ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನ ಕಣ್ಣಲ್ಲಿ ಅಪ್ಪ: ಪುನೀತ್ ರಾಜಕುಮಾರ್ ಕಟ್ಟಿಕೊಟ್ಟ ಡಾ.ರಾಜಕುಮಾರ್ ಚಿತ್ರಣ

Last Updated 24 ಏಪ್ರಿಲ್ 2019, 5:52 IST
ಅಕ್ಷರ ಗಾತ್ರ

ಸಿನಿಮಾ ಚೌಕಟ್ಟನ್ನು ದಾಟಿ, ಕನ್ನಡದ ಸಾಮಾಜಿಕ–ಸಾಂಸ್ಕೃತಿಕ ಸಂದರ್ಭದಲ್ಲಿ ರಾಜ್‌ ಮುಖ್ಯರೆನ್ನಿಸುತ್ತಾರೆ. ಇಂಥ ಅಪ್ರತಿಮ ವ್ಯಕ್ತಿತ್ವವನ್ನು ಹೊರಗಿನಿಂದ ನೋಡುವುದು ಒಂದು ಬಗೆಯಾದರೆ, ಒಳಗಿನಿಂದ ನೋಡುವುದು ಇನ್ನೊಂದು ಬಗೆ. ‘ಮುಕ್ತಛಂದ’ ಪುರವಣಿಗಾಗಿ ರಾಜ್‌ ಕಿರಿಯ ಪುತ್ರ ಪುನೀತ್‌ ರಾಜಕುಮಾರ್‌ ಮೆಲುಕು ಹಾಕಿರುವ ‘ತಂದೆಯ ನೆನಪುಗಳು’ ವರನಟನ ಬದುಕಿನ ಸಮೀಪದರ್ಶನ ಮಾಡಿಸುವಂತಿವೆ. ಇದು ರಾಜ್‌ ಹುಟ್ಟುಹಬ್ಬದ (ಏ. 24) ವಿಶೇಷ.

–––

ನನಗೆ ತಿಳಿವಳಿಕೆ ಬಂದಾಗಿನಿಂದ ಗಮನಿಸಿದ ಹಾಗೆ, ನನ್ನ ತಾಯಿ ಯಾವಾಗಲೂ ಬಿಜಿಯಾಗಿರುತ್ತಿದ್ದರು. ಆಗ ನಾವು ಚೆನ್ನೈನಲ್ಲಿದ್ದೆವು. ಅಮ್ಮ ಮತ್ತು ನಾನು ಜೊತೆಯಾಗಿಯೇ ಮನೆ–ಆಫೀಸೆಂದು ಅಡ್ಡಾಡುತ್ತಿದ್ದೆವು. ವಾರದಲ್ಲೊಂದೆರಡು ದಿನ ಬೆಂಗಳೂರಿಗೆ ಬರುತ್ತಿದ್ದೆವು. ನಂತರ 1983ರಲ್ಲಿ ಬೆಂಗಳೂರಿಗೆ ಬಂದೆವು. ಆಗಲೂ ಅಮ್ಮ ಯಾವಾಗಲೂ ಆಫೀಸ್ ಕೆಲಸಗಳಲ್ಲಿ ಬಿಜಿಯಾಗಿರುತ್ತಿದ್ದರು.

ನನಗೂ ಏನಾದರೂ ಮಾಡುತ್ತಿರಬೇಕು, ಕೆಲಸದಲ್ಲಿ ತೊಡಗಿಕೊಳ್ಳಬೇಕು, ಸಂಪಾದನೆ ಮಾಡಬೇಕು ಅನಿಸುತ್ತಿತ್ತು. ‘ನನ್ನದು’ ಅಂತ ಒಂದು ಐಡೆಂಟಿಟಿ ಹುಡುಕಿಕೊಳ್ಳಬೇಕು ಎನ್ನುವುದನ್ನು ಅಮ್ಮನನ್ನು ನೋಡಿಯೇ ಕಲಿತೆ. ನನ್ನ ಅಮ್ಮನ ಹಾಗೆ ಚೆನ್ನಾಗಿ ದುಡಿದು ಸಂಪಾದನೆ ಮಾಡಬೇಕು, ಇತರರಿಗೆ ಕೆಲಸ ಕೊಡುವ ಮಟ್ಟಕ್ಕೆ ಬೆಳೆಯಬೇಕು ಎಂಬೆಲ್ಲ ಆಸೆಗಳಿಗೆ ಸ್ಫೂರ್ತಿಯಾಗಿದ್ದು ಅವರೇ.

ತಂದೆ ಎಂದಾಕ್ಷಣ ಸಿನಿಮಾ. ಬರೀ ಸಿನಿಮಾ! ಅವರ ಸಿನಿಮಾಗಳನ್ನು ನೋಡುತ್ತಲೇ ಇರುತ್ತಿದ್ದೆವು. ‘ಮೇಯರ್‌ ಮುತ್ತಣ್ಣ’ ಹಾಗೂ ‘ಮಯೂರ’ ನನ್ನ ನೆಚ್ಚಿನ ಸಿನಿಮಾಗಳು. ಇನ್ನೂ ಹಲವಾರು ಸಿನಿಮಾಗಳು ಚೆನ್ನಾಗಿವೆ. ಆದರೆ ನನಗೆ ಆಗ ಈ ಎರಡು ಸಿನಿಮಾಗಳೆಂದರೆ ಅಚ್ಚುಮೆಚ್ಚು. ಆ ವಯಸ್ಸಿನಲ್ಲಿ ‘ಹಾಲು ಜೇನು’ ರೀತಿಯ ಭಾವನಾತ್ಮಕ ಸಿನಿಮಾಗಳು ಇಷ್ಟವಾಗುತ್ತಿರಲಿಲ್ಲ.

ಚಿಕ್ಕವಯಸ್ಸಿನಿಂದಲೂ ನಾನು ನೋಡಿಕೊಂಡು ಬೆಳೆದಿದ್ದು ಹೆಚ್ಚಾಗಿ ನನ್ನ ತಂದೆಯವರ ಸಿನಿಮಾಗಳನ್ನೇ. ಒಂದು ಕಡೆ ಅವರ ಮಗನಾಗಿ, ನಂತರ ಸಿನಿಮಾ ಎಂಬ ಮಾಧ್ಯಮದ ಪ್ರೇಮಿಯಾಗಿ ನಾನು ನೋಡುತ್ತಿದ್ದುದು ಅಪ್ಪಾಜಿ ಸಿನಿಮಾಗಳನ್ನೇ. ನಾನು ನೋಡಿಕೊಂಡು ಬಂದ ತಂದೆಯವರ ಎಲ್ಲ ಸಿನಿಮಾಗಳಲ್ಲೂ ಕೌಟುಂಬಿಕ ಮೌಲ್ಯಗಳ ತಳಹದಿ ಇದ್ದೇ ಇರುತ್ತಿತ್ತು.

ಅಪ್ಪಾಜಿ ಎಷ್ಟೇ ದೊಡ್ಡ ಮನುಷ್ಯ ಇರಲಿ, ಯಾರು ಎದುರಿಗೆ ಬಂದರೂ ತುಂಬು ಪ್ರೀತಿಯಿಂದ ಕೈಕುಲುಕಿ ಅಭಿನಂದಿಸುತ್ತಿದ್ದರು. ಯಾರೇ ಬಂದರೂ ಅವರನ್ನು ತುಂಬ ಗೌರವದಿಂದ ಕಾಣುತ್ತಿದ್ದರು.

ಎಲ್ಲ ರೀತಿಯ ಶಕ್ತಿ–ಪ್ರಭಾವ ಅವರಿಗಿತ್ತು. ಆಗ ನನಗೆ ಸುಮಾರು ಹದಿನಾರು, ಹದಿನೇಳು ವರ್ಷ. ‘ನಮ್ಮಪ್ಪನಿಗೆ ಎಷ್ಟೆಲ್ಲ ಪವರ್‌ ಇದೆ. ಏನು ಬೇಕಾದರೂ ಮಾಡಬಹುದಲ್ಲ, ಯಾಕೆ ಇಷ್ಟು ಸರಳವಾಗಿರುತ್ತಾರೆ?’ ಅನಿಸುತ್ತಿತ್ತು. ಆರಾಮವಾಗಿ ಅಧಿಕಾರ ಚಲಾಯಿಸಿಕೊಂಡು, ಎಲ್ಲರಿಗೂ ಆದೇಶ ನೀಡುತ್ತಾ ಇರಬಹುದಾಗಿತ್ತಲ್ಲ. ಯಾಕೆ ಆ ರೀತಿ ಮಾಡುವುದಿಲ್ಲ ಎಂಬ ಸಂಗತಿ ನನ್ನನ್ನು ಯಾವಾಗಲೂ ಕಾಡುತ್ತಿತ್ತು. ಆ ರೀತಿಯ ಅಧಿಕಾರ ಬೇಕಾಗಿಲ್ಲ, ಪ್ರೀತಿಯಿರುವಲ್ಲಿ ಅದು ಅಮುಖ್ಯ ಎನ್ನುವುದು ನಂತರ ತಿಳಿಯುತ್ತಾ ಹೋಯಿತು.

ಅಪ್ಪಾಜಿ ತುಂಬಾ ಸರಳವಾಗಿದ್ದಾಗ, ನಾವು ಮಕ್ಕಳು ಬೇರೆ ರೀತಿ ನಡೆದುಕೊಂಡು ಯಾರಾದರೂ ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿಕೊಂಡಿದ್ದು ಕಿವಿಗೆ ಬಿದ್ದರೆ ಅವರಿಗೆ ಎಷ್ಟು ನೋವಾಗಬಹುದು? ನಮ್ಮ ಬಗ್ಗೆ ಎಷ್ಟು ಬೇಸರಗೊಳ್ಳಬಹುದು? ಎಂಬ ಭಯ ನಮಗಿತ್ತು. ಅವರ ಮೇಲಿನ ಗೌರವವೇ ನಮ್ಮನ್ನು ನಿಯಂತ್ರಿಸುತ್ತಿತ್ತು.

ಈಗಲೂ ಯಾವುದಾದರೂ ಹೋಟೆಲ್‌ಗೆ ಹೋದಾಗ ಹಲವರು ನನ್ನಿಂದ ಬಿಲ್‌ ತೆಗೆದುಕೊಳ್ಳುವುದಿಲ್ಲ. ಆಗೆಲ್ಲ ನನ್ನ ಸ್ನೇಹಿತರು ತಮಾಷೆ ಮಾಡುತ್ತಿರುತ್ತಾರೆ. ‘ನಿನ್‌ ಜೊತೆ ಬಂದು ಬಿಡಬೇಕು. ಎಲ್ಲಾನೂ ಫ್ರೀಯಾಗೇ ಸಿಗುತ್ತದೆ’ ಅಂತ. ಆದರೆ ಅವರು ಯಾಕೆ ಬಿಲ್‌ ತೆಗೆದುಕೊಳ್ಳುತ್ತಿಲ್ಲ? ಒಂದು ತಂದೆಯವರ ಬಗೆಗಿನ ಗೌರವ. ಇನ್ನೊಂದು, ನೀವು ಒಬ್ಬ ಒಳ್ಳೆಯ ಮನುಷ್ಯನಾಗಿದ್ದರೆ ಎಲ್ಲರೂ ನಿಮ್ಮನ್ನು ಪ್ರೀತಿಸುತ್ತಾರೆ.

ಒಳ್ಳೆಯ ಮನುಷ್ಯನಾಗಿರುವುದಕ್ಕೆ ನೀವೇನೂ ಸಿನಿಮಾದಲ್ಲಿ ನಟಿಸಲೇಬೇಕಾಗಿಲ್ಲ. ಬೇರೆಯವರಿಗೆ ಕೆಟ್ಟದ್ದನ್ನು ಬಯಸದೇ ಇದ್ದರೆ ಸಾಕು. ಇದನ್ನು ಅಪ್ಪಾಜಿ ತುಂಬ ಸರಳವಾಗಿ ಹೇಳುತ್ತಿದ್ದರು. ರಾಜಕುಮಾರ್‌ ಅಂದ್ರೆ ಎಲ್ಲರಿಗೂ ಅಗಾಧವಾದ ಗೌರವ ಇತ್ತು. ‘ಅವರ ಮನೆಯವರು’ ಎಂಬ ಕಾರಣಕ್ಕೆ ನಮ್ಮ ಮೇಲೆಯೂ ಜನರು ತೋರುತ್ತಿದ್ದ ಪ್ರೀತಿ, ವಾತ್ಸಲ್ಯ ಇರುತ್ತದಲ್ಲ, ಅದು ಅಧಿಕಾರ ಅಲ್ಲ, ತುಂಬ ದೊಡ್ಡ ಗೌರವ. ಅದನ್ನು ಉಳಿಸಿಕೊಳ್ಳಬೇಕು ಎಂಬ ಎಚ್ಚರ ನಮಗೂ ಇತ್ತು.

ನನ್ನ ತಂದೆಯಲ್ಲಿ ತುಂಬ ಇಷ್ಟಪಡುತ್ತಿದ್ದ ಗುಣ ಕಾರ್ಮಿಕರನ್ನು ಅವರು ಗೌರವಿಸುತ್ತಿದ್ದ ರೀತಿ. ನಮ್ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗನೇ ಆಗಿರಬಹುದು, ಉದ್ಯಾನದ ಮಾಲಿಯೇ ಆಗಿರಬಹುದು, ರಸ್ತೆಯಲ್ಲಿ ಹೋಗುತ್ತಿದ್ದಾಗ ಕಾಣುತ್ತಿದ್ದ ಕೂಲಿಯವನೇ ಆಗಿರಬಹುದು – ಪ್ರತಿಯೊಬ್ಬನ ಕೆಲಸವನ್ನೂ ಗೌರವಿಸುತ್ತಿದ್ದರು. ಅವರೆಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದರು. ಈ ಗುಣ ತೋರಿಕೆಯದಾಗಿರಲಿಲ್ಲ. ಅದು ಅವರ ಸ್ವಭಾವವೇ ಆಗಿತ್ತು. ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಹೇಗೆ ಗೌರವಿಸಬೇಕು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿತ್ತು.

ಬೇರೆ ದೇಶಗಳಿಗೆ ಹೋದಾಗ ನನಗೆ ಹೇಳುತ್ತಿದ್ದರು: ‘ನೋಡು ಕಂದಾ, ಇಲ್ಲಿ ಎಲ್ಲರೂ ಪರಿಚಯ ಇಲ್ಲದವರನ್ನೂ ‘ಹಲೋ’ ಅಂತ ಮಾತನಾಡಿಸುತ್ತಾರೆ. ನಗುತ್ತಾರೆ. ಆ ಖುಷಿಯನ್ನು–ನಗುವನ್ನು ನಾವು ತಂದುಕೊಳ್ಳಬೇಕು’. ಅಪ್ಪಾಜಿ ಅವರ ಈ ಮಾತು ನನ್ನನ್ನು ತುಂಬಾ ಕಾಡುತ್ತಿತ್ತು. ಬದುಕಿದರೆ ಹಾಗೆ ಬದುಕಬೇಕು ಅನಿಸುತ್ತಿತ್ತು.

ಹಳ್ಳಿಯ ಬೇರು ಸಜ್ಜನಿಕೆಯ ಚಿಗುರು
ಅವರ ಸಿನಿಮಾ ಪಾತ್ರಗಳನ್ನು ನಾನು ತುಂಬಾ ಗಂಭೀರವಾಗಿ ವಿಶ್ಲೇಷಿಸಿ, ಅದಕ್ಕೂ ಅವರ ಬದುಕಿಗೂ ಯಾವ ರೀತಿಯ ಹೋಲಿಕೆ ಇದೆ ಎಂದೆಲ್ಲ ಯೋಚಿಸಲು ಹೋಗಿಲ್ಲ. ಅವರು ನಟಿಸುತ್ತಿದ್ದ ಪಾತ್ರಗಳೇ ಬೇರೆ. ಯಾಕೆಂದರೆ ಅವರೊಬ್ಬ ಕಲಾವಿದ. ಕಲಾವಿದನಿಗೆ ತನ್ನ ಸಿನಿಮಾ ಚೆನ್ನಾಗಿ ಆಗಬೇಕು ಎನ್ನುವುದೇ ಮುಖ್ಯವಾಗಿರುತ್ತದೆ.

ಅಪ್ಪಾಜಿ ಅವರ ವೈಯಕ್ತಿಕ ಬದುಕು, ಅವರ ಬದುಕಿನ ಬೇರುಗಳು, ನಡೆದುಬಂದ ದಾರಿ, ರಂಗಭೂಮಿಯ ಬದುಕು, ಅದರ ಹಿಂದಿನ ಹಳ್ಳಿಯ ಜೀವನ ಎಲ್ಲವೂ ಅವರ ವ್ಯಕ್ತಿತ್ವವನ್ನು ರೂಪಿಸಿತ್ತು ಎನ್ನುವುದು ಮಾತ್ರ ನಿಜ.

ಕೆಲಸಕ್ಕೆ ಎಂದು ಮದ್ರಾಸಿಗೆ ಹೋದಾಗ ಅವರು ಇಡೀ ಕುಟುಂಬವನ್ನು ತಮ್ಮ ಜೊತೆಗೆ ಕರೆದುಕೊಂಡು ಹೋದರು. ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳಬೇಕು, ಮಕ್ಕಳನ್ನು ಓದಿಸಬೇಕು ಎನ್ನುವುದು ಅವರ ಮನಸ್ಸಿನಲ್ಲಿತ್ತು. ನಂತರ ಸಾಕಷ್ಟು ಪ್ರಸಿದ್ಧಿ ಪಡೆದರು. ಆದರೂ ಅವರು ತಮ್ಮ ಹಳ್ಳಿಯ ಬದುಕಿನ ಮೂಲಬೇರುಗಳನ್ನು ಬಿಟ್ಟುಕೊಡಲಿಲ್ಲ.

ರಾಜಕುಮಾರ್‌ ಅವರು ನಟಿಸಿದ ಪಾತ್ರಗಳನ್ನು ನೋಡಿ ಸ್ಫೂರ್ತಿಗೊಳ್ಳುವ ಹಾಗೆಯೇ ಅವರ ಖಾಸಗೀ ಬದುಕೂ ಹಲವರಿಗೆ ಸ್ಫೂರ್ತಿಯಾಗಿತ್ತು. ಆ ಕಾರಣಕ್ಕಾಗಿಯೇ ಅವರು ರಾಜಕುಮಾರ್! ಹಾಗಾಗಲು ಸಾಧ್ಯವಾಗಿದ್ದು ಅವರಿಗೊಬ್ಬರಿಗೇ.

ತುಂಬ ಜನರು ನನ್ನನ್ನು ನೋಡಿ ‘ನೀವು ತಂದೆ ಥರ ಇದ್ದೀರಿ’ ಅನ್ನುತ್ತಿರುತ್ತಾರೆ. ನೋಡುವುದಕ್ಕೆ ಸ್ವಲ್ಪ ಅವರ ಹಾಗೆಯೇ ಕಾಣಿಸಬಹುದು. ಆದರೆ ನಮ್ಮ ಮನೆಯಲ್ಲಿ ನನ್ನ ತಂದೆಯವರ ವರ್ಚಸ್ಸು ಯಾರಿಗೂ ಬಂದಿಲ್ಲ. ರಾಜಕುಮಾರ್‌ ಒಬ್ಬರೇ. ಅವರ ಜಾಗವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಸರಳ ಸ್ವಭಾವ, ಸಜ್ಜನಿಕೆ ಎಲ್ಲವನ್ನೂ ನಾವು ಕೆಲಮಟ್ಟಿಗೆ ಅಳವಡಿಸಿಕೊಂಡಿರಬಹುದು. ಆದರೆ ಅವರ ಜೀವನಶೈಲಿ ಅಳವಡಿಸಿಕೊಳ್ಳಲು ನನ್ನಿಂದಂತೂ ಸಾಧ್ಯವಾಗಿಲ್ಲ. ನನ್ನನ್ನು ತುಂಬ ಮುದ್ದು ಮಾಡಿ ಬೆಳೆಸಿಬಿಟ್ಟರು.

ಅವರು ತುಂಬ ಚೆನ್ನಾಗಿ, ಅನುಭವಿಸಿ ಊಟ ಮಾಡುತ್ತಿದ್ದರು. ಈಗ ನಾವು ಮಾಡುವ ಡಯಟ್‌ ಗಿಯಟ್‌ಗಳ ಅವಶ್ಯಕತೆಯೆಲ್ಲ ಅವರಿಗೆ ಇರಲೇ ಇಲ್ಲ. ಅದೇನೋ ಅವರು ಪಡೆದುಕೊಂಡು ಬಂದಿದ್ದೋ ಅಥವಾ ಆ ಪೀಳಿಗೆಯೇ ಹಾಗಿತ್ತೋ ಗೊತ್ತಿಲ್ಲ. ನಮ್ಮ ತಂದೆ ನಟಿಸಲು ಶುರು ಮಾಡಿದ ಸಮಯದಿಂದ ‘ಶಬ್ದವೇಧಿ’ಯವರೆಗೂ ಅವರ ಸೊಂಟದ ಸುತ್ತಳತೆ 32 ಇಂಚು! ತುಂಬ ಫಿಟ್‌ ಆಗಿದ್ದ ಮನುಷ್ಯ ಅವರು. ಕಲ್ಲು ತಿಂದರೂ ಅರಗಿಸಬೇಕು, ದೇಹವನ್ನು ದಂಡಿಸಬೇಕು ಎಂದು ಯಾವಾಗಲೂ ಹೇಳುತ್ತಿದ್ದರು, ಹಾಗೆಯೇ ಇದ್ದರು.


ಬದಲಾಗದ ಸರಳತೆ
ಚಿಕ್ಕವನಾಗಿದ್ದಾಗ ನನ್ನನ್ನೂ ಅವರ ಸಿನಿಮಾಗಳ ಚಿತ್ರೀಕರಣಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಆಗ ನಾನು ತುಂಬ ಚಿಕ್ಕವನು. ‘ಒಂದು ಮುತ್ತಿನ ಕಥೆ’, ‘ಹೊಸಬೆಳಕು’, ‘ಸಮಯದ ಗೊಂಬೆ’, ‘ಯಾರಿವನು’, ‘ಶ್ರುತಿ ಸೇರಿದಾಗ’, ‘ಗುರಿ’, ‘ಪರಶುರಾಮ’ ಹೀಗೆ ಹಲವಾರು ಸಿನಿಮಾಗಳ ಚಿತ್ರೀಕರಣಕ್ಕೆ ಹೋಗಿದ್ದೆ.

ನಾನು ಸ್ವಲ್ಪ ಬೆಳೆದಾಗ, ಹದಿನೇಳು ಹದಿನೆಂಟನೇ ವಯಸ್ಸಿನಲ್ಲಿ ಮತ್ತೆ ಚಿತ್ರೀಕರಣ ನೋಡಿದ ಸಿನಿಮಾ ‘ಜೀವನ ಚೈತ್ರ’. ನಂತರ ‘ಆಕಸ್ಮಿಕ’, ‘ಒಡಹುಟ್ಟಿದವರು’, ಕೊನೆಯ ಸಿನಿಮಾ ‘ಶಬ್ದವೇಧಿ’. ಚಿಕ್ಕಂದಿನಲ್ಲಿ ನಾನು ನೋಡಿದ ಅಪ್ಪಾಜಿ ಆಗಲೂ ಹಾಗೆಯೇ ಇದ್ದರು. ಸೆಟ್‌ನಲ್ಲಿ ಎಲ್ಲರ ಜತೆಗೂ ಕೂತು ಊಟ ಮಾಡುತ್ತಿದ್ದರು. ಎಲ್ಲರೊಂದಿಗೆ ಬೆರೆಯುತ್ತಿದ್ದರು.

ತಮ್ಮ ಆಪ್ತರೆಲ್ಲರನ್ನೂ ಅವರು ಕುಟುಂಬದ ಸದಸ್ಯರಂತೆಯೇ ನೋಡುತ್ತಿದ್ದರು. ನನ್ನ ಜೊತೆ ಒಬ್ಬ ಹುಡುಗ ಇದ್ದಾನೆ, ಶ್ರೀಕಾಂತ್‌ ಅಂತ. ತಂದೆಯವರು ತೀರಿಕೊಂಡ ದಿನ – ತಿಂಡಿ ತಿಂದು ಮೆಟ್ಟಿಲ ಮೇಲೆ ಕೂತು ಎಲ್ಲರಿಗೂ ಬಾಯಿತುತ್ತು ನೀಡಿದ್ದರು. ಹಾಗೆ ಅವರಿಂದ ತುತ್ತುಣಿಸಿಕೊಂಡವರಲ್ಲಿ ಶ್ರೀಕಾಂತ್‌ ಕೂಡ ಒಬ್ಬ. ಆ ಪುಣ್ಯ ನನಗೆ ಸಿಗಲಿಲ್ಲ.

ಸದಾಶಿವನಗರದ ಮನೆಯ ಆವರಣ ದೊಡ್ಡದಾಗಿತ್ತು. ಆ ದಿನ ವಾಕ್‌ ಮಾಡಿ ಅಲ್ಲಿಯೇ ಕೂತು ಟಿಫಿನ್‌ ಮಾಡಿದರು. ನಂತರ ಫೋಟೊ ತೆಗೆಸಿದರು. ಆ ಫೋಟೊ ಇನ್ನೂ ಶ್ರೀಕಾಂತ್‌ ಬಳಿ ಇದೆ.

ಅವರ ಸಿನಿಮಾಗಳು ರೂಪುಗೊಳ್ಳುತ್ತಿದ್ದದ್ದೂ ಹಾಗೆಯೇ. ಅಮ್ಮ ಸಾಕಷ್ಟು ಕಾದಂಬರಿಗಳನ್ನು ಓದುತ್ತಿದ್ದರು. ಸಿನಿಮಾ ಮಾಡಲು ಹೊಂದುವಂಥ ಕಾದಂಬರಿಗಳನ್ನು ಸಜೆಸ್ಟ್‌ ಮಾಡುತ್ತಿದ್ದರು. ವರದಣ್ಣ (ಅವರನ್ನು ನಾವೆಲ್ಲ ಅಪ್ಪಣ್ಣ ಅನ್ನುತ್ತಿದ್ದೆವು) ತಂದೆಯವರಿಗೆ ಬೆನ್ನೆಲುಬು ಆಗಿದ್ದರು. ಎಲ್ಲರೂ ಸೇರಿ ಕಥೆ ಚರ್ಚಿಸುತ್ತಿದ್ದರು.

ಸಿನಿಮಾಕ್ಕೆ ಸಂಗೀತ ಸಂಯೋಜಿಸಲು ಟ್ಯೂನ್‌ ಹಾಕುತ್ತಿದ್ದುದು ನಮ್ಮ ಮನೆಯಲ್ಲಿಯೇ. ಹಾರ್ಮೋನಿಯಂ ಇಟ್ಟುಕೊಂಡು ಟ್ಯೂನ್‌ ಹಾಕುತ್ತಿದ್ದರು. ಆವಾಗೆಲ್ಲ ನಾವು ದೂರದಿಂದ ನೋಡುತ್ತಿದ್ದೆವಷ್ಟೆ. ನನ್ನ ಸಿನಿಮಾ ಆದಾಗ ನಾನೂ ಸಕ್ರಿಯವಾಗಿ ಭಾಗವಹಿಸಲು ಶುರುಮಾಡಿದೆ. ತುಂಬ ಸುಂದರವಾದ ದಿನಗಳು ಅವೆಲ್ಲ.

ಪ್ರಭಾವಳಿ ಭಾರವಲ್ಲ, ಭಾಗ್ಯ!
ಸಾಮಾನ್ಯವಾಗಿ ಹೆತ್ತವರು ಪ್ರಸಿದ್ಧರು–ಸಾಧಕರು ಆಗಿದ್ದಾಗ ಮಕ್ಕಳಿಗೆ ಅವರ ನೆರಳಿನಿಂದ ಹೊರಬರುವ ಸವಾಲು ಇರುತ್ತದೆ. ನನಗೆ ಅಪ್ಪಾಜಿಯ ಈ ಪ್ರಭಾವಳಿ ಭಾರ ಎಂದು ಅನಿಸುತ್ತಿರಲಿಲ್ಲ. ಆರಂಭದಲ್ಲಿ ಖುಷಿಯೇ ಆಗುತ್ತಿತ್ತು. ಯಾಕೆಂದರೆ ನಾವು ಎಲ್ಲಿಯೇ ಹೋದರೂ ರಾಜಮರ್ಯಾದೆ ಸಿಗುತ್ತಿತ್ತು. ಪ್ರೀತಿಯಿಂದ ನೋಡುತ್ತಿದ್ದರು.

ನಾನೊಂದು ಬಿಜಿನೆಸ್‌ ಮಾಡುತ್ತಿದ್ದೆ. ಅದು ಸರಿಯಾಗಲಿಲ್ಲ. ನನ್ನದೇನೂ ತಪ್ಪಿಲ್ಲದಿದ್ದರೂ ಸ್ವಲ್ಪ ಕೆಟ್ಟ ಹೆಸರೂ ಬಂತು. ತಂದೆ ‘ಅದನ್ನು ಬಿಟ್ಟುಬಿಡು’ ಎಂದರು. ಬೇರೆ ಏನಾದರೂ ಮಾಡೋಣ ಅನಿಸುತ್ತಿತ್ತು. ನಮ್ಮ ತಂದೆ ಯಾವುದಕ್ಕೂ ನಮ್ಮ ಮೇಲೆ ಒತ್ತಡ ಹೇರುತ್ತಿರಲಿಲ್ಲ. ‘ಇದನ್ನೇ ಮಾಡು, ಅದನ್ನೇ ಮಾಡು’ ಎಂದು ಕಟ್ಟಳೆ ಹಾಕುತ್ತಿರಲಿಲ್ಲ.

ಎಲ್ಲ ಮಕ್ಕಳಲ್ಲಿಯೂ ಆ ವಯಸ್ಸಲ್ಲಿ ಒಂದು ಮನಸ್ಥಿತಿ ಇರುತ್ತದೆ. ತಂದೆ–ತಾಯಿ ಹೇಳಿದ್ದು ಸರಿ ಅನಿಸುವುದಿಲ್ಲ. ಆದರೆ ನಮಗೆ ಅದನ್ನೆಲ್ಲ ಮೀರಿ ಒಂದು ಭಯ ಇತ್ತು. ತಂದೆಗೆ ಎಲ್ಲಿ ಕೆಟ್ಟ ಹೆಸರು ತಂದುಬಿಡುತ್ತೇನೋ ಎಂಬ ಭಯ. ಆದ್ದರಿಂದ ಆ ಬಿಜಿನೆಸ್‌ ಬಿಟ್ಟೆ. ಆದರೆ ಏನಾದರೂ ಮಾಡಬೇಕಲ್ಲ. ಏನು ಮಾಡುವುದು? ಈ ಸಮಯದಲ್ಲಿಯೂ ಅಪ್ಪಾಜಿ ಅವರ ಪ್ರಭಾವಳಿ ಭಾರ ಅನಿಸುತ್ತಿರಲಿಲ್ಲ. ಆದರೆ ಎಲ್ಲೋ ಸ್ವಲ್ಪ ಕಿರಿಕಿರಿ ಆಗುತ್ತಿತ್ತು. ಏನೂ ಮಾಡಲಿಕ್ಕೆ ಸಾಧ್ಯವಾಗುತ್ತಿಲ್ಲವಲ್ಲ ಎಂಬ ಕಿರಿಕಿರಿ ಅದು.

ನನಗೆ ತುಂಬ ಜನರು ಹೇಳುತ್ತಿದ್ದರು. ‘ನಿಮಗೇನ್ರಿ, ತಂದೆಯವರು ಗಾಡ್‌ಫಾದರ್‌. ತಂದೆಯ ಹೆಸರಿಂದ ನೀವು ಕ್ಲಿಕ್‌ ಆಗೇ ಆಗ್ತೀರಾ’ ಎಂದು. ಅದು ಸುಳ್ಳು. ಒಬ್ಬರು ಕ್ಲಿಕ್‌ ಆಗಲಿಕ್ಕೆ ಅವರೇ ಕಷ್ಟಪಟ್ಟು ದುಡಿಯಬೇಕೇ ವಿನಾ ಯಾರ ಹೆಸರಿನಿಂದಲೂ ಅದು ಸಾಧ್ಯವಿಲ್ಲ. ನಮ್ಮ ಇತಿಹಾಸ, ಇತಿಹಾಸ ಅಷ್ಟೆ. ಭವಿಷ್ಯ ನಮ್ಮ ಶ್ರಮದಿಂದಲೇ ರೂಪುಗೊಳ್ಳುವುದು.

‘ಅಪ್ಪು’ವಿನ ಆತಂಕ
ಸಿನಿಮಾ ಮಾಡಬೇಕು ಎಂಬ ಆಲೋಚನೆಯೇ ಇರಲಿಲ್ಲ ನನಗೆ. ಅದರಲ್ಲಿಯೂ ಮೊದಲನೇ ಸಿನಿಮಾ ‘ಅಪ್ಪು’ ಮಾಡಬೇಕಾದರಂತೂ ಸಿಕ್ಕಾಪಟ್ಟೆ ಭಯ ಇತ್ತು. ಸಿನಿಮಾ ಏನಾದ್ರೂ ಕೆಟ್ಟದಾಗಿ ಬಂದ್ರೆ ‘ರಾಜಕುಮಾರ್ ಅವರ ಮಗ ಹೇಗೆ ಮಾಡಿಬಿಟ್ಟಿದ್ದಾನಲ್ಲ’ ಎಂದು ಜನ ಆಡಿಕೊಳ್ಳುವ ಹಾಗೆ ಆಗಿಬಿಡ್ತದೇನೋ ಎಂಬ ಆತಂಕ ಇತ್ತು. ಅದು ಕ್ರಮೇಣ ನಿವಾರಣೆಯಾಯ್ತು.

ನನ್ನ ನಟನೆಯನ್ನು ನೋಡಿ ಅಪ್ಪಾಜಿಯೇನೂ ಹೊಗಳಿ ಅಟ್ಟಕ್ಕೇರಿಸಲಿಲ್ಲ. ತುಂಬಾ ಭಾವುಕರಾಗಿ ತಬ್ಬಿಕೊಂಡು, ‘ತುಂಬ ಅದ್ಭುತವಾಗಿ ನಟಿಸಿದ್ದೀಯ’ ಎಂದೆಲ್ಲ ಹೇಳುವುದು ಅವರ ಸ್ವಭಾವ ಆಗಿರಲಿಲ್ಲ. ನಮ್ಮ ಮನೆಯಲ್ಲಿ ಹಾಗೆ ಯಾರನ್ನೂ ಅತಿಯಾಗಿ ವಿಜೃಂಭಿಸುವ ಅಭ್ಯಾಸ ಇಲ್ಲ. ಆದರೆ ‘ಅಪ್ಪು’ ಸಿನಿಮಾ ಬೆಂಗಳೂರಿನಲ್ಲಿ ಯಾವ್ಯಾವ ಚಿತ್ರಮಂದಿರದಲ್ಲಿ ಶತದಿನ ಕಂಡಿತ್ತೋ ಅಲ್ಲೆಲ್ಲ ಹೋಗಿ ಅವರು ಸಿನಿಮಾ ನೋಡಿದ್ದರು.

ಚಪ್ಪಾಳೆ ನನಗಲ್ಲ; ನನ್ನೊಳಗಿನ ಸರಸ್ವತಿಗೆ
ಪ್ರಸಿದ್ಧಿ, ಜನಪ್ರಿಯತೆ, ಶಕ್ತಿ ಎಲ್ಲವೂ ಇದ್ದೂ ಅವರು ‘ಇದ್ಯಾವುದೂ ನನಗೆ ಸಂಬಂಧಿಸಿದ್ದಲ್ಲ, ನನ್ನೊಳಗಿನ ಕಲಾವಿದನಿಗೆ ಸಿಗುತ್ತಿರುವುದು’ ಎಂಬಂತೆ ಬದುಕುತ್ತಿದ್ದರು. ಅವರು ಹೇಗೆ ಆ ಚೈತನ್ಯ ಪಡೆದುಕೊಂಡರೋ ಗೊತ್ತಿಲ್ಲ.

ಅವರು ರಜನೀಕಾಂತ್‌ ಅವರಿಗೆ ಒಂದು ಮಾತು ಹೇಳಿದ್ದರಂತೆ. ರಜನೀಕಾಂತ್‌ ಹಲವು ಕಡೆ ಅದನ್ನು ಹೇಳುತ್ತಿರುತ್ತಾರೆ – ‘ಎಲ್ಲರೂ ಯಾಕೆ ನನಗೆ ನಮಸ್ಕರಿಸುತ್ತಾರೆ, ಶುಭಾಶಯ ಹೇಳ್ತಾರೆ, ಗೌರವಿಸ್ತಾರೆ ಗೊತ್ತಾ? ಅದು ನನ್ನೊಳಗೆ ಇರುವ ಸರಸ್ವತಿಗೆ’.

ಈ ಅರಿವೇ ಅವರನ್ನು ಅಷ್ಟು ಸರಳವಾಗಿರುವಂತೆ ಮಾಡಿತ್ತು ಅನಿಸುತ್ತದೆ. ಒಂದು ಹಂತದ ನಂತರ, ‘ಜನರ ಪ್ರೀತಿ ನನಗೆ ಅವರು ತೋರಿಸುತ್ತಿರುವ ಆಶೀರ್ವಾದ’ ಎಂದು ಅವರಿಗೆ ಅನಿಸಿತ್ತು.

ಪೊರೆದ ತಾಯಿ ಪಾರ್ವತಮ್ಮ
ರಾಜಕುಮಾರ್‌ ಎಂಬ ಒಂದು ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಅಮ್ಮ–ಪಾರ್ವತಮ್ಮ ಅವರ ಪಾತ್ರ ಮಹತ್ವದ್ದು. ನಮ್ಮ ತಂದೆ ಎಷ್ಟು ಸರಳ, ಸಾಮಾನ್ಯ ಮನುಷ್ಯ ಎಂದರೂ ಅವರಿಗೆ ಅವರದೇ ಆದ ಮಿತಿಗಳು ಇದ್ದವು. ಅವನ್ನೆಲ್ಲ ನಿಭಾಯಿಸುತ್ತಿದ್ದವರು ತಾಯಿಯೇ. ರಾಜಕುಮಾರ್ಮತ್ತು ಅವರ ಕುಟುಂಬಕ್ಕೆ ಪಾರ್ವತಮ್ಮ ದೊಡ್ಡ ಆಧಾರಸ್ತಂಭ.

ನಾನು ನಮ್ಮ ಡಿಸ್ಟ್ರಿಬ್ಯೂಶನ್‌ ಆಫೀಸಿಗೆ ಸೇರಿದಾಗ ನನಗೆ ಹತ್ತು ಸಾವಿರ ರೂಪಾಯಿ ಸಂಬಳ ಕೊಡುತ್ತಿದ್ದರು. ನಾನು ಯಾವುದನ್ನೇ ಹೋಗಿ ಕೇಳಿದರೂ ಇಲ್ಲ ಅನ್ನುತ್ತಿರಲಿಲ್ಲ. ನಾನು ಬಿಜಿನೆಸ್‌ ಮಾಡಬೇಕು ಎಂದು ಹೊರಟಾಗಲೂ ಪ್ರೋತ್ಸಾಹ ಕೊಟ್ಟಿದ್ದರು. ಎಲ್ಲದಕ್ಕೂ ಜತೆ ನಿಲ್ಲುತ್ತಿದ್ದರು.

ಮೊದಲೆಲ್ಲ ಅವರ ಕೆಲಸ, ಜವಾಬ್ದಾರಿ ನಿಭಾಯಿಸುತ್ತಿದ್ದ ರೀತಿ, ಯಾವುದೂ ವಿಶೇಷ ಅನಿಸುತ್ತಲೇ ಇರಲಿಲ್ಲ. ಯಾಕೆಂದರೆ ನಾವು ದಿನನಿತ್ಯವೂ ಅದನ್ನೇ ನೋಡಿಕೊಂಡು ಬೆಳೆದವರು. ಈಗ ಯೋಚಿಸಿದರೆ ಅವರು ಮಾಡಿದ ಪ್ರತಿ ಕೆಲಸ, ಪ್ರತಿ ನಿರ್ಧಾರದ ಮಹತ್ವ ಅರ್ಥವಾಗುತ್ತದೆ.

ಅಪ್ಪಾಜಿ ಮೌಲ್ಯದ ಕೈದೀವಿಗೆ

ನಾನು ಅತಿ ಭಾವುಕ ಮನುಷ್ಯ ಅಲ್ಲ. ಆದರೆ ಅಪ್ಪಾಜಿಯವರ ಕೆಲವು ಮಾತುಗಳು ನನ್ನನ್ನು ಯಾವಾಗಲೂ ಕಾಡುತ್ತವೆ. ನನ್ನ ವ್ಯಕ್ತಿತ್ವವನ್ನು ರೂಪಿಸಿದ ಮಾತುಗಳು ಅವೇ.

ಹಿರಿಯರು ಕಂಡಾಗ ನಮಸ್ಕರಿಸು ಅನ್ನುತ್ತಿದ್ದರು. ಈಗಲೂ ಯಾರಾದರೂ ಹಿರಿಯರು ಕಂಡಾಗ ನನಗೆ ಗೊತ್ತಿಲ್ಲದೆಯೇ ಅವರ ಪಾದ ಮುಟ್ಟುತ್ತೇನೆ. ಊಟ ಮಾಡುವಾಗ ಅನ್ನ ತಟ್ಟೆಯಿಂದ ಕೆಳಕ್ಕೆ ಬಿದ್ದರೆ ‘ಎತ್ತಿ ಹಾಕಿಕೊಂಡು ತಿನ್ನು’ ಅನ್ನುತ್ತಿದ್ದರು. ‘ಎಷ್ಟು ಬೇಕೋ ಅಷ್ಟೇ ಹಾಕಿಸಿಕೊ. ತಟ್ಟೆಯಲ್ಲಿ ಊಟವನ್ನು ಬಿಡಬೇಡ’ ಅನ್ನುತ್ತಿದ್ದರು. ತಟ್ಟೆಯಲ್ಲಿ ಊಟ ಬಿಟ್ಟಿದ್ದು ಕಂಡರೆ ಕೋಪಿಸಿಕೊಳ್ಳುತ್ತಿದ್ದರು.

‘ಏನಾದ್ರೂ ಮಾಡಬೇಕು. ಸಾಧಿಸಬೇಕು’ ಎಂದು ಹಪಹಪಿಸುತ್ತಿದ್ದಾಗ – ‘ಏನಾದ್ರೂ ಮಾಡ್ಲೇಬೇಕು ಅಂತಿಲ್ಲ ಕಂದಾ, ಯಾರಿಗೂ ಕೆಟ್ಟದ್ದು ಮಾಡಬೇಡ ಅಷ್ಟೆ’ ಎನ್ನುತ್ತಿದ್ದರು.

ಇವೆಲ್ಲ ತುಂಬ ಸಣ್ಣ ಸಣ್ಣ ಸಂಗತಿಗಳು. ಆದರೆ ನಮ್ಮ ಬದುಕಿನಲ್ಲಿ ಅಷ್ಟೇ ಮಹತ್ವದ ಸಂಗತಿಗಳು. ಅವೆಲ್ಲವನ್ನೂ ನಾನು ನನ್ನ ಮಕ್ಕಳಿಗೆ ಹೇಳಿಕೊಡುತ್ತಿರುತ್ತೇನೆ.

ನನ್ನ ಬದುಕಿನ ಪ್ರತಿಯೊಂದು ಗಳಿಗೆಯಲ್ಲಿಯೂ ಅವರು ಕಾಡುತ್ತಿರುತ್ತಾರೆ. ಒಂದು ಒಳ್ಳೆಯ ಊಟ ಮಾಡುತ್ತಿರುವಾಗ ‘ಅಪ್ಪಾಜಿ ಇದ್ದಿದ್ದರೆ ಎಷ್ಟು ಇಷ್ಟಪಟ್ಟು ತಿಂದಿರೋರು’ ಅನಿಸುತ್ತದೆ. ಮಕ್ಕಳೇನಾದರೂ ಸಾಧನೆ ಮಾಡಿದಾಗ ‘ಅಪ್ಪಾಜಿ ನೋಡಿ ಖುಷಿಪಡ್ತಿದ್ರು’ ಅನಿಸುತ್ತದೆ. ಇಂಥ ತುಂಬ ಸಂಗತಿಗಳಲ್ಲಿ – ಏನೇ ಒಳಿತಾಗಲಿ, ಕೆಡುಕಾಗಲಿ ಅವರನ್ನು ಮಿಸ್‌ ಮಾಡಿಕೊಳ್ಳುತ್ತಿರುತ್ತೇವೆ.

ಸಂಜೆ ಮನೆಗೆ ಹೋದಾಗ, ಅಲ್ಲಿ ದೈಹಿಕವಾಗಿ ಅಪ್ಪ ಇಲ್ಲ ಎನ್ನುವುದು ಸರಿ – ಆದರೆ ನಿಜವಾಗಲೂ ನಾವು ಎಲ್ಲಿ ಹೋದರೂ ಅವರ ಫೋಟೊ ಇರುತ್ತದೆ, ಪ್ರತಿಮೆ ಇರುತ್ತದೆ, ಅವರ ಬಗ್ಗೆ ಮಾತನಾಡುತ್ತಾರೆ. ಇಂದಿಗೂ ಮಕ್ಕಳು, ಯುವಕರು ಅವರ ಸಿನಿಮಾ ನೋಡುತ್ತಾರೆ, ಅವರ ಹಾಡುಗಳನ್ನು ಕೇಳುತ್ತಾರೆ. ಹಾಗಾಗಿ ಅವರನ್ನು ಮರೆಯುವ ಪ್ರಸಂಗವೇ ಎದುರಾಗಿಲ್ಲ. ಬೇರೆ ಯಾರ ಬದುಕಿನಲ್ಲಿಯೂ ಇಂಥದ್ದೊಂದು ಭಾಗ್ಯ ಸಿಗಲು ಸಾಧ್ಯವಿಲ್ಲ.

‘ರಾಜಕುಮಾರ್’ನ ಮೌಲ್ಯಗಳು
ಅಪ್ಪಾಜಿಯವರ ‘ಜೀವನ ಚೈತ್ರ’ ಸಿನಿಮಾ ನೋಡಿ ಹಲವು ಊರುಗಳಲ್ಲಿ ಸಾರಾಯಿ ನಿಷೇಧ ಮಾಡಿದ್ದರಂತೆ. ‘ಬಂಗಾರದ ಮನುಷ್ಯ’ ಸಿನಿಮಾ ಹಲವರು ಬದುಕುವ ರೀತಿಯನ್ನೇ ಬದಲಿಸಿದೆಯಂತೆ. ನನಗೆ ತುಂಬ ಜನರು ಇಂಥ ಉದಾಹರಣೆಗಳನ್ನು ಕೊಟ್ಟಿದ್ದಾರೆ. ಅವರ ಬಹುತೇಕ ಸಿನಿಮಾಗಳಲ್ಲಿ ಇಂಥ ಮೌಲ್ಯಗಳು ಇರುತ್ತಿದ್ದವು. ಈಗ ಅಂಥ ಸಿನಿಮಾಗಳು ಬರುತ್ತಿಲ್ಲ ಎಂದು ಹೇಳುವುದು ಸರಿಯಲ್ಲ.

ಫ್ಯಾಮಿಲಿ ಸಿನಿಮಾಗಳನ್ನು ಈಗ ಜನರು ನೋಡುತ್ತಾರೋ ನೋಡುವುದಿಲ್ಲವೋ ಎನ್ನುವುದಕ್ಕಿಂತ, ಇಂಥ ಫ್ಯಾಮಿಲಿ ಚಿತ್ರಗಳಲ್ಲಿನ ಹೂರಣ ಹೇಗಿರುತ್ತದೆ ಎನ್ನುವುದು ಮುಖ್ಯ. ಜನರು ನೋಡುತ್ತಾರೋ ಇಲ್ಲವೋ ಎನ್ನುವುದನ್ನೂ ನಿರ್ಧರಿಸುವುದು ಸಿನಿಮಾದ ಹೂರಣವೇ.

ಎಲ್ಲ ಸಿನಿಮಾದ ನಾಯಕನಿಗೂ ತಂದೆ, ತಾಯಿ, ತಂಗಿ, ತಮ್ಮ, ಖಳನಾಯಕ, ನಾಯಕಿ – ಒಂದು ಕುಟುಂಬ ಇದ್ದೇ ಇರುತ್ತದೆ. ಒಂದು ಕಡೆ ಒಳಿತು, ಅದಕ್ಕೆ ಎದುರಾಗಿ ಕೆಡುಕು ಇರುವ ಸೂತ್ರ ಇದ್ದೇ ಇರುತ್ತದೆ. ಆದರೆ ನಾವು ಮಾಡುವ ಕಥೆಯಲ್ಲಿ ಈ ಎಲ್ಲವೂ ಹೇಗೆ ಮಿಳಿತಗೊಂಡಿವೆ ಎನ್ನುವುದು ಮುಖ್ಯ. ಪರದೆಯ ಮೇಲಿನ ಕಥೆಯಲ್ಲಿ ಜನರು ತಮ್ಮನ್ನು ತಾವು ಕಾಣಬೇಕು.

ಆಗ ಬದಲಾವಣೆ ಸಾಧ್ಯ. ‘ರಾಜ್‌ಕುಮಾರ’ ಸಿನಿಮಾದಲ್ಲಿ ಸಂತೋಷ್‌ ಆನಂದ್‌ರಾಮ್‌ ಈ ಸಂಗತಿಯನ್ನು ಚೆನ್ನಾಗಿ ಅಳವಡಿಸಿದ್ದಾರೆ. ಅದರಿಂದಲೇ ಆ ಚಿತ್ರ ಜನರಿಗೆ ಮೆಚ್ಚುಗೆಯಾಗಿದೆ.

‘ರಾಜ್‌ಕುಮಾರ’ ಎಂದು ಹೆಸರು ಇಟ್ಟಾಗಲೇ ನನಗೆ ಭಯ ಇತ್ತು. ಆ ಸಿನಿಮಾದಲ್ಲಿ ನನ್ನ ಹೆಗಲ ಮೇಲೆ ಪಾರಿವಾಳ ಕೂರುವ ಚಿತ್ರವಿದೆ. ‘ಕಸ್ತೂರಿ ನಿವಾಸ’ವನ್ನು ನೆನಪಿಸುವ ಆ ದೃಶ್ಯ ನನಗೆ ಇಷ್ಟವಿಲ್ಲ ಅಂತಲ್ಲ, ಆದರೆ ಸಾಕಷ್ಟು ಆತಂಕವೂ ಇತ್ತು. ಅಂಥ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವಾಗ ಭಾರ, ಭಯ, ಜವಾಬ್ದಾರಿ ಎಲ್ಲವೂ ಇರುತ್ತದೆ. ‘ಬೊಂಬೆ ಹೇಳುತೈತೆ’ ಹಾಡು ಚೆನ್ನಾಗಿದ್ದುದರಿಂದ ಜನರು ಮೆಚ್ಚಿಕೊಂಡರು. ಆದರೆ ಅದೇ ಆ ಹಾಡು ಸಾಧಾರಣವಾಗಿದ್ದಿದ್ದರೆ? ಬಹುಶಃ ಸಂತೋಷ್‌, ಹರಿಕೃಷ್ಣ ಅವರಲ್ಲಿ ಇದ್ದ ಧೈರ್ಯವೇ ಈ ಹಾಡನ್ನು ರೂಪಿಸಿದೆ.

ಇನ್ನೊಬ್ಬ ಮನುಷ್ಯನಿಗೆ ಮರ್ಯಾದೆ ಕೊಟ್ಟು ಮಾತಾಡಿಸಬೇಕು. ಯಾರನ್ನೂ ದ್ವೇಷಿಸಬಾರದು. ಕುಟುಂಬದವರೆಲ್ಲ ಒಟ್ಟಿಗೇ ಇದ್ದರೆ ಚೆನ್ನಾಗಿರುತ್ತದೆ. ನಮ್ಮ ಬದುಕನ್ನು ನಾವೇ ಚೆನ್ನಾಗಿ ನೋಡಿಕೊಳ್ಳಬೇಕು.

ಬದುಕು ಚೆನ್ನಾಗಿರಬೇಕು ಎಂದರೆ ನಮ್ಮನ್ನು ನಾವು ಪ್ರೀತಿಸಿಕೊಳ್ಳಬೇಕು. ಇವೆಲ್ಲವೂ ಅಪ್ಪಾಜಿಯ ಸಿನಿಮಾಗಳಲ್ಲಿ ಬರುವ ಮೌಲ್ಯಗಳು. ಈ ಮೌಲ್ಯಗಳು ‘ರಾಜ್‌ಕುಮಾರ’ ಸಿನಿಮಾದಲ್ಲಿಯೂ ಬರುತ್ತವೆ. ಆದ್ದರಿಂದ ಈ ಸಿನಿಮಾದ ಗೆಲುವಿನಲ್ಲಿ ಅಪ್ಪಾಜಿಯ ಪಾಲೂ ಇದ್ದೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT