ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೊಲೀಸರ ನಿರ್ಲಕ್ಷ್ಯದಿಂದ ಕಲಬುರ್ಗಿ ಹತ್ಯೆ’

Last Updated 22 ಏಪ್ರಿಲ್ 2017, 6:41 IST
ಅಕ್ಷರ ಗಾತ್ರ
ಧಾರವಾಡ: ‘ವಿಚಾರವಾದಿ ಡಾ. ಎಂ.ಎಂ.ಕಲಬುರ್ಗಿ ಅವರನ್ನು ಪೊಲೀಸರ ನಿರ್ಲಕ್ಷ್ಯದಿಂದಾಗಿ ನಾವು ಕಳೆದುಕೊಳ್ಳಬೇಕಾಯಿತು’ ಎಂದು ಲೇಖಕ ಯೋಗೀಶ ಮಾಸ್ಟರ್‌ ಅಭಿಪ್ರಾಯಪಟ್ಟರು.
 
‘ಮನೆಗೆ ಮರಳಿ’ ಚಿತ್ರದ ಪ್ರಚಾರ ಸಲುವಾಗಿ ಇಲ್ಲಿಗೆ ಬಂದಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿದರು.
 
‘ಕಲಬುರ್ಗಿ ಹತ್ಯೆಗೂ 20 ದಿನ ಮೊದಲು ಹಂತಕರು ನಮ್ಮ ಮನೆಗೂ ಬಂದಿದ್ದರು. ಅವರನ್ನು ಹತ್ಯೆ ಮಾಡಿದ ಮಾದರಿಯಲ್ಲೇ ನನ್ನ ಹತ್ಯೆಗೂ ಸಂಚು ರೂಪಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಹಂತಕರು ಮತ್ತೆ ಮನೆಗೆ ಬಂದರೆ ತಿಳಿಸಿ ಎಂದಷ್ಟೇ ಹೇಳಿ ಪೊಲೀಸರು ಕೈತೊಳೆದುಕೊಂಡರು’ ಎಂದು ಅವರು ದೂರಿದರು.
 
‘ಕಾರ್ಯಕ್ರಮವೊಂದಕ್ಕೆ ಆಹ್ವಾನಿಸುವ ನೆಪದಲ್ಲಿ ಹಂತಕರು ನಮ್ಮ ಮನೆಗೆ ಬಂದಿದ್ದರು. ಇದೇ ರೀತಿ ಐದು ಬಾರಿ ನನ್ನ ಹತ್ಯೆಗೆ ಸಂಚು ರೂಪಿಸಿದ್ದರು. ಐದು ಬಾರಿಯೂ ಪೊಲೀಸರಿಗೆ ಮಾಹಿತಿ ತಿಳಿಸಿದರೂ ಪ್ರಯೋಜನವಾಗಲಿಲ್ಲ. ಪೊಲೀಸ್‌ ಇಲಾಖೆಯ ಇಂಥ ನಿರ್ಲಕ್ಷ್ಯದಿಂದಲೇ ನಾವು ಕಲಬುರ್ಗಿ ಅವರನ್ನು ಕಳೆದುಕೊಂಡೆವು’ ಎಂದು ವಿಷಾದ ವ್ಯಕ್ತಪಡಿಸಿದರು.
 
‘ನನ್ನ ಹತ್ಯೆ ಮಾಡಲು ಬಂದವರೇ ಕಲಬುರ್ಗಿ ಅವರನ್ನು ಹತ್ಯೆಗೈದಿದ್ದಾರೆ ಎಂಬುದು ನನ್ನ ಬಲವಾದ ನಂಬಿಕೆ. ಅವರ ಮುಖ ಚಹರೆಯನ್ನು ನಾನು ಗುರುತಿಸಬಲ್ಲೆ. ಸದ್ಯ ಪೊಲೀಸರು ಬಂಧಿಸಿರುವ ವ್ಯಕ್ತಿಗಳು ಮಹಾರಾಷ್ಟ್ರದವರು. ಆದರೆ ಹತ್ಯೆ ಮಾಡಲು ಬಂದವರು ಕನ್ನಡ ಮಾತನಾಡುತ್ತಿದ್ದರು’ ಎಂದು ತಿಳಿಸಿದರು.
 
‘ಮರಳಿ ಮನೆಗೆ’ ಸಿನಿಮಾ ಹಿಂದುತ್ವದ ‘ಘರ್‌ ವಾಪಸಿ’ ಅಲ್ಲ: 
‘‘ನನ್ನದೇ ಕಾದಂಬರಿ ಆಧರಿತ ‘ಮರಳಿ ಮನೆಗೆ’ ಸಿನಿಮಾ ಹಿಂದುತ್ವದ ‘ಘರ್‌ ವಾಪಸಿ’ ಅಲ್ಲ’’ ಎಂದು ನಿರ್ದೇಶಕ, ಸಾಹಿತಿ ಯೋಗೀಶ್‌ ಮಾಸ್ಟರ್‌ ಹೇಳಿದರು.
 
ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಧರ್ಮ, ಸಂಸ್ಕೃತಿ ಮೀರಿದ ಕೌಟುಂಬಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ‘ಮರಳಿ ಮನೆಗೆ’ ಸಿನಿಮಾ ಒಳಗೊಂಡಿದೆ. 
 
ಚಿತ್ರ ಕಥೆಯು 80ರ ದಶಕದ್ದಾಗಿದ್ದು, ಅದೇ ಶೈಲಿಯಲ್ಲಿ ನಿರ್ಮಿಸಲಾಗಿದೆ. ಹಳೆಯ ಚಿತ್ರವನ್ನು ಹೊಸದಾಗಿ ನೋಡುವ ಪ್ರಯತ್ನವಾಗಿದೆ ಎಂದರು.
‘ಮರಳಿ ಮನೆಗೆ’ ಚಿತ್ರವು ಮೇ 5ರಂದು ರಾಜ್ಯದ 50 ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಶ್ರುತಿ, ಸುಚೇಂದ್ರ ಪ್ರಸಾದ್‌, ಅನಿರುದ್ಧ, ಶಂಕರ ಆರ್ಯನ್‌, ಅರುಂಧತಿ ಜಟ್ಕರ್‌ ಚಿತ್ರದ ತಾರಾಗಣದಲ್ಲಿ ಇದ್ದಾರೆ ಎಂದು ತಿಳಿಸಿದರು.
 
ಮನಸ್ಥಿತಿಯ ಸಮಸ್ಯೆ: ಮಸೀದಿಯಿಂದ ಪ್ರಾರ್ಥನೆಗೆ ಕರೆ (ಬಾಂಗ್‌) ನೀಡುವುದನ್ನು ಗಾಯಕ ಸೋನು ನಿಗಮ್‌ ಸಂಗೀತದ ಆಲಾಪನೆ ಎಂದು ಭಾವಿಸಬೇಕಾಗಿತ್ತೇ ವಿನಃ ಅದರಿಂದ ಕಿರಿಕಿರಿ ಉಂಟಾಗಿದೆ ಎಂಬುದು ಅವರ ಮನಸ್ಥಿತಿಯ ಸಮಸ್ಯೆಯಾಗಿದೆ ಎಂದು ಟೀಕಿಸಿದರು.
 
ಅರಿವಿಲ್ಲದವರಿಂದ ದಾಳಿ:  ‘ನನ್ನ ಮತ್ತು ನನ್ನ ಸಾಹಿತ್ಯದ ಬಗ್ಗೆ ಅರಿವಿಲ್ಲದ ಅಮಾಯಕ ಹುಡುಗರನ್ನು ಮತೀಯವಾದಿಗಳು ಬಳಸಿಕೊಂಡು ದಾವಣಗೆರೆಯಲ್ಲಿ ನನ್ನ ಮೇಲೆ ಹಲ್ಲೆ ನಡೆಸಿದ್ದರು’ ಎಂದರು. 
***
ನಾನೊಬ್ಬ ಅಪ್ಪಟ ಹಿಂದೂ ಎನಿಸಿಕೊಳ್ಳಲು ಮುಸ್ಲಿಮರನ್ನು ಬೈಯ್ಯುವ, ನಾನೊಬ್ಬ ಭಾರತೀಯ ಎನಿಸಿಕೊಳ್ಳಲು ಪಾಕಿಸ್ತಾನವನ್ನು ಬೈಯ್ಯುವ ಅಗತ್ಯವಿಲ್ಲ
ಯೋಗೀಶ್‌ ಮಾಸ್ಟರ್‌, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT