ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಸ್ತೂರಿರಂಗನ್ ವರದಿ ಹೆಸರಿನಲ್ಲಿ ಅಭಿವೃದ್ಧಿಗೆ ಅಡ್ಡಿ’

Last Updated 22 ಏಪ್ರಿಲ್ 2017, 4:01 IST
ಅಕ್ಷರ ಗಾತ್ರ
ಸಾಗರ: ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಕಸ್ತೂರಿರಂಗನ್ ವರದಿ ಹೆಸರಿನಲ್ಲಿ ಜೋಗ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ತೀ.ನಾ.ಶ್ರೀನಿವಾಸ್ ದೂರಿದರು. 
 
‘ಜೋಗ ಜಲಪಾತ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಇಲಾಖೆ ನಿರ್ಮಿಸಿರುವ ಹೋಟೆಲ್ ಆರಂಭಕ್ಕೆ ಅರಣ್ಯ ಇಲಾಖೆ ತಕರಾರು ಮಾಡುತ್ತಿದೆ. ಇದರಿಂದ ನಷ್ಟವಾಗುತ್ತಿದೆ ಎಂದು ಸಂಬಂಧಪಟ್ಟ ಗುತ್ತಿಗೆದಾರರು ಸರ್ಕಾರದ ವಿರುದ್ಧ ದಾವೆ ಹೂಡಿದ್ದಾರೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
 
ಕಾರ್ಗಲ್– ಭಟ್ಕಳ ನಡುವೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ, ಚೋರಡಿಯಲ್ಲಿ ಸೇತುವೆ ಕಾಮಗಾರಿ ಸೇರಿದಂತೆ ಹಲವು ಕಾಮಗಾರಿಗಳಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ. ಅಲ್ಲದೇ ಕಸ್ತೂರಿರಂಗನ್ ವರದಿ ಜಾರಿಯಾದರೆ ಕಂದಾಯ ಹಾಗೂ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಫಲಾನುಭವಿಗಳಿಗೆ ಹಕ್ಕುಪತ್ರ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. 
 
ಶರಾವತಿ ಜಲವಿದ್ಯುತ್ ಯೋಜನೆಗಾಗಿ ಸಾಗರ–ಹೊಸನಗರ ತಾಲ್ಲೂಕುಗಳಲ್ಲಿ 1 ಲಕ್ಷ ಎಕರೆ ಭೂಮಿ ಮುಳುಗಡೆಯಾಗಿದೆ. ಇದರಿಂದ ಸಂತ್ರಸ್ತರಾದವರಿಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಭೂಮಿ ಒದಗಿಸಲು ಸಾಧ್ಯವಾಗಿಲ್ಲ.
 
1978ನೇ ಸಾಲಿಗೆ ಮುಂಚಿತವಾಗಿ ಸಾಗುವಳಿ ಮಾಡುತ್ತಿರುವ 3,600 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲು ಅರಣ್ಯ ಇಲಾಖೆಯೇ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕಸ್ತೂರಿರಂಗನ್ ವರದಿ ಜಾರಿಯಾದರೆ ಈ ಎಲ್ಲ ಕೆಲಸಗಳು ಮತ್ತೆ ನನೆಗುದಿಗೆ ಬೀಳಲಿವೆ ಎಂದರು. 
 
ರಾಜ್ಯ ಸರ್ಕಾರ ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸುವಂತೆ ಸಚಿವ ಸಂಪುಟದಲ್ಲಿ ಈಗಾಗಲೇ ತೀರ್ಮಾನಿಸಿದೆ. ವರದಿಗೆ ತಕರಾರು ಸಲ್ಲಿಸಲು ಮೇ 8 ಕೊನೆಯ ದಿನವಾಗಿದ್ದು, ರಾಜ್ಯ ಸರ್ಕಾರ ತನ್ನ ಪಾಲಿನ ಕರ್ತವ್ಯ ನಿರ್ವಹಿಸಿದೆ.
 
ಕೇಂದ್ರ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಕಸ್ತೂರಿರಂಗನ್ ವರದಿ ಸಂಬಂಧ ಹೊರಡಿಸಿರುವ ಅಧಿಸೂಚನೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಮುಖಂಡರಾದ ಖಂಡಿಕಾ ಪ್ರಭಾಕರ್, ಕೆ.ಸಿದ್ಧಪ್ಪ ಇದ್ದರು. 
***
‘ಸಭೆಯಲ್ಲಿ ಪಾಲ್ಗೊಳ್ಳದ ಬಿ.ಎಸ್.ವೈ’
ಕೇಂದ್ರ ಪರಿಸರ ಮಂತ್ರಿಗಳು 2016ರ ಆಗಸ್ಟ್‌ 11ರಂದು ಕಸ್ತೂರಿರಂಗನ್ ವರದಿ ಕುರಿತು ಪಶ್ಚಿಮಘಟ್ಟ ಪ್ರದೇಶದ ಸಂಸದರ ಸಭೆ ಕರೆದಿದ್ದರು. ಆದರೆ, ಆ ಸಭೆಗೆ ಸಂಸದ ಬಿ.ಎಸ್.ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಗೈರು ಹಾಜರಾಗುವ ಮೂಲಕ ಬೇಜವಾಬ್ದಾರಿ ತೋರಿದ್ದಾರೆ ಎಂದು ಶ್ರೀನಿವಾಸ್ ದೂರಿದರು.

‘ಆಗ ಸಭೆಯಲ್ಲಿ ಭಾಗವಹಿಸದ ಅವರು ಈಗ ಕಸ್ತೂರಿರಂಗನ್ ವರದಿಯನ್ನು ವಿರೋಧಿಸುವುದಾಗಿ ಹೇಳುವ ಮೂಲಕ ಜನರನ್ನು ತಪ್ಪು ಹಾದಿಗೆ ಎಳೆಯುತ್ತಿದ್ದಾರೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT