ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನೆ ಪೂರ್ಣಗೊಳಿಸಲು ಮೇ 15 ಗಡುವು

ಕರಗಡ ಕುಡಿಯುವ ನೀರಿನ ಯೋಜನೆ: ಸಚಿವ ಡಾ.ಜಿ.ಪರಮೇಶ್ವರ್‌ ಎಚ್ಚರಿಕೆ
Last Updated 22 ಏಪ್ರಿಲ್ 2017, 6:04 IST
ಅಕ್ಷರ ಗಾತ್ರ
ಚಿಕ್ಕಮಗಳೂರು: ‘ಬೆಳವಾಡಿ ದೊಡ್ಡಕೆರೆ ತುಂಬಿಸುವ ಕರಗಡ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಳಿ ಸಲು ಮೇ 15ರ ಗಡುವು ಕೊಡಲಾಗಿದೆ. ಅಷ್ಟರೊಳಗೆ ಕಾಮಗಾರಿ ಪೂರ್ಣಗೊ ಳಿಸಲು ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರು ಒಪ್ಪಿದ್ದಾರೆ. ಯೋಜನೆ ಪೂರ್ಣಗೊಳಿಸಿ ಮುಖ್ಯಮಂತ್ರಿಯಿಂದ ಉದ್ಘಾಟನೆ ಮಾಡಿಸುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದರು.
 
ಕಾಲುವೆ ಕಾಮಗಾರಿ ನಡೆಯುತ್ತಿರುವ ಬೇಲೂರು ತಾಲ್ಲೂಕಿನ ಹನಿಕೆ ಗ್ರಾಮಕ್ಕೆ ಶುಕ್ರವಾರ ಅಧಿಕಾರಿಗ ಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡಿದರು.
 
‘ಯೋಜನೆ ಅನೇಕ ಕಾರಣಗಳಿಂದ ವಿಳಂಬವಾಗಿದೆ. ಗುತ್ತಿಗೆದಾರರು, ರೈತರಿಂದಲೂ ಸಮಸ್ಯೆ ಎದುರಾಯಿತು. ಸರ್ಕಾರ ಕೂಡ ಕಾಲಕ್ಕೆ ಸರಿಯಾಗಿ ಅನುದಾನ ಬಿಡುಗಡೆ ಮಾಡಲಿಲ್ಲ. ಒಟ್ಟು 100 ಮೀಟರ್‌ ಕಾಲುವೆ ಕಾಮಗಾರಿ ಬಾಕಿ ಉಳಿದಿದೆ.
 
ಇದನ್ನು ಮೇ 15 ರೊಳಗೆ ಪೂರ್ಣಗೊಳಿಸಿ ಉದ್ಘಾಟನೆಗೆ ಬಿಟ್ಟುಕೊಡುವುದಾಗಿ ಗುತ್ತಿಗೆದಾರರು ವಾಗ್ದಾನ ಮಾಡಿದ್ದಾರೆ. ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ.
 
ಅಂತಹ ಸಂದರ್ಭ ಬರಲಾರದೆನ್ನುವ ನಿರೀಕ್ಷೆ ನಮ್ಮದು. ನಾವು ಆಶಾಭಾವನೆ ಹೊಂದಿದ್ದೇವೆ. ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಿ ಉದ್ಘಾಟನೆಗೆ ದಿನಾಂಕ ನಿಗದಿ ಮಾಡುತ್ತೇನೆ’ ಎಂದರು.
 
‘ಅವರು ಏನು ಬೇಕಾದರೂ ಹೇಳಿಕೊಳ್ಳಲಿ. ಇಲ್ಲಿ ಆಗಿರುವ ಕೆಲಸ ಕಣ್ಣಿಗೆ ಕಾಣುಸುತ್ತಿದೆ. ಹಣ ಕೊಡದಿದ್ದರೆ ಇಷ್ಟು ಕೆಲಸವಾಗಿರುತ್ತಿತ್ತಾ? ಅವರು ಬರೀ ಹೇಳಿಕೆ ಕೊಟ್ಟುಕೊಂಡೇ ಇಷ್ಟು ದಿನ ಕಳೆದಿದ್ದಾರೆ. ಸುಮ್ಮನೆ ಹೇಳಿಕೆ ಕೊಡುವುದರಿಂದ ಯಾವುದೇ ಪ್ರಯೋ ಜನವಾಗುವುದಿಲ್ಲ.
 
ರೈತರ ಸಮಸ್ಯೆ ಬಗ್ಗೆ ಯೋಚಿಸಬೇಕಲ್ಲವೇ? ಈ ಭಾಗಕ್ಕೆ ನೀರು ಹರಿಯದೆ ರೈತರು ಸಾಕಷ್ಟು ಕಷ್ಟ, ನಷ್ಟ, ನೋವು ಅನುಭವಿಸಿದ್ದಾರೆ. ಯಾರು ಏನೇ ಹೇಳಲಿ, ಅಂತಿಮ ಗಡುವಿನೊಳಗೆ ಕಾಮಗಾರಿ ಪೂರ್ಣಗೊ ಳಿಸುವ ವಿಶ್ವಾಸವಿದೆ’ ಎಂದು ಶಾಸಕ ಸಿ.ಟಿ.ರವಿ ಅವರ ಟೀಕೆಗೆ ತಿರುಗೇಟು ನೀಡಿದರು.
 
‘ಈ ಯೋಜನೆಯಿಂದ ಸುಮಾರು 300 ಹಳ್ಳಿಗಳಿಗೆ ಅನುಕೂಲವಾಗಲಿದೆ. 11 ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಕೆರೆಗಳಿಗೆ ನೀರು ಉಣಿಸುವ ಜತೆಗೆ ಅಂತರ್ಜಲ ವೃದ್ಧಿಸಲಿದೆ. ಹಾಗಾಗಿ ಇಂತಹ ದೊಡ್ಡ ಯೋಜನೆ ಕೈಗೆತ್ತಿ ಕೊಳ್ಳಲಾಗಿದೆ.
 
ಮಳೆಗಾಲ ಶುರುವಾಗುವುದಕ್ಕಿಂತ ಮೊದಲು ಈ ಕಾಮಗಾರಿ ಪೂರ್ಣವಾಗಬೇಕು. ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸದಿದ್ದರೆ ಸರ್ಕಾರಕ್ಕೂ ಆರ್ಥಿಕ ಹೊರೆ ಹೆಚ್ಚುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಗುತ್ತಿಗೆ ದಾರರಿಗೆ ಅಂತಿಮ ಗಡುವು ನೀಡಲಾಗಿದೆ’ ಎಂದರು.
 
ಕಾಮಗಾರಿ ಮಂದಗತಿ– ರೈತರ ದೂರು: 
ಇದಕ್ಕೂ ಮೊದಲು ಕಾಲುವೆ ಕಾಮಗಾರಿಯನ್ನು ಸಚಿವರು ವೀಕ್ಷಣೆ ಮಾಡಿದಾಗ, ರೈತರು ಮಂದಗತಿಯಲ್ಲಿ ಕಾಮಗಾರಿ ನಡೆಯುತ್ತಿರುವ ಬಗ್ಗೆ ದೂರಿದರು. ‘3 ತಿಂಗಳಿನಿಂದ ಕಾಮ ಗಾರಿ ಸ್ಥಗಿತಗೊಂಡಿದೆ. ನಿಮ್ಮ ಭೇಟಿ ಹಿನ್ನೆಲೆಯಲ್ಲಿ ಹಿಟಾಚಿ ಮತ್ತು ಜೆಸಿಬಿ ಯಂತ್ರಗಳನ್ನು ಬೆಳಿಗ್ಗೆ ಚಾಲನೆ ಮಾಡಿ ದ್ದಾರೆ’ ಎಂದು ರೈತರು ದೂರಿದರು.
 
‘ಕಾಮಗಾರಿ ತ್ವರಿತಕ್ಕೆ ಹೋರಾಟ ನಡೆಸುತ್ತಿದ್ದ ಸಂಘಟನೆಗಳ ಪರವಾಗಿ ಹಾಜರಾಗಿದ್ದ ಜನದನಿ ಸಂಘಟನೆಯ ರವೀಶ್‌ ಬಸಪ್ಪ, ಗುತ್ತಿಗೆದಾರರು ಮತ್ತು ಅಧಿಕಾರಿಗಳು ಪದೇ ಪದೇ ಸುಳ್ಳು ಹೇಳಿ ಈ ಭಾಗದ ರೈತರನ್ನು ವಂಚಿಸುತ್ತಿದ್ದಾರೆ. ತಪ್ಪು ಮಾಹಿತಿ ನೀಡಿ ನಿಮ್ಮ ಬಾಯಿಂದಲೂ ಸುಳ್ಳು ಹೇಳಿಸುತ್ತಿದ್ದಾರೆ.
 
ನಿಜವಾಗಿಯೂ ಕಾಮಗಾರಿ ಯಾವಾಗ ಮುಗಿಯುತ್ತದೆ ಎನ್ನುವ ವಾಸ್ತವ ಸಂಗತಿ ರೈತರ ಮುಂದಿಡಬೇಕು’ ಎಂದು ಸಚಿವ ರನ್ನು ಒತ್ತಾಯಿಸಿದರು.
‘ಸ್ಥಳೀಯ ಕೆಲ ನಿವಾಸಿಗಳು ಮನೆಗಳಿಗೆ ತೊಂದರೆಯಾಗುವ ಕಾರ ಣಕ್ಕೆ ನಾಲೆ ಯಲ್ಲಿರುವ ಬಂಡೆ ಸ್ಫೋಟಿಸಿ ಹೊರ ತೆಗೆಯಲು ಅಡ್ಡಿಪಡಿಸುತ್ತಿದ್ದಾರೆ’ ಎಂದು ಗುತ್ತಿಗೆದಾರ ರಾಜೇಶ್‌ ಸಚಿವರ ಗಮನಕ್ಕೆ ತಂದರು. 
 
ವಿಧಾನ ಪರಿಷತ್‌ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಪೊಲೀಸ್‌ ಭದ್ರತೆ ಪಡೆದು ಕಾಮಗಾರಿ ನಡೆಸಲು ಸಲಹೆ ನೀಡಿದರು. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪೊಲೀಸ್‌ ರಕ್ಷಣೆ ಒದಗಿಸುವ ಭರವಸೆ ನೀಡಿದರು. ವಿಚಕ್ಷಣಾ  ತಂಡ ರಚಿಸಿ ಕಾಮಗಾರಿ ಪ್ರಗತಿ ಮೇಲೆ ನಿಗಾವಹಿಸುವುದಾಗಿ ಜಿಲ್ಲಾಧಿಕಾರಿ ಜಿ.ಸತ್ಯವತಿ ಸಚಿವರ ಸಮ್ಮುಖದಲ್ಲಿ ತಿಳಿಸಿದರು.
 
ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಡಿ. ಎಲ್‌.ವಿಜಯ್‌ಕುಮಾರ್, ರಾಜ್ಯ ಅರಣ್ಯ ವಸತಿ ಮತ್ತು ವಿಹಾರಧಾಮ ನಿಗಮ ಅಧ್ಯಕ್ಷ ಎ.ಎನ್‌.ಮಹೇಶ್‌, ನಗರಾ ಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೈಯದ್‌ ಮಹಮದ್‌ ಹನೀಫ್‌, ಜಿಲ್ಲಾ ಪಂಚಾ ಯಿತಿ ಸದಸ್ಯೆ ಪ್ರೇಮಾ ಮಂಜುನಾಥ್‌, ಪಕ್ಷದ ಜಿಲ್ಲಾ ಪ್ರಧಾನಕಾರ್ಯದರ್ಶಿ ಬಿ.ಎಂ.ಸಂದೀಪ್‌, ನಗರಸಭೆ ಸದಸ್ಯ ಎಚ್‌.ಎಸ್‌.ಪುಟ್ಟಸ್ವಾಮಿ ಮೊದಲಾ ದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT