ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾರಣೆಗೆ ಜನಬೆಂಬಲ: ಜೇಟ್ಲಿ ಶ್ಲಾಘನೆ

Last Updated 22 ಏಪ್ರಿಲ್ 2017, 19:38 IST
ಅಕ್ಷರ ಗಾತ್ರ

ವಾಷಿಂಗ್ಟನ್‌:  ‘ಭಾರತದಲ್ಲಿ ಆರ್ಥಿಕ ಸುಧಾರಣೆಗಳ ಜಾರಿ ವಿಷಯದಲ್ಲಿ ಇದೇ ಮೊದಲಿಗೆ ಭಾರಿ ಪ್ರಮಾಣದಲ್ಲಿ ಜನಸಾಮಾನ್ಯರ ಬೆಂಬಲ ದೊರೆತಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶವೂ ಅದನ್ನೇ ಸೂಚಿಸುತ್ತಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.

‘ಈ ಹಿಂದಿನ ಸರ್ಕಾರಗಳು ಆರ್ಥಿಕ ಸುಧಾರಣೆಗೆ ಮುಂದಾದಾಗ ಅದರ ಹಿಂದೆ ರಾಜಕೀಯ ಲಾಬಿ ಇದೆ ಎಂದೇ ಭಾವಿಸಲಾಗುತ್ತಿತ್ತು. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ. ದೇಶದ ಜನತೆ ಸುಧಾರಣೆಗೆ ಹೆಚ್ಚು ಬೆಂಬಲ ನೀಡುತ್ತಾರೆ ಮತ್ತು ಸುಧಾರಣೆ ಬಯಸುತ್ತಾರೆ ಎನ್ನುವುದಕ್ಕೆ  ಚುನಾವಣಾ ಫಲಿತಾಂಶ ಸಾಕ್ಷಿಯಾಗಿವೆ ’ ಎಂದರು.

ಐಎಂಎಫ್‌ ಮತ್ತು ವಿಶ್ವಬ್ಯಾಂಕ್‌ ಸಭೆಯಲ್ಲಿ ಭಾಗವಹಿಸಲು ವಾಷಿಂಗ್ಟನ್‌ಲ್ಲಿರುವ ಅವರು, ಅಮೆರಿಕದಲ್ಲಿನ ಭಾರತದ ರಾಯಭಾರಿ ನವ್‌ತೇಜ್‌ ಸರಣ್‌ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು ಭಾರತಕ್ಕೆ ಎಷ್ಟು ಕಾಲಾವಕಾಶ ಬೇಕು ಎಂದು ಜಗತ್ತಿನ ಜನತೆಗೆ ಅನ್ನಿಸುವುದು ಸಹಜ. ಆ ಹಂತವನ್ನು ನಾವು ಈಗ ದಾಟಿದ್ದೇವೆ. ಜಾಗತಿಕ ಆರ್ಥವ್ಯವಸ್ಥೆ ಮಂದಗತಿಯ ಬೆಳವಣಿಗೆ ಕಾಣುತ್ತಿದ್ದರೂ ಸಹ ನಾವು ಕಳೆದ ಮೂರು ವರ್ಷಗಳಿಂದ ಶೇ 7 ರಿಂದ ಶೇ 8ರ ಮಟ್ಟದಲ್ಲಿ ಆರ್ಥಿಕ ಪ್ರಗತಿ ಸಾಧಿಸಿದ್ದೇವೆ. ನಮ್ಮ ಉಳಿದೆಲ್ಲಾ ಆರ್ಥಿಕ ಕಾರ್ಯಕ್ರಮಗಳು ಸಂಪೂರ್ಣವಾಗಿ ನಿಯಂತ್ರಣದಲ್ಲಿವೆ’ ಎಂದರು.

‘ಸರಕು ಮತ್ತು ಸೇವಾ ತೆರಿಗೆ ಜಾರಿಯಾದರೆ ಆರ್ಥಿಕ ಪ್ರಗತಿಯಲ್ಲಿ ಏರಿಕೆ ಕಂಡುಬರಲಿದೆ’ ಎಂದು  ವಿಶ್ವಾಸ ವ್ಯಕ್ತಪಡಿಸಿದರು. ‘ಜಾಗತಿಕ ಮಟ್ಟದಲ್ಲಿ ಭಾರತವು ಒಂದು ಮುಕ್ತ ಆರ್ಥಿಕತೆಯಾಗಿದೆ. ನಮ್ಮೆಲ್ಲಾ ವಲಯಗಳಲ್ಲಿಯೂ ಅಂತರರಾಷ್ಟ್ರೀಯ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ’ ಎಂದರು.

ಜಿಡಿಪಿ ಶೇ 7.5 ರಷ್ಟು  ಪ್ರಗತಿ ನಿರೀಕ್ಷೆ

‘ಜಾಗತಿಕ ಆರ್ಥವ್ಯವಸ್ಥೆಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕತೆಗಳ ಕೊಡುಗೆ ಶೇ 75 ರಷ್ಟಿದೆ.  ಅದರಲ್ಲೂ  ಭಾರತದ ಪಾತ್ರ ಮುಖ್ಯವಾಗಿದೆ’ ಎಂದು  ಜೇಟ್ಲಿ ತಿಳಿಸಿದರು. ವಾಷಿಂಗ್ಟನ್‌ ಡಿಸಿಯಲ್ಲಿ ನಡೆದ ಜಿ20 ರಾಷ್ಟ್ರಗಳ ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕ್‌ಗಳ ಗವರ್ನರ್‌ ಸಭೆಯಲ್ಲಿ ಅವರು ಮಾತನಾಡಿದರು. ‘2016–17ರಲ್ಲಿ ಭಾರತದ ಜಿಡಿಪಿ ಪ್ರಗತಿ ಶೇ 7.1 ರಷ್ಟಿತ್ತು. ಇದು 2017–18ರಲ್ಲಿ ಶೇ 7.5ಕ್ಕೆ ಏರಿಕೆಯಾಗಲಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT