ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ವಸತಿ ಶಾಲೆಗೆ ನಿವೇಶನ ನೀಡಿ

ಹೊಸನಗರ: ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಕಾಗೋಡು ತಿಮ್ಮಪ್ಪ ಸೂಚನೆ
Last Updated 22 ಏಪ್ರಿಲ್ 2017, 4:04 IST
ಅಕ್ಷರ ಗಾತ್ರ
ಹೊಸನಗರ: ‘ಈ ವರ್ಷ ಹೊಸದಾಗಿ ಮಂಜೂರಾಗಿರುವ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗೆ  ನಿವೇಶನ ನೀಡಬೇಕು’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ತಹಶೀಲ್ದಾರ್ ಚಂದ್ರಶೇಖರ ನಾಯ್ಕ ಅವರಿಗೆ ಸೂಚಿಸಿದರು.
 
ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ್‌ ಮಾತನಾಡಿ, ‘ತಾಲ್ಲೂಕಿನ ಕೆರೆಹಳ್ಳಿ ಹಾಗೂ ಹುಂಚಾ ಹೋಬಳಿಗೆ ಅಂಬೇಡ್ಕರ್ ವಸತಿ ಶಾಲೆ ಮಂಜೂರಾಗಿದ್ದು, ಈ ವರ್ಷದಿಂದಲೇ ತರಗತಿಗಳನ್ನು ಆರಂಭಿಸಲಾಗುವುದು’ ಎಂದು ಮಾಹಿತಿ ನೀಡಿದರು.
 
‘ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಈ ಸಾಲಿನ ಜೂನ್‌ನಲ್ಲೇ ತಾತ್ಕಾಲಿಕ ಕಟ್ಟಡದಲ್ಲಿ ವಸತಿ ಶಾಲೆ ಆರಂಭಿಸಲು ಕ್ರಮ ಕೈಗೊಳ್ಳಿ’ ಎಂದು ಸೂಚಿಸಿದರು.
 
‘ವಿವಿಧ ಯೋಜನೆಯಡಿ ತಾಲ್ಲೂಕಿಗೆ ಕುಡಿಯುವ ನೀರಿನ ಯೋಜನೆಗೆ ಸುಮಾರು ₹ 1.20 ಕೋಟಿ ಮಂಜೂರಾಗಿದೆ. ಹಣದ ಸದ್ಬಳಕೆ ಆಗಬೇಕು. ದುರುಪಯೋಗ ಮಾಡಿ ದವರ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.
 
‘ಕೋಣಂದೂರು - ಹೊಸನಗರ ಸಂಪರ್ಕದ 110 ಕೆ.ವಿ. ವಿದ್ಯುತ್ ಸಂಪರ್ಕ ಹಾಗೂ ಆನಂದಪುರ-ರಿಪ್ಪನ್‌ಪೇಟೆ 110 ಕೆ.ವಿ ವಿದ್ಯುತ್ ಸಂಪರ್ಕದ ಕಾಮಗಾರಿಯನ್ನು ಕೂಡಲೆ ಪೂರ್ಣಗೊಳಿಸಿ. ವಿದ್ಯುತ್‌ ಸರಬರಾಜು ಮಾಡಿ’ ಎಂದು ಮೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಂದ್ರಶೇಖರ್‌ಗೆ ಕಾಗೋಡು ಸೂಚಿಸಿದರು.
 
ತಾಲ್ಲೂಕಿಗೆ 250 ವಿದ್ಯುತ್ ಪರಿವರ್ತಕ ಮಂಜೂರಾದರೂ ಅವನ್ನು ಸ್ಥಾಪನೆ ಮಾಡಿಲ್ಲ. ಮೆಸ್ಕಾಂ ಸಿಬ್ಬಂದಿ ಕಾರ್ಯ ನಿರ್ವಹಣೆ ಸಮರ್ಪಕವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕಲಗೋಡು ರತ್ನಾಕರ, ಶ್ವೇತಾ ಬಂಡಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವಾಸಪ್ಪ ಗೌಡ, ಉಪಾಧ್ಯಕ್ಷೆ ಸುಶೀಲಮ್ಮ, ಸದಸ್ಯರಾದ ಚಂದ್ರಮೌಳಿ, ಏರಗಿ ಉಮೇಶ್, ಶಕುಂತಲಮ್ಮ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು. ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರ ಭಟ್ ಸ್ವಾಗತಿಸಿದರು. 
****
‘ಅರಣ್ಯ ಅತಿಕ್ರಮಣ ತಡೆಯಿರಿ’
‘ಹೊಸದಾಗಿ ಅರಣ್ಯ ಒತ್ತುವರಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಈಗಾಗಲೇ ಅರಣ್ಯ ಭೂಮಿ ಮಂಜೂರಾತಿಗೆ ಅರ್ಜಿ ಸಲ್ಲಿಸಿದವರಿಗೆ ಕಿರುಕುಳ ನೀಡದಿರಿ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಾಗೋಡು ತಿಮ್ಮಪ್ಪ ತಾಕೀತು ಮಾಡಿದರು.

‘ಸಂರಕ್ಷಿತ ಕಾಡಿಗೆ ಬೇಲಿ ಹಾಕಿ. ಮತ್ತೆ ಅರಣ್ಯ ಭೂಮಿ ಒತ್ತುವರಿ ಆಗದಂತೆ ಎಚ್ಚರವಹಿಸಿ. ಏಕ ಜಾತಿ ನೆಡುತೋಪು ಬೇಡ. ಹೂವು, ಹಣ್ಣು ಬಿಡುವ ಸಾಂಪ್ರದಾಯಿಕ ಗಿಡಗಳನ್ನೂ ನೆಟ್ಟು ಬೆಳೆಸಿ’ ಎಂದು ತಾಲ್ಲೂಕಿನ ಮೂರು ವಲಯ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

‘ಎಲ್ಲ ಇಲಾಖೆಗಳು ತಮ್ಮ ಇಲಾಖೆಯ ಜಮಾ ಖರ್ಚಿನ ವಿವಿರ ನೀಡುತ್ತಿದೆ. ಆದರೆ, ಅರಣ್ಯ ಇಲಾಖೆ ಮಾತ್ರ ಪ್ರಗತಿ ಪರಿಶೀಲನಾ ಸಭೆಗೆ ಖರ್ಚು ವೆಚ್ಚದ ಬಗ್ಗೆ ಮಾಹಿತಿ ನೀಡುತ್ತಿಲ್ಲ’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಸುರೇಶ್ ಸ್ವಾಮಿರಾವ್ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT