ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ದಿನಗಳಲ್ಲಿ ಅನುದಾನ ವಿತರಿಸದಿದ್ದರೆ ಕ್ರಮ

ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆ: ಅಧಿಕಾರಿಗಳಿಗೆ ಐವನ್ ಡಿಸೋಜಾ ಎಚ್ಚರಿಕೆ
Last Updated 22 ಏಪ್ರಿಲ್ 2017, 4:47 IST
ಅಕ್ಷರ ಗಾತ್ರ
ಬೀದರ್: ‘ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಯಡಿ ಸರ್ಕಾರ ಒದಗಿಸಿರುವ ಅನುದಾನವನ್ನು 15 ದಿನಗಳ ಒಳಗೆ ಸಂಬಂಧಪಟ್ಟ ಕಾಮಗಾರಿ ಹಾಗೂ ಫಲಾನುಭವಿಗಳಿಗೆ ಬಿಡುಗಡೆ ಮಾಡದಿದ್ದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಹಾಗೂ ಪ್ರಗತಿ ಪರಿಶೀಲನಾ ಉಪ ಸಮಿತಿಯ ಅಧ್ಯಕ್ಷ ಐವನ್ ಡಿಸೋಜಾ ಎಚ್ಚರಿಕೆ ನೀಡಿದರು.
 
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಾಗೂ ನಂತರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.
 
‘ಕ್ರೈಸ್ತ ಸಮುದಾಯದ ಏಳಿಗೆಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ, ಯೋಜನೆಗಳು ಅರ್ಹರಿಗೆ ತಲುಪುತ್ತಿಲ್ಲ ಎನ್ನುವ ದೂರುಗಳು ಕೇಳಿ ಬಂದಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. 
 
‘ಕ್ರೈಸ್ತ ಸಮುದಾಯದ ಬಹುತೇಕರಿಗೆ ಇರುವ ಯೋಜನೆಗಳ ಮಾಹಿತಿಯೇ ಇಲ್ಲ. ಹೀಗಾದರೆ ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.
 
‘ಚರ್ಚ್‌ಗಳ ನವೀಕರಣ ಮತ್ತು ದುರಸ್ತಿ, ಸಮುದಾಯ ಭವನ ನಿರ್ಮಾಣ, ಕೌಶಲ ಅಭಿವೃದ್ಧಿ, ಬಿದಾಯಿ ಯೋಜನೆ, ವಿದೇಶಗಳಲ್ಲಿ ವ್ಯಾಸಂಗಕ್ಕೆ ನೆರವು ಸೇರಿದಂತೆ ವಿವಿಧ ಯೋಜನೆಗಳ ಕುರಿತು ಕರಪತ್ರ ಮುದ್ರಿಸಿ ಹಂಚುವ ಮೂಲಕ ಯೋಜನೆಗಳ ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.
 
‘ಜಿಲ್ಲೆಯಲ್ಲಿ ಎರಡು ತಿಂಗಳ ನಂತರ ಮತ್ತೊಮ್ಮೆ ಪ್ರಗತಿ ಪರಿಶೀಲನೆ ಮಾಡಲಾಗುವುದು. ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
 
‘ಕ್ರೈಸ್ತರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕಳೆದ ಸಾಲಿನ ಬಜೆಟ್‌ನಲ್ಲಿ ₹125 ಕೋಟಿ ಅನುದಾನ ಒದಗಿಸಿತ್ತು. ಈ ವರ್ಷ ₹175 ಕೋಟಿ ಮೀಸಲಿರಿಸಿದೆ. ದೇಶದಲ್ಲೇ ಮೊದಲ ಬಾರಿಗೆ ಅಲ್ಪಸಂಖ್ಯಾತರ ಕಾಲೊನಿಗಳ ಅಭಿವೃದ್ಧಿಗೆ ₹800 ಕೋಟಿ ಅನುದಾನ ತೆಗೆದಿರಿಸಿದೆ. ಈ ಪೈಕಿ ಶೇ 40ರಷ್ಟು ಅನುದಾನವನ್ನು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬಳಸುವ ಉದ್ದೇಶ ಇದೆ’ ಎಂದು ತಿಳಿಸಿದರು.
 
‘ಅಲ್ಪಸಂಖ್ಯಾತರ ಕಾಲೊನಿಗಳಿಗೆ ಮೀಸಲಿಟ್ಟಿರುವ ಅನುದಾನವನ್ನು ಅಲ್ಪಸಂಖ್ಯಾತರ ಕಾಲೊನಿಗಳಲ್ಲಿ ಸಿ.ಸಿ ರಸ್ತೆ, ಒಳಚರಂಡಿ, ಕುಡಿಯುವ ನೀರು, ಶಿಕ್ಷಣ, ಗ್ರಂಥಾಲಯ, ಸೋಲಾರ್ ದೀಪ, ಅಂಗನವಾಡಿ ಸೇರಿದಂತೆ ವಿವಿಧ ಸೌಕರ್ಯ ಒದಗಿಸಲು ಬಳಸಬಹುದಾಗಿದೆ’ ಎಂದು ಹೇಳಿದರು.
 
‘ರಾಜ್ಯದಲ್ಲಿ 42 ಚರ್ಚ್‌ಗಳ ನವೀಕರಣಕ್ಕೆ ₹9.50 ಕೋಟಿ, 3 ಅನಾಥಾಶ್ರಮಗಳಿಗೆ ₹68 ಲಕ್ಷ, ಬಿದಾಯಿ ಯೋಜನೆಯ 1,355 ಫಲಾನುಭವಿಗಳಿಗೆ ₹6.77 ಕೋಟಿ, ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿರುವ 189 ವಿದ್ಯಾರ್ಥಿಗಳಿಗೆ ₹4 ಕೋಟಿ, ನರ್ಸಿಂಗ್ ತರಬೇತಿಗೆ 1,015 ವಿದ್ಯಾರ್ಥಿಗಳಿಗೆ ₹3.55 ಕೋಟಿ, ವಿದ್ಯಾಶ್ರೀ ಯೋಜನೆಯಡಿ 4,830 ವಿದ್ಯಾರ್ಥಿಗಳಿಗೆ ₹7.24 ಕೋಟಿ ಅನುದಾನ ಒದಗಿಸಲಾಗಿದೆ’ ಎಂದು ತಿಳಿಸಿದರು.
 
‘ವಿವಿಧ ಯೋಜನೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ಅಧಿಕಾರಿಗಳು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು’ ಎಂದು ಸೂಚನೆ ನೀಡಿದರು. 
 
ಕ್ರಿಶ್ಚಿಯನ್ ಅಭಿವೃದ್ಧಿ ಪರಿಷತ್ ಸದಸ್ಯರಾದ ಅರ್ಜುನ ಕನಕ, ಜಾನ್ ವೆಸ್ಲಿ, ಡಾ.ಅನಿಲ್ ರೆಡ್ಸನ್, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜಯ ಜಾಗೀರದಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT