ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವ್ಯಕ್ತಿತ್ವ ರೂಪಿಸುವ ಶಿಕ್ಷಣ ಅವಶ್ಯ’

ಹಂಪಿ ಕನ್ನಡ ವಿಶ್ವವಿದ್ಯಾಲಯದ ನುಡಿಹಬ್ಬ ಪ್ರಯುಕ್ತ ‘ನಾಳಿನ ಕರ್ನಾಟಕ’ ವಿಚಾರ ಸಂಕಿರಣ
Last Updated 22 ಏಪ್ರಿಲ್ 2017, 7:37 IST
ಅಕ್ಷರ ಗಾತ್ರ
ಹೊಸಪೇಟೆ: ‘ಪರೀಕ್ಷೆಗೆ ಸೀಮಿತವಾದ ಶಿಕ್ಷಣಕ್ಕಿಂತ ಪ್ರಜ್ಞೆ ಅರಳಿಸುವ, ವ್ಯಕ್ತಿತ್ವ ರೂಪಿಸುವ ಶಿಕ್ಷಣ ವ್ಯವಸ್ಥೆ ಬೇಕಾಗಿದೆ’ ಎಂದು ಚಿಂತಕ ಪ್ರೊ. ಜಿ.ಕೆ. ಗೋವಿಂದರಾವ್‌ ಅಭಿಪ್ರಾಯಪಟ್ಟರು.
 
ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ 25ನೇ ನುಡಿಹಬ್ಬದ ಪ್ರಯುಕ್ತ  ಆಯೋಜಿಸಿದ್ದ ‘ನಾಳಿನ ಕರ್ನಾಟಕ’ ವಿಚಾರ ಸಂಕಿರಣ ಉದ್ಘಾಟಿಸಿ, ‘ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ’ ಕುರಿತು ಮಾತನಾಡಿದರು. 
 
ನಿಜವಾದ ಶಿಕ್ಷಣ ಸ್ವಾಭಿಮಾನ, ಆತ್ಮಸ್ಥೈರ್ಯ ಮೂಡಿಸುತ್ತದೆ. ಇದರ ಜತೆಗೇ ಎಲ್ಲವನ್ನೂ ಪ್ರಶ್ನಿಸುವ, ಸಂಶೋಧನೆ ನಡೆಸುವ ಭಾವನೆ ಬೆಳೆಸುತ್ತದೆ ಎಂದರು.
 
ಇಂದಿನ ಶಿಕ್ಷಣ ವ್ಯವಸ್ಥೆ, ವಿಶ್ವವಿದ್ಯಾಲಯಗಳು ಹಾಗೂ ಸಮಾಜದ ನಡುವೆ  ನಿರ್ವಾತ ಸ್ಥಿತಿ ಇದೆ. ಯಾವ ಸಮಾಜ ಸಮೃದ್ಧವಾಗಿ ಬೆಳೆಯಬೇಕು ಎಂಬ ಮಹತ್ತರ ಆಸೆ ಹೊಂದಿರುತ್ತದೆಯೋ ಅಲ್ಲಿ ಶಿಕ್ಷಣ ವ್ಯವಸ್ಥೆ ಬಹಳ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.
 
‘ಅಭಿವೃದ್ಧಿ’ ಕುರಿತು ಮಾತನಾಡಿದ ಆರ್ಥಿಕ ತಜ್ಞ ಪ್ರೊ.ಟಿ.ಆರ್‌. ಚಂದ್ರಶೇಖರ್‌, ವ್ಯಕ್ತಿಯ ಬದುಕಿನಲ್ಲಿ ನಾಳೆ ಎಂಬುದು ಬಹಳ ಮುಖ್ಯವಾದುದು. ಆದರೆ, ಅದೇ ನಿರ್ಣಾಯಕವಲ್ಲ. ಕೆಲವರು ವರ್ತಮಾನದಲ್ಲಿದ್ದರೂ ಭೂತದಲ್ಲಿ ಬದುಕುತ್ತಿರುತ್ತಾರೆ. ಅದು ದೊಡ್ಡ ದುರಂತ. ಭೂತದಿಂದ ಬಿಡುಗಡೆ ಬಯಸುವ ಹೋರಾಟವೇ ವರ್ತಮಾನ ಎಂದರು.
 
ಇತ್ತೀಚಿನ ವರ್ಷಗಳಲ್ಲಿ ನಗರೀಕರಣ, ವಲಸೆ ದೊಡ್ಡ ಸಮಸ್ಯೆಗಳಾಗಿವೆ. ಆದರೆ, ನಮ್ಮನ್ನು ಆಳುವ ಸರ್ಕಾರ ವಲಸೆಯನ್ನು ಸಮಸ್ಯೆಯೆಂದೇ ಪರಿಗಣಿಸಿಲ್ಲ. ಭೌತಿಕ ಸಮಸ್ಯೆಗಳ ನಡುವೆ ಸಮಾನತೆ, ಬಹುರೂಪಿ ಆಶಯಗಳನ್ನು ಹೊಂದಿರುವ ಕರ್ನಾಟಕದ ವಿಶಿಷ್ಟತೆಯನ್ನು ಕಾಪಾಡಿಕೊಂಡು ಹೋಗುವ ಬಹುದೊಡ್ಡ ಜವಾಬ್ದಾರಿಯೂ ಇದೆ ಎಂದು ತಿಳಿಸಿದರು.
 
ಹಿರಿಯ ಪತ್ರಕರ್ತೆ ಆರ್‌. ಪೂರ್ಣಿಮಾ ಅವರು ‘ಸಾಂಸ್ಕೃತಿಕ’ ವಿಷಯದ ಕುರಿತು ಮಾತನಾಡಿ, ದೇಶದಾದ್ಯಂತ ಒಂದೇ ಧರ್ಮ, ಒಂದೇ ಮತ, ಒಂದೇ ಸಿದ್ಧಾಂತ ಎಂಬ ಭಾವನೆ ಬಿತ್ತಲಾಗುತ್ತಿದೆ.
 
ಭಾರತ ಬಹುತ್ವದಿಂದ ಕೂಡಿರುವ ದೇಶ. ಇಲ್ಲಿ ಹಿಂದೆಯೂ ಒಂದು ಸಿದ್ಧಾಂತ, ಒಂದು ಮತ ಎನ್ನುವುದು ಇರಲಿಲ್ಲ. ಈಗಲೂ ಇಲ್ಲ. ಆದರೆ, ರಾಜಕೀಯ ಸ್ವಾರ್ಥಕ್ಕಾಗಿ ಈ ವಿಷಯಗಳನ್ನು ಮುನ್ನಲೆಗೆ ತರಲಾಗುತ್ತಿದೆ. ಪ್ರಜ್ಞಾವಂತರು ಇದರ ಬಗ್ಗೆ ಧ್ವನಿ ಎತ್ತಬೇಕು ಎಂದರು.
 
ಸ್ವಾಮೀಜಿಗೆ ಪಿಎಚ್‌.ಡಿ ಪ್ರದಾನ
ಹೊಸಪೇಟೆ: ‘ವಚನ ಸಾಹಿತ್ಯ: ವಚನೋತ್ತರ ಅನುಸಂಧಾನಗಳು’ ಕುರಿತು ಮಹಾಪ್ರಬಂಧ ರಚಿಸಿರುವ ಚಿತ್ರದುರ್ಗದ ವನಶ್ರೀ ಮಠದ ಬಸವಕುಮಾರ ಸ್ವಾಮೀಜಿ (ಮೂಲ ಹೆಸರು ಆರ್‌.ಟಿ. ಕುಮಾರಸ್ವಾಮಿ) ಅವರಿಗೆ ನುಡಿಹಬ್ಬದಲ್ಲಿ  ಪಿ.ಎಚ್‌.ಡಿ ಪದವಿ ಪ್ರದಾನ ಮಾಡಲಾಯಿತು
 
‘ವಚನ ಚಳವಳಿ ಜನಸಮುದಾಯದ ಮೇಲೆ ಎಂತಹ ಪ್ರಭಾವ ಬೀರಿತು ಎನ್ನುವುದನ್ನು ಆಳವಾಗಿ ತಿಳಿಯುವ ಇಂಗಿತ ಇತ್ತು. ಈಗ ಅದು ಈಡೇರಿದೆ’ ಎಂದು ತಿಳಿಸಿದರು.  
 
ಪದವಿ ಪ್ರದಾನ:  ಡಿ.ಲಿಟ್‌–3, ಪಿ.ಎಚ್‌.ಡಿ–100, ಎಂ.ಫಿಲ್‌–74, ಎಂ.ಎ.ಪಿ.ಎಚ್‌.ಡಿ–19, ಎಂ.ವಿ.ಎ, ಎಂ. ಮ್ಯೂಸಿಕ್‌ ತಲಾ 8 ಮತ್ತು ಬಿ. ಮ್ಯೂಸಿಕ್ ಪೂರೈಸಿದ ಮೂವರಿಗೆ ಪದವಿ ಪ್ರದಾನ ಮಾಡಿದರು.
***
‘ಪ್ರಜಾಪ್ರಭುತ್ವದ ತಿರುಳು ಸಹಿಷ್ಣುತೆ’
‘ಪ್ರಜಾಪ್ರಭುತ್ವ ಎನ್ನುವುದು ಜೀವನದ ಮಾರ್ಗ. ಮಾನಸಿಕ ಮನೋಧರ್ಮ ಕೂಡ ಹೌದು. ಸಹಿಷ್ಣುತೆ ಅದರ ಅತಿಮುಖ್ಯ  ಅಂಶ’ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎನ್‌. ಕುಮಾರ್‌ ಹೇಳಿದರು.

ಇನ್ನೊಬ್ಬರ ಅಭಿಪ್ರಾಯ ನಮಗೆ ಹಿಡಿಸದಿದ್ದರೂ ಅದನ್ನು ಸಹಿಸಿಕೊಳ್ಳುವ ಮನೋಧರ್ಮ ಬೆಳೆಸಿಕೊಳ್ಳುವುದು ಅವಶ್ಯಕ.  ನಮ್ಮ ಅಭಿಪ್ರಾಯ ಒಪ್ಪಬೇಕೆಂದು ಬಯಸುವ ಬದಲು ಅವರ ಮನವೊಲಿಸಲು ಪ್ರಯತ್ನಿಸಬೇಕು. ಬಲವಂತದಿಂದ ಹೆದರಿಸಿ ನಮ್ಮ ಅಭಿಪ್ರಾಯ ಒಪ್ಪುವಂತೆ ಮಾಡುವುದು ಸರಿಯಲ್ಲ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT