ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ಸಾಹಿತ್ಯ ಮನುಕುಲದ ಆಸ್ತಿ: ಪಾಟೀಲ

ಜನರ ಮನಸೂರೆಗೊಂಡ ವೈಭವದ ಮೆರವಣಿಗೆ, ಭಕ್ತರಿಗೆ ಪ್ರಮುಖರಿಂದ ಮಜ್ಜಿಗೆ ವಿತರಣೆ
Last Updated 22 ಏಪ್ರಿಲ್ 2017, 4:54 IST
ಅಕ್ಷರ ಗಾತ್ರ
ಭಾಲ್ಕಿ: ‘ಪ್ರಪಂಚಕ್ಕೆ ಮಾನವೀಯತೆಯ, ಪರಿವರ್ತನೆಯ ತತ್ವ ನೀಡಿದ ವಚನ ಸಾಹಿತ್ಯ ಕೇವಲ ಗ್ರಂಥವಾಗಿರದೆ ಮನುಕುಲದ ಆಸ್ತಿ ಆಗಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
 
ಪಟ್ಟಣದ ಚನ್ನಬಸವಾಶ್ರಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಲಿಂ.ಡಾ.ಚನ್ನಬಸವ ಪಟ್ಟದ್ದೇವರ 18ನೇ ಸ್ಮರಣೋತ್ಸವ, ವಚನ ಜಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು.
 
‘ಸಮಾಜದ ಗುಣಾತ್ಮಕ ಪರಿವರ್ತನೆಗೆ ಎಲ್ಲರೂ ವಚನ ಸಾಹಿತ್ಯದ ಆಶಯದಂತೆ ಬದುಕುವುದು ಅಗತ್ಯ. ವಚನ ಸಾಹಿತ್ಯ ಯಾವುದೇ ಒಂದು ಸಮಾಜಕ್ಕೆ ಸೀಮಿತವಲ್ಲ. ಅದು ಇಡೀ ಜಗತ್ತನ್ನು ಸರಿದಾರಿಯಲ್ಲಿ ನಡಸುವ ದಿಕ್ಸೂಚಿ ಆಗಿದೆ’ ಎಂದು ತಿಳಿಸಿದರು.
 
‘ಮುಂದಿನ ಪೀಳಿಗೆಗೆ ವಚನಗಳನ್ನು ಪರಿಚಯಿಸುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯ. ಅಧಿಕಾರ, ಹಣದಿಂದ ಸಂತಸ ಕೊಂಡುಕೊಳ್ಳಲು ಸಾಧ್ಯವಿಲ್ಲ. ನಿಸ್ವಾರ್ಥತೆ ಹಾಗೂ ಪ್ರೀತಿಯಿಂದ ಎಲ್ಲವನ್ನು ಪಡೆದುಕೊಳ್ಳಬಹುದು. ನಾಡಿನ ಸಮೃದ್ಧ ಬದಲಾವಣೆಗೆ ವಚನ ಸಾಹಿತ್ಯದ ತತ್ವದಂತೆ ನಡೆದುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
 
ಮುಂಡರಗಿ-ಬೈಲೂರ ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ‘ವಚನ ಸಾಹಿತ್ಯ ಸಮಾಜದ ಸಂವಿಧಾನ. ವಚನ ಜಾತ್ರೆ ಸಂಸ್ಕೃತಿ, ಪರಂಪರೆಯನ್ನು ಗುರುತಿಸುವ ಶಬ್ಧ. ‘ವಚನ’ ಶಬ್ಧ ಸಾಕ್ಷಿಪ್ರಜ್ಞೆಯ ಪ್ರತೀಕ. ಎಲ್ಲರಿಗೂ ಮಾರ್ಗದರ್ಶನ ಮಾಡುವ ಶಕ್ತಿ ವಚನ ಸಾಹಿತ್ಯಕ್ಕಿದೆ’ ಎಂದು ನುಡಿದರು.
 
‘ಚನ್ನಬಸವ ಪಟ್ಟದ್ದೇವರು ವಚನ ಸಾಹಿತ್ಯವನ್ನು ಹೃದಯಕ್ಕೆ ಕಟ್ಟಿಕೊಂಡಿದ್ದರು. ವಚನಗಳು ಅವರ ಜೀವಾಳವಾಗಿದ್ದವು. ಅವರು ಪ್ರೀತಿ, ಪ್ರೇಮದ ಸಂಗಮವಾಗಿದ್ದರು. ಒಳ್ಳೆಯ ಕಾರ್ಯಮಾಡುವ ಸ್ವಾಮೀಜಿಗೆ ಎಲ್ಲರೂ ಸಹಾಯ, ಸಹಕಾರ ನೀಡಬೇಕು’ ಎಂದು ಸಲಹೆ ನೀಡಿದರು.
 
‘ನೂತನ ಅನುಭವ ಮಂಟಪದ ಕಾರ್ಯಕ್ಕೆ ರಾಜ್ಯ, ಕೇಂದ್ರ ಸರ್ಕಾರದಿಂದ ₹1 ಸಾವಿರ ಕೋಟಿ ಬಿಡುಗಡೆ ಮಾಡಬೇಕು. ಈ ಸಂಬಂಧ ಸಚಿವ, ಸಂಸದರು ಸರ್ಕಾರಗಳ ಮೇಲೆ ಒತ್ತಡ ಹೇರಬೇಕು’ ಎಂದರು.
 
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ‘ಅನುಭವ ಮಂಟಪದ ಅಭಿವೃದ್ಧಿಗೆ ₹100 ಕೋಟಿ ನೀಡುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ’ ಎಂದು ತಿಳಿಸಿದರು.
 
ನಿವೃತ್ತ ನ್ಯಾಯಾಧೀಶ ಎ.ಎಸ್.ಪಾಚಾಪೂರೆ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ಸಾದರ ಮಾತನಾಡಿದರು.
 
ಬಸವೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ವೀರಣ್ಣ ಹಲಶೆಟ್ಟಿ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಸದಸ್ಯ ಶಿವರಾಜ ನರಶೆಟ್ಟಿ, ಬಸವಕಲ್ಯಾಣ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗುರುನಾಥ ಗಡ್ಡೆ, ಎಸ್.ಬಿ ದುರ್ಗೆ, ಗುರುಪಾದಪ್ಪ ಪಾಟೀಲ ಸಸ್ತಾಪೂರ, ಅಣ್ಣಾರಾವ ಮಜಗೆ, ಉದ್ಯಮಿ ಜೈರಾಜ ಖಂಡ್ರೆ, ಪ್ರಥಮ ದರ್ಜೆ ಗುತ್ತಿಗೆದಾರ ಗುರುನಾಥ ಕೊಳ್ಳೂರ ಉಪಸ್ಥಿತರಿದ್ದರು.
 
ಉದ್ಯಮಿ ಬಸವರಾಜ ಧನ್ನೂರ ಪ್ರಾಸ್ತಾವಿಕ ಮಾತನಾಡಿದರು. ಶಿವಕುಮಾರ ಪಾಂಚಾಳ ವಚನ ಸಂಗೀತ ನಡೆಸಿಕೊಟ್ಟರು. ಜಿಲ್ಲಾ ಭಾರತೀಯ ಬಸವ ಬಳಗದ ಅಧ್ಯಕ್ಷ ಬಾಬುವಾಲಿ ಸ್ವಾಗತಿಸಿದರು. ಸಂಜುಕುಮಾರ ಜುಮ್ಮಾ ಸ್ವಾಗತಿಸಿದರು. ಗ್ರಾ.ಪಂ ಅಧ್ಯಕ್ಷ ಶಶಿಧರ ಕೋಸಂಬೆ ವಂದಿಸಿದರು.
***
ಪಟ್ಟದ್ದೇವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಮನವಿ
ಭಾಲ್ಕಿ:
‘ದಶಕಗಳಿಂದ ಕಲ್ಯಾಣ ಕರ್ನಾಟಕದಲ್ಲಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಅನಾಥ, ನಿರ್ಗತಿಕ ಮಕ್ಕಳ ಸೇವೆ ಸಲ್ಲಿಸುತ್ತಿರುವ ಬಸವಲಿಂಗ ಪಟ್ಟದ್ದೇವರಿಗೆ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡುತ್ತೇನೆ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ತಿಳಿಸಿದರು.

‘ಚನ್ನಬಸವ ಪಟ್ಟದ್ದೇವರು ಹೊರಗಡೆ ಉರ್ದು ಬೋರ್ಡ್ ಹಾಕಿ ಒಳಗಡೆ ಕನ್ನಡ ಕಲಿಸುವುದರ ಮೂಲಕ ಈ ಭಾಗದಲ್ಲಿ ಕನ್ನಡವನ್ನು ಜೀವಂತವಾಗಿರಿಸಿದ ಮಹಾ ಪುರುಷರು. ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಅವರ ಪಾತ್ರ ಸ್ಮರಣೀಯವಾಗಿತ್ತು’ ಎಂದರು.

‘ನಾಡು, ನುಡಿಯ ವಿಷಯಕ್ಕೆ ಬಂದಾಗ ನಾವು ಯಾರನ್ನೂ ಬಿಡುವುದಿಲ್ಲ. ಕನ್ನಡಪರ ಹೋರಾಟಗಾರರ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ ಬಾಹುಬಲಿ-2 ಚಿತ್ರದಲ್ಲಿ ನಟಿಸಿರುವ ಸತ್ಯರಾಜು ಕನ್ನಡಿಗರಲ್ಲಿ ಬೇಷರತ್ ಕ್ಷಮೆಯಾಚಿಸಿದ್ದಾರೆ. ನಮ್ಮನಾಳುವ ಸರ್ಕಾರಗಳ ನಿರಾಸಕ್ತಿಯಿಂದಲೇ ಕನ್ನಡ ಭಾಷೆ ಎತ್ತರ ಮಟ್ಟಕ್ಕೆ ಬೆಳೆದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
***
ಗಮನ ಸೆಳೆದ ವಿವಿಧ ಕಲಾ ತಂಡಗಳ ಪ್ರದರ್ಶನ
ಭಾಲ್ಕಿ:
ಡಾ.ಚನ್ನಬಸವ ಪಟ್ಟದ್ದೇವರ 18ನೇ ಸ್ಮರಣೋತ್ಸವ ಮತ್ತು ವಚನ ಜಾತ್ರೆ ನಿಮಿತ್ತ ಪಟ್ಟಣದಲ್ಲಿ ಶುಕ್ರವಾರ ವಿಶ್ವಗುರು ಬಸವಣ್ಣನವರ, ಡಾ.ಚನ್ನಬಸವ ಪಟ್ಟದ್ದೇವರ ಭಾವಚಿತ್ರದ ಭವ್ಯ ಮೆರವಣಿಗೆ ಜನರ ಮನಸೂರೆಗೊಂಡಿತು.

ಹಿರೇಮಠ ಸಂಸ್ಥಾನದಲ್ಲಿ ಪುರಸಭೆ ಅಧ್ಯಕ್ಷ ವಿಶಾಲ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಚವಡಿ, ತೀನ್‌ದುಕಾನ್, ಬೋಮಗೊಂಡೇಶ್ವರ ವೃತ್ತ, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಬಸವೇಶ್ವರ ವೃತ್ತದ ಮೂಲಕ ಸಾಗಿ ಚನ್ನಬಸವಾಶ್ರಮದಲ್ಲಿ ಸಮಾವೇಶಗೊಂಡಿತು.

ಶಾಲಾ ಮಕ್ಕಳ ಕೋಲಾಟ, ನೃತ್ಯ, ಲೇಜಿಮ್, ಡೊಳ್ಳು ಕುಣಿತ, ವೀರಗಾಸೆ, ಶರಣರ ವೇಷಭೂಷಣ ಮೆರವಣಿಗೆಗೆ ಮೆರಗು ತಂದು ಕೊಟ್ಟವು. ಅಕ್ಕನ ಬಳಗದ ಸಂಗಡಿಗರಿಂದ ನೃತ್ಯ, ಕೋಲಾಟ ಗಮನ ಸೆಳೆಯಿತು.

ಡಾ.ಬಸವಲಿಂಗ ಪಟ್ಟದ್ದೇವರು, ಗುರುಬಸವ ದೇವರು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೇಖಾ ಪಾಟೀಲ, ವೈಜಿನಾಥ ಸಿರ್ಸಗಿ, ಮಹಾದೇವ ಸ್ವಾಮಿ, ಸಿದ್ರಾಮಪ್ಪ ವಂಕೆ, ಶಶಿಧರ ಕೋಸಂಬೆ, ಸಂಗಮೇಶ ಗುಮ್ಮೆ, ಸಂಗಮೇಶ ವಾಲೆ, ಕಪಿಲ ಕಲ್ಯಾಣೆ, ಸೋಮನಾಥಪ್ಪ ಅಷ್ಟೂರೆ, ಸಿದ್ರಾಮಪ್ಪ ಆಣದೂರೆ, ಸಿದ್ರಾಮಪ್ಪ ವಂಕೆ, ಕಿರಣ ಖಂಡ್ರೆ, ಶಿವಕುಮಾರ ಕಲ್ಯಾಣೆ, ಬಸವ ವಂಕೆ, ಜೀವನ ಪೆದ್ದೆ, ಬಾಬುರಾವ ಬಿರಾದಾರ, ಮಲ್ಲಿಕಾರ್ಜುನ ಹಲ್ಮಂಡಗೆ, ವಿಜಯಕುಮಾರ ಪಾಟೀಲ, ಉಮಾಕಾಂತ ವಾರದ್, ಸಂಗಮೇಶ ವಾಲೆ, ಬಸವರಾಜ ಮರೆ, ನಾಗಶೆಟ್ಟಿ ದಳಪತಿ, ಸುಧಾಕರ ದೇಶಪಾಂಡೆ, ಹಣಮಂತರಾವ ಕಾರಾಮುಂಗೆ, ಅಶೋಕ ಲೋಖಂಡೆ ಇದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT