ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೀರು ಸಂಗ್ರಹಕ್ಕೆ ‘ಜಾರು ಬದು’

Last Updated 23 ಏಪ್ರಿಲ್ 2017, 5:43 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಸತತ ಕೆಲ ವರ್ಷಗಳಿಂದ ಮಳೆ ಇಲ್ಲದೆ ತಾಲ್ಲೂಕಿನಲ್ಲಿ ಕುಡಿಯುವ ನೀರಿಗೂ ಜನರು ಸಂಕಷ್ಟ ಪಡುತ್ತಿದ್ದಾರೆ. ಈಗಾಗಲೆ ಕೆರೆ, ಹಳ್ಳ ಮತ್ತು ನದಿಗಳು ನೀರಿಲ್ಲದೆ ಬತ್ತಿಹೋಗಿವೆ.ಮಳೆ ನೀರು ಸಂಗ್ರಹಿಸಲು ಎಚ್ಚೆತ್ತು ಕೊಳ್ಳದಿದ್ದರೆ ಭವಿಷ್ಯದಲ್ಲಿ ನೀರಿನ ಕೊರತೆ ಜನರನ್ನು ಕಾಡುವುದು ತಪ್ಪಿ ದ್ದಲ್ಲ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮಸ್ಥರಿಗೆ ಉದ್ಯೋಗ ಕೊಡುವುದ ರೊಂದಿಗೆ ಮಳೆ ನೀರು ಸಂಗ್ರಹಕ್ಕಾಗಿ ‘ಜಾರು ಬದು’ ನಿರ್ಮಾಣ ಎಂಬ ನೂತನ ಯೋಜನೆಯನ್ನು ಕೃಷಿ ಇಲಾಖೆ, ತಾಲ್ಲೂಕು ಪಂಚಾಯ್ತಿ ಇವರ ಸಹ ಯೋಗದಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಲಕ್ಷ್ಮೇಶ್ವರ ಸಮೀಪದ ಶಿಗ್ಲಿಯಲ್ಲಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರು ಈ ಯೋಜನೆಗೆ ಚಾಲನೆ ನೀಡಿದ್ದಾರೆ.

ಏನಿದು ಯೋಜನೆ ?: ಜಾರು ಬದು ನಿರ್ಮಾಣಕ್ಕಾಗಿ ಶಿಗ್ಲಿಯ 512 ಹೆಕ್ಟೇರ್‌ ನಷ್ಟು ರೈತರ ಭೂಮಿಯನ್ನು ಆಯ್ಕೆ ಮಾಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್‌ಕಾರ್ಡ್‌ ಹೊಂದಿ ರುವ ಕೂಲಿಕಾರರಿಂದ ಈ ಹೊಲಗಳಲ್ಲಿ 10X10X1 ಅಡಿ ಅಳತೆಯ ಗುಂಡಿ ಗಳನ್ನು ಕಡಿಯಲಾಗುವುದು. ಮಳೆಗಾಲದಲ್ಲಿ ಹೊಲದಲ್ಲಿ ಬಿದ್ದ ನೀರು ವ್ಯರ್ಥ ವಾಗಿ ಹರಿದು ಹೋಗದೆ ಈ ಗುಂಡಿ ಗಳಲ್ಲಿ ನಿಲ್ಲುತ್ತದೆ. ಇದರಿಂದ ಮಳೆ ನೀರು ಹೊಲದಲ್ಲಿ ಇಂಗುವುದಲ್ಲದೆ ನೀರು ನಿಂತು ಹರಿಯುವುದರಿಂದ ಮಣ್ಣಿನ ಸವಕಳಿಯೂ ಆಗುವುದಿಲ್ಲ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಲೆಕ್ಕಾಚಾರ.

ಅಲ್ಲದೆ 512 ಹೆಕ್ಟೇರ್‌ನಲ್ಲಿ 347 ಕೋಡಿಗಳು, 22 ಕೃಷಿ ಹೊಂಡಗಳನ್ನು ನಿರ್ಮಿಸುವುದು ಸೇರಿದೆ. ಹೀಗಾಗಿ ಮಳೆ ನೀರು ಎಳ್ಳಷ್ಟೂ ವ್ಯರ್ಥವಾಗುವ ಭಯ ಇಲ್ಲ. ಅಲ್ಲದೆ ಕೃಷಿ ಅರಣ್ಯೀಕರಕ್ಕೂ ಇಲ್ಲಿ ಒತ್ತು ನೀಡಲಾಗಿದೆ. ಇದರೊಂದಿಗೆ ರೈತರು ಕೃಷಿ ಹೊಂಡಗಳಲ್ಲಿನ ನೀರು ಬಳಸಿಕೊಂಡು ಹೊಲಗಳ ಬದುವಿನ ಮೇಲೆ ಹಸಿರು ಮೇವು ಅಥವಾ ಕಾಯಿ ಪಲ್ಲೆ ಬೀಜಗಳನ್ನು ಬಿತ್ತನೆ ಮಾಡ ಬಹುದು. ಇದರಿಂದಾಗಿ ರೈತರ ಆದಾ ಯವೂ ಹೆಚ್ಚುತ್ತದೆ ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಿ.ಬಿ. ಬಾಲರೆಡ್ಡಿ ಯೋಜನೆಯ ಕುರಿತು ವಿವರಿಸುತ್ತಾರೆ.

ಯೋಜನೆ ಅನುಷ್ಠಾನಕ್ಕಾಗಿ ಬರೋ ಬ್ಬರಿ ಎರಡು ಕೋಟಿ ರೂಪಾಯಿ ಖರ್ಚಾ ಗಲಿದ್ದು ಇದರಿಂದ ಒಟ್ಟು 75 ಸಾವಿರ ಮಾನವ ಉದ್ಯೋಗಗಳು ಸೃಷ್ಟಿ ಆಗು ತ್ತವೆ ಎಂದು ಶಿರಹಟ್ಟಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿ ಕಾರಿ ಆರ್‌.ವೈ. ಗುರಿಕಾರ ಹೇಳಿದರು.‘ಜಾರು ಬದು ನಿರ್ಮಾಣ ಯೋಜನೆ ನಿಜಕ್ಕೂ ರೈತರಿಗೆ, ಕೃಷಿ ಕೂಲಿಕಾರರಿಗೆ ವರದಾನವಾಗಿದ್ದು ಇದೇ ರೀತಿ ರಾಜ್ಯದಲ್ಲೆಲ್ಲ ಈ ಯೋಜನೆ ಅನುಷ್ಠಾನ ಗೊಂಡಿದೆ. ಇದರಿಂದ ಮಳೆ ನೀರು ಸದು ಪಯೋಗವಾಗುತ್ತದೆ’ ಎಂದು ಜಿ.ಪಂ ಸದಸ್ಯ ಎಸ್‌.ಪಿ. ಬಳಿಗಾರ ಹೇಳಿದರು.

ಸಧ್ಯ ಶಿಗ್ಲಿಯಲ್ಲಿ ಜಾರು ಬದು ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು ನಿತ್ಯ 300–400 ಕಾರ್ಮಿಕರು ದುಡಿಯುತ್ತಿದ್ದಾರೆ ಎಂದು ಪಿಡಿಓ ಬಿ.ಟಿ. ಅಮ್ಮನವರ ತಿಳಿಸುತ್ತಾರೆ. ‘ಜಾರು ಬದುವು ಮಾಡುವುದರಿಂದ ರೈತರ ಹೊಲದ ಮಣ್ಣು ಹಾಳಾಗುವುದಿಲ್ಲ. ಇದರಿಂದಾಗಿ ರೈತರಿಗೆ ಭಾಳ ಅನುಕೂಲ ಅಕ್ಕೈತ್ರೀ’ ಎಂದು ರೈತ ಕೇಶವ ಗುಲ ಗಂಜಿ ಅವರ ಅನಿಸಿಕೆ. ಬರಗಾಲದಲ್ಲಿ ಗ್ರಾಮಸ್ಥರಿಗೆ ಕೆಲಸ ಕೊಡುವ ಜತೆಗೆ ಮಳೆ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಮಹತ್ವದ ಯೋಜನೆ ಇದಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT