ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿಗೆ ಭರ್ಜರಿ ಗೆಲುವು

Last Updated 22 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪಂದ್ಯದ ಮೊದಲರ್ಧ ದಿಂದಲೇ ಗೋಲಿನ ಮಳೆ ಸುರಿಸಿದ ಹಾಲಿ ಚಾಂಪಿಯನ್ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡದವರು ಐ ಲೀಗ್ ಟೂರ್ನಿಯ ಡಿಎಸ್‌ಕೆ ಶಿವಾಜಿಯನ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವು ಪಡೆದಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಸುನಿಲ್‌ ಚೆಟ್ರಿ ನಾಯಕತ್ವದ ಬಿಎಫ್‌ಸಿ 7–0 ಗೋಲುಗಳಿಂದ ಜಯಭೇರಿ ಮೊಳಗಿಸಿತು. ಕ್ಲಬ್ ಆರಂಭವಾದ ಬಳಿಕ ಬೆಂಗಳೂರಿನ ತಂಡ ಪಡೆದ ಹೆಚ್ಚು ಗೋಲುಗಳ ಅಂತರದ ಗೆಲುವು ಇದಾಗಿದೆ.

ಟೂರ್ನಿಯುದ್ದಕ್ಕೂ ಉತ್ತಮ ಆಟವಾಡಿರುವ ಚೆಟ್ರಿ ಅವರ ಕಾಲ್ಚಳಕದ ಸೊಬಗು ಇಲ್ಲಿಯೂ ಮುಂದುವರಿ ಯಿತು. 20ನೇ ನಿಮಿಷದಲ್ಲಿ  ಗೋಲು ಗಳಿಸಿ  ಆರಂಭಿಕ ಮುನ್ನಡೆ ತಂದು ಕೊಟ್ಟರು. ನಂತರದ ಸರದಿ ಅಲ್ವಿನ್‌ ಜಾರ್ಜ್ ಅವರದ್ದಾಯಿತು. ಜಾರ್ಜ್‌ 22ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದ್ದರಿಂದ ಎದುರಾಳಿ ತಂಡದವರು ಒತ್ತಡಕ್ಕೆ ಒಳಗಾದರು.

ನಂತರದ ಒಂಬತ್ತು ನಿಮಿಷಗಳ ಅವಧಿಯಲ್ಲಿ ಮತ್ತೆ ಎರಡು ಗೋಲುಗಳು ಬಿಎಫ್‌ಸಿ ತಂಡದ ಖಾತೆ ಸೇರಿದ್ದರಿಂದ ತವರಿನ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಇದಕ್ಕೆ ಕಾರಣವಾಗಿದ್ದು ಯೂಜಿನ್‌ಸನ್‌ ಲಿಂಗ್ಡೊ (25ನೇ ನಿಮಿಷ) ಮತ್ತು ಸೆಮಿನ್ಲೆನ್‌ ಡ್ಯಯೆಂಗೆಲ್‌  (31ನೇ ನಿಮಿಷ).

ಬಿಎಫ್‌ಸಿ ತಂಡ ಮೊದಲರ್ಧದ ಆಟ ಮುಗಿಯುವಷ್ಟರಲ್ಲಿ 4–0 ಗೋಲುಗಳ ಮುನ್ನಡೆಯೊಂದಿಗೆ ವಿರಾ ಮಕ್ಕೆ ಹೋಯಿತು. ಈ ವೇಳೆಗಾಗಲೇ ಶಿವಾಜಿಯನ್ಸ್ ತಂಡದವರು ಮಾನ ಸಿಕವಾಗಿ ಸೋತು ಹೋಗಿದ್ದರು. ಆದ್ದರಿಂದ ಎರಡನೇ ಅವಧಿಯಲ್ಲಿಯೂ ಒಂದೇ ಒಂದು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಗೋಲಿನ ಮಳೆಯ ಸಂಭ್ರಮದಲ್ಲಿದ್ದ ತವರಿನ ಆಟಗಾರರು ತಮ್ಮ ಚುರುಕಿನ ಆಟವನ್ನು ಮುಂದುವರಿಸಿದರು.

ಚೆಟ್ರಿ ಮಿಂಚು: ಎರಡನೇ ಅವಧಿಯಲ್ಲಿ  ಚೆಟ್ರಿ ತಮ್ಮ ಎರಡನೇ ಗೋಲು ಗಳಿಸಿದರು. 66ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು.

ಇನ್ನುಳಿದ ಎರಡು ಗೋಲುಗಳನ್ನು ಸಿ.ಕೆ. ವಿನೀತ್‌ (78ನೇ ನಿಮಿಷ) ಮತ್ತು ಸಂದೇಶ್‌ ಜಿಂಗನ್‌ (90 ನೇ ನಿಮಿಷ) ತಂದುಕೊಟ್ಟರು. ಈ ಗೆಲುವಿನ ಮೂಲಕ ಬಿಎಫ್‌ಸಿ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿತು. ತಂಡ 17 ಪಂದ್ಯಗಳನ್ನಾಡಿದ್ದು 27 ಪಾಯಿಂಟ್ಸ್‌ ಹೊಂದಿದೆ. ಶಿವಾಜಿಯನ್ಸ್‌ ಕೂಡ ಇಷ್ಟೇ ಪಂದ್ಯಗಳನ್ನಾಡಿದ್ದು 17 ಪಾಯಿಂಟ್ಸ್‌ ಕಲೆ ಹಾಕಿದೆ.

ಐ ಲೀಗ್ ಟೂರ್ನಿಯಲ್ಲಿ ಎರಡು ಸಲ ಚಾಂಪಿಯನ್‌ ಮತ್ತು ಒಂದು ಸಲ ರನ್ನರ್ಸ್ ಅಪ್‌ ಸ್ಥಾನ ಪಡೆದಿರುವ ಬಿಎಫ್‌ಸಿ ಈ ಬಾರಿ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಈಗಾಗಲೇ ಕಳೆದು  ಕೊಂಡಿದೆ. ಆದರೆ ಉಳಿದ ಪಂದ್ಯಗಳಲ್ಲಿ ಜಯ ಸಾಧಿಸುವುದಷ್ಟೇ ತಂಡದ ಮುಂದಿರುವ ಗುರಿಯಾಗಿದೆ.

ಇದೇ ಕ್ರೀಡಾಂಗಣದಲ್ಲಿ ಏಪ್ರಿಲ್‌ 29ರಂದು ನಡೆಯಲಿರುವ ಪಂದ್ಯದಲ್ಲಿ ಬಿಎಫ್‌ಸಿ ಹಾಗೂ ಚರ್ಚಿಲ್‌ ಬ್ರದರ್ಸ್ ತಂಡಗಳು ಪೈಪೋಟಿ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT