ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭೂಮಿಯ ರಕ್ಷಣೆ ಎಲ್ಲರ ಹೊಣೆ’

‘ವಿಕಾಸ ಮತ್ತು ಪರಿಸರ’ ವಿಷಯ ಕುರಿತ ಉಪನ್ಯಾಸ
Last Updated 22 ಏಪ್ರಿಲ್ 2017, 6:34 IST
ಅಕ್ಷರ ಗಾತ್ರ
ಧಾರವಾಡ: ‘ಅತಿಯಾದ ಅಭಿವೃದ್ಧಿಯಿಂದಾಗಿ ಜೀವಸಂಕುಲ ಈಗಾಗಲೇ ವಿನಾಶದ ಹಾದಿಯಲ್ಲಿದೆ. ಇಂಥ ಸಂದರ್ಭದಲ್ಲಿ ಮುಂದಿನ ಪೀಳಿಗೆಗೆ ಪೃಥ್ವಿಯನ್ನು ಸುರಕ್ಷಿತವಾಗಿ ಹಸ್ತಾಂತರಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ಭಾಷಾ ತಜ್ಞ ಪ್ರೊ. ಗಣೇಶ ಎನ್.ದೇವಿ ಅಭಿಪ್ರಾಯಪಟ್ಟರು.
 
ಸಶ್ರೀ ಕಮಾಂವು ಪ್ರತಿಷ್ಠಾನವು ತಿಂಗಳ ಕಾರ್ಯಕ್ರಮದಲ್ಲಿ ಶುಕ್ರವಾರ ‘ವಿಕಾಸ ಮತ್ತು ಪರಿಸರ’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.
 
‘ಈ ಹಿಂದೆ ಭೂಮಿ ನಾಲ್ಕೈದು ಬಾರಿ ವಿನಾಶದ ಹಂತ ತಲುಪಿ ಮತ್ತೆ ಮರುಹುಟ್ಟು ಪಡೆದಿದೆ. ಆದರೆ ಮೂವತ್ತು ಸಾವಿರ ವರ್ಷಗಳ ಹಿಂದೆ ಮನುಷ್ಯ ಪ್ರಕೃತಿಯ ಬಳಕೆ ಆರಂಭಿಸಿದ ದಿನದಿಂದ ವಿನಾಶದ ಪ್ರಮಾಣ ಹೆಚ್ಚಾಗಿದೆ. ಹದಿನೈದು ವರ್ಷಗಳಲ್ಲಿ ಇದು ದ್ವಿಗುಣ ವೇಗದಲ್ಲಿ ಹೆಚ್ಚಾಗುತ್ತಿರುವುದು ಅಪಾಯದ ಸ್ಥಿತಿಯನ್ನು ಸೂಚಿಸುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು. 
 
‘2015ರಲ್ಲಿ ನಡೆದ ಸಮೀಕ್ಷೆಯ ಪ್ರಕಾರ ಜಗತ್ತಿನ 15 ಅತಿ ಹೆಚ್ಚು ಮಾಲಿನ್ಯ ನಗರಗಳ ಪೈಕಿ 13 ನಗರಗಳು ಭಾರತದಲ್ಲಿವೆ. ನಿಸರ್ಗದ ಮಡಿಲಿನಲ್ಲಿರುವ ನಾಸಿಕ್‌, ಉದ್ಯಾನ ನಗರಿ ಎಂದೆನಿಸಿಕೊಂಡಿರುವ ಬೆಂಗಳೂರೂ ಅದರಲ್ಲಿ ಸ್ಥಾನ ಪಡೆದಿವೆ ಎನ್ನುವುದು ಪ್ರಕೃತಿ ಕುರಿತ ನಮ್ಮ ನಿರ್ಲಕ್ಷ್ಯತನವನ್ನು ತೋರಿಸುತ್ತದೆ’ ಎಂದರು.
 
‘ಪವಿತ್ರ ನದಿ ಗಂಗಾ ಹಾಗೂ ಗೋದಾವರಿ ನದಿಗಳು ಕಲುಷಿತಗೊಂಡಿವೆ. ಇದರಂತೆಯೇ ದೇಶದ ಇತರ ನದಿಗಳ ಒಟ್ಟು 8200 ಕಿ.ಮೀ. ಉದ್ದದ ಪ್ರದೇಶದಲ್ಲಿ ಜಲಚರಗಳು ಜೀವಿಸಲು ಸಾಧ್ಯವಾಗದಷ್ಟು ಜಲಮೂಲ ಕಲುಷಿತಗೊಂಡಿದೆ.

ಇವೆಲ್ಲದರ ಪರಿಣಾಮ ಭಾರತೀಯರ ಆಯಸ್ಸು ಶೇ 20ರಷ್ಟು ಕಡಿಮೆಯಾಗಿದೆ ಎಂದು ಅಂದಾಜು ಮಾಡಲಾಗಿದೆ’ ಎಂದರು. ‘ಅಭಿವೃದ್ಧಿ ಹಾಗೂ ಏರುತ್ತಿರುವ ಜನಸಂಖ್ಯೆಯ ಆಧಾರದಲ್ಲಿ 1951ಕ್ಕೆ ಹೋಲಿಸಿದಲ್ಲಿ ಕೃಷಿಕರ ಸಂಖ್ಯೆ ದ್ವಿಗುಣಗೊಂಡಿದೆ. ಆದರೆ ಅದಕ್ಕೂ ಮೀರಿ ಜನಸಂಖ್ಯೆ ಬೆಳೆದಿದೆ’ ಎಂದರು. 
 
‘ಹೆಚ್ಚುತ್ತಿರುವ ಆಹಾರ ಬೇಡಿಕೆ, ಅಭಿವೃದ್ಧಿಗೊಂಡಿರುವ ಕೃಷಿ ವಿಧಾನ, ತಂತ್ರಜ್ಞಾನ, ನೀರಾವರಿ ಇತ್ಯಾದಿಗಳನ್ನು ಗಮನಿಸಿದರೆ ಕೃಷಿಕರು ಹೆಚ್ಚಿನ ಲಾಭದಲ್ಲಿರಬೇಕಾಗಿತ್ತು. ಆದರೆ ನಷ್ಟದಿಂದ ಅವರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಈ ವಿಷಯ ಕುರಿತು ಇನ್ನಷ್ಟು ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿದೆ’ ಎಂದು ಪ್ರೊ. ದೇವಿ ಹೇಳಿದರು.
 
‘ತಲೆಮಾರಿನಿಂದ ತಲೆಮಾರಿಗೆ ಸಣ್ಣ ಹಿಡುವಳಿದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಅಭಿವೃದ್ಧಿಯ ನೆಪದಲ್ಲಿ ಕೆಲವೊಂದು ಕೃಷಿ ಕುಟುಂಬಗಳು ಜಮೀನು ಕಳೆದುಕೊಳ್ಳುತ್ತಿವೆ. ಮತ್ತೊಂದೆಡೆ ಶೈಕ್ಷಣಿಕ ವಲಯವೂ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿದೆ.
 
1951ರಲ್ಲಿ ದೇಶದಲ್ಲಿ 24 ವಿಶ್ವವಿದ್ಯಾಲಯಗಳು ಇದ್ದವು. 2015ರಲ್ಲಿ ಈ ಸಂಖ್ಯೆಯ ಸುಮಾರು 750ಕ್ಕೆ ಏರಿದೆ. ಇಂಥ ಸಂದರ್ಭದಲ್ಲಿ ಕೃಷಿ ಚಟುವಟಿಕೆಯಿಂದ ವಂಚಿತರಾದವರ ಮಕ್ಕಳಿಗೆ ಉನ್ನತ ಶಿಕ್ಷಣದಲ್ಲೂ ಅವಕಾಶ ಸಿಗದಂತಾಗಿದೆ. ಅದರಲ್ಲೂ ಅವಕಾಶ ವಂಚಿತರಾದವರಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಿನದಾಗಿದೆ’ ಎಂದು ವಿವರಿಸಿದರು.
 
‘ಹೀಗಾಗಿ ಇಂದಿನ ಯುವಜನತೆ ಭರವಸೆಯ ನಿರೀಕ್ಷೆಯಲ್ಲಿ ರಾಜಕೀಯದವರ ಬೆನ್ನು ಹತ್ತಿದ್ದಾರೆ. ರಾಜಕೀಯ ಪಕ್ಷ ಹಾಗೂ ವ್ಯಕ್ತಿಗಳ ಸಿದ್ಧಾಂತಗಳ ವಾಹಕಗಳಾಗಿ ನಮ್ಮ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಸಂಘರ್ಷಗಳು ಹೆಚ್ಚಾಗುತ್ತಿವೆ.

ಇದನ್ನು ತಪ್ಪಿಸಲು ಅವಕಾಶ ವಂಚಿತ ಯುವಜನರಿಗೆ ಗುಣಮಟ್ಟದ ಶಿಕ್ಷಣ ಹಾಗೂ ದುಡಿಯಲು ಸಮರ್ಪಕ ಕೆಲಸ ಸಿಗಬೇಕಾದ್ದು ಎಷ್ಟು ಮುಖ್ಯವೋ, ಅದರಂತೆಯೇ ಪರಿಸರಕ್ಕೆ ಮಾರಕವಾಗದಂತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕಾದ್ದೂ ಅಷ್ಟೇ ಮುಖ್ಯ’ ಎಂದು ಪ್ರೊ. ಜಿ.ಎನ್.ದೇವಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT