ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಪತ್ತು ಉಳಿದಾಗ ದೇಶದ ಅಭಿವೃದ್ಧಿ ಸಾಧ್ಯ’

Last Updated 23 ಏಪ್ರಿಲ್ 2017, 6:04 IST
ಅಕ್ಷರ ಗಾತ್ರ

ನಿಪ್ಪಾಣಿ: ‘ಹೆಚ್ಚುತ್ತಿರುವ ತಾಪಮಾನ, ಕ್ಷೀಣಿಸುತ್ತಿರುವ ಅಂತರ್ಜಲ, ಅರಣ್ಯಗಳ ವಿನಾಶ, ಪ್ರಕೃತಿ ಮಾಲಿನ್ಯ ಇವುಗಳನ್ನೆಲ್ಲ ತಡೆಗಟ್ಟಿದಾಗಲೇ ದೇಶದ ನಿಜವಾದ ಬೆಳವಣಿಗೆ ಸಾಧ್ಯ’ ಎಂದು ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪಿ.ಎಸ್‌. ಕಾಂಬಳೆ ಇಲ್ಲಿ ತಿಳಿಸಿದರು.ಕೆ.ಎಲ್‌.ಇ. ಸಂಸ್ಥೆಯ ಜಿ.ಐ. ಬಾಗೇವಾಡಿ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಆಶ್ರಯದಲ್ಲಿ ಈಚೆಗೆ ಜರುಗಿದ ಯುಜಿಸಿ ಪ್ರಾಯೋಜಿತ ‘ಭಾರತದಲ್ಲಿ ಮೂಲ ಸೌಕರ್ಯಗಳ ಬೆಳವಣಿಗೆ ಮತ್ತು ಸವಾಲುಗಳು’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಭಾರತ ದೇಶವು ಮೂಲ ಸೌಕರ್ಯಗಳ ಪೂರೈಕೆಯ ಪಥದಲ್ಲಿ ಪ್ರಗತಿಯತ್ತ ದಾಪುಗಾಲು ಇಡುತ್ತಿದೆ. ಅದಕ್ಕಾಗಿ ಹೇರಳ ಹಣವನ್ನು ವಿವಿಧ ಯೋಜನೆಗಳ ಮೂಲಕ ಆರ್ಥಿಕ ಉನ್ನತಿಯನ್ನು ಸಾಧಿಸಲು ಜಾಗತಿಕ ಮಟ್ಟದಲ್ಲಿ ಪ್ರಗತಿಪರ ದೇಶಗಳೊಂದಿಗೆ ಸ್ಪರ್ಧೆಗಿಳಿದಿದೆ’ ಎಂದರು.‘ಪ್ರಸ್ತುತ ಭಾರತದಲ್ಲಿನ ಬೆರಳೆಣಿಕೆಯ ರಾಜ್ಯಗಳನ್ನು ಹೊರತುಪಡಿಸಿ ಇನ್ನುಳಿದ ರಾಜ್ಯಗಳಲ್ಲಿ ಶಿಕ್ಷಣ ಸಂಸ್ಥೆಯ ಮತ್ತು ಜನಸಂಖ್ಯೆಯ ಅನುಪಾತದಲ್ಲಿ ಬಹುದೊಡ್ಡ ಅಂತರವಿದೆ. ಉನ್ನತ ಶಿಕ್ಷಣಕ್ಕೆ ಪ್ರವೇಶಾತಿ ಸಂಖ್ಯೆ ತೃಪ್ತಿಕರವಾಗಿಲ್ಲ ಹಾಗೂ ಮಧ್ಯದಲ್ಲಿಯೇ ಶಿಕ್ಷಣ ತ್ಯಜಿಸುವ, ಸೌಲಭ್ಯಗಳು ಲಭಿಸದೆ ಶಿಕ್ಷಣ ವಂಚಿತರಾಗುವವರ ಸಂಖ್ಯೆ ಬಹುದೊಡ್ಡದಿದೆ.ಶೇ 80ರಷ್ಟು ಜನ ಕುಡಿಯುವ ನೀರಿಗಾಗಿ ಸಾರ್ವಜನಿಕ ನಲ್ಲಿಗಳನ್ನೆ ಅವಲಂಬಿಸಿದ್ದಾರೆ.

ನಗರಗಳು ಅಭಿವೃದ್ಧಿಯಾಗುತ್ತಿವೆ ಹೊರತು ಹಳ್ಳಿಗಳಿನ್ನೂ ಆಧುನೀಕರಣದಿಂದ ಬಹುದೂರ ನಿಂತಿವೆ. ವ್ಯವಸಾಯ ಉದ್ದಿಮೆಯಾಗಿ ಬೆಳೆಯುವಲ್ಲಿ ವೈಫಲ್ಯತೆಯನ್ನು ಅನುಭವಿಸುತ್ತಿದೆ. ಇಂತಹ ಕೊರತೆಗಳನ್ನು ನೀಗುವಲ್ಲಿ ನಾವು ಹೆಚ್ಚು ಗಮನ ಹರಿಸಬೇಕಾಗಿದೆ ಮತ್ತು ಪರಿಹಾರ ಕಂಡುಕೊಳ್ಳಲು ಶ್ರಮ ವಹಿಸಬೇಕಿದೆ’ ಎಂದು ಸಲಹೆ ನೀಡಿದರು.ಮೊದಲ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಪಿ.ಎಸ್‌. ಕಾಂಬಳೆ ಹಾಗೂ ಕೆ.ಎಲ್‌.ಇ. ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ಡಾ. ಎ.ವಿ. ಕುಲಕರ್ಣಿ ನೇತೃತ್ವ ವಹಿಸಿ ಕಾರ್ಯನಿರ್ವಹಿಸಿದರು.

ಎರಡನೇ ಗೋಷ್ಠಿಯಲ್ಲಿ ಪ್ರೊ. ಪಿ.ಜಿ. ಕೊಣ್ಣೂರ ಮತ್ತು ರಾಮದುರ್ಗದ ಬೆಂಬಳಗಿ ಮಹಾವಿದ್ಯಾಲಯದ ಪ್ರೊ.ಎಸ್‌.ಎಂ. ಸಕ್ರಿಯವರ ನೇತೃತ್ವದಲ್ಲಿ ಪ್ರಬಂಧ ಮಂಡಿಸಲಾಯಿತು.ವಿವಿಧ ಮಹಾವಿದ್ಯಾಲಯಗಳ 115 ಪ್ರತಿನಿಧಿಗಳು ಪಾಲ್ಗೊಂಡಿದ್ದರು. 45 ಪ್ರಬಂಧಗಳನ್ನು ಪ್ರಾಧ್ಯಾಪಕರುಗಳು ಹಾಗೂ 15 ಪ್ರಬಂಧಗಳನ್ನು ವಿದ್ಯಾರ್ಥಿಗಳು ಮಂಡಿಸಿದರು.

ಚಿಕ್ಕೋಡಿಯ ಎ.ಎ. ಪಾಟೀಲ ಮಹಿಳಾ ಪದವಿ ಮಹಾವಿದ್ಯಾಲಯದ ಡಾ. ಎ.ಡಿ. ಕುಲಕರ್ಣಿ, ಸಂಕೇಶ್ವರದ ಎಸ್‌.ಎಸ್‌. ಕಲಾ ಮತ್ತು ಟಿ.ಪಿ. ವಿಜ್ಞಾನ ಮಹಾವಿದ್ಯಾಲಯದ ಪ್ರೊ. ವಿ.ಎಂ. ಮಗದುಮ್‌, ಹುಕ್ಕೇರಿಯ ಎಸ್‌.ಎಸ್‌.ಎನ್‌. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರೊ. ಪಿ.ಜಿ. ಕೊಣ್ಣೂರ, ಬೆಳಗಾವಿಯ ಗೋಗಟೆ ಮಹಾವಿದ್ಯಾಲಯದ ವಿದ್ಯಾರ್ಥಿ ವಿಶಾಲಗೌಡ ಪಾಟೀಲ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.ಪ್ರಾಚಾರ್ಯ ಡಾ. ಎಂ.ಬಿ. ಕೋಥಳೆ ಅಧ್ಯಕ್ಷತೆ ವಹಿಸಿದ್ದರು. ಶೃತಿ ಹಳೆಮನಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಗೀತಾ ಕಮತೆ ಮತ್ತು ಪ್ರೊ. ಶುಭಂ ಕುಲಕರ್ಣಿ ಸ್ವಾಗತಿಸಿ ನಿರೂಪಿಸಿದರು. ಪ್ರೊ. ಸದಾನಂದ ಕುರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT