ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿವಿನ ಬೆಂಕಿ ಆರಿಸಿ ಮಹಾಮಾತೆ ಆದೆ

Last Updated 22 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಅನಾಥ ಮಕ್ಕಳ ಅಕ್ಕರೆಯ ಅಮ್ಮ ಸಿಂಧೂತಾಯಿ ಸಪಕಾಳ್ ಅವರ ಬದುಕೇ ಒಂದು ರೋಚಕ ಕತೆ. ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಪಿಂಪ್ರಿ–ಮೆಘೆ ಗ್ರಾಮದ ಕಡು ಬಡತನದ ಕುಟುಂಬದಲ್ಲಿ ಹುಟ್ಟಿದವರು. 10ನೇ ವರ್ಷದಲ್ಲೇ ಪಾಲಕರು ಅವರನ್ನು ನವರಗಾಂವ್‌ನ 30 ವರ್ಷದ ವ್ಯಕ್ತಿಗೆ ಮದುವೆ ಮಾಡಿಕೊಟ್ಟು ಕೈತೊಳೆದುಕೊಂಡರು.

ನವರಗಾಂವ್‌ ಅರಣ್ಯ ಪ್ರದೇಶದಲ್ಲಿ ಸಗಣಿ ಎತ್ತಿ ಬದುಕು ಸಾಗಿಸುತ್ತಿದ್ದ ಬಡ ಮಹಿಳೆಯರ ಮೇಲೆ  ಸ್ಥಳೀಯ ಜಮೀನ್ದಾರರು ಹಾಗೂ ಅರಣ್ಯಾಧಿಕಾರಿಗಳು ದೌರ್ಜನ್ಯ ಎಸಗುತ್ತಿದ್ದರು. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಪರ ಸಿಂಧೂತಾಯಿ ದನಿ ಎತ್ತಿದಾಗ ಜಮೀನ್ದಾರರಿಗೆ ಅರಗಿಸಿಕೊಳ್ಳಲು ಆಗಲಿಲ್ಲ.

ಹೀಗಾಗಿ, ಅವರ ವಿರುದ್ಧವೇ ಅನೈತಿಕ ಸಂಬಂಧದ ಆರೋಪ ಹೊರೆಸಿದರು. ಸುಳ್ಳು ಅಪವಾದಕ್ಕೆ ಕಿವಿಗೊಟ್ಟ ಪತಿ ತುಂಬು ಗರ್ಭಿಣಿ ಆಗಿದ್ದ  ಸಿಂಧೂತಾಯಿ ಅವರನ್ನು ಮನೆಯಿಂದ ಹೊರ ಹಾಕಿದರು. ಇದರಿಂದಾಗಿ ಅವರು ದನದ ಕೊಟ್ಟಿಗೆಯಲ್ಲಿ  ಹೆಣ್ಣು ಮಗುವಿಗೆ ಜನ್ಮ ನೀಡಬೇಕಾಯಿತು. ಕಳಂಕ ಹೊತ್ತಿದ್ದರಿಂದ ತವರು ಮನೆಯವರೂ ಹತ್ತಿರ ಬಿಟ್ಟುಕೊಳ್ಳಲಿಲ್ಲ. ಬಂಧು ಬಳಗ ಇದ್ದರೂ ನೆರವಿಗೆ ಬರಲಿಲ್ಲ. ಹೊಟ್ಟೆಪಾಡಿಗೆ ಭಿಕ್ಷಾಟನೆ ಅನಿವಾರ್ಯವಾಯಿತು. ರೈಲು ನಿಲ್ದಾಣ, ಸ್ಮಶಾನದಲ್ಲಿ ಕಾಲ ದೂಡಿದರು. ಭಿಕ್ಷೆಯಲ್ಲಿ ಬಂದ ಅನ್ನವನ್ನು ಅನಾಥ ಮಕ್ಕಳಿಗೆ ಹಂಚಿ, ಅವರಿಗೆ ಹತ್ತಿರವಾದರು.  ಅನಾಥರಿಗೆ ‘ಅನ್ನಪೂರ್ಣೆ’ ಆದರು.  ಈಗ ಆರು ಅನಾಥಾಶ್ರಮಗಳನ್ನು ನಿರ್ಮಿಸಿರುವ ಅವರು 1,200 ಮಕ್ಕಳಿಗೆ ಆಶ್ರಯ ನೀಡಿದ್ದಾರೆ. ಅನೇಕರಿಗೆ ವಿದ್ಯೆ ನೀಡಿ ಬದುಕು ರೂಪಿಸಿದ್ದು ಸಣ್ಣ ವಿಷಯವೇನಲ್ಲ. ಅವರ ಸೇವೆಯನ್ನು ಗುರುತಿಸಿದ ವಿವಿಧ ಸಂಘ– ಸಂಸ್ಥೆಗಳು ಇಲ್ಲಿಯವರೆಗೆ 786 ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿವೆ.

ರಾಜ್ಯ ಸರ್ಕಾರ, ಈ ಬಾರಿ ಸಿಂಧೂತಾಯಿ ಅವರನ್ನು ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ. ಬದುಕಿನುದ್ದಕ್ಕೂ ನಡೆಸಿದ ಸಂಘರ್ಷ ಹಾಗೂ ಅನಾಥರಿಗೆ ಆತ್ಮವಿಶ್ವಾಸ ತುಂಬಿದ ಬಗೆಗೆ ಸಿಂಧೂತಾಯಿ ಸಪಕಾಳ್ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

* ಸಂಘರ್ಷದ ಬದುಕನ್ನು ಸಾಮಾಜಿಕ ಕಾರ್ಯಕ್ಕೆ ಹೊರಳಿಸಿದ್ದು ಹೇಗೆ?
ಹೆಣ್ಣು ಮಕ್ಕಳನ್ನು ತಿರಸ್ಕಾರದಿಂದ ನೋಡುವ ಪ್ರವೃತ್ತಿ ಹಿಂದಿನಿಂದಲೂ ಇದೆ. ಹಿಂದೆ ಹೆಣ್ಣು ಹುಟ್ಟಿದರೆ ‘ಚಿಂದಿ’, ‘ದಗಡಿ’ (ಕಲ್ಲು) ಎಂದೆಲ್ಲಾ ಹೆಸರಿಡುತ್ತಿದ್ದರು. ಹೆಣ್ಣು ಎನ್ನುವ ಕಾರಣಕ್ಕೆ ನನ್ನನ್ನೂ ಚಿಂದಿ ಎಂದು ಕರೆಯಲಾಗುತ್ತಿತ್ತು. ಅಮ್ಮ ವಿರೋಧಿಸಿದರೂ ಇತರೆ ಹೆಣ್ಣುಮಕ್ಕಳ ಜೊತೆಗೂಡಿ ನಾಲ್ಕನೇ ತರಗತಿಯವರೆಗೆ ಓದಿದೆ. ನನ್ನ ಬಾಲ್ಯ ಬಹಳ ಕೆಟ್ಟದಾಗಿತ್ತು. ಬಾಲ್ಯದಲ್ಲಿದ್ದಾಗಲೇ ಪಾಲಕರು, ಅನಕ್ಷರಸ್ಥನೊಂದಿಗೆ  ಮದುವೆ ಮಾಡಿದರು. ಆಗ ಗಂಡಸರು ಪತ್ನಿಯನ್ನು ಚಪ್ಪಲಿಗೆ ಹೋಲಿಕೆ ಮಾಡುತ್ತಿದ್ದರು. ನನಗೆ ಪ್ರೀತಿ ಎನ್ನುವುದೇ ಗೊತ್ತಾಗಲಿಲ್ಲ. ಓದುವ ಆಸಕ್ತಿ ಇದ್ದ ಕಾರಣ ರಸ್ತೆ ಮೇಲೆ ಬಿದ್ದ ಹಾಳೆಯನ್ನು ಎತ್ತಿಕೊಂಡು ಓದುತ್ತಿದ್ದೆ. ಪತಿ ಕೀಳರಿಮೆಯಿಂದ ಅದನ್ನು ಸುಟ್ಟು ಹಾಕುತ್ತಿದ್ದ. 20ನೇ ವಯಸ್ಸಿನಲ್ಲಿ ದನದ ಕೊಟ್ಟಿಗೆಯಲ್ಲಿ ಮೂರನೇ ಮಗುವಿಗೆ ಜನ್ಮ ನೀಡಿದೆ. ನನಗಾಗಿ ಅಲ್ಲದಿದ್ದರೂ, ಮಗುವಿಗಾಗಿ  ಬದುಕಬೇಕಿತ್ತು. ಹಸಿಮೈಯಲ್ಲಿ ತಣ್ಣೀರ ಸ್ನಾನ ಮಾಡಿದೆ. 10 ತಿಂಗಳ ಹಸುಗೂಸನ್ನು ಹೊತ್ತುಕೊಂಡು ಅಲೆದಾಡಿದೆ. ಸುದೀರ್ಘ ಕಾಲ ಸಂಘರ್ಷದ ಬದುಕು ನಡೆಸಿದೆ. ಮನುಷ್ಯರು ನನಗೆ ಬೆಂಬಲವಾಗಿ ನಿಲ್ಲಲಿಲ್ಲ ಹಸಿವು ಬದುಕು ಕಲಿಸಿತು. ಇದೇ ಸಾಮಾಜಿಕ ಕಾರ್ಯದತ್ತ ಹೊರಳಲು ಸ್ಫೂರ್ತಿಯಾಯಿತು.

* ಮಗಳನ್ನೇ ಅನಾಥಾಶ್ರಮಕ್ಕೆ ಸೇರಿಸಿದ್ದು ಏಕೆ?
ಸ್ಮಶಾನವೇ ನನಗೆ ನೆಲೆಯಾಗಿತ್ತು. ಶವ ಸಂಸ್ಕಾರಕ್ಕೆ ಬಂದ ಬಂಧುಗಳು, ಸಮಾಧಿಯ ಮೇಲಿಟ್ಟ ಆಹಾರ ತಿಂದು ಬದುಕು ಸಾಗಿಸಿದ್ದೆ. ಒಂಟಿತನ, ಅಭದ್ರತೆ ಕಾಡುತ್ತಿತ್ತು. ನನಗೆ ಯಾರೂ ಇಲ್ಲವಲ್ಲ ಎಂದು ಒಮ್ಮೊಮ್ಮೆ ಸ್ಮಶಾನದಲ್ಲೇ  ಜೋರಾಗಿ ಅಳುತ್ತಿದ್ದೆ. ಬಹಳಷ್ಟು ಜನ ಭೂತ ಅಳುತ್ತಿದೆ ಎಂದು ಹೆದರಿ ಓಡಿ ಹೋಗುತ್ತಿದ್ದರು. ಆದರೆ ಯಾರೂ ನೆರವಿಗೆ ಬರುತ್ತಿರಲಿಲ್ಲ. ಅಲ್ಲಿ ದೆವ್ವ ಪಿಶಾಚಿಗಳು ಇರಲಿಲ್ಲ. ಜನ ಎಷ್ಟೊಂದು ಅಂಧಶ್ರದ್ಧರಾಗಿದ್ದಾರೆ ಎನ್ನುವುದು ಗೊತ್ತಾಗಿದ್ದು ಆಗಲೇ. ಹಸಿವಿನ ಬೆಂಕಿ ಆರಿಸುವುದು ಕಷ್ಟದ ಕೆಲಸವಾಗಿತ್ತು. ನನಗೆ ನಾನೇ ಸಂಗಾತಿಯಾಗಿದ್ದೆ.  ನೊಂದುಕೊಂಡಾಗ ಇದೆಂತಹ ಬದುಕು ಎಂದು ಸಾಯುವ ಬಗ್ಗೆ ಯೋಚಿಸುತ್ತಿದ್ದೆ. ತಂದೆ ಆಗಲೇ ಮತಪಟ್ಟಿದ್ದರು. ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ ಹಾಗೂ ಮಂದಿರಗಳ ಬಳಿ ಅಲೆಯುತ್ತಿದ್ದೆ. ಒಂದಷ್ಟು ದಿನ ರೈಲು ನಿಲ್ದಾಣವೂ ನನ್ನ ವಿಳಾಸವಾಗಿತ್ತು. ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡುವಾಗಲೇ, ಸಿಕ್ಕಿದ್ದನ್ನು ನನ್ನಂಥವರ ಜೊತೆ  ಹಂಚಿ ತಿನ್ನುವುದನ್ನು ಕಲಿತೆ. ಆಗಲೇ, ಹಂಚಿ ತಿನ್ನುವುದರಲ್ಲಿ ಸುಖವಿದೆ ಎನ್ನುವುದು ಮನವರಿಕೆಯಾಯಿತು. ನನ್ನ ಕಾಯಕಕ್ಕೆ ತೊಡಕಾಗದಿರಲಿ ಎನ್ನುವ ಕಾರಣಕ್ಕೆ  ಮಗಳನ್ನು ಪುಣೆಯ ಅನಾಥಾಶ್ರಮದಲ್ಲಿ ಬಿಡಬೇಕಾಯಿತು.

‘ನೀವು ನನ್ನ ಮಗಳಿಗೆ ತಾಯಿ ಆಗಿ. ನಾನು ಜಗದ ಮಕ್ಕಳ ತಾಯಿ ಆಗುತ್ತೇನೆ’ ಎಂದು ಶ್ರೀಮಂತ ದಗಡುಸೇಟ್‌ ಮಂದಿರ ಹಲವಾಯಿ ಟ್ರಸ್ಟ್‌  ಆಶ್ರಮದ ಮುಖ್ಯಸ್ಥರಿಗೆ ಹೇಳಿ ಅವರಿಗೆ ಮಗಳನ್ನು ಒಪ್ಪಿಸಿದೆ. ನಾನು ಅನಾಥ ಮಕ್ಕಳತ್ತ ಚಿತ್ತ ಹರಿಸಿದೆ.

* ನಿಮ್ಮ ಮಕ್ಕಳು ಈಗ ಏನು ಮಾಡುತ್ತಿದ್ದಾರೆ. ಅವರೊಂದಿಗೆ ಆತ್ಮೀಯತೆ ಹೇಗಿದೆ?
ನನಗೆ ಒಬ್ಬ ಪುತ್ರಿ ಹಾಗೂ ಇಬ್ಬರು ಪುತ್ರರಿದ್ದಾರೆ. ಪತಿ ಮನೆಯಲ್ಲಿ ಬೆಳೆದ ಪುತ್ರರು ಅವರ ಸಂಸಾರದಲ್ಲಿ ಸುಖವಾಗಿದ್ದಾರೆ. ಮಗಳು ಅನಾಥಾಶ್ರಮದಲ್ಲಿ ಬೆಳೆದು ಪದವಿ ಪಡೆದು ಅನಾಥಾಲಯಗಳನ್ನು ನೋಡಿಕೊಳ್ಳುತ್ತಿದ್ದಾಳೆ. ಹೊಟ್ಟೆಯಲ್ಲಿ ಹುಟ್ಟಿದವರು ಮಾತ್ರ ನನ್ನ ಮಕ್ಕಳಲ್ಲ; ಅನಾಥಾಶ್ರಮದಲ್ಲಿ ಬೆಳೆದ ಎಲ್ಲರೂ ನನ್ನ ಮಕ್ಕಳೇ. ಈಗ 1,200 ಮಕ್ಕಳು ಅನಾಥಾಲಯಗಳಲ್ಲಿದ್ದಾರೆ.

* ಅನಾಥರ ಮಹಾಮಾತೆ ಆಗಿದ್ದು ಹೇಗೆ?
ಮಗುವಿನ ತಾಯಿ ಎನ್ನುವ ಕಾರಣಕ್ಕೆ, ಅನುಕಂಪದಿಂದ ಜನ ನನಗೆ ಹೆಚ್ಚು ಭಿಕ್ಷೆ ನೀಡುತ್ತಿದ್ದರು. ನನ್ನೊಂದಿಗೆ ಊಟ ಮಾಡುತ್ತಿದ್ದ ಅನಾಥ ಮಕ್ಕಳು ನನ್ನನ್ನು ಬಿಟ್ಟು ಹೋಗುತ್ತಿರಲಿಲ್ಲ. ಮಕ್ಕಳ ಬಗೆಗೆ ಕನಿಕರ ಇತ್ತು. ಮಕ್ಕಳಿಗೂ ನನ್ನ ಮೇಲೆ ನಂಬಿಕೆ ಇತ್ತು. ಹೀಗಾಗಿ ಒಂದು ಮಗುವಿನ ತಾಯಿ ಆಗುವ ಬದಲು, ಸಾವಿರಾರು ಮಕ್ಕಳ ಮಹಾಮಾತೆ ಆಗುವುದು ಸೂಕ್ತ ಅನಿಸಿತು. ಅವರಿಗೂ ನಾನು ಅಕ್ಕರೆಯ ಅಮ್ಮನಾದೆ. ಅನಾಥ ಮಕ್ಕಳ ಹಸಿವಿನ ಬೆಂಕಿ ಆರಿಸಲು ನಡೆಸಿದ ಪ್ರಯತ್ನದ ಪರಿಣಾಮವಾಗಿ ಮಹಾಮಾತೆ ಆಗಿದ್ದೇನೆ. ಯಾವುದೇ ಜ್ಞಾನ ಇಲ್ಲದಿದ್ದರೂ ಇಷ್ಟು ದೂರ ಬದುಕಿನ ಪಯಣ ಬೆಳೆಸಿದ್ದು ಹೇಗೆ ಎನ್ನುವುದು ನನಗೂ ಒಮ್ಮೊಮ್ಮೆ ಆಶ್ಚರ್ಯ ಆಗುತ್ತದೆ.

* ಭಜನೆ ಬಗೆಗೆ ಹೇಗೆ ಆಸಕ್ತಿ ಮೂಡಿತು?
ನನ್ನ ಅಪ್ಪ ದನ ಕಾಯುವಾಗ ಭಜನೆ ಹಾಗೂ ತತ್ವ ಪದಗಳನ್ನು ಹಾಡುತ್ತಿದ್ದ. ಅವುಗಳನ್ನು ಆಗಾಗ ಕೇಳಿ ಸಹಜವಾಗಿಯೇ ಕಂಠ ಪಾಠವಾಯಿತು. ಮಹಾರಾಷ್ಟ್ರದಲ್ಲಿ ನಿತ್ಯ ಭಜನೆ ಮಾಡುವ ಸಂಪ್ರದಾಯ ಇದೆ. ಸಂತರ ಪದ ಹಾಗೂ ಭಜನೆಯಲ್ಲಿ ಬದುಕಿನ ಪಾಠ ಇದೆ. ಬದುಕಿನ ಮಾರ್ಗ ತೋರಿಸುವ ಅಭಂಗಗಳು (ವಚನಗಳ ಪ್ರತಿರೂಪ) ನನಗೆ ಇಷ್ಟವಾಗುತ್ತಿದ್ದವು. ನಾನು ರಸ್ತೆ ಮೇಲೆ ಬಿದ್ದ ಹಾಳೆಗಳನ್ನು ಓದುತ್ತಿದ್ದೆ. ಆಸಕ್ತಿದಾಯಕ ವಿಷಯ ಇದ್ದರೆ ಇಟ್ಟುಕೊಳ್ಳುತ್ತಿದ್ದೆ. ಪತಿ ಮನೆಯಿಂದ ಹೊರಗೆ ತಳ್ಳಿದ ಬಳಿಕ  ರೈಲು ನಿಲ್ದಾಣ ಹಾಗೂ ಮಂದಿರಗಳಲ್ಲಿ ಭಜನಾ ಪದ ಹಾಡಿ ಹೊಟ್ಟೆ ತುಂಬಿಸಿಕೊಂಡೆ. ಭಜನೆ ಈಗ ನನ್ನ ಬದುಕಿನ ಭಾಗವೇ ಆಗಿದೆ.

* ಅನಾಥಾಲಯಗಳನ್ನು ಸ್ಥಾಪಿಸಿದ್ದು ಹೇಗೆ?
ಅನಾಥ ಮಕ್ಕಳನ್ನು ಕಟ್ಟಿಕೊಂಡು ಅಲೆಯುತ್ತಿದ್ದೆ. ನನಗೆ ಕೆಲವರು ನೆರವು ಕೊಡಲು ಬಯಸುತ್ತಿದ್ದರೂ ಹಣ ಕೊಟ್ಟ ಬಳಿಕ ರಸೀದಿ ಕೇಳುತ್ತಿದ್ದರು. ಹೀಗೆ ಅಲೆಯುತ್ತಿದ್ದರೆ ಅನಾಥ ಮಕ್ಕಳ ಭವಿಷ್ಯ ರೂಪಿಸಲಾಗದು ಎನ್ನುವುದು ಮನವರಿಕೆ ಆಯಿತು. ಅವರಿವರ ನೆರವು ಪಡೆದು ಒಂದು ಸಂಸ್ಥೆ ಆರಂಭಿಸಿದೆ. ಇಂದು ನಾಲ್ಕು ಜಿಲ್ಲೆಗಳಲ್ಲಿ  ಶಾಖೆಗಳಿವೆ. ನನ್ನ ಭಾಷಣದ ಮೇಲೆ ರೇಷನ್‌ ಅವಲಂಬಿಸಿದೆ. ಕಡು ಬಡವರೂ ನನ್ನ ಜೋಳಿಗೆಯಲ್ಲಿ ₹ 10 ಹಾಕುತ್ತಾರೆ. ಇದರಿಂದ ಸಂಸ್ಥೆ ನಡೆದಿದೆ. ಆಶ್ರಮದಲ್ಲಿ ಬೆಳೆದು ನೌಕರಿ ಮಾಡುತ್ತಿರುವವರು ನೆರವಾಗುತ್ತಿದ್ದಾರೆ. ಈಗಲೂ ಸಂಸ್ಥೆ ಸಿಬ್ಬಂದಿ ರೈಲು ನಿಲ್ದಾಣಕ್ಕೆ ಹೋಗಿ ಬರುತ್ತಾರೆ. ಯಾವುದಾದರೂ ಮಹಿಳೆ ಮಗುವನ್ನು ಕಂಕುಳಲ್ಲಿ ಹೊತ್ತು ಅನ್ನಕ್ಕಾಗಿ ಅಲೆಯುತ್ತಿದ್ದಾಳೆಯೇ ಎಂದು ಹುಡುಕುತ್ತಾರೆ. ಅಂಥವರು ಕಣ್ಣಿಗೆ ಬಿದ್ದರೆ ಆಶ್ರಮಕ್ಕೆ ಕರೆ ತರುತ್ತಾರೆ. ನಾನು ಈಗಲೂ ದುಃಖದ ಮೂಲವನ್ನು ಶೋಧಿಸುತ್ತಿದ್ದೇನೆ. ಬೇರೆಯವರ ದುಃಖ ಆಲಿಸುತ್ತಾ ನನ್ನ ದುಃಖ  ಮರೆಯಲು ಪ್ರಯತ್ನಿಸುತ್ತಿದ್ದೇನೆ.

* ಗಂಡನ ಮನೆಯವರ ಪ್ರತಿಕ್ರಿಯೆ ಹೇಗಿದೆ?
ಕಳಂಕ ಹೊರಿಸಿ ಮನೆಯಿಂದ ಹೊರ ಹಾಕಿದ ಗಂಡನ ಮನೆಯವರೇ ಈಚೆಗೆ ನಾನಿರುವಲ್ಲಿಗೆ ಬಂದು ನನ್ನನ್ನು ಸನ್ಮಾನ ಮಾಡಿದರು. ಇದು ಎಲ್ಲ ಪ್ರಶಸ್ತಿಗಳಿಗಿಂತಲೂ ಮಿಗಿಲಾದದ್ದು. ನನ್ನ ಪತಿ ನಾನು ದೊಡ್ಡ ತಪ್ಪು ಮಾಡಿಬಿಟ್ಟೆ ಎಂದು ಕಣ್ಣೀರು ಹಾಕಿದರು. ಅವರಿಗೆ ತಪ್ಪಿನ ಅರಿವಾಗಿದೆ. ಆದರೆ, ಸಮಯ ಮೀರಿ ಹೋಗಿದೆ. ನನಗೆ ನಾನೇ ಸಮಾಧಾನ ಹೇಳಿಕೊಂಡೆ. ಪತಿ ನನ್ನನ್ನು ಮನೆಯಿಂದ ಹೊರಗೆ ಹಾಕದಿದ್ದರೆ 1,200 ಅನಾಥ ಮಕ್ಕಳನ್ನು ಸಲುಹಲು ಆಗುತ್ತಿರಲಿಲ್ಲ. ಮಹಾಮಾತೆಯ ಪಟ್ಟವೂ ಬರುತ್ತಿರಲಿಲ್ಲ ಎಂದು ನನ್ನೊಳಗೆ ನಾನೇ ಅಂದುಕೊಂಡೆ. ಪತಿಯನ್ನು ಕ್ಷಮಿಸಿ, ಅನಾಥ ಮಗುವೆಂದು ಭಾವಿಸಿ ಆಶ್ರಮದಲ್ಲೇ ಆಶ್ರಯ ಕೊಟ್ಟಿದ್ದೇನೆ.

* ನಿಮ್ಮ ಮುಂದಿನ ಕನಸು ಏನು?
ಜನಿಸಿದ ಯಾವುದೇ ಮಗು ಸಾವಿಗೀಡಾಗಬಾರದು. ಬಡವರಿಗಾಗಿಯೇ ಆಸ್ಪತ್ರೆ ನಿರ್ಮಿಸಬೇಕು ಎನ್ನುವುದು ನನ್ನ ಕನಸಾಗಿದೆ. ಕೃಷ್ಣ ಮಂದಿರ ಕಟ್ಟಿ ಅದರ ಮೂಲಕ ಹಸಿದವರ ಹೊಟ್ಟೆಗೆ ಅನ್ನ ಹಾಕುವುದು ನನ್ನ ಉದ್ದೇಶವಾಗಿದೆ. ದೇವರ ಎದುರು ನಿಂತು ಕೈಮುಗಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಪ್ರಸಾದ ಸೇವನೆಯಿಂದ ಹಸಿವಿನ ಬೆಂಕಿ ಆರುತ್ತದೆ. ನಾನು ಸಂಸ್ಥೆಯ ಸಂಚಾಲಕಿ ಅಲ್ಲ, ಅನಾಥರ ತಾಯಿ. ಅನಾಥರ ಸಂಖ್ಯೆ ಇಳಿಯಬೇಕು.

ಎಲ್ಲರಿಗೂ ತಾಯಿ ಸಿಗಬೇಕು. ತಾಯಿ ಇಲ್ಲದಿದ್ದರೆ ಏನೂ ಇಲ್ಲ. ದೇಶದ ಭಾರ ಮಹಿಳೆಯ ಹೆಗಲ ಮೇಲಿದೆ. ಮಹಿಳೆ ಸೋತರೆ ಅಥವಾ ಮಾನಸಿಕವಾಗಿ
ಕುಸಿದರೆ ಬದುಕು ಮಹತ್ವ ಕಳೆದುಕೊಳ್ಳುತ್ತದೆ. ಆತ್ಮಹತ್ಯೆ ಹೇಡಿತನ. ಬದುಕಿನ ಅಂಧಕಾರವನ್ನು ಹತ್ತಿರದಿಂದ ನೋಡಿರುವೆ. ಕಷ್ಟದ ದಿನಗಳು ಯಾರಿಗೂ ಬರಬಾರದು. ಎಲ್ಲರೂ ನೆಮ್ಮದಿ ಬದುಕು ಸಾಗಿಸಬೇಕು ಎನ್ನುವುದು ನನ್ನ ಆಶಯ.

* ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರ ಬಗ್ಗೆ ತಿಳಿದಿದೆಯೇ?
12ನೇ ಶತಮಾನದಲ್ಲಿಯೇ ಬಸವಣ್ಣನವರು ಮಹಿಳೆಯರಿಗೆ ಸಮಾನ ಸ್ಥಾನಮಾನ ಕಲ್ಪಿಸಿದ್ದು ನನಗೆ ತಿಳಿದಿದೆ. ಪುಣೆಯಲ್ಲಿ ಅವರ ಭಾವಚಿತ್ರ ನೋಡಿದ್ದೇನೆ. ಕರ್ನಾಟಕ ಸರ್ಕಾರ ಬಸವ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿರುವುದು ಆಶ್ಚರ್ಯ ಉಂಟುಮಾಡಿದೆ.

ನಾನು ಅನಾಥ ಮಕ್ಕಳ ಆರು ಸಂಸ್ಥೆಗಳನ್ನು ನಡೆಸುತ್ತಿದ್ದರೂ ಮಹಾರಾಷ್ಟ್ರ ಸರ್ಕಾರ ಅದಕ್ಕೆ ಅನುದಾನ ಕಲ್ಪಿಸಿಲ್ಲ. ಈಗ ಭಾಷಣ ಮಾಡಿದರೂ ಹಣ ಬರುತ್ತಿದೆ. ಜನರ ದೇಣಿಗೆ ಮೂಲಕ ಸಂಸ್ಥೆಗಳು ನಡೆದಿವೆ. ಈವರೆಗೆ 786 ಪ್ರಶಸ್ತಿಗಳು ಬಂದಿವೆ. 2010ರಲ್ಲಿ ‘ಮೀ ಸಿಂಧೂತಾಯಿ ಸಪಕಾಳ್’ ಮರಾಠಿ ಚಿತ್ರ ಸಹ ನಿರ್ಮಾಣವಾಗಿದೆ. ಲಂಡನ್‌ನಲ್ಲಿ ನಡೆದ 54ನೇ ಚಲನಚಿತ್ರೋತ್ಸವಕ್ಕೂ ಚಿತ್ರ ಆಯ್ಕೆಯಾಗಿತ್ತು. ಈ ಚಿತ್ರ ನೋಡಿದ ಬಹಳಷ್ಟು ಮಹಿಳೆಯರಲ್ಲಿ ಆತ್ಮವಿಶ್ವಾಸ ಬಲಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT