ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಚುನಾವಣೆಗೆ ಮೈತ್ರಿ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Last Updated 22 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ಕೋಮುವಾದಿ ಶಕ್ತಿಗಳನ್ನು ಸೆದೆಬಡಿಯಲು ರಾಷ್ಟ್ರ ಮಟ್ಟದಲ್ಲಿ ಜಾತ್ಯತೀತ ಪಕ್ಷಗಳು ಒಂದಾಗುವ ಅಗತ್ಯವಿದೆ. ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳು ಪ್ರಬಲವಾಗಿಲ್ಲದ ಕಾರಣ ಮೈತ್ರಿ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು. ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಸೇರಿದಂತೆ ಯಾವುದೇ  ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಜೆಡಿಎಸ್‌ ಜತೆ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ. ಆ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದ ಕಾರಣ ಅನುಕೂಲವಾಯಿತು ಎಂದರು.

ಮಳವಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರು ಕಾರು ಅಡ್ಡಗಟ್ಟಿ ಪ್ರತಿಭಟಿಸಲು ಮುಂದಾಗಿದ್ದರು. ಸೂಕ್ತ ಬಂದೋಬಸ್ತ್‌ ಮಾಡದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದು ನಿಜ. ಬಿಜೆಪಿ ಕಾರ್ಯಕರ್ತರು ಕಪ್ಪುಬಾವುಟ ಪ್ರದರ್ಶಿಸಿ, ಪ್ರತಿಭಟನೆ ನಡೆಸಿದ್ದಕ್ಕೆ ಕೋಪಗೊಳ್ಳಲಿಲ್ಲ. ಚಲಿಸುವ ಕಾರಿಗೆದಿಢೀರ್ ಅಡ್ಡ ಬಂದು ಅನಾಹುತವಾದರೆ ಯಾರು ಹೊಣೆ? ಸರ್ಕಾರದ ಮುಖ್ಯಸ್ಥನಾಗಿ ಪೊಲೀಸರ ಕಾರ್ಯವೈಖರಿ ಪ್ರಶ್ನಿಸಬಾರದೇ ಎಂದರು.

ಮಹಾದೇವ ಪ್ರಸಾದ್‌ ನಿಧನ, ಎಚ್‌.ವೈ.ಮೇಟಿ ರಾಜೀನಾಮೆ ಕಾರಣ ತೆರವಾದ ಸಚಿವ ಸ್ಥಾನಗಳನ್ನು ಶೀಘ್ರ ಭರ್ತಿ ಮಾಡಲಾಗುವುದು. ಸಹಕಾರ ವಲಯದಲ್ಲಿ ಪಡೆದ ರೈತರ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರ ಸಿದ್ಧವಿದೆ. ಕೇಂದ್ರ ಸರ್ಕಾರ ಮೊದಲು ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

‘ಜಾತ್ಯತೀತ ಶಕ್ತಿಗಳು ಒಂದಾದರೆ ತಪ್ಪಿಲ್ಲ’

ಬೆಂಗಳೂರು: ‘ಜಾತ್ಯತೀತ ಶಕ್ತಿಗಳು ಒಂದಾಗಬೇಕು ಎಂಬುವುದರಲ್ಲಿ ತಪ್ಪಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ಅಭಿಪ್ರಾಯಪಟ್ಟರು.
ಶನಿವಾರ ಮಾತನಾಡಿದ ಅವರು,‘ಸೋನಿಯಾ ಗಾಂಧಿ– ನಿತೀಶ್ ಕುಮಾರ್ ಭೇಟಿ ಜಾತ್ಯತೀತ ಶಕ್ತಿಗಳು ಒಂದಾಗಬೇಕು ಎಂಬ ಸಂದೇಶ ರವಾನಿಸಿದೆ.  ಆದರೆ, ಮಹಾ ಘಟಬಂಧನ್ ರಚನೆ ಕುರಿತು ನನಗೆ ಮಾಹಿತಿ ಇಲ್ಲ’ ಎಂದು ಹೇಳಿದರು.

‘ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲಿದೆಯೇ’ ಎಂಬ ಪ್ರಶ್ನೆಗೆ , ‘ಸದ್ಯಕ್ಕೆ ಏನೂ ಹೇಳ ಲಾರೆ. ಜಾತ್ಯತೀತ ಶಕ್ತಿ ಒಂದಾಗುವ ಚಿಂತನೆಯನ್ನು ನಾನು ಮತ್ತು ಮುಖ್ಯಮಂತ್ರಿ  ಸ್ವಾಗತಿಸುತ್ತೇವೆ’ ಎಂದರು.

‘ಕೋಮುವಾದಿ ಶಕ್ತಿಗಳನ್ನು ಮಣಿಸಲು ಜಾತ್ಯತೀತ ಶಕ್ತಿಗಳು ಒಂದಾಗಬೇಕಿದೆ’ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿದ್ದರು.
ಈ ಮಾತಿಗೆ ಪರಮೇಶ್ವರ್‌ ಧ್ವನಿಗೂಡಿಸಿರುವುದು,  ಬಿಜೆಪಿ ಸೋಲಿಸಲು ಕರ್ನಾಟಕದಲ್ಲಿಯೂ ಜಾತ್ಯತೀತ ಶಕ್ತಿಗಳು ಒಂದಾಗಲಿವೆಯೇ ಎಂಬ ಚರ್ಚೆಯನ್ನು ರಾಜಕೀಯ ವಲಯದಲ್ಲಿ ಹುಟ್ಟುಹಾಕಿದೆ.

‘ಸಮೀಕ್ಷೆ ನಡೆಸಿ ಟಿಕೆಟ್‌ ಹಂಚಿಕೆ: ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ಬಗ್ಗೆ ಪಕ್ಷ ಸಮೀಕ್ಷೆ ನಡೆಸುತ್ತಿದೆ’ ಎಂದು ಪರಮೇಶ್ವರ್‌ ಹೇಳಿದರು.

‘ಕ್ಷೇತ್ರದ ಜನರ ಜೊತೆ ಅಭ್ಯರ್ಥಿಗಳ ಸಂಬಂಧ ಹೇಗಿದೆ, ಯಾರಿಗೆ ಟಿಕೆಟ್‌ ನೀಡಿದರೆ ಗೆಲ್ಲಬಹುದು ಎಂಬು ವುದನ್ನು ಅವಲೋಕಿಸ ಲಾಗುವುದು’ ಎಂದರು.

ಜನರೆದುರು ಸಿ.ಎಂ ಪೌರುಷ: ಈಶ್ವರಪ್ಪ

ಶಿರಸಿ: ‘ಮುಖ್ಯಮಂತ್ರಿಯೊಬ್ಬರು ಸಭಾ ವೇದಿಕೆಗೆ ಎಸ್ಪಿ ಅವರನ್ನು ಕರೆದು ಬೈದರೆ ಆ ಅಧಿಕಾರಿ ವಾಪಸ್ ಉತ್ತರ ಕೊಡಲು ಸಾಧ್ಯವೇ? ಎದುರಿಗೆ ಜನರಿದ್ದಾರೆ ಎಂದು ಮುಖ್ಯಮಂತ್ರಿ ಉತ್ತರಕುಮಾರನ ಪೌರುಷ ತೋರಿಸಿದ್ದಾರೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಶನಿವಾರ ಇಲ್ಲಿ ಲೇವಡಿ ಮಾಡಿದರು.

ಮಂಡ್ಯದ ಎಸ್ಪಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಳವಳ್ಳಿಯಲ್ಲಿ ವೇದಿಕೆಗೆ ಕರೆದು ತರಾಟೆಗೆ ತೆಗೆದುಕೊಂಡಿ ದ್ದರ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ, ‘ಮುಖ್ಯಮಂತ್ರಿ ಬಗ್ಗೆ ರಾಜ್ಯದ ಯಾವ ಅಧಿಕಾರಿಗೂ ಭಯವಿಲ್ಲ. ಎದುರಿಗೆ ಸಿಕ್ಕಿದಾಗ ಬೈದರೆ ಅದರಿಂದ ಏನೂ ಲಾಭವಾಗದು ಎಂದರು.
‘ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು ಹೇಳಿರುವಂತೆ ರಾಜ್ಯ ಬಿಜೆಪಿಯಲ್ಲಿ ಗೊಂದಲ ಇರುವುದು ನಿಜ. ಇದು ಅವರೊಬ್ಬರ ಅಭಿ ಪ್ರಾಯವಲ್ಲ. ಇಡೀ ರಾಜ್ಯದ   ಪ್ರಾಮಾಣಿಕ ಕಾರ್ಯಕರ್ತರ ಅಭಿಪ್ರಾಯವಾಗಿದೆ. ಆದರೆ ನಾವು ಕಾಂಗ್ರೆಸ್ಸಿಗರಂತೆ ಅಲ್ಲ ನಮಗೆ ಹೇಳುವ ವರು ಕೇಳುವವರು ಇದ್ದಾರೆ. ಗೊಂದಲ ಸರಿಪಡಿಸಿಕೊಳ್ಳುವ ವಿಶ್ವಾಸವಿದೆ. ನಾಲ್ಕು ಜಿಲ್ಲೆಗಳ ಪಕ್ಷದ ಪದಾಧಿಕಾರಿ ಆಯ್ಕೆ ಕುರಿತಂತೆ ಗೊಂದಲವಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಿದ್ದರಾಮಯ್ಯ ಮುತ್ಸದ್ದಿಯಲ್ಲ: ಅನಂತಕುಮಾರ್‌

ಮಂಗಳೂರು: ‘ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಮಕೃಷ್ಣ ಹೆಗಡೆ, ಜೆ.ಎಚ್‌.ಪಟೇಲ್, ಎಸ್‌.ಎಂ.ಕೃಷ್ಣ ಅವರಂತಹ ಮುತ್ಸದ್ದಿ ರಾಜಕಾರಣಿ ಯಲ್ಲ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್‌ ಟೀಕಿಸಿದರು.

ಶನಿವಾರ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಹೆಗಡೆ, ಪಟೇಲ್‌ ಮತ್ತು ಕೃಷ್ಣ ಅವರಿಗೆ ರಾಜ್ಯದ ಅಭಿವೃದ್ಧಿಯ ಕುರಿತು ದೂರದೃಷ್ಟಿ ಇತ್ತು. ಕೇಂದ್ರದಲ್ಲಿ ಬೇರೆ ಪಕ್ಷದ ಸರ್ಕಾರಗಳಿದ್ದಾಗ ಅಭಿವೃದ್ಧಿಯ ದೃಷ್ಟಿಯಿಂದ ಸಹಕಾರ ನೀಡುವ ಮುತ್ಸದ್ದಿ ಗುಣ ಅವರಲ್ಲಿ ಇತ್ತು. ಈ ಕಾರಣದಿಂದಾಗಿಯೇ ಅವರ ಕಾಲದಲ್ಲಿ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆದವು’ ಎಂದರು.
‘ಸಿದ್ದರಾಮಯ್ಯ ಅವರಿಗೆ ರಾಜ್ಯ ಅಭಿವೃದ್ಧಿ ಹೊಂದುವುದು ಬೇಕಿಲ್ಲ. ಅನಗತ್ಯ ವಿಚಾರಗಳಿಗೆ ಕೇಂದ್ರ ಸರ್ಕಾರದ ಜೊತೆ ಕಾಲು ಕೆರೆದು ಜಗಳಕ್ಕೆ ಬರುತ್ತಾರೆ. ಕೇಂದ್ರ ಸರ್ಕಾರದ ಅನುದಾನದ ಯೋಜನೆಗಳ ಅನುಷ್ಠಾನಕ್ಕೆ ನಿರಂತರವಾಗಿ ಅಡ್ಡಗಾಲು ಹಾಕುತ್ತಿದ್ದಾರೆ. ರಾಜ್ಯದ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಸರ್ಕಾರ ಮತ್ತು ನೆರೆಯ ರಾಜ್ಯಗಳ ಮುಖ್ಯಮಂತ್ರಿಗಳ ಸಹಕಾರ ಪಡೆಯುವ ಮನಸ್ಸು ಇಲ್ಲ. ನಿತ್ಯವೂ ಕೇಂದ್ರ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುವುದೇ ಅವರ ಕಾಯಕವಾಗಿದೆ’ ಎಂದು ವಾಗ್ದಾಳಿ ನಡೆಸಿದರು.

ಮತ್ತೆ ಬಿಜೆಪಿ ಅಧಿಕಾರಕ್ಕೆ: ‘2018ರ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳೊಂದಿಗೆ ಬಿಜೆಪಿ ಮತ್ತೆ ರಾಜ್ಯ ದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾ ಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಭ್ರಷ್ಟಾಚಾರದಿಂದ ಜನ ರೋಸಿ ಹೋಗಿದ್ದಾರೆ. ಕಾಂಗ್ರೆಸ್ ವಿರುದ್ಧ ಸಿಟ್ಟು ಹೊರಹಾಕಲು ಜನರು ಕಾದಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ಅವರು ಪಕ್ಷ ಸಂಘಟನೆಗಾಗಿ  ಕೆಲಸ ಮಾಡುತ್ತಿದ್ದಾರೆ. ಪಕ್ಷದಲ್ಲಿ ಯಾವ ಸಮಸ್ಯೆಯೂ ಇಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT