಸ್‌ಐಗಳಿಗೆ ಹೊಣೆಗಾರಿಕೆ’
ಹೆಡ್‌ ಕಾನ್‌ಸ್ಟೆಬಲ್‌ಗಳ ಹಾಗೂ ಎಎಸ್‌ಐಗಳ ಕಾರ್ಯಕ್ಷಮತೆ ಹಾಗೂ ಜವಾಬ್ದಾರಿ ಹೆಚ್ಚಿಸಲು ನಿರ್ದಿಷ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲು ಮಾಡಿಕೊಳ್ಳುವ ಹಾಗೂ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸುವ ಅಧಿಕಾರ ನೀಡಲಾಗುವುದು.
 
ಇದರಿಂದ ಠಾಣಾಧಿಕಾರಿಗಳ ಮೇಲಿನ ಕಾರ್ಯದೊತ್ತಡ ಕಡಿಮೆಯಾಗಲಿದೆ. ಕೆಳಹಂತದ ಸಿಬ್ಬಂದಿಗೂ ಹೆಚ್ಚಿನ ಜವಾಬ್ದಾರಿ ಬರಲಿದೆ ಎಂದು ಡಿಜಿಪಿ ತಿಳಿಸಿದರು.
****
‘ಆ ದಿನಗಳ ಮೆಲುಕು’
1984ರಲ್ಲಿ ದಾವಣಗೆರೆ ಎಎಸ್‌ಪಿಯಾಗಿ ವೃತ್ತಿಜೀವನ ಆರಂಭಿಸಿದೆ. ಅಂದು ದಾವಣಗೆರೆ, ಅವಿಭಜಿತ ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿತ್ತು. ನಗರ ಇಂದಿನಂತೆ ವಿಸ್ತಾರವಾಗಿರಲಿಲ್ಲ. ಆಟೊ ಚಾಲಕರ ಸಮಸ್ಯೆ ಹೆಚ್ಚಾಗಿತ್ತು. ಅವಧಿಮೀರಿ ಹೊಟೆಲ್‌ಗಳನ್ನು ತೆರೆಯಲಾಗುತ್ತಿತ್ತು. ಇದರ ವಿರುದ್ಧ ನಿರಂತರ ದಾಳಿ ಮಾಡಿದ್ದೆ. ದಾವಣಗೆರೆಯಲ್ಲಿದ್ದಾಗಲೇ ಮದುವೆಯಾಗಿದ್ದೆ ಎಂದು ದಾವಣಗೆರೆ ಜತೆಗಿನ ನೆನಪುಗಳನ್ನು ಡಿಜಿಪಿ ತೆರೆದಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT