ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜ್ಞಾನಿಕ ಸಂಶೋಧನೆ: ದೇಶದತ್ತ ವಿಶ್ವದ ಚಿತ್ತ

ಚಿತ್ರದುರ್ಗ: ರಾಷ್ಟ್ರಮಟ್ಟದ ವಿಜ್ಞಾನ ಕಾರ್ಯಾಗಾರದಲ್ಲಿ ವಿಜ್ಞಾನಿ ಪ್ರೊ.ಶಿವಪ್ರಸಾದ್
Last Updated 22 ಏಪ್ರಿಲ್ 2017, 4:15 IST
ಅಕ್ಷರ ಗಾತ್ರ
ಚಿತ್ರದುರ್ಗ:  ‘ನಮ್ಮ ದೇಶವು ವೈಜ್ಞಾನಿಕ ಸಂಶೋಧನೆಯಲ್ಲಿ ಗಮನಾರ್ಹ ಸಾಧನೆ ಮಾಡುತ್ತಾ ಜಗತ್ತಿನ ಗಮನ ಸೆಳೆಯುತ್ತಿದೆ’ ಎಂದು ಬೆಂಗಳೂರಿನ ಜವಾಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್‌ಡ್ ಸೈಂಟಿಫಿಕ್ ರಿಸರ್ಚ್‌ನ ವಿಜ್ಞಾನಿ ಪ್ರೊ.ಎಸ್.ಎಂ.ಶಿವಪ್ರಸಾದ್ ಹೇಳಿದರು.
 
ಸರ್ಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ನ್ಯಾನೊ ವಿಜ್ಞಾನ ಮತ್ತು ತಂತ್ರಜ್ಞಾನ ಸಮಾವೇಶ ಹಾಗೂ 2017ನೇ ಸಾಲಿನ ವಿಚಾರ ಸಂಕಿರಣ ಉದ್ಘಾಟಿಸಿ  ಅವರು ಮಾತನಾಡಿದರು.
 
‘30 ವರ್ಷಗಳಲ್ಲಿ ದೇಶದ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಾಗರಿಕರ ಬದುಕು ಸಾಕಷ್ಟು ಬೆಳವಣಿಗೆಯಾಗಿದೆ. ವೈಜ್ಞಾನಿಕ ಸಂಶೋಧನೆಗಳ ಪ್ರಭಾವದಿಂದಾಗಿ ನಗರ ಪ್ರದೇಶದ ಜನರ ಆತ್ಮವಿಶ್ವಾಸವು ಗ್ರಾಮೀಣರಿಗಿಂತ ಹೆಚ್ಚಾಗಿದೆ.

ಮಾಹಿತಿ ತಂತ್ರಜ್ಞಾನ, ಭೌತ ವಿಜ್ಞಾನ, ವೈದ್ಯಕೀಯ, ರಸಾಯನ ವಿಜ್ಞಾನ, ಸಾರಿಗೆ, ಶೈಕ್ಷಣಿಕ ಮೊದಲಾದ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಸಂಶೋಧನೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅದರ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
 
‘ವೈಜ್ಞಾನಿಕ ಸಂಶೋಧನೆಗಳು ಆಧುನಿಕ ಯುಗದಲ್ಲಿ ಮನುಷ್ಯನ ಬದುಕನ್ನು ನೂತನ ವಿನ್ಯಾಸದಲ್ಲಿ ರೂಪಿಸುತ್ತಿವೆ. ಆದರೆ, ಅತಿಯಾದ ಸೌಲಭ್ಯಗಳು ಮನುಷ್ಯನ ಬದುಕನ್ನು ಸ್ವಾವಲಂಬನೆಗಿಂತಲೂ ಪರಾವಲಂಬಿಯಾಗಿಸುವ ಆತಂಕ ಕಾಡುತ್ತಿದೆ.
 
ಇದು ವೈಜ್ಞಾನಿಕ ಸಂಶೋಧನೆಯಿಂದ ಉತ್ಪಾದನೆಯಾಗುವ ಶಕ್ತಿ ಮತ್ತು ಸಾಮರ್ಥ್ಯವನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂಬುದರ ಅರಿವಿನ ಕೊರತೆಯಿಂದ ಉಂಟಾಗುವ ಆತಂಕವಾಗಿದೆ. ಆದ್ದರಿಂದ ವಿಜ್ಞಾನದ ಸದ್ಬಳಕೆ ಹೇಗೆ ಆಗಬೇಕು ಎಂಬುದರ ಬಗ್ಗೆ ಹೆಚ್ಚು ಗಮನಕೊಡಬೇಕಾದ ಅಗತ್ಯವಿದೆ’ ಎಂದರು.
 
‘ಕೇವಲ ನಗರ ಪ್ರದೇಶಗಳಲ್ಲಿ ಓದಿದವರು ಮಾತ್ರ ಉನ್ನತ ಹುದ್ದೆ ಅಲಂಕರಿಸುತ್ತಾರೆ ಎಂಬ ಭ್ರಮೆ ಅನೇಕರಲ್ಲಿದೆ. ಆದರೆ, ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದವರಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶದಿಂದ ಬಂದವರು. ನಿರ್ದಿಷ್ಟ ಗುರಿ, ಸಾಧಿಸುವ ಛಲ, ಸತತ ಪ್ರಯತ್ನವಿದ್ದರೆ ಯಶಸ್ಸು ನಿಮ್ಮದಾಗುತ್ತದೆ’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
 
‘ವಿಜ್ಞಾನಿಗಳು ನಮ್ಮ ದೇಶದ ಸಂಪತ್ತು. ಭಾರತದ ವಿಜ್ಞಾನಿಗಳು ತಮ್ಮ ಸಾಮರ್ಥ್ಯ ಮತ್ತು ಪ್ರತಿಭೆಗಳ ಮೂಲಕ ಪ್ರಸ್ತುತ ದೇಶದ ಸಂಪನ್ಮೂಲವನ್ನು ಹೆಚ್ಚು ಗಟ್ಟಿಗೊಳಿಸುತ್ತಾ ಸಾಗಿರುವುದು ಹೆಮ್ಮೆಯ ಸಂಗತಿ.
 
ಅಂತರರಾಷ್ಟ್ರೀಯ ಮಟ್ಟದ ಇಸ್ರೊ, ನಾಸಾಗಳಂಥ ಸಂಸ್ಥೆಗಳಲ್ಲಿ ನಮ್ಮ ದೇಶದ ವಿಜ್ಞಾನಿಗಳು ಪ್ರಪಂಚವೇ ಮೆಚ್ಚುವಂಥ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ವಿಶ್ವವೇ ಭಾರತದ ಕಡೆಗೆ ನೋಡುತ್ತಿದೆ’ ಎಂದು ಹೇಳಿದರು. ಪ್ರಾಂಶಪಾಲರಾದ ಪ್ರೊ.ಟಿ.ವಿ.ಸಣ್ಣಮ್ಮ, ಪ್ರೊ.ಶೋಭಾ ಎ.ದಳವಾಯಿ, ಡಿ.ನಾಗರಾಜ್, ಪ್ರೊ.ಇ.ತಿಪ್ಪೇಸ್ವಾಮಿ, ಪ್ರೊ.ಕಮಾನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT