ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿವ ನೀರು ಪೂರೈಕೆಗೆ ಗ್ರಾಮಸ್ಥರ ಆಗ್ರಹ

ಜೀವಜಲಕ್ಕಾಗಿ ಜನರ ಅಲೆದಾಟ, ಎಲ್ಲೆಲ್ಲೂ ಖಾಲಿ ಕೊಡಗಳ ಸಾಲು, ಒಣಗಿದ ಬಾವಿಗಳು, ಹಾಹಾಕಾರ
Last Updated 22 ಏಪ್ರಿಲ್ 2017, 6:29 IST
ಅಕ್ಷರ ಗಾತ್ರ
ಇಂಡಿ: ತಾಲ್ಲೂಕಿನ ಬಬಲಾದ ಗ್ರಾಮ­ದಲ್ಲಿ ಒಂದೇ ಒಂದು ಕೊಳವೆ ಬಾವಿ ಇದ್ದು ಒಂದು ಕೊಡ ನೀರು ತುಂಬಿಸಲು 10 ನಿಮಿಷ ಕಾಯಬೇಕು. ಹೀಗಾಗಿ ಜನಸಾಮಾನ್ಯರು ನಳದ ಮುಂದೆ ಕುಡಿಯುವ ನೀರಿಗಾಗಿ ಗಂಟೆಗಟ್ಟಲೇ ಕಾಯಬೇಕಾಗಿದೆ.
 
ಇದು ಬಬಲಾದ ಒಂದೇ ಗ್ರಾಮದ ಸ್ಥಿತಿಯಲ್ಲ. ಹಳಗುಣಕಿ, ನಿಂಬಾಳ, ತಡ­ವಲಗಾ ಮುಂತಾದ ಗ್ರಾಮಗಳಲ್ಲಿ ಕುಡಿ­ಯುವ ನೀರಿಗೆ ಹಾಹಾಕಾರ ಉಂಟಾ­ಗಿದೆ. ಕುಡಿಯುವ ನೀಗಿಗಾಗಿ ಕಿ.­ಮೀ.­­­­ ಗಟ್ಟಲೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
 
‘ನೀರಿಗಾಗಿ ನಿಂತು ನಿಂತು ಸಾಕಾ­ಗ್ಯಾದರೀ. ಬ್ಯಾಸಗಿ ಯ್ಯಾಕ ಬರ್ತಾದ್ ಅನಿಸಿಬಿಟ್ಟಾದರೀ.  ಟ್ಯಾಂಕರ್ ತುಂಬಿ­ಸುವ ಬೋರ್ ಒಣಗ್ಯಾದರೀ. ನಮಗ ಈ ಪರಿ ಬಂದಾದರೀ’ ಎಂದು ಬಬಲಾದ ಗ್ರಾಮಸ್ಥರಾದ ವಿಠೋಬಾ ದಶವಂತ, ದುಂಡಪ್ಪ ದಶವಂತ ಮತ್ತು ರೇಖಾ ದಶವಂತ ನೋವು ತೋಡಿಕೊಂಡರು.
 
ತಾಲ್ಲೂಕಿನ ಹಳಗುಣಕಿ ಗ್ರಾಮಕ್ಕೆ ನೀರು ಪೂರೈಸುವ ಕೊಳವೆ ಬಾವಿಗಳು ಬತ್ತಿ ಹೋಗಿವೆ.  ಗ್ರಾಮದಿಂದ 4 ಕಿ.ಮೀ. ದೂರದಲ್ಲಿಯ ಗುಡ್ಡದ ಕೊಳವೆ ಬಾವಿಯಲ್ಲಿ  ಹನಿ ಹನಿ ನೀರು ಬರುತ್ತಿದೆ. ಅಲ್ಲಿಂದ ನೀರು ತರಬೇಕಾದ ಪರಿಸ್ಥತಿ ಬಂದಿದೆ.
 
‘ಚಂದ್ರಾ­ಮ ವಾಲೀಕಾರ ಅವರ ತೋಟದ ಕೊಳವೆ ಬಾವಿಯಿಂದ ನೀರು ಖರೀದಿಸಿ ಪೂರೈಸ­ಲಾಗುತ್ತಿದೆ. ಆದರೆ ಅದು ಸಾಕಾಗುತ್ತಿಲ್ಲ. ಟ್ಯಾಂಕರ್‌ಗೆ ಮಂಜೂ­ರಾತಿ ನೀಡಿದ್ದಾರೆ.  ಟ್ಯಾಂಕರ್ ಇನ್ನೂವರೆಗೆ ಬಂದಿಲ್ಲ’ ಎಂದು ಗ್ರಾಮದ ನಾಗಪ್ಪ ನಾವಿ, ಭೀಮಾಶಂಕರ ಹೊಸಮನಿ, ಸೋಮ­ಶೇಖರ ಹಿರೇಮಠ ಹೇಳುತ್ತಿದ್ದಾರೆ.  ಇಲ್ಲಿಯ ಜನರು  ದೇಗಿ­ನಾಳ ಮತ್ತು ನಿಂಬಾಳ ಗ್ರಾಮಗಳ ತೋಟದ ಕೊಳವೆ ಬಾವಿಗಳಿಂದ ನೀರು ತರುತ್ತಿದ್ದಾರೆ.
 
ನೀರಿನ ಕೊರತೆಯಿಂದಾಗಿ ನಿಂಬಾಳ ಗ್ರಾಮದ ಶಿವಾನಂದ ಜವಳಗಿ ಪೂಜಾರಿ ಅವರ ನಿಂಬೆ ಬನ ಸಂಪೂರ್ಣ ಒಣಗಿ ಹೋಗಿದೆ. ತಡವಲಗಾ ಗ್ರಾಮದ ರೈತ ಉಮೇಶ ಒಣರೊಟ್ಟಿ ಎನ್ನುವವರು ಕಳೆದ 8 ವರ್ಷಗಳಿಂದ ಜೋಪಾನವಾಗಿ ಬೆಳೆ­ಸಿರುವ 3 ಎಕರೆ ನಿಂಬೆ ಗಿಡಕ್ಕೂ ನೀರಿಲ್ಲದಾಗಿದೆ. ಗಿಡಗಳ ರಕ್ಷಣೆಗಾಗಿ  ಸುಮಾರು 15 ಕಿ.ಮೀ. ದೂರದ ಮಸಳಿ ಗ್ರಾಮ­­ದಿಂದ ಟ್ಯಾಂಕರ್  ನೀರು ತಂದು ನಿಂಬೆ ಗಿಡಗಳಿಗೆ ಉಣಿಸುತ್ತಿದ್ದಾರೆ. 
 
‘ಟ್ಯಾಂಕರ್‌ ಮೂಲಕ ನೀರು ತಂದು ಹಾಯಿಸಲು ಲಕ್ಷಾಂತರ ಹಣ ಖರ್ಚು ಮಾಡಬೇಕಾಗುತ್ತದೆ. ಗಿಡ ಒಣಗು­ವುದನ್ನು ನೋಡಲಾಗದೇ ನೀರು ತಂದು ಹಾಕುತ್ತಿದ್ದೇನೆ. ಮುಂದೆ ಏನು ಮಾಡ­ಬೇಕೆಂದು ತಿಳಿಯುತ್ತಿಲ್ಲ ’ ಎಂದು ಉಮೇಶ ಒಣರೊಟ್ಟಿ ಹೇಳುತ್ತಾರೆ.
 
ಬಹುತೇಕ ಗ್ರಾಮ­ಗಳಲ್ಲಿ ತೋಟ­ಗಾರಿ­ಕಾ ಬೆಳೆಗಳಿವೆ. ಭೀಮಾ ನದಿಯ ಸರಹದ್ದು ಬಿಟ್ಟರೆ  ಹೊರ್ತಿ, ಇಂಚಗೇರಿ, ನಿಂಬಾಳ, ತಡ­ವಲಗಾ, ಅಥರ್ಗಾ ಮುಂತಾದ ಗ್ರಾಮ­ಗಳಲ್ಲಿ ತೋಟ­ಗಾರಿಕೆ ಬೆಳೆ ಸಂರಕ್ಷಣೆ ಮಾಡಿಕೊಳ್ಳುವುದು ಒಂದು ಸವಾ­ಲಾಗಿದೆ. ಈಗಾಗಲೇ ಅರ್ಧದಷ್ಟು ರೈತರ ತೋಟಗಾರಿಕಾ ಬೆಳೆಗಳು ಒಣಗಿ ಹೋಗಿವೆ. ಕೆಲವರು  ಟ್ಯಾಂಕರ್‌ ಮೊರೆ ಹೋಗಿದ್ದು ಬೆಳೆ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.
 
‘ಕುಡಿಯುವ ನೀರು ನಿರ್ವಹಣೆಗೆ ಎರಡು ಟ್ಯಾಂಕರ್‌ ಉಚಿ­ತವಾಗಿ ಪೂರೈ­ಸ­ಲಾಗುವುದು.  ನಿಂಬೆ, ದಾಳಿಂಬೆ, ದ್ರಾಕ್ಷಿ ಬೆಳೆಗಳಿಗೆ ಸರ್ಕಾರ 2 ತಿಂಗಳ ಕಾಲ ಟ್ಯಾಂಕರ್ ನೀರು ಪೂರೈ­ಸಬೇಕು’ ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾ ಘಟಕದ ಉಪಾಧ್ಯಕ್ಷ ಶೀಲವಂತ ಉಮ­ರಾಣಿ ಆಗ್ರಹಿಸಿದ್ದಾರೆ.  ಜಾನು­ವಾರುಗಳಿಗೆ ತಡವಲಗಾ, ಹೊರ್ತಿ, ಹಳಗುಣಕಿ ಗ್ರಾಮಗಳಲ್ಲಿ ಗೋಶಾಲೆ ತೆರೆಯಬೇಕು ಎಂದು ಆಗ್ರಹಿಸಿದ್ದಾರೆ.
ಎ.ಸಿ.ಪಾಟೀಲ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT