ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲಿಯಾಳುಗಳನ್ನು ಊರಿಗೆ ಕಳಿಸಲು ಯತ್ನ

ಕೂಲಿ ಪಾವತಿ ಆಗುತ್ತಿಲ್ಲ ಎಂಬ ದೂರು; ನರೇಗಾ ಯೋಜನೆಯಡಿ ಕೆಲಸ ಮಾಡಲು ನಕಾರ
Last Updated 22 ಏಪ್ರಿಲ್ 2017, 6:38 IST
ಅಕ್ಷರ ಗಾತ್ರ
ಹುಬ್ಬಳ್ಳಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (ಎಂನರೇಗಾ) ಅಡಿ ಹಳ್ಳಿಗಳಲ್ಲಿ ಕೆಲಸ ಮಾಡಲು ನಿರಾಕರಿಸಿ ನಗರಕ್ಕೆ ಬಂದವರನ್ನು ವಾಪಸ್ ಕಳುಹಿಸುವ ‘ಕೂಲಿ ಬೇಡಿಕೆ ಅಭಿಯಾನ’ಕ್ಕೆ ಜಿಲ್ಲಾಡಳಿತ ಮುಂದಾಗಿದೆ.
 
ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣೆ ಅಧಿಕಾರಿ, ನರೇಗಾ ಯೋಜನೆಯ ಸಹಾಯಕ ನಿರ್ದೇಶಕರು ಮತ್ತು ಮಾಹಿತಿ–ಶಿಕ್ಷಣ–ಸಂವಹನ ಕಾರ್ಯಕರ್ತರು ನಗರದ ರೈಲು ನಿಲ್ದಾಣ ಬಳಿ ಕೂಲಿಗಾಗಿ ಕಾಯುತ್ತ ನಿಂತಿದ್ದವರಿಗೆ ಶುಕ್ರವಾರ ಸಲಹೆ, ಮಾಹಿತಿ ನೀಡಿ ವಾಪಸ್ ಹಳ್ಳಿಗಳಿಗೆ ಹೋಗುವಂತೆ ಸೂಚಿಸಿದರು. ಆದರೆ ಈ ಪ್ರಯತ್ನಕ್ಕೆ ಮೊದಲ ದಿನ ಪೂರಕ ಸ್ಪಂದನೆ ಸಿಗಲಿಲ್ಲ. 
 
‘ಹಳ್ಳಿಗಳಲ್ಲಿ ಕೆಲಸ ಮಾಡಿ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಮಾಡಿದ ಕೆಲಸಕ್ಕೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಕಳೆದ ತಿಂಗಳು ಮಾಡಿದ ಕೆಲಸಕ್ಕೆ ಇನ್ನೂ ಕೂಲಿ ಸಿಗಲಿಲ್ಲ. ಹೀಗಾಗಿ ನಗರದ ಕಡೆಗೆ ಬಂದಿದ್ದೇವೆ’ ಎಂದು ಕೂಲಿಯಾಳುಗಳು ದೂರಿದರು.
 
ಆದರೆ ಅವರ ಮನವೊಲಿಸಲು ಪ್ರಯತ್ನಿಸಿದ ಅಧಿಕಾರಿಗಳು ಮತ್ತು ಕಾರ್ಯಕರ್ತರು ‘ಕಳೆದ ತಿಂಗಳು ಹಣ ಜಮೆ ಆಗುವುದರಲ್ಲಿ ಸ್ವಲ್ಪ ತೊಡಕಾಗಿದೆ. ಈ ತಿಂಗಳು ಹಣ ಬಿಡುಗಡೆಯಾಗಿದೆ. ಹಳ್ಳಿಗಳಲ್ಲಿ ಸಾಕಷ್ಟು ಕೆಲಸವೂ ಇದೆ. ಆದ್ದರಿಂದ ವಾಪಸ್ ಹೋಗಿ’ ಎಂದು ಸಲಹೆ ನೀಡಿದರು.
 
ರೈಲು ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿ ನಿಂತಿದ್ದ ಕೂಲಿಯಾಳುಗಳ ಬಳಿಗೆ ಬೆಳಿಗ್ಗೆ ತೆರಳಿದ ಅವರು ಎಂನರೇಗಾ ಕುರಿತ ಮಾಹಿತಿ ಒಳಗೊಂಡ ಕರಪತ್ರ ಹಂಚಿದರು. ಅಧಿಕಾರಿಗಳು ಮತ್ತು ತಮ್ಮ ಮೊಬೈಲ್ ಫೋನ್ ಸಂಖ್ಯೆಯನ್ನು ನೀಡಿ ಆ ಸಂಖ್ಯೆಗೆ ಕರೆ ಮಾಡುವಂತೆ ತಿಳಿಸಿದರು. ಮೊದಲ ದಿನ ಹುಬ್ಬಳ್ಳಿ ಮತ್ತು ಕುಂದಗೋಳ ತಾಲ್ಲೂಕಿನವರನ್ನು ವಾಪಸ್ ಕಳುಹಿಸಲು ಆದ್ಯತೆ ನೀಡಲಾಗಿತ್ತು.
 
ಕೆಲವರು ಕರಪತ್ರ ಪಡೆದುಕೊಂಡು ಹೆಚ್ಚು ಮಾಹಿತಿಗಾಗಿ ಮಾತುಕತೆ ನಡೆಸಿದರು. ಆದರೆ ಅನೇಕರು ದೂರ ಉಳಿದರು. ‘ಅನೇಕ ದಿನಗಳಿಂದ ಹಳ್ಳಿಗಳಲ್ಲಿ ದುಡಿಯುತ್ತಿದ್ದೇವೆ. ಆದರೆ ಕೂಲಿ ಸರಿಯಾಗಿ ಸಿಗುತ್ತಿಲ್ಲ. ಕೂಲಿ ಕೇಳಿದರೆ ಹೋಗುವಾಗ ನಾಳೆ ಬಾ ನಾಡಿದು ಬಾ ಎಂದು ಹೇಳುತ್ತಾರೆ. ಇದರಿಂದ ಬೇಸರವಾಗಿ ನಗರದ ಕಡೆಗೆ ಮುಖ ಮಾಡಿದ್ದೇವೆ’ ಎಂದು ಕುಂದಗೋಳ ತಾಲ್ಲೂಕು ಹಿರೇಹರಕುಣಿ ಗ್ರಾಮದ ಹಜರೇಸಾಬ್ ಹೇಳಿದರು.
 
ಸುಲಭ ಉದ್ಯೋಗ; ಹೆಚ್ಚು ಸೌಲಭ್ಯ
‘ನರೇಗಾ ಯೋಜನೆಯಡಿ ಕೆಲಸ ಮಾಡುವುದು ಸುಲಭ. ಕೂಲಿಯಾಳುಗಳಿಗೆ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಆರೋಗ್ಯ ತಪಾಸಣೆ ಸೌಲಭ್ಯ ಇರುತ್ತದೆ. ಆದರೂ ನಿತ್ಯ ಕೂಲಿ ಸಿಗಬೇಕೆಂದು ಬಯಸಿ ನಗರಕ್ಕೆ ಬರುತ್ತಾರೆ. ಇದನ್ನು ತಡೆಯುವುದು ನಮ್ಮ ಉದ್ದೇಶ’ ಎಂದು ನರೇಗಾ ಯೋಜನೆಯ ಹುಬ್ಬಳ್ಳಿ ತಾಲ್ಲೂಕು ಉಪ ನಿರ್ದೇಶಕ ಜಿ.ಎಂ.ಕಂದಕೂರ ವಿವರಿಸಿದರು.
****
ನಗರದಲ್ಲೂ ಕಷ್ಟ
ಕೂಲಿ ಅರಸಿ ಬಂದವರು ನಗರದಲ್ಲೂ ಸಂಕಷ್ಟ ಅನುಭವಿಸುತ್ತಾರೆ ಎಂಬುದನ್ನು ಕೂಲಿಕಾರರೇ ಬಹಿರಂಗ ಮಾಡಿದರು. ‘ನರೇಗಾ ಯೋಜನೆಯಲ್ಲಿ ದಿನಕ್ಕೆ ₹ 236 ನೀಡುತ್ತಾರೆ. ನಗರದಲ್ಲಿ ₹ 300ರಷ್ಟು ಕೊಡುತ್ತಾರೆ. ಆದರೆ ನಗರದಲ್ಲಿ ಬಹುತೇಕರು ತೊಂದರೆ ಕೊಡುತ್ತಾರೆ. ಸಂಜೆ ವೇಳೆ ಕೂಲಿ ಕೊಡಲು ಕಾಡಿಸುತ್ತಾರೆ. ಕೆಲವರು ರಾತ್ರಿ ವರೆಗೂ ಕೆಲಸ ಮಾಡಿಸುತ್ತಾರೆ’ ಎಂದು ಹೆಸರು ಬಹಿರಂಗ ಮಾಡಲು ಹೆದರಿದ ಒಬ್ಬರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT