ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಟನ್‌ ಮಾರುಕಟ್ಟೆ ತೆರವಿಗೆ ವರ್ತಕರ ವಿರೋಧ

ವರ್ತಕರಿಂದ ದಿಢೀರ್‌ ಪ್ರತಿಭಟನೆ; ತೆರವು ಕಾರ್ಯಕ್ಕೆ ಬಂದಿದ್ದ ಅಧಿಕಾರಿಗಳು ವಾಪಸ್‌
Last Updated 22 ಏಪ್ರಿಲ್ 2017, 7:14 IST
ಅಕ್ಷರ ಗಾತ್ರ
ಕಾರವಾರ: ಇಲ್ಲಿನ ಮಟನ್‌ ಮಾರುಕಟ್ಟೆ ತೆರವಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ವರ್ತಕರು, ನಗರಸಭೆ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಶುಕ್ರವಾರ ದಿಢೀರ್‌ ಪ್ರತಿಭಟನೆ ನಡೆಸಿದರು. 
 
ನಗರಸಭೆಯ ಪ್ರಭಾರ ಪೌರಾಯುಕ್ತ ಕೆ.ಎಂ.ಮೋಹನರಾಜ್‌ ಐದಾರು ಸಿಬ್ಬಂದಿಯೊಂದಿಗೆ ತೆರವು ಕಾರ್ಯಕ್ಕೆ ಮಾರುಕಟ್ಟೆ ಸ್ಥಳಕ್ಕೆ ಬಂದರು. ಅಲ್ಲಿಯೇ ಇದ್ದ 30ಕ್ಕೂ ಅಧಿಕ ವರ್ತಕರು ಅವರನ್ನು ಸುತ್ತುವರಿದು, ಮಳಿಗೆಗಳನ್ನು ತೆರವುಗೊಳಿಸಿದಂತೆ ತಡೆಯೊಡ್ಡಿದರು. 
 
ಸುಮಾರು ಎರಡು ತಾಸು ಅಧಿಕಾರಿಗಳು ಹಾಗೂ ವರ್ತಕರ ನಡುವೆ ಮಾತಿನ ಚಕಮಕಿ ನಡೆಯಿತು. ಈ ನಡುವೆ ಮಧ್ಯ ಪ್ರವೇಶಿಸಿದ ನಗರಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಕುಸಮಾಧರ, ‘ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸುವವರ ವಿರುದ್ಧ ಪ್ರಕರಣ ದಾಖಲಿಸ ಲಾಗುವುದು’ ಎಂದು ಎಚ್ಚರಿಸಿದರು. 
 
‘ಅಭಿವೃದ್ಧಿ ಕಾರ್ಯಕ್ಕೆ ನಮಗೆ ವಿರೋಧ ಇಲ್ಲ. ಆದರೆ ನೂತನವಾಗಿ ನಿರ್ಮಿಸಬೇಕೆಂದಿರುವ ಮೀನು ಮಾರು ಕಟ್ಟೆ ಬಳಿಯಲ್ಲಿ ನಮಗೆ ಮಳಿಗೆಗಳನ್ನು ನೀಡುವ ಭರವಸೆ ನೀಡಿ ಹಾಗೂ ನಮಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಿ’ ಎಂದು ವರ್ತಕರು ಆಗ್ರಹಿಸಿದರು.
 
ಇದಕ್ಕೆ ಪ್ರತಿಕ್ರಿಯಿಸಿದ ಮೋಹನ ರಾಜ್‌, ‘ಇದು ನಗರಸಭೆಯ ಆಸ್ತಿ. ಇಲ್ಲಿನ ಮಳಿಗೆಗಳ ಭೋಗ್ಯದ ಅವಧಿ ಮುಗಿ ದಿದೆ. ಕಾನೂನು ಪ್ರಕಾರ ನಿಮಗೆ ಮಳಿಗೆ ಗಳನ್ನು ನೀಡಲು ಸಾಧ್ಯವಿಲ್ಲ. ಹೊಸ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ₹ 8 ಕೋಟಿ ಅನುದಾನ ಕೂಡ ಲಭ್ಯವಿದೆ.
 
ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲು ಇಲ್ಲಿನ ಮಟನ್‌ ಮಾರುಕಟ್ಟೆಯ ಮಳಿಗೆಗಳನ್ನು ತೆರವುಗೊಳಿಸುವುದು ಅನಿವಾರ್ಯ ವಾಗಿದೆ. ವರ್ತಕರು ಅಡ್ಡಿಪಡಿಸಿದರೆ  ಬಲ ಪ್ರಯೋಗಕ್ಕೂ ಸಿದ್ಧ’ ಎಂದು ಹೇಳಿದರು.
 
ತಾತ್ಕಾಲಿಕ ವ್ಯವಸ್ಥೆ:  ‘ನಗರದ ಕೆಇಬಿ ಕಚೇರಿ ಎದುರು ನಗರಸಭೆಗೆ ಸೇರಿದ 19 ಗುಂಟೆ ಜಾಗವಿದ್ದು, ಅಲ್ಲಿ ವಾಹನ ನಿಲುಗಡೆಗೂ ಸ್ಥಳಾವಕಾಶ ಇದೆ. ಕೋಳಿ, ಕುರಿ ಮಾಂಸ ಮಾರಾಟ ಮಾಡುವ ವರ್ತಕರು ಅಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳಬಹುದು. ನೀರು ಹಾಗೂ ವಿದ್ಯುತ್‌ ಸೌಕರ್ಯವನ್ನು ನಗರಸಭೆ ವತಿಯಿಂದ ಕಲ್ಪಿಸಿಕೊಡಲಾಗುವುದು.
 
ಆದರೆ ಶೆಡ್‌ ನಿರ್ಮಾಣ ಮಾಡುವುದಕ್ಕೆ ಸಾಧ್ಯವಿಲ್ಲ’ ಎಂದು ಸ್ಪಷ್ಪಪಡಿಸಿದ ಅವರು, ತಾತ್ಕಾಲಿಕ ಮೀನು ಮಾರುಕಟ್ಟೆ ಬಳಿಯಲ್ಲಿಯೂ ಸ್ಥಳಾವಕಾಶ ಕಲ್ಪಿಸಲು ಆಗಲ್ಲ ಎಂದು ಹೇಳಿದರು. 
 
‘ಮಟನ್‌ ಮಾರುಕಟ್ಟೆಯ ಸಾಲಿನಲ್ಲೇ ನಮ್ಮ ಬಳೆ ಅಂಗಡಿಯಿದ್ದು, ಸುಮಾರು 50 ವರ್ಷಗಳಿಂದ ಇಲ್ಲಿ ವ್ಯಾಪಾರ ಮಾಡುತ್ತಿದ್ದೇನೆ. ಈಗ ಪರ್ಯಾಯ ವ್ಯವಸ್ಥೆ ಕಲ್ಪಿಸದಿದ್ದರೆ ನಾವು ಎಲ್ಲಿಗೆ ಹೋಗಬೇಕು. ನಮಗೆ ನ್ಯಾಯ ಬೇಕು. ಮಳಿಗೆ ನೀಡುವುದಾಗಿ ಭರವಸೆ ನೀಡುವವರೆಗೂ ನಾವು ತೆರವು ಮಾಡಲ್ಲ’ ಎಂದು ಬಳೆ ವ್ಯಾಪಾರಿ ಮಂಜುನಾಥ್‌ ನುಡಿದರು. 
***
ಅಧಿಕಾರಿಗಳಿಂದಲೂ ಧರಣಿ!
ಮಳಿಗೆಗಳನ್ನು ತೆರವುಗೊಳಿಸಲು ತಡೆಯೊಡ್ಡಿದ ವರ್ತಕರು, ‘ನಮಗೆ ನ್ಯಾಯ ಬೇಕು’ ಎಂದು ಕೂಗುತ್ತಿದ್ದರು. ಇದಕ್ಕೆ ಪ್ರತಿಯಾಗಿ ಪ್ರಭಾರ ಪೌರಾಯುಕ್ತ ಕೆ.ಎಂ.ಮೋಹನರಾಜ್‌ ನೇತೃತ್ವದಲ್ಲಿ ಸಿಬ್ಬಂದಿ ಕೆಲ ಕಾಲ ಧರಣಿ ಕುಳಿತ ಪ್ರಸಂಗ ನಡೆಯಿತು. ‘ಮಳಿಗೆಗಳು ನಗರಸಭೆ ಆಸ್ತಿ. ಹೀಗಾಗಿ ತೆರವು ಕಾರ್ಯಕ್ಕೆ ಅಡ್ಡಿಪಡಿಸದೇ ಸಹಕರಿಸಬೇಕು’ ಎಂದು ಮೋಹನರಾಜ್‌ ಮನವಿ ಮಾಡಿದರು.

ಹತ್ತಿರ ಸುಳಿಯದ ಜನಪ್ರತಿನಿಧಿಗಳು: ಮಳಿಗೆಗಳ ತೆರವು ಕಾರ್ಯಕ್ಕೆ ಕೇವಲ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾತ್ರ ಬಂದಿದ್ದರು. ಸ್ಥಳೀಯ ಶಾಸಕರಾಗಲಿ, ನಗರಸಭೆ ಅಧ್ಯಕ್ಷರಾಗಲಿ ಅಥವಾ ಯಾವೊಬ್ಬ ಸದಸ್ಯನು ಸ್ಥಳಕ್ಕೆ ಬಂದು ವರ್ತಕರ ಮನವೊಲಿಸುವ ಪ್ರಯತ್ನ ಮಾಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT