ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಪು ನೀಡುವ ಖಾನಾಪುರ ಮಣ್ಣಿನ ಮಡಕೆ

Last Updated 23 ಏಪ್ರಿಲ್ 2017, 6:07 IST
ಅಕ್ಷರ ಗಾತ್ರ

ಖಾನಾಪುರ: ಬಿಸಿಲು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹೊತ್ತಿನಲ್ಲಿ ಪಟ್ಟಣ ಸೇರಿದಂತೆ ಖಾನಾಪುರ ತಾಲ್ಲೂಕಿನ ಕುಂಬಾರ ಕುಟುಂಬಗಳು ಕೈಯಿಂದ ನಿರ್ಮಿಸಿದ ಮಣ್ಣಿನ ಲಸ್ಸಿ ಹಾಗೂ ಕುಲ್ಫಿ ಮಡಕೆಗಳು ಹೊಟ್ಟೆಗೆ ತಂಪು ನೀಡುವ ಪದಾರ್ಥಗಳನ್ನು ಪೂರೈಸಲು ನೆರವಾಗುತ್ತಿವೆ.

ತಾಲ್ಲೂಕಿನ ನೂರಾರು ಕುಂಬಾರ ಕುಟುಂಬಗಳು ಅನಾದಿ ಕಾಲ ದಿಂದಲೂ ಮಣ್ಣಿನ ಉತ್ಪನ್ನಗಳನ್ನು ತಯಾರು ಮಾಡುವಲ್ಲಿ ನಿಷ್ಣಾತವಾಗಿವೆ. ನಗರ ಪ್ರದೇಶದ ಮನೆಗಳಲ್ಲಿ, ಹೋಟೆಲ್, ರೆಸ್ಟೋರೆಂಟ್, ಕೋಲ್ಡ್ ಪಾರ್ಲರ್‌ಗಳಲ್ಲಿ ಮಣ್ಣಿನ ಮಡಕೆಗಳಲ್ಲಿ ಸಂಗ್ರಹಿಸಿದ ಕೆನೆಮೊಸರು, ಕುಲ್ಫಿ, ಐಸ್ ಕ್ರೀಂ ಮತ್ತು ಲಸ್ಸಿಗಳಂತಹ ತಂಪು ಪದಾರ್ಥಗಳಿಗೆ ಈ ದಿನಗಳಲ್ಲಿ ಬೇಡಿಕೆಯಿದ್ದು, ಇದನ್ನು ಮನಗಂಡ ಕುಂಬಾರರು ಮಡಕೆಗಳ ತಯಾರಿಕೆ ಯಲ್ಲಿ ತೊಡಗಿದ್ದಾರೆ.

ತಾಲ್ಲೂಕಿನ ಗರ್ಲಗುಂಜಿ, ಶಿಂಗಿನಕೊಪ್ಪ, ವಿಶ್ರಾಂತವಾಡಿ, ಖಾನಾಪುರ, ಡುಕ್ಕರವಾಡಿ ಮತ್ತಿತರ ಕಡೆಗಳಲ್ಲಿ ಮಾರುಕಟ್ಟೆಯ ಬೇಡಿಕೆಯ ಅನುಸಾರ ವಿವಿಧ ಪ್ರಕಾರ ಮತ್ತು ಗಾತ್ರಗಳಲ್ಲಿ ಕುಂಬಾರರ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಕುಲ್ಫಿ ಮಡಕೆಗಳ ಜೊತೆಯಲ್ಲೇ ವಿವಿಧ ಬಗೆಯ ಮುಖವಾಡಗಳು, ಪೆನ್ ಸ್ಟ್ಯಾಂಡ್, ಗಣೇಶನ ಆಲಂಕಾರಿಕ ವಿಗ್ರಹಗಳು, ಆಟಿಕೆ ಸಾಮಾನುಗಳು, ಮಹಿಳೆ ಮತ್ತು ಪುರುಷನ ಆಕೃತಿ, ಹ್ಯಾಪಿ ಮ್ಯಾನ್, ಭಿನ್ನ ವಿಭಿನ್ನ ಪ್ರಣತಿಗಳು, ದೀಪಗಳು, ಸೂರ್ಯನ ಆಕೃತಿ, ತತ್ರಾಣಿ, ಗೋಡೆಗೆ ತೂಗು ಹಾಕುವ ಆಲಂಕಾರಿಕ ವಸ್ತು ಗಳು, ಕಚೇರಿಗಳು, ವಿದ್ಯಾರ್ಥಿಗಳ ಅಭ್ಯಾಸ ಕೊಠಡಿ, ವಿಐಪಿ ಲಾಂಜ್ ಮತ್ತಿತರ ಕಡೆಗಳಲ್ಲಿ ಅಲಂಕಾರಕ್ಕಾಗಿ ಇಡುವ ಮಣ್ಣಿನ ಉತ್ಪನ್ನಗಳನ್ನು ತಯಾರಿಸುವಲ್ಲಿಯೂ ತಾಲ್ಲೂಕಿನ ಕುಂಬಾರ ಕುಟುಂಬ ಪರಿಣತಿ ಹೊಂದಿದ್ದಾರೆ.

ಖಾನಾಪುರದಲ್ಲಿ ತಯಾರಾಗುವ ಮಣ್ಣಿನ ಉತ್ಪನ್ನಗಳಿಗೆ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಅಪಾರವಾದ ಬೇಡಿಕೆಯಿದೆ. ದೂರದ ಊರುಗಳಿಂದ ತಮ್ಮನ್ನು ಹುಡುಕಿ ಕೊಂಡು ಇಲ್ಲಿಗೆ ಬರುವ ಗ್ರಾಹಕರು ಮುಂಗಡ ಹಣ ನೀಡಿ ತಮ್ಮ ಉದ್ಯಮಕ್ಕೆ ಅವಶ್ಯವಿರುವ ಉತ್ಪನ್ನ ಗಳನ್ನು ತಯಾರಿಸಲು ಆರ್ಡರ್ ನೀಡುತ್ತಾರೆ. ಬೇರೆಡೆ ಸಿಗದ ಅಪರೂಪದ ಮಣ್ಣಿನ ಉತ್ಪನ್ನಗಳ ತಯಾರಿಕೆಗೆ ಹೆಸರುವಾಸಿಯಾಗಿದ್ದು, ಈ ಉದ್ಯಮ ತಮಗೆ ನೆಮ್ಮದಿ ತಂದಿದೆ ಎಂದು ಗರ್ಲಗುಂಜಿಯ ಕುಂಬಾರ ವಿನಾಯಕ ಕುಂಬಾರ ತಿಳಿಸಿದರು.ನೇಪಥ್ಯಕ್ಕೆ ಸರಿಯುತ್ತಿರುವ ಕುಂಬಾರಿಕೆ ಉದ್ಯಮವನ್ನು ಉಳಿಸಿ ಬೆಳೆಸಬೇಕು ಎಂಬುದು ಕುಂಬಾರರ ಕಳಕಳಿಯ ಮನವಿಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT