ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಧಾರ್‌’ ಜೋಡಿಸಿದರೆ ರೈತರ ಖಾತೆಗೆ ಹಣ

ಹುಮನಾಬಾದ್: ಬರಪರಿಹಾರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಮಣರೆಡ್ಡಿ ಹೇಳಿಕೆ
Last Updated 22 ಏಪ್ರಿಲ್ 2017, 4:49 IST
ಅಕ್ಷರ ಗಾತ್ರ
ಹುಮನಾಬಾದ್: ‘ಬೆಳೆ ಹಾನಿ, ಬೆಳೆ ವಿಮೆ ಒಳಗೊಂಡಂತೆ ಸರ್ಕಾರ ನೀಡುವ ಯಾವುದೇ ಪರಿಹಾರ ಹಣ ಇನ್ನೂ ಮುಂದೆ ನೇರವಾಗಿ ರೈತರ ಖಾತೆಗೆ ಜಮಾ ಆಗಲಿದೆ’ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳೂ ಆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ ಹೇಳಿದರು.
 
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಬರ ಪರಿಹಾರ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.
 
‘ಪರಿಹಾರಕ್ಕಾಗಿ ರೈತರು ತಮ್ಮ ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡಿಸಬೇಕು. ತಾಲ್ಲೂಕಿನಲ್ಲಿ ಶೇ 85ರಷ್ಟು ರೈತರ ಖಾತೆಗಳಿಗೆ ಆಧಾರ್‌ ಜೋಡಿಸಲಾಗಿದೆ.
 
ತಾಂತ್ರಿಕ ದೋಷ ಕಾರಣದಿಂದ ಉಳಿದುಕೊಂಡ ರೈತರ ಖಾತೆಗಳನ್ನು ವಾರದೊಳಗೆ ಆಧಾರ್‌ ಜೊತೆಯಲ್ಲಿ ಜೋಡಿಸಿ, ರೈತರಿಗೆ ಪರಿಹಾರ ದಕ್ಕುವಂತೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಎಲ್ಲರೂ ಚಾಚೂ ತಪ್ಪದೇ ಪಾಲಿಸಬೇಕು’ ಎಂದು ಸೂಚಿಸಿದರು.  
 
‘ಈ ಬಾರಿ ಬೀದರ್‌ ಜಿಲ್ಲೆಯಲ್ಲಿ ಹೇಳಿಕೊಳ್ಳುವಂಥ ಬರ ಇಲ್ಲ. ಜಿಲ್ಲೆಯ ಹುಮನಾಬಾದ್ ತಾಲ್ಲೂಕನ್ನು ಮಾತ್ರ ಬರ ಪಟ್ಟಿಗೆ ಸೇರ್ಪಡೆ ಮಾಡಿದ್ದರಿಂದ ಸಭೆ ನಡೆಸಲಾಗುತ್ತಿದೆ’ ಎಂದರು.
 
‘ಹುಮನಾಬಾದ್ ತಾಲ್ಲೂಕಿನಲ್ಲಿ ಸಂಭವಿಸಿದ 16 ಆತ್ಮಹತ್ಯೆ ಪ್ರಕರಣ ಪೈಕಿ 14 ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ. ಉಳಿದವು ವಿಚಾರಣೆ ಹಂತದಲ್ಲಿದ್ದು ಶೀಘ್ರ ಇತ್ಯರ್ಥಪಡಿಸಬೇಕು. ಸರ್ಕಾರದ ಆದೇಶದನ್ವಯ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಶಿಕ್ಷಣ ಮತ್ತು ಆರೋಗ್ಯ ಸೇವೆ ಉಚಿತ ಒದಗಿಸಬೇಕು’ ಎಂದರು.
 
‘ಹುಮನಾಬಾದ್ ತಾಲ್ಲೂಕಿನಲ್ಲಿ ಈ ಬಾರಿ ನೀರಿನ ಸಮಸ್ಯೆ ಇರುವುದಿಲ್ಲ. ಯಾವುದಕ್ಕೂ ಹಣ ವ್ಯರ್ಥವಾಗಿಸದೇ ಆದ್ಯತೆಗೆ ಅನುಗುಣವಾಗಿ ಕೊಳವೆಬಾವಿ, ಪೈಪ್‌, ಮೋಟರ್‌ ದುರುಸ್ತಿ ಕೈಗೆತ್ತಿಕೊಳ್ಳುವ ಮೂಲಕ ನೀರಿನ ಅಭಾವ ಆಗದಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.
 
‘ಪಶುಗಳಿಗೆ ಕುಡಿಯುವ ನೀರು, ಮೇವಿನ ಅಭಾವ ಆಗದಂತೆ ಎಚ್ಚರ ವಹಿಸಬೇಕು’ ಎಂದ ಅವರು, ತಾಲ್ಲೂಕಿನ ಡಾಕುಳಗಿ, ಘಾಟಬೋರಾಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸ್ಥಗಿತಗೊಳ್ಳದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು. 
 
‘ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಮಾನವ ದಿನ ಪೂರ್ಣಗೊಳಿಸಬೇಕು. ವಿವಿಧ ವಸತಿ ಯೋಜನೆ ಅಡಿ ಅರ್ಹರಿಗೆ ವಸತಿ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡುವುದರ ಜೊತೆಗೆ, ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಯೋಜನೆ ರೂಪಿಸಬೇಕು. ಗ್ರಾಮಸ್ಥರ ಮನವೋಲಿಸಿ, ವೈಯಕ್ತಿಕ ಶೌಚಾಲಯ ನಿರ್ಮಿಸಲು ಸರ್ಕಾರ ಕೊಟ್ಟ ಗುರಿ ತಲುಪಬೇಕು’ ಎಂದರು.
 
ಸಭೆ ಬಳಿಕ ತಾಲ್ಲೂಕಿನ ಹುಡಗಿ ಗ್ರಾಮದ ಸೋಮನಾಥ ಪಾಟೀಲ ಹೊಲದಲ್ಲಿ ಕೃಷಿಭಾಗ್ಯ ಯೋಜನೆ ಅಡಿ ನಿರ್ಮಿಸಿದ ಕೃಷಿ ಹೊಂಡ ವೀಕ್ಷಿಸಿದರು.
ಜಿಲ್ಲಾಧಿಕಾರಿ ಎಚ್‌.ಆರ್‌. ಮಹಾದೇವ್, ತಹಶೀಲ್ದಾರ್‌ ಡಿ.ಎಂ.ಪಾಣಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಡಾ.ಗೋವಿಂದ, ಸಹಾಯಕ ಕೃಷಿ ನಿರ್ದೇಶಕ ಡಾ.ಎಂ.ಪಿ.ಮಲ್ಲಿಕಾರ್ಜುನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT