ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಿಪಲ್ ತಲಾಕಿನ ‘ಕ್ರಿಪ್‌ಲ್ಡ್’ ಜಂಪ್

Last Updated 23 ಏಪ್ರಿಲ್ 2017, 4:50 IST
ಅಕ್ಷರ ಗಾತ್ರ

ಇಷ್ಟಕ್ಕೂ ‘ಟ್ರಿಪಲ್ ತಲಾಕ್’ ಎಂದರೇನು? ಅದು ಇದ್ದಕ್ಕಿದ್ದಂತೆ ಚರ್ಚೆಯ ಮುನ್ನೆಲೆಗೆ ಬಂದಿರುವುದಕ್ಕೆ ಕಾರಣಗಳೇನು?

‘ಮದರ್ರೋ, ಫಾದರ್ರೋ..!, ಮೂರನೆಯ ಮಹಾಯುದ್ಧ ನಡೆದಾಗ ‘ಮುತ್ತುಪ್ಪಾಡಿ’ಯ ಮೇಲೆ ಅಣುರಹಿತ ಬಾಂಬು ಬೀಳದಂತಿರಲು ಏನೆಲ್ಲ ಮಾಡಬೇಕು ಎಂದು ನಾನು ಚಿಂತಿಸುತ್ತಿದ್ದರೆ, ಪಾಕಿಸ್ತಾನದ ವಧಾಸ್ಥಂಭದ ಬಳಿ ನಿಂತಿರುವ ಕುಲಭೂಷಣರ ಪ್ರಾಣ ಉಳಿಸಲು ನನ್ನ ಸರಕಾರ ಏನಾದರೂ ಮಾಡೀತೇನೋ ಎಂದು ಅವರ ಕುಟುಂಬದವರು ಚಡಪಡಿಸುತ್ತಿದ್ದರೆ, ನಮ್ಮ ಸರಕಾರೀ ನೇತಾರರೆಲ್ಲ ಭುವನೇಶ್ವರದಲ್ಲಿ ಸಭೆ ಸೇರಿ, ಮುಸ್ಲಿಮರಲ್ಲಿ ಚಾಲ್ತಿಯಲ್ಲಿರುವ ‘ಟ್ರಿಪಲ್ ತಲಾಕ್’ ಪದ್ಧತಿಯ ‘ಫಲಾನುಭವಿ’ಗಳನ್ನು ನಿರ್ಮೂಲನೆ ಮಾಡುವುದು ಹೇಗೆ ಎಂದು ಕಾರ್ಯತಂತ್ರ ರೂಪಿಸುತ್ತಿದೆ!!

ಇವೆಲ್ಲವುಗಳ ನಡುವೆ, ಈ ರೋಚಕ ಕಹಾನಿಗೆ ಹೊಸದೊಂದು ‘ಎಪಿಸೋಡು’ ಈಗ ಸೇರ್ಪಡೆಯಾಗಿದೆ. ಅದುವೇ, ‘ಟ್ರಿಪಲ್ ತಲಾಕಿಸಿದವನಿಗೆ ಸಾಮಾಜಿಕ ಬಹಿಷ್ಕಾರ’ವೆಂಬ ‘ಅಖಿಲ ಭಾರತ ಮುಸ್ಲಿಮ್ ಕಾನೂನು ಮಂಡಳಿ’ ಪ್ರಾಯೋಜಿತ ಪ್ರಹಸನ. ಈ ಪ್ರಹಸನದ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಬೇಕಾದರೆ, ‘ಕುರಾನ್’ ಮನ್ನಿಸಲಾಗಿರುವ ಮುಸ್ಲಿಮ್ ಕಾನೂನುಗಳ ಆರು ಟಿ.ಆರ್.ಪಿ. ‘ಎಪಿಸೋಡು’ಗಳನ್ನು ಮೇಲಿಂದ ಮೇಲೆಯಾದರೂ ಪರಿಚಯಿಸಿಕೊಳ್ಳುವ ಅಗತ್ಯವಿದೆ.

1. ‘ನಿಖಾಹ್’(ವಿವಾಹ): ಇಸ್ಲಾಮ್ ಧರ್ಮದಲ್ಲಿ ‘ನಿಖಾಹ್’ (ಮದುವೆ) ಎಂಬುದು ಒಂದು ಸಾಮಾಜಿಕ ‘ಬಂಧ’; ಅದು ಜನ್ಮ ಜನ್ಮಾಂತರಗಳಲ್ಲೂ ಕಳಚಿಕೊಳ್ಳಲಾಗದ ಪವಿತ್ರ ‘ಬಂಧನ’ವಲ್ಲ. ಗಂಡು ಮತ್ತು ಹೆಣ್ಣಿನ ಕಡೆಯವರು ನಿಗದಿತ ಸಂಖ್ಯೆಯ ಸಾಕ್ಷಿಗಳ ಸಮ್ಮುಖದಲ್ಲಿ, ನಿಗದಿತ ಪದಗಳನ್ನು ಉಚ್ಚರಿಸುವ ಮೂಲಕ ಒಪ್ಪಿಕೊಳ್ಳಲಾಗುವ ಒಂದು ಸರಳ ಸಾಮಾಜಿಕ ಒಪ್ಪಂದ ಈ ‘ನಿಖಾಹ್’.

2. ಬಹುಪತ್ನಿತ್ವ (ಒಬ್ಬರಿಗಿಂತ ಹೆಚ್ಚು ಪತ್ನಿಯರನ್ನು ಹೊಂದುವುದು): ಎಲ್ಲ ಪತ್ನಿಯರನ್ನೂ ಸರಿಸಮನಾಗಿ ಪ್ರೀತಿಸುವ, ಪಾಲಿಸುವ, ಲಾಲಿಸುವ–ಸಲಹುವ, ನೋಡಿಕೊಳ್ಳುವ ಆದರೆ ಪ್ರವಾದಿಯವರೇ ಹೇಳಿದಂತೆ ಯಾವುದೇ ಗಂಡಿಗೆ ಸುಲಭಸಾಧ್ಯವಲ್ಲದ ನಿಬಂಧನೆಗಳೊಂದಿಗೆ, ಏಕ ಕಾಲದಲ್ಲಿ ನಾಲ್ಕು ಪತ್ನಿಯರವರೆಗೆ ನಿಖಾಹ್ ಮಾಡಿಕೊಳ್ಳುವ ಕಾನೂನಾತ್ಮಕ ಗಂಡು ಅವಕಾಶ.

3. ‘ತಲಾಕ್’ (ಬಿಡುಗಡೆ): ಪತಿಯೊಬ್ಬ ತಾನು ಹಿಂದೊಮ್ಮೆ ಸಾಕ್ಷಿಗಳ ಸಮ್ಮುಖದಲ್ಲಿ ಸಮ್ಮತಿಸಿದ್ದ ವೈವಾಹಿಕ ‘ಬಂಧ’ದಿಂದ, ಕೆಲವೊಂದು ನಿಬಂಧನೆಗಳಿಗನುಸಾರವಾಗಿ ತನ್ನನ್ನೂ, ತನ್ನ ಪತ್ನಿಯನ್ನೂ ವೈವಾಹಿಕ ‘ಬಂಧ’ದಿಂದ ಮುಕ್ತಗೊಳಿಸುವುದನ್ನು ಅರೆಬಿಕ್ ಭಾಷೆಯಲ್ಲಿ  ‘ತಲಾಕ್’ ಎನ್ನಲಾಗುತ್ತದೆ. ನಿಬಂಧನೆಗಳು ಚುಟುಕಾಗಿ ಹೀಗಿವೆ:

ಮೂರು ತಿಂಗಳು ಹತ್ತು ದಿನಗಳ ಅವಧಿಯಲ್ಲಿ ಪತಿಯು, ತನ್ನ ಪತ್ನಿಯ ಜೊತೆಗೆ ಒಂದೇ ಮನೆಯಲ್ಲಿದ್ದು, ‘ನಾನು ನಿನಗೆ ತಲಾಕ್ ನೀಡುತ್ತಿದ್ದೇನೆ’ ಎಂಬ ‘ಪದಬಂಧ’ವನ್ನು ತಿಂಗಳಿಗೊಂದು ಬಾರಿಯಂತೆ ಮೂರು ತಿಂಗಳಲ್ಲಿ, ಮೂರು ಬಾರಿ ಪತ್ನಿಗೆ ಕೇಳಿಸುವಂತೆ ಗಟ್ಟಿಯಾಗಿ ಉಚ್ಚರಿಸಬೇಕಾದ ನಿಬಂಧನೆಗಳವು.

ಹೀಗೆ ಮೂರನೇ ತಿಂಗಳ ಕೊನೆಯಲ್ಲಿ ಮೂರನೇ ಬಾರಿ ಉಚ್ಚರಿಸುವುದಕ್ಕಿಂತ ಮುನ್ನ, ಪತಿಯು ತನ್ನ ಮನಸ್ಸು ಬದಲಿಸಿ ಪತ್ನಿಯ ಜೊತೆಗಿನ ವೈವಾಹಿಕ ‘ಬಂಧ’ವನ್ನು ಮುಂದುವರಿಸಿಕೊಳ್ಳಬಯಸಿದರೆ ಅದಕ್ಕೆ ಅನುಮತಿಯುಂಟು. ತಲಾಕ್ ಪಡೆದ ಹೆಣ್ಣಿಗೆ ಮರುಮದುವೆ ಆಗಲು ಯಾವುದೇ ನಿರ್ಬಂಧವಿಲ್ಲ. ಪ್ರವಾದಿ ಮುಹಮ್ಮದರು ಬಹಳವಾಗಿ ದ್ವೇಷಿಸುತ್ತಿದ್ದ ಹಲವು ಅನಿಷ್ಟಗಳಲ್ಲಿ ‘ತಲಾಕ್’ ಮೊದಲನೆಯದು ಎಂಬುದಾಗಿ ಕುರಾನ್ ತಿಳಿಸುತ್ತದೆ.

(ಒಂದು ಕುತೂಹಲಕರ ಮಾಹಿತಿ: ಸರಕಾರವೇ ಪ್ರಕಟಿಸಿರುವ 2011ರ ಜನಗಣತಿಯಂತೆ, ‘ತಲಾಕ್’ ‘ಫೆಸಿಲಿಟಿ’ಯಿಂದ ವಂಚಿತರಾದರೂ ಹಿಂದೂ ಗಂಡುಗಳು ‘ವಿಚ್ಛೇದನ’ದಲ್ಲಿ ಮುಸ್ಲಿಮ್ ಗಂಡುಗಳನ್ನು ಹಿಂದಿಕ್ಕಿದ್ದಾರೆ! ಹಿಂದೂಗಳಲ್ಲಿ ವಿಚ್ಛೇದನದ ಅನುಪಾತವು ನೂರಕ್ಕೆ 0.76 ಇದ್ದರೆ, ಮುಸ್ಲಿಮರಲ್ಲಿ ಅದು 0.56 ಆಗಿದೆ.

‘ಭಾರತೀಯ ಮುಸ್ಲಿಮ್ ಮಹಿಳಾ ಆಂದೋಲನ’ದವರು ಪ್ರಕಟಿಸಿದ ಅಧಿಕೃತ ವರದಿಯಂತೆ, ಹೀಗೆ ವಿಚ್ಛೇದನ ಬಯಸಿದವರಲ್ಲಿ ಸುಮಾರು ಅರ್ಧಕ್ಕರ್ಧ ಮಂದಿ ಅಂದರೆ, ಶೇ. 40.57ರಷ್ಟು ಮಂದಿ ಮಹಿಳೆಯರು!)

4. ‘ನಿಖಾಹ್ ಹಲಾಲಾ’ (ಬಿಟ್ಟ ಪತ್ನಿಯನ್ನು ಮತ್ತೆ ಕಟ್ಟಿಕೊಳ್ಳುವುದು): ತಲಾಕ್ ಕೊಟ್ಟು ಬಿಡುಗಡೆಗೊಳಿಸಿದ ಪತ್ನಿಯನ್ನು, ಕೆಲವು ನಿಬಂಧನೆಗಳೊಂದಿಗೆ, ಮತ್ತೊಮ್ಮೆ ನಿಖಾಹ್ ಆಗಲು ಪತಿಗೆ  ಅನುಮತಿಯುಂಟು. ಆದರೆ ಬಹುಜನರು ಚಿತ್ರಿಸಿಕೊಂಡಿರುವಂತೆ, ಅದು ಒಂದು ರಾತ್ರಿಯ ‘ನಾಟಕ’ವಲ್ಲ.

ತಲಾಕ್ ಪಡೆದುಕೊಂಡ ಪತ್ನಿಯು ಮುಂದೆ ಸಹಜವಾಗಿ ಬೇರೊಬ್ಬನನ್ನು ವಿವಾಹವಾಗಿ ಸಂಸಾರ ನಡೆಸುತ್ತಿದ್ದು, ಮುಂದೊಂದು ದಿನ ಆತನೂ ಅವಳಿಗೆ ನಿಯಮಾನುಸಾರ ತಲಾಕ್ ನೀಡಿದರೆ, ಬಿಡುಗಡೆಗೊಂಡ ಪತ್ನಿಯು ತನ್ನ ಹಿಂದಿನ ಪತಿಯನ್ನೂ ಸೇರಿದಂತೆ, ಯಾರನ್ನಾದರೂ ನಿಖಾಹ್ ಮಾಡಿಕೊಳ್ಳಲು ಧಾರ್ಮಿಕ ನಿರ್ಬಂಧಗಳಿಲ್ಲ. ಈ ನಿರ್ಬಂಧರಹಿತ ಹೆಣ್ಣನ್ನು, ಆಕೆಗೆ ಮೊದಲೊಮ್ಮೆ ತಲಾಕ್ ಕೊಟ್ಟಿರುವ ಗಂಡೂ ಹೊಸದಾಗಿ ನಿಖಾಹ್ ಮಾಡಿಕೊಳ್ಳಬಹುದಾಗಿದೆ.

5. ಖುಲಾ (ಬಿಡುಗಡೆ): ಇಸ್ಲಾಮ್ ಧರ್ಮದಲ್ಲಿ, ಪತ್ನಿಗೂ ತನ್ನ ಪತಿಯಿಂದ ಬಿಡುಗಡೆಗೊಳ್ಳುವ ಅಧಿಕಾರವಿದೆ. ಇದನ್ನು ‘ಖುಲಾ’ ಎಂದು ಕರೆಯುತ್ತಾರೆ. ಆದರೆ, ‘ಖುಲಾ’ದ ನಿಯಮಗಳು ‘ತಲಾಕ್’ ನಿಯಮಗಳಿಗಿಂತಲೂ ಕಠಿಣವಾಗಿವೆ. ಸರಳವಾಗಿ ಹೇಳುವುದಾದರೆ, ಕುರಾನ್ ಗ್ರಂಥದಲ್ಲಿ, ‘ತಲಾಕ್’ ನೀಡುವ ಗಂಡಿಗೆ ಕೆಲವು ‘ವಿಧಾನ’ಗಳನ್ನು (ಕಾರಣ/ನಿಬಂಧನೆಗಳಲ್ಲ) ಸೂಚಿಸಿದ್ದರೆ, ‘ಖುಲಾ’ ನೀಡುವ ಪತ್ನಿಗೆ ಕೆಲವು ‘ಕಾರಣ/ನಿಬಂಧನೆ’ಗಳನ್ನು (ವಿಧಾನಗಳಲ್ಲ) ಸೂಚಿಸಲಾಗಿದೆ. ಅದರಲ್ಲೊಂದು ನಿಬಂಧನೆಯೆಂದರೆ, ‘ಖುಲಾ’ ಪಡೆಯಲು ಪತ್ನಿಯು ಅದೇ ಪತಿಯಿಂದ ಒಪ್ಪಿಗೆ ಪಡೆಯಬೇಕು!

6. ‘ಟ್ರಿಪಲ್ ತಲಾಕ್’: ‘ಟ್ರಿಪಲ್ ತಲಾಕ್’ ಎಂದರೇನೆಂಬುದನ್ನು ಅರಿಯದವರಿಗೆ, ಅರಿಯಬಯಸದವರಿಗೆ, ಅರಿಯಬಯಸುವವರಿಗೆ, ಅರಿತರೂ ಅರಿಯದವರಂತೆ ನಟಿಸುವವರಿಗೆ ಈ ‘ಪದಬಂಧ’ವು ಮುಸ್ಲಿಮರನ್ನು ಕಿಚಾಯಿಸಲು ಸಿಕ್ಕ ಒಂದು ಆಯುಧ. ಮೊನ್ನೆ ಮೊನ್ನೆ ಸಾಮಾಜಿಕ ಮಾಧ್ಯಮಗಳಲ್ಲಿ ‘ಭಗವದ್ಗೀತೆ’ಯ ಬಗ್ಗೆ ನಡೆದ ‘ಪರ–ವಿರೋಧಿ’ ಚರ್ಚೆಗಳಲ್ಲಿ ಅತಿ ಉತ್ಸಾಹದಿಂದ ಭಾಗವಹಿಸುತ್ತಿದ್ದವರಲ್ಲಿ ಹೆಚ್ಚಿನವರು ‘ಭಗವದ್ಗೀತೆ’ಯನ್ನು ಒಮ್ಮೆಯಾದರೂ ಓದಿದವರಾಗಿರಲಿಲ್ಲ. ಆ ಕೃತಿಯ ಮೊದಲಕ್ಷರ ‘ಅಲ್ಪ’ಪ್ರಾಣವೇ ‘ಮಹಾ’ಪ್ರಾಣವೇ ಎಂಬುದನ್ನೂ ಅರಿತವರಾಗಿರಲಿಲ್ಲ. ಇದೀಗ ‘ಟ್ರಿಪಲ್ ತಲಾಕಿ’ಗೂ ಅದೇ ಬಗೆಯ ಪರ–ವಿರೋಧಿ ಬೆಂಬಲಿಗರು ಸಾಲುಗಟ್ಟಿ ನಿಂತಿದ್ದಾರೆ.

‘ನಾನು ನಿನಗೆ ತಲಾಕ್ ಹೇಳುತಿದ್ದೇನೆ’, ‘ನಾನು ನಿನಗೆ ತಲಾಕ್ ಹೇಳುತಿದ್ದೇನೆ’, ‘ನಾನು ನಿನಗೆ ತಲಾಕ್ ಹೇಳುತಿದ್ದೇನೆ’ ಎಂಬ ಪದಪುಂಜಗಳನ್ನು ಒಂದೇ ಉಸಿರಿನಲ್ಲಿ (ಏಕಕಾಲದಲ್ಲಿ ಎಂಬ ಅರ್ಥ) ಮೂರು ಬಾರಿ ಉಚ್ಚರಿಸಿ ನೀಡುವ ತಲಾಕನ್ನು ‘ಟ್ರಿಪಲ್ ತಲಾಕ್’ ಎಂದು ಕರೆಯಲಾಗುತ್ತಿದೆ. ಪ್ರವಾದಿಯವರ ಜೀವಿತಾವಧಿಯಲ್ಲಿ ಈ ಅನಿಷ್ಟ ಪದ್ಧತಿ ಇರಲಿಲ್ಲ; ಆದ್ದರಿಂದಲೇ ಕುರಾನಿನಲ್ಲೂ ಇದಕ್ಕೆ ದಾಖಲೆಗಳು ಸಿಗುವುದಿಲ್ಲ.



ಈ ‘ಟ್ರಿಪಲ್ ತಲಾಕಿ’ಗೂ, ಒಂದು ಕಾಗದದ ಮೇಲೆ ಗೀಚಿದ, ‘ಫೋನ್’ನಲ್ಲಿ ಉಚ್ಚರಿಸಿದ, ಮೆಸ್ಸೇಜಿಸಿದ, ‘ವಾಟ್ಸಾಪಿಸಿದ ಆಧುನಿಕ ತಲಾಕ್’ ತಂತ್ರಗಳಿಗೂ ‘ಕುರಾನ್’ನಲ್ಲಿ ಬಿಡಿಕಾಸಿನ ಬೆಲೆಯಿಲ್ಲ. ಹಿಂದೂಸ್ತಾನದಲ್ಲಿ ಮಾತ್ರವಲ್ಲ, ಯಾವುದೇ ದೇಶದ ಯಾವುದೇ ನ್ಯಾಯಾಲಯದ ಎದುರು ‘ಕುರಾನ್’ ಪ್ರತಿಯೊಂದನ್ನು ಇಟ್ಟರೆ ಸಾಕು; ಎರಡೇ ನಿಮಿಷಗಳಲ್ಲಿ ಅವರು ‘ಟ್ರಿಪಲ್ ತಲಾಕ್’ ಅನ್ನು ಅಸಿಂಧು ಎಂದು ಘೋಷಿಸಿಬಿಡುತ್ತಾರೆ.

ಮುತ್ತುಪ್ಪಾಡಿ ತಾಲ್ಲೂಕು ಮ್ಯಾಜಿಸ್ಟ್ರೇಟರು ಎರಡು ನಿಮಿಷಗಳಲ್ಲಿ ಮುಗಿಸಬಹುದಾಗಿದ್ದ ಸರಳ ತಗಾದೆಯೊಂದನ್ನು ಒಮ್ಮೆ ಸರ್ವೋಚ್ಛ ನ್ಯಾಯಾಲಯಕ್ಕೂ ಮತ್ತೊಮ್ಮೆ ಸರ್ವೋಚ್ಛ ನ್ಯಾಯಾಲಯದವರು ಸಂವಿಧಾನದ ಪೀಠಕ್ಕೂ ಫುಟ್‌ಬಾಲಿನಂತೆ ಚಿಮ್ಮಿಸುವಂತೆ ಮಾಡುತ್ತಾ, ಸರಕಾರವು ಪ್ರಜೆಗಳನ್ನು ಮಂಗ ಮಾಡುತ್ತಿದೆ. 

ವಸ್ತು ಸ್ಥಿತಿ ಹೀಗಿರುವಾಗ, ‘ಸಕಾರಣ’ವಿಲ್ಲದೆ ‘ಟ್ರಿಪಲ್ ತಲಾಕ್’ ನೀಡಿದವರಿಗೆ ಸಾಮಾಜಿಕ ಬಹಿಷ್ಕಾರ ಹೇರಲು ‘ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ’ (AIMPLB) ನಿರ್ಧರಿಸಿದೆಯೆಂದು ಬಹುಪಾಲು ಪತ್ರಿಕೆಗಳು ತಲೆಬರಹ ಮಾಡಿಕೊಂಡಿವೆ. 

‘ಟ್ರಿಪಲ್ ತಲಾಕ್’ ಎಂಬ ಪದಪುಂಜಕ್ಕೇ ಕುರಾನ್’ನಲ್ಲಿ ಮಾನ್ಯತೆ ಇಲ್ಲದಾಗ ಅದನ್ನು ‘ಸಕಾರಣ’ ಅಥವಾ ‘ವಿನಾಕಾರಣ’ವಾಗಿ ಕೊಡುವುದೆಂದರೆ ಏನು? ಸಕಾರಣವಿಲ್ಲದೆ, ‘ಟ್ರಿಪಲ್ ತಲಾಕ್’ ನೀಡಿದವರಿಗಷ್ಟೇ ಸಾಮಾಜಿಕ ಬಹಿಷ್ಕಾರವೆಂದರೆ, ಸಕಾರಣವಾಗಿ ‘ಟ್ರಿಪಲ್ ತಲಾಕ್’ ನೀಡಿದವರಿಗೆ ಸಾಮಾಜಿಕ ಬಹಿಷ್ಕಾರವಿಲ್ಲವೇ ಎಂಬ ಪ್ರಶ್ನೆ ಹುಟ್ಟುತ್ತದೆ. 

ಚಾಲ್ತಿಯಲ್ಲಿರುವ ‘ಮುಸ್ಲಿಮ್ ವೈಯಕ್ತಿಕ ಕಾನೂನು’ ನಿಯಮಗಳಂತೆ ಮುಸ್ಲಿಮ್ ಪತಿಯು ತನ್ನ ಪತ್ನಿಗೆ (ಸಿಂಗಲ್ ಯಾ ಟ್ರಿಪಲ್) ತಲಾಕ್ ನೀಡಲು ಕಾರಣವನ್ನೇ ನೀಡಬೇಕಿಲ್ಲ. ಹೀಗಿರುವಾಗ, ‘ಸಾಮಾಜಿಕ ಬಹಿಷ್ಕಾರ’ಕ್ಕೆ  ಸಲ್ಲುವ ಅಥವಾ ಸಲ್ಲದಿರುವ ಪತಿ ಮಹಾಶಯನನ್ನು ಗುರುತಿಸುವುದು ಹೇಗೆ? 

ನನ್ನ ಪ್ರಶ್ನೆ ಇದಲ್ಲ. ಸಾವಿರದ ನಾಲ್ಕು ನೂರು ವರ್ಷಗಳ ಹಿಂದೊಮ್ಮೆ ಪ್ರವಾದಿ ಮುಹಮ್ಮದರು ತಮ್ಮದೇ ಮೂವರು ಆಪ್ತ ಸಂಗಾತಿಗಳನ್ನು, ಯುದ್ಧ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಐವತ್ತು ದಿನಗಳ ಕಾಲ ಬಹಿಷ್ಕರಿಸಿದ್ದುಂಟು. ಪ್ರವಾದಿ ಮತ್ತು ಅವರ ಸಂಗಾತಿಗಳನ್ನು ಇಸ್ಲಾಮ್ ವಿರೋಧಿಗಳು ಬಹಿಷ್ಕರಿಸಿ ಮಕ್ಕಾದಿಂದ ಮದೀನಾಕ್ಕೆ ಗಡಿಪಾರು ಮಾಡಿದ್ದುಂಟು. ಆದರೆ, ಪ್ರವಾದಿಯವರ ನಿಧನಾನಂತರದ ದಿನಗಳಲ್ಲಿ ಅಂದರೆ, ಜಗತ್ತಿನೆಲ್ಲೆಡೆ ಇಸ್ಲಾಮೀ ಕಾನೂನುಗಳು ರೂಪುಗೊಂಡ ಬಳಿಕದ ದಿನಗಳಲ್ಲಿ ನಮ್ಮ ದೇಶದಲ್ಲಿ ಮಾತ್ರವಲ್ಲ, ಯಾವುದೇ ಇಸ್ಲಾಮಿಕ್ ರಾಷ್ಟ್ರದಲ್ಲೂ ‘ಮುಸ್ಲಿಮರೇ ಮುಸ್ಲಿಮರಿಗೆ’ ಸಾಮಾಜಿಕ ಬಹಿಷ್ಕಾರ ವಿಧಿಸಲು ‘ಕುರಾನ್’ನಲ್ಲಿ ನಿರ್ದೇಶನಗಳಿಲ್ಲ.

ಕುರಾನ್ ‘ಹರಾಮ್’ ಎಂದಿರುವುದನ್ನು ‘ಮುಸ್ಲಿಮ್ ಲಾ ಬೋರ್ಡು’, ‘ಹಲಾಲ್’ ಅನ್ನುವುದಿಲ್ಲ. ನಮ್ಮ ಸಂವಿಧಾನವು ಎಲ್ಲ ಬಗೆಯ ಸಾಮಾಜಿಕ ಬಹಿಷ್ಕಾರಗಳಿಂದ ಎಲ್ಲ ಪ್ರಜೆಗಳಿಗೂ ರಕ್ಷಣೆ ನೀಡಿದೆ ಎಂಬ ಸತ್ಯವನ್ನು ತಿಳಿಯದವರಾರೂ ಆ ಬೋರ್ಡಿನ ಸದಸ್ಯರಲ್ಲಿಲ್ಲ. ಮತ್ತೇಕೆ ಹೀಗೆ?

2) ಲಾ ಬೋರ್ಡ್ ಸದಸ್ಯಸೋದರನ ಚಿಂತೆ: ನನಗೆ ಪರಿಚಿತರಾಗಿರುವ, ‘ಅಖಿಲ ಭಾರತ ಮುಸ್ಲಿಮ್ ಪರ್ಸನಲ್ ಲಾ ಬೋರ್ಡಿನ’ ಸದಸ್ಯರೊಬ್ಬರ ಸೋದರನಿಗೆ ಫೋನು ಹಚ್ಚಿ ‘ಇದೆಲ್ಲ ಏನು?’ ಎಂದು ಪ್ರಶ್ನಿಸಿದೆ. ಅವರು ವಿವರಿಸಿದ್ದ ಸಂಗತಿಗಳ ಚುಟುಕು ಸಾರಾಂಶ  ಈ ಕೆಳಗಿನಂತಿವೆ.
‘ಸರಕಾರದ ಟಾರ್ಗೆಟ್ ‘ಟ್ರಿಪಲ್ ತಲಾಕೂ’ ಅಲ್ಲ; ‘ಮುಸ್ಲಿಮ್ ಪರ್ಸನಲ್ ಲಾ’ನೂ ಅಲ್ಲ. ಅವರ ಟಾರ್ಗೆಟ್ 2019ರ ಸಾರ್ವತ್ರಿಕ ಚುನಾವಣೆ ಮಾತ್ರ.

‘ಕಳೆದ ಆರೇಳು ದಶಕಗಳಲ್ಲಿ ದೇಶವನ್ನಾಳಿದ ಕಾಂಗ್ರೆಸ್ ಸರಕಾರವು ಮುಸ್ಲಿಮರನ್ನು ಸುಲಭವಾಗಿ ತನ್ನ ಓಟು ಬ್ಯಾಂಕನ್ನಾಗಿ ಬಳಸಿಕೊಂಡಿತ್ತು. ಇದೀಗ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದಿಂದ ಪ್ರಾಯೋಜಿತವಾದ ಹತ್ತಾರು ಸಂಘಗಳು, ಈ ದೇಶದ ಮುಸ್ಲಿಮರೆಲ್ಲರೂ ದೇಶದ್ರೋಹಿಗಳೆಂದೂ, ದೇಶದ್ರೋಹಿ ಮುಸ್ಲಿಮರಿಂದಾಗಿಯೇ ನಮ್ಮ ದೇಶ ಭಯೋತ್ಪಾದನೆಗೆ ತುತ್ತಾಗುತ್ತಿದೆ ಎಂದೂ ಅಮಾಯಕ ಹಿಂದೂಗಳನ್ನು ಸುಳ್ಳು ಸುಳ್ಳೇ ಬೆದರಿಸುತ್ತಾ, ತನ್ನ ಓಟ್ ಬ್ಯಾಂಕ್ ಬಂಡವಾಳವನ್ನು ವೃದ್ಧಿಸುತ್ತಿದೆ. 

ಈ ದೇಶಪ್ರೇಮ, ಈ ವಂದೇ ಮಾತರಂ, ಈ ಜನ ಗಣ ಮನ, ಈ ಸಮಾನ ನಾಗರಿಕ ಸಂಹಿತೆ.., ಈ ರಾಮ ಮಂದಿರ, ಈ ಲವ್ ಜೆಹಾದ್, ಈ ಗೋರಕ್ಷಾ, ಈ ಬೀಫ್ ಬ್ಯಾನ್ ಮೊದಲಾದ ‘ಈ’ ಗಳೆಲ್ಲವೂ, ದಕ್ಷಿಣ ಭಾರತದ ಕಪ್ಪುಮನುಷ್ಯನೊಬ್ಬನ ನೇತೃತ್ವದಲ್ಲಿ ರೂಪುಗೊಂಡ ‘ಸಂವಿಧಾನ’ವನ್ನು ಬದಲಿಸಲು ಅಗತ್ಯವಾಗಿರುವ, ಮೂರನೇ ಎರಡರಷ್ಟು ಮತಗಳನ್ನು ಕ್ರೋಡೀಕರಿಸುವ ಸರಕಾರೀ ಪ್ರಾಯೋಜಿತ ಕಾರ್ಯಕ್ರಮಗಳೇ ಆಗಿವೆ.

ಮೊನ್ನೆ ಮೊನ್ನೆಯವರೆಗೆ ‘ರಾಜಕೀಯಕ್ಕೂ ನಮ್ಮ ಸಂಘಟನೆಗೂ ಸಂಬಂಧವಿಲ್ಲ’ ಎಂದು ಬಹಿರಂಗದಲ್ಲಾದರೂ ಘೋಷಿಸಿಕೊಂಡು ಬಂದಿದ್ದ ಆರೆಸ್ಸೆಸ್, ಇದೀಗ ನೇರ ಸಮರಕ್ಕೆ ಇಳಿದಿದೆ. ಸಾವರ್ಕರ್, ಗೊಲ್ವಾಲ್ಕರ್‌ರನ್ನು ರಾಷ್ಟ್ರಪಿತರನ್ನಾಗಿ ಸ್ವೀಕರಿಸಿರುವ ಅವರು, ಸಂವಿಧಾನದಲ್ಲಿರುವ ಜಾತ್ಯತೀತತೆ, ಸಹಿಷ್ಣುತೆ, ಏಕತೆ ಮುಂತಾದ ಪದಗಳನ್ನು ಸಹಜವಾಗಿ ತಿರಸ್ಕರಿಸುತ್ತಿದ್ದಾರೆ. ಗಾಂಧಿ ಫೊಟೊ ಫ್ರೇಮಿಗೆ ಗೋಡ್ಸೆ ಫೊಟೊ ಅಂಟಿಸಿರುವ ಅವರಿಗೆ, ದೀನ್‌ದಯಾಲ್ ಉಪಾಧ್ಯಾಯರ ಸಿದ್ಧಾಂತಗಳೇ ಮಾದರಿ.

‘ಆರೆಸ್ಸೆಸ್ 2019ರಲ್ಲಿ ನಮ್ಮ ದೇಶವನ್ನು ಹಿಂದೂರಾಷ್ಟ್ರವೆಂದು ಘೋಷಿಸಲು ತಯಾರಿ ನಡೆಸುತ್ತಿದೆ’ ಎಂಬುದಾಗಿ ದಿಲ್ಲಿ ಉಚ್ಛ ನ್ಯಾಯಾಲಯದ ಮಾಜೀ ಮುಖ್ಯ ನ್ಯಾಯಾಧೀಶ ಹಾಗೂ ಸಚ್ಚಾರ್ ಸಮಿತಿಯ ಅಧ್ಯಕ್ಷರಾಗಿರುವ ರಾಜೇಂದ್ರ ಸಚ್ಚಾರ್ ಅವರು ಸಂದರ್ಶನವೊಂದರಲ್ಲಿ ಮೊನ್ನೆ ಮೊನ್ನೆ ಹೇಳಿದ್ದಾರೆ. ಅವರೇ ಹೇಳಿದಂತೆ, ಮುಸ್ಲಿಮರ ವಿರುದ್ಧ ದೇಶದಾದ್ಯಂತ ದ್ವೇಷದ ಬೀಜ ಬಿತ್ತಲಾಗುತ್ತಿದೆ.

ಮುಸ್ಲಿಮ್ ಸಮುದಾಯದ ವಿರುದ್ಧ ಹಿಂಸೆಯ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಉತ್ತರಪ್ರದೇಶದಲ್ಲಿ ಯೋಗಿಯವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದ್ದು ಆರೆಸ್ಸೆಸ್ ಕಾರ್ಯಕ್ರಮದ ಮುನ್ನುಡಿಯಾಗಿದೆ. ಆದರೆ, ವಿರೋಧ ಪಕ್ಷಗಳಾವುವೂ ಈ ಬಗ್ಗೆ ಸ್ವಲ್ಪವೂ ತಲೆಕೆಡಿಸಿಕೊಂಡಿಲ್ಲ. ಯಾಕೆಂದರೆ ಅವರಲ್ಲಿ ಬಹಳಷ್ಟು ಮಂದಿ ಹಿಂದೂರಾಷ್ಟ್ರವಾದದ ಗುಟ್ಟಿನ ಬೆಂಬಲಿಗರು.

‘ಸಚ್ಚಾರ್’ ವರದಿಯ ಸೂಚಿತ ಸಲಹೆಗಳಲ್ಲಿ ಒಂದೆರಡನ್ನಾದರೂ ಅನುಷ್ಠಾನಕ್ಕೆ ತನ್ನಿ ಎಂದು ‘ಅಖಿಲ ಭಾರತ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‌’ನವರು ಅಹವಾಲು ಸಲ್ಲಿಸಿದ ವಾರದೊಳಗೇ ಸರಕಾರವು, ‘ಸಮಾನ ಸಿವಿಲ್ ಕೋಡ್’ ಗುಮ್ಮನನ್ನು ಬೋನಿನಿಂದ ಹೊರಗೆಬಿಡುತ್ತದೆ. ‘ಸ್ಲಮ್ಮುಗಳಲ್ಲಿ ಪ್ರಾಣಿಗಳಂತೆ ಬದುಕುತ್ತಿರುವ ಬಡ ಮುಸ್ಲಿಮರ ಒಳಿತಿಗಾಗಿ ಯಾವುದಾದರೊಂದು ಯೋಜನೆ ಪ್ರಕಟಿಸಿ’ ಎಂದು ಸರಕಾರಕ್ಕೆ ಮನವಿ ಸಲ್ಲಿಸಿ ಮರಳಿದ ಮರುದಿನವೇ ‘ಬೀಫ್ ಬಾಂಬು’ ಸ್ಫೋಟಿಸುತ್ತದೆ.

‘ಉರ್ದು ಶಾಲೆಗಳಿಗೆ ಏನಾದರೂ ನೆರವು ನೀಡಿ’ ಎಂದು ಅಲ್ಪಸಂಖ್ಯಾತರ ಕಮಿಟಿಯವರು ಅರ್ಜಿ ಹಿಡಿದು ಬರುತ್ತಿದ್ದಾರೆಂಬ ವಾಸನೆ ಸಿಕ್ಕಿದರೆ ಸಾಕು; ಹೊಸಿಲು ದಾಟುವ ಮುನ್ನವೇ ‘ವಂದೇ ಮಾತರಂ ಹಾಡಿ’ ಎಂದು ಅವರನ್ನು ತುದಿಗಾಲ ಮೇಲೆ ನಿಲ್ಲಿಸುತ್ತದೆ.

ಮುಸ್ಲಿಮ್ ಲಾ ಬೋರ್ಡಿನ ಸದಸ್ಯರ ಸ್ಥಿತಿ, ಚಳಿ ತಡೆದುಕೊಳ್ಳಲಾಗದ ಒಂಟೆಗೆ ಕರುಣೆಯಿಂದ ತಲೆಯನ್ನು ಮಾತ್ರ ಡೇರೆ ತೂರಿಸಲು ಬಿಟ್ಟುಕೊಟ್ಟ ಅರಬಿಯ ಕತೆಯಂತಾಗಿದೆ. ಮೊದಲಿಗೆ ಬೀಫ್ ಬ್ಯಾನ್, ಬಳಿಕ ಟ್ರಿಪಲ್ ತಲಾಕ್ ಬ್ಯಾನ್, ಬಳಿಕ ಸಿಂಗಲ್ ತಲಾಕ್ ಬ್ಯಾನ್..., ಬಳಿಕ ಖುಲಾ ಬ್ಯಾನ್, ಬಳಿಕ ಲವ್ ಜೆಹಾದ್ ಬ್ಯಾನ್, ಬಳಿಕ ಮತಾಂತರ ಬ್ಯಾನ್, ಬಳಿಕ ಮಾತೃಭೂಮಿಗೆ ಮರಳಿಬರದಿದ್ದವರಿಗೆ ಬ್ಯಾನ್, ಸೌಂಡುಯುಕ್ತ ಅಝಾನ್ ಬ್ಯಾನ್... ಹೀಗೆ ಒಂದೊಂದಾಗಿ ಬ್ಯಾನಿಸುತ್ತಾ ಹೋದರೆ ‘ಲಾ’ದಲ್ಲಿ ಉಳಿಯುವುದಾದರೂ ಏನು?

ಸಂವಿಧಾನದತ್ತ ಅವಕಾಶಗಳನ್ನು ಕಿತ್ತುಕೊಳ್ಳುವ ಸರಕಾರದ ಈ ಎಲ್ಲ ಸುಳ್ಳು ಬಿಲ್ಲುಗಳಿಂದ ರೋಸಿ ಹೋದ ಕಮಿಟಿಯವರು, ‘ಹದಿನೆಂಟು ತಿಂಗಳ ಅವಕಾಶವನ್ನಾದರೂ ಕೊಡಿ, ತಪ್ಪುಗಳಿದ್ದರೆ ನಾವೇ ಸರಿಪಡಿಸಿಕೊಳ್ಳುತ್ತೇವೆ..,’ ಇತ್ಯಾದಿ ಹೇಳುವಾಗ, ಆವೇಶದಿಂದ ‘ಕುರಾನ್ ಅನುಮತಿಸದ ಟ್ರಿಪಲ್ ತಲಾಕ್ ಕೊಡುವ ಮುಸ್ಲಿಮರನ್ನು ಮುಸ್ಲಿಮರೇ ಬಹಿಷ್ಕರಿಸಬೇಕು’ ಎಂದು ಕರೆಕೊಟ್ಟಿರಬಹುದು. ಆ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ.

ನಮ್ಮ ದೇಶದ ಸಂವಿಧಾನದಂತೆ, ಯಾರಿಗೂ, ಯಾರನ್ನೂ ಸಾಮಾಜಿಕವಾಗಿ ಬಹಿಷ್ಕರಿಸುವ ಹಕ್ಕು ಇಲ್ಲ. ಯಾವನೇ ಮುಸ್ಲಿಮನನ್ನು ಬಹಿಷ್ಕರಿಸಿಬಿಟ್ಟರೆ ಅವನಿಗೆ, ಕೆಂಪು ಹಾಸಿನ ಸ್ವಾಗತ ಕೋರುವ ‘ಮರಳಿ ಮಾತೃಭೂಮಿ ಮಂಡಳಿ’ಗಳು ಇವೆಯೆಂಬುದನ್ನು ಅರಿಯದ ದಡ್ಡರಾರೂ ‘ಮುಸ್ಲಿಮ್ ಲಾ ಮಂಡಳಿ’ಯಲ್ಲಿ ಇಲ್ಲ. ಇವಿಷ್ಟು ‘ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ’ ಸದಸ್ಯರೊಬ್ಬರ ಸೋದರನ ಮಾತಿನ ಸಾರಾಂಶ.

3) ಯಾರು – ಯಾರಿಗೆ – ಎಷ್ಟು ಸಮಾನ?
ವಿವಾಹಿತರಿರಲಿ ಅವಿವಾಹಿತರೇ ಆಗಿರಲಿ, ಬಹುಪಾಲು ಮುಸ್ಲಿಮೇತರಿಗೆ, ಮುಸ್ಲಿಮ್ ಗಂಡುಗಳ ಬಗ್ಗೆ ಗುಟ್ಟಾದ ಅಸೂಯೆಯಿದೆ. ಒಬ್ಬಳನ್ನೇ ಕಟ್ಟಿಕೊಂಡು ಎರಡು ಮಕ್ಕಳ ಹೊಟ್ಟೆ ಬಟ್ಟೆಗಳನ್ನೇ ನಿಭಾಯಿಸಲಾಗದ ಈ ತುಟ್ಟಿಯ ದಿನಗಳಲ್ಲೂ, ನಾಲ್ಕು ಹೆಂಡಂದಿರೊಂದಿಗೆ ಸುಖಿಸಲು, ಮುಸ್ಲಿಮರಿಗಿರುವ ಅವಕಾಶ ತಮಗೇಕಿಲ್ಲವೆಂದು ಕರುಬುತ್ತಾ ನಿದ್ರೆಗೆಡುತ್ತಿದ್ದಾರೆ. ಇಂತಹ ‘ಅವಕಾಶವಂಚಿತ’ ಜನಾಂಗವನ್ನು, ‘ಸರ್ವರಿಗೂ ಸಮಾನ ಕಾನೂನು’ ಹೆಸರಲ್ಲಿ ಮಧ್ಯರಾತ್ರಿಯಲ್ಲೂ ಎಬ್ಬಿಸಿ ‘ಜೈ’ ಹೇಳಿಸುವುದು ಬಲು ಸುಲಭ. ಆದರೆ, ಆ ಆದರ್ಶ ‘ಸಮಾನ ನಾಗರಿಕ ಸಂಹಿತೆ’ಯಲ್ಲಿ, ‘ಯಾರು–ಯಾರಿಗೆ–ಎಷ್ಟು–ಸಮಾನ’ ಎಂಬುದನ್ನು ಕನಿಷ್ಠ ನಾಲ್ಕು ಸಾಲುಗಳಲ್ಲಾದರೂ ವಿವರಿಸಲು ಇದುವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ! 

ನಮ್ಮ ದೇಶದಲ್ಲಿ ಇನ್ನೂ ಚಾಲ್ತಿಯಲ್ಲಿರುವ ಕೆಲವು ವೈಯಕ್ತಿಕ ಕಾನೂನು/ಕಾಯಿದೆಗಳ ಪಟ್ಟಿಯ ಮೇಲೊಮ್ಮೆ ಸುಮ್ಮನೆ ಕಣ್ಣು ಹಾಯಿಸಿಬಿಡಿ. 1866ರ ‘ಕನ್ವರ್ಟ್ಸ್ ಮೆರೇಜ್ ಡಿಸೊಲೂಶನ್ ಕಾಯ್ದೆ’, 1869ರ ‘ಇಂಡಿಯನ್ ಡೈವೋರ್ಸ್ ಕಾಯ್ದೆ’, 1872ರ ‘ಭಾರತೀಯ ಕ್ರೈಸ್ತ ವಿವಾಹ ಕಾಯ್ದೆ’, 1880ರ ‘ದಿ ಕಾಜೀಸ್ ಕಾಯ್ದೆ’, 1909ರ ‘ಆನಂದ್ ವಿವಾಹ ಕಾಯ್ದೆ’, 1925ರ ‘ಹಿಂದೂ ಸಕ್ಸೆಸನ್ ಕಾಯ್ದೆ’, 1929ರ ‘ಬಾಲ್ಯವಿವಾಹ ನಿರ್ಬಂಧನಾ ಕಾಯ್ದೆ’, 1939ರ ‘ಮುಸ್ಲಿಮ್ ವಿವಾಹ ವಿಚ್ಛೇದನ ಕಾಯ್ದೆ’, 1954ರ ‘ವಿಶೇಷ ವಿವಾಹ ಕಾಯ್ದೆ’, 1955ರ ‘ಹಿಂದೂ ವಿವಾಹ ಕಾಯ್ದೆ’, 1956ರ ‘ಅಲ್ಪಸಂಖ್ಯಾತ ಮತ್ತು ಪಾಲನೆ ಕಾಯ್ದೆ’, 1956ರ ‘ಹಿಂದೂ ದತ್ತು ಸ್ವೀಕಾರ ಮತ್ತು ನಿರ್ವಹಣೆ ಕಾಯ್ದೆ’, 1956ರ ‘ಹಿಂದೂ ಉತ್ತರಾಧಿಕಾರ ಕಾಯ್ದೆ’, 1986ರ ‘ಮುಸ್ಲಿಮ್ ಮಹಿಳೆ ಕಾಯ್ದೆ’ (ವಿಚ್ಛೇದನ ಮೇಲಿನ ಹಕ್ಕು ಸಂರಕ್ಷಣೆ), 1988ರ ‘ಪಾರ್ಸಿ ವಿವಾಹ ವಿಚ್ಛೇದನ (ತಿದ್ದುಪಡಿ) ಕಾಯ್ದೆ’, 1890ರ ‘ಗಾರ್ಡಿಯನ್ ಅಂಡ್ ವಾರ್ಡ್ಸ್ ಕಾಯ್ದೆ’, 1991ರ ‘ಉತ್ತರಾಧಿಕಾರ (ತಿದ್ದುಪಡಿ) ಕಾಯ್ದೆ’, 2001ರ ‘ವಿವಾಹ ಕಾನೂನುಗಳ (ತಿದ್ದುಪಡಿ) ಕಾಯ್ದೆ’, 2001ರ ‘ಭಾರತೀಯ ವಿಚ್ಛೇದನ (ತಿದ್ದುಪಡಿ) ಕಾಯ್ದೆ’, 2002ರ ‘ಉತ್ತರಾಧಿಕಾರ (ತಿದ್ದುಪಡಿ) ಕಾಯ್ದೆ’ ಇತ್ಯಾದಿ, ಇತ್ಯಾದಿಗಳು.

‘ಏಕರೂಪ ನಾಗರಿಕ ಸಂಹಿತೆ’ ಎಂದರೆ ಈ ಎಲ್ಲ ಕಾಯಿದೆಗಳ ಸಮಾಧಿಗೆ ಕಟ್ಟಲಾಗುವ ಮಂದಿರವೆ? ಅಥವಾ ಜಾರಿಯಲ್ಲಿರುವ ಈ ಎಲ್ಲ ಕಾಯಿದೆಗಳ ಒಟ್ಟು ಮೊತ್ತವೆ? ಅಥವಾ ಅಲ್ಲಿಂದಿಷ್ಟು ಇಲ್ಲಿಂದಷ್ಟು ಆರಿಸಿಕೊಂಡು ಸಿದ್ಧಪಡಿಸುವ ಮೇಲೋಗರವೇ? ಈ ಪ್ರಶ್ನೆಗಳಿಗೆ ಇದುವರೆಗೂ ಯಾರಲ್ಲೂ ಉತ್ತರವಿಲ್ಲ. ಇವುಗಳ ಜೊತೆಯಲ್ಲಿ, ನಮ್ಮ ದೇಶದಲ್ಲಿ ನೂರಾರು ಬಗೆಯ ಮದುವೆ ಸಂಪ್ರದಾಯಗಳುಂಟು, ಅಷ್ಟೇ ಬಗೆಯ ವಿಚ್ಛೇದನ ಕ್ರಮಗಳೂ ಉಂಟು.

ಉದಾಹರಣೆಗೆ, ನಮ್ಮ ದೇಶದ ಒಂದು ಭಾಗದಲ್ಲಿ (ವಿಳಾಸ ತಿಳಿಸಲಾರೆ), ಮದುವೆಗೆ ‘ಬಂದ’ ಹಿಂದೂ ಹುಡುಗ ಮತ್ತು ಹಿಂದೂ ಹುಡುಗಿಯನ್ನು, ಚಾಲ್ತಿಯಲ್ಲಿರುವ ‘ಲೋಕಲ್ ಪರ್ಸನಲ್ ಲಾ’ದಂತೆ ಒಂದು ತಿಂಗಳ ಕಾಲ ಒಂದೇ ಮನೆಯಲ್ಲಿ ಬಿಟ್ಟುಬಿಡುತ್ತಾರೆ. ತಿಂಗಳ ಬಳಿಕ ಅವರಿಬ್ಬರಲ್ಲಿ ಒಬ್ಬರು ‘ನಹೀ’ ಎಂದರೂ ಮದುವೆ ನಡೆಯುವುದಿಲ್ಲ. ಏಕರೂಪ ನಾಗರಿಕ ಸಂಹಿತೆಯ ನೆವದಲ್ಲಿ, ಅವರ ‘ಪರ್ಸನಲ್ ‘ಲಾ’ವನ್ನು ನಮ್ಮ ದೇಶದ ಎಲ್ಲ ಪ್ರಜೆಗಳಿಗೂ ಅನುಷ್ಠಾನಗೊಳಿಸಬೇಕೇ ಎಂದು ಜನಮತ ಸಂಗ್ರಹಿಸಿದರೆ, ನಮ್ಮ ಪಡ್ಡೆ ಹುಡುಗರೆಲ್ಲ ‘ಯೆಸ್ ಸಾರ್’ ಅನ್ನುವುದರಲ್ಲಿ ಅನುಮಾನವಿಲ್ಲ.

ಅಖಿಲಭಾರತ ಜಗದ್ಗುರುಗಳು: ವಿಶ್ವಹಿಂದೂ ಪರಿಷತ್ತಿನ ಮುಸ್ಲಿಮ್ ಜೆರಾಕ್ಸ್ ಪ್ರತಿಯಂತಿರುವ, 1973ರಿಂದಷ್ಟೇ ನಮ್ಮ ದೇಶದ ಎಲ್ಲ ಮುಸ್ಲಿಮ್ ಸಮುದಾಯಗಳ ನಿಲುವುಗಳ ಗುತ್ತಿಗೆಯನ್ನು ವಹಿಸಿಕೊಂಡಂತೆ ವರ್ತಿಸುವ, ‘ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ’ಯ ಸದಸ್ಯರ ‘ಲಿಂಗ–ಲಿಂಗಿ’ ಅನುಪಾತ ಅರಿಯುವ ಕುತೂಹಲದಿಂದ ಹಿಂದೊಮ್ಮೆ ಅವರ ‘ವೆಬ್‌ಸೈಟ್’ ತೆರೆದು ವಿವರ ಹುಡುಕಿ ಸೋತಿದ್ದೆ.

ನಮ್ಮ ದೇಶದ ಮುಸ್ಲಿಮ್ ಮಹಿಳೆಯರು ತಮ್ಮ ಅನುಕೂಲಕ್ಕೆಂದು ಪ್ರತ್ಯೇಕವಾದ, ‘ಅಖಿಲ ಭಾರತ ಮುಸ್ಲಿಮ್ ಮಹಿಳಾ ವೈಯಕ್ತಿಕ ಕಾನೂನು ಮಂಡಳಿ’ಯನ್ನೂ, ‘ಶಿಯಾ’ ಸಮುದಾಯದವರು ತಮ್ಮದೇ ಆದ ಒಂದು, ‘ಅಖಿಲ ಭಾರತ ಶಿಯಾ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ’ಯನ್ನೂ ರಚಿಸಿಕೊಂಡಿದ್ದಾರೆ ಎಂಬುದು ಹೆಚ್ಚು ಪ್ರಚಾರದಲ್ಲಿಲ್ಲ.

ಹಾಗಾದರೆ, ಪ್ರಸ್ತುತ ಸುದ್ದಿಯಲ್ಲಿರುವ, ‘ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ’ಯು, ಕೇವಲ ‘ಸುನ್ನಿ ಮುಸ್ಲಿಮ್’ ವೈಯಕ್ತಿಕ ಕಾನೂನು ಮಂಡಳಿಯೆ? ಆದರೆ, ಈ ಯಾವುದೇ ‘ಕಾನೂನು ಮಂಡಳಿ’ಗಳಿಗೆ ವಿಶ್ವಹಿಂದೂ ಪರಿಷತ್ತಿನಂತೆಯೇ ಯಾವುದೇ ಕಾನೂನಾತ್ಮಕ ಅಧಿಕಾರಗಳಿಲ್ಲ. ತಮಾಷೆಯೆಂದರೆ, ಈ ಮೂರೂ ಮಂಡಳಿಗಳೂ ‘ಅಖಿಲ ಭಾರತ’ ಎಂಬೆರಡು ಪದಗಳನ್ನು, ‘ಜಗದ್ಗುರು’ಗಳಂತೆ ತಮ್ಮ ತಮ್ಮ ಮುಖಗಳಿಗೆ ಅಂಟಿಸಿಕೊಂಡು ಅಪ್ಪಟ ಭಾರತೀಯತೆ ಮೆರೆಯುತ್ತಿವೆ. ಇರಲಿ ಬಿಡಿ.

ಅನ್ಯರ ಹಸ್ತಕ್ಷೇಪ ಬೇಡ; ಸರಿ...
‘ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ’ಯ ಮಾತ್ರವಲ್ಲ, ದೇಶದ ಎಲ್ಲ ಮುಸ್ಲಿಮರ ಒಕ್ಕೊರಲ ಆಗ್ರಹವೆಂದರೆ, ‘ಸಂವಿಧಾನದತ್ತವಾಗಿ ಮನ್ನಿಸಲ್ಪಟ್ಟಿರುವ ‘ಮುಸ್ಲಿಮ್ ವೈಯಕ್ತಿಕ ಕಾನೂನಿನಲ್ಲಿ ‘ಅನ್ಯ’ರ ಹಸ್ತಕ್ಷೇಪವನ್ನು ಸಹಿಸಲಾಗುವುದಿಲ್ಲ’ ಎಂಬುದು. ಸರಿ; ‘ಅನ್ಯ’ರ ಹಸ್ತಕ್ಷೇಪವನ್ನು ಸಹಿಸುವುದು ಬೇಡ. ಆದರೆ, ತಾವೇ ಕೆಲವು ಸುಧಾರಣೆಗಳನ್ನು ಅಳವಡಿಸಿಕೊಳ್ಳಲು ಯಾರ ಅಡ್ಡಿಯಿದೆ?

ಹೂವಿನಂತೆ ಬೆಳೆಸಿದ ಮಗಳನ್ನು, ಸುಖ ಸಂಸಾರದ ಕನಸುಗಳೊಂದಿಗೆ ಅಪರಿಚಿತ ಗಂಡಿನ ಜೊತೆಗೆ ಕಳುಹಿಸಿಕೊಡುವ ಹೆತ್ತವರು, ಆಕೆಯ ದಾಂಪತ್ಯವು ಅಕಾರಣವಾಗಿ (ಇದ್ದಕ್ಕಿದ್ದಂತೆ) ಮುರಿದುಬೀಳುವುದನ್ನು ಖಂಡಿತವಾಗಿಯೂ ಸಹಿಸಲಾರರು. ಯಾವ ರೀತಿಯಲ್ಲಿ, ಒಂದು ಗಂಡು ತನ್ನ ಪತ್ನಿಯ ಪಲ್ಲಂಗದಲ್ಲಿ ಬೇರೊಂದು ಗಂಡನ್ನು ಸಹಿಸಿಕೊಳ್ಳಲಾರನೋ, ಅದೇ ರೀತಿಯಲ್ಲಿ ಯಾವುದೇ ಹೆಣ್ಣು, ತನ್ನ ಪತಿಯ ಪಲ್ಲಂಗದಲ್ಲಿ ಮತ್ತೊಂದು ಗಂಡನ್ನು ಸಹಿಸಿಕೊಳ್ಳಲಾರಳು.

ಈ ಎರಡು ‘ಪ್ರಕೃತಿಸತ್ಯ’ಗಳನ್ನು, ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯಲ್ಲಿರುವ ‘ಹೆಣ್ಣು ಹೆತ್ತ’ ಸದಸ್ಯರುಗಳೆಲ್ಲ ಗುಟ್ಟಿನಲ್ಲಾದರೂ ಒಪ್ಪಿಕೊಳ್ಳುತ್ತಾರೆ ಎಂಬುದೂ ಪರಮಸತ್ಯವೆ. ಅದೆಷ್ಟೋ ಮುಸ್ಲಿಮ್ ರಾಷ್ಟ್ರಗಳಲ್ಲಿ ಈಗಾಗಲೇ ತಿದ್ದಿಕೊಳ್ಳಲಾಗಿರುವ, ‘ಮುಸ್ಲಿಮ್ ವೈಯಕ್ತಿಕ ಕಾನೂನು’ಗಳಂತೆ, ನಮ್ಮ ದೇಶದಲ್ಲಿರುವ ಸುನ್ನೀ, ಷಿಯಾ, ಇಸ್ಮಾಯಿಲ್, ಬೊಹ್ರಾ, ಖೋಜಾ, ಅಹ್ಮದೀಯಾ, ಕುಚಿ ಮೆಮನ್‌, ಹೀಗೆ ಎಲ್ಲ ಪಂಥ–ಪಂಗಡಗಳ ಧಾರ್ಮಿಕ ವಿದ್ವಾಂಸರುಗಳು ಒಂದೆಡೆ ಕಲೆತು, ಗಂಭೀರವಾಗಿ ಚರ್ಚಿಸಿ, ನಮ್ಮ ದೇಶದ ‘ಮುಸ್ಲಿಮ್ ವೈಯಕ್ತಿಕ ಕಾನೂನು’ಗಳಲ್ಲೂ, ‘ಹೆಣ್ಣು ಹೆತ್ತವರ ಪರವಾದ’  ಮತ್ತು ‘ಮಹಿಳಾಪರ’ವಾದ ಕೆಲವು ಸುಧಾರಣೆಗಳನ್ನು ತರುವಲ್ಲಿ ‘ಅನ್ಯ’ರೇನೂ ಹಸ್ತಕ್ಷೇಪ ಮಾಡಲಾರರು.

4) ನಮ್ಮ ದೇಶದಲ್ಲಿ ‘ಸಮಾನ ನಾಗರಿಕ ಸಂಹಿತೆ’ ಅಥವಾ ‘ಏಕ ನಾಗರಿಕ ಸಂಹಿತೆ’ ಬಗ್ಗೆ ‘ನಿತ್ಯ–ನಿರಂತರ’ ಚರ್ಚೆ ನಡೆಸಬಹುದೇ ಹೊರತು, ನಮ್ಮ ‘ಸಂವಿಧಾನ’ವನ್ನು ಅಮೂಲಾಗ್ರವಾಗಿ ತಿದ್ದಿ ಬರೆಯದೆ, ಯಾವುದೇ ಬಗೆಯ ‘ಏಕರೂಪ’ ಸಂಹಿತೆಯನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ‘ಕಠಿಣ ಉಪವಾಸದಿಂದಲೇ ಮರಣವನ್ನಪ್ಪುವ’ ಜೈನಧರ್ಮದವರ ಮೂಲಭೂತ ಹಕ್ಕನ್ನು ಕಿತ್ತುಕೊಳ್ಳಲಾಗದು ಎಂದು ನಮ್ಮ ನ್ಯಾಯಾಲಯಗಳು ನೀಡಿರುವ ತೀರ್ಪು ಇದಕೊಂದು ಸಣ್ಣ ಉದಾಹರಣೆ.

ಮುಸ್ಲಿಮ್ ಸಮಾಜವನ್ನು ಮಾತ್ರವಲ್ಲ, ನಮ್ಮೆಲ್ಲಾ ಸಮಾಜಗಳನ್ನೂ ನಿತ್ಯ ಕಾಡುವ ಸಂಗತಿಗಳಲ್ಲಿ, ‘ಹಸಿವು’ ಮೊದಲ ಸ್ಥಾನದಲ್ಲಿದೆ. ‘ನಿರುದ್ಯೋಗ’ಕ್ಕೆ ಎರಡನೇ ಬಹುಮಾನ. ಶಿಕ್ಷಣಕ್ಕೆ ಥರ್ಡ್ ಪ್ರೈಜ್. ಮದುವೆ, ಮುಂಜಿಗಳೆಲ್ಲ ಆಮೇಲೆ. ಈ ಎಲ್ಲ ಸಮಾಜಗಳಲ್ಲೂ ನೂರಕ್ಕೆ ತೊಂಬತ್ತೊಂಬತ್ತರಷ್ಟು ಸಮಾನದುಃಖಿಗಳಿದ್ದಾರೆ.

ಈ ಸಮಾನದುಃಖಿಗಳೆಲ್ಲ ಜೊತೆಗೂಡಿ, ಎಂದೂ ಪ್ರತ್ಯಕ್ಷವಾಗದ ‘ಸಮಾನ ನಾಗರಿಕ ಸಂಹಿತೆ’ ಗುಮ್ಮಕೆ ಬೆದರುವ ಬದಲು, ಈ ದುಃಖಕ್ಕೆ ಕಾರಣರಾದ ಅನಾಗರಿಕರನ್ನು ಮೊದಲು ಬಹಿಷ್ಕರಿಸಬೇಕಾಗಿದೆ. ಅವರ ವಿರುದ್ಧ ‘ಸಮಾನ ನಾಗರಿಕ ಹೋರಾಟ’ ನಡೆಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT