ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರಿನಿಂದ ಕಂಗೊಳಿಸುವ ದಕ್ಷಿಣಕಾಶಿ..

Last Updated 23 ಏಪ್ರಿಲ್ 2017, 6:31 IST
ಅಕ್ಷರ ಗಾತ್ರ

ಬಾದಾಮಿ ಸಮೀಪದ ಹಳೆ ಮಹಾ ಕೂಟ ಮತ್ತು ಹೊಸ ಮಹಾಕೂಟೇಶ್ವರ ದೇವಾಲಯದ ಪರಿಸರದಲ್ಲಿ ಬೇಸಿಗೆ ಯಲ್ಲಿಯೂ ಹೊಂಡಗಳು ಭರ್ತಿಯಾಗಿ ತುಂಬಿ ಹರಿಯುತ್ತವೆ. ಭಕ್ತರ ಹೃದಯವೂ ಸಹ ಭಕ್ತಿಯಿಂದ ತುಂಬಿ ಹರಿಯುವಂತಿದೆ. ಹೊಸ ಮಹಾಕೂಟೇಶ್ವರ ದೇವಾ ಲಯದ ಪಕ್ಕದಲ್ಲಿ ವಿಶಾಲವಾದ ಆಯ ತಾಕಾರದ ಹೊಂಡ ಮತ್ತು ಚಿಕ್ಕ ಕಾಶಿ ಹೊಂಡ, ಅಡಿಕೇಶ್ವರ ದೇವಾಲಯದ ಹೊಂಡ ಮತ್ತು ಹಳೆ ಮಹಾಕೂಟದ ಆಯತಾಕಾರದ ವಿಶಾಲವಾದ ಹೊಂಡ ಗಳು 4ರಿಂದ 5 ಅಡಿ ನೀರು ಸಂಗ್ರಹ ವಾಗಿ ಭರ್ತಿಯಾಗಿ  24 ಗಂಟೆ ಕಾಲ ಕಾಲುವೆಯ ಮೂಲಕ ತುಂಬಿ ಹರಿಯುತ್ತವೆ.

6 ನೇ ಶತಮಾನದಲ್ಲಿ ಚಾಲುಕ್ಯ ಅರಸರು ನಿರ್ಮಿಸಿದ ಈ ಹೊಂಡಗಳ ನೀರು 21ನೇ ಶತಮಾನದಲ್ಲಿಯೂ ಬೇಸಿಗೆಯಲ್ಲಿ ತುಂಬಿ ಹರಿಯುತ್ತವೆ. ಈ ಹೊಂಡ ಎಂದೂ ಬತ್ತಿಲ್ಲ. ಚಾಲುಕ್ಯರ ಕಾಲದ ಭೂಗರ್ಭ ಶಾಸ್ತ್ರಜ್ಞರ ಜ್ಞಾನವು ಅನನ್ಯವಾಗಿದೆ ಎಂದು ತಿಳಿಯ ಬಹುದು. ಈ ಭಾಗದ ರೈತರ, ಜನತೆಯ ಮತ್ತು ದೇವಾಲಯದ ಭಕ್ತರ ಅದೃಷ್ಟವೆಂದೇ ಹೇಳಬೇಕು.2007 ಮತ್ತು 2009ರಲ್ಲಿ ತಾಲ್ಲೂಕಿನಲ್ಲಿ ಭಾರಿ ಮಳೆಯಿಂದ ನೆರೆ ಪ್ರವಾಹ  ಉಂಟಾಗಿ ಜನರ ಬದುಕನ್ನು ಮೂರಾಬಟ್ಟೆ ಮಾಡಿತು.  ನಂತರದ ವರ್ಷದಲ್ಲಿ ಮಳೆ ಕಡಿಮೆಯಾಗುತ್ತ ಬಂದು ಕಳೆದ ವರ್ಷ ಅತಿ ಕಡಿಮೆ ಮಳೆಯಾಯಿತು.

ಏಳು ವರ್ಷಗಳ ಮಳೆ ಕೊರತೆ ಯಿಂದ ಬಾದಾಮಿ ಪರಿಸರದಲ್ಲಿದ್ದ ಬನಶಂಕರಿ ದೇವಾಲಯದ  ಹರಿದ್ರಾ ತೀರ್ಥ ಹೊಂಡ, ಸರಸ್ವತಿ ಹಳ್ಳ, ಜಿಲ್ಲೆಯಲ್ಲಿಯೇ ದೊಡ್ಡ  ಕೆಂದೂರ ಕೆರೆ ಮತ್ತು ಗ್ರಾಮೀಣ ಪ್ರದೇಶದ ಎಲ್ಲ ಕೆರೆಗಳು, ತೆರೆದ ಬಾವಿಗಳು ಬತ್ತಿದವು. ತಾಲ್ಲೂಕಿನಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಮತ್ತು ರೈತರು ಹೊಲದಲ್ಲಿ ಕೊರೆಯಿಸಿದ್ದ ಅನೇಕ ಬಾವಿಗಳ ಅಂತರ್ಜಲಮಟ್ಟ ಕಡಿಮೆ ಯಾಗಿ ಬತ್ತಿ ಹೋಗಿವೆ.

ಆದರೆ ಅನೇಕ ವರ್ಷಗಳಿಂದ ಸರಿಯಾಗಿ ಮಳೆಯಾಗದಿದ್ದರೂ ಮಹಾ ಕೂಟ ಪರಿಸರದ ಹೊಂಡಗಳು ಭರ್ತಿ ಯಾಗಿ ಹರಿಯುತ್ತಿರುವುದು ಜನತೆಗೆ ಮತ್ತು ಭಕ್ತ ಸಮೂಹಕ್ಕೆ ಸಂತಸ ಮತ್ತು ಸೋಜಿಗದ ಸಂಗತಿಯಾಗಿದೆ.ಚಾಲುಕ್ಯ ಅರಸರು ದೇವಾಲಯದ ಪಕ್ಕದಲ್ಲಿ ಹೊಂಡಗಳನ್ನು ನಿರ್ಮಿಸಿದ ಬಗ್ಗೆ ಮಂಗಳೇಶನ  ಶಾಸನದಲ್ಲಿ ಉಲ್ಲೇಖಿಸಿದಂತೆ ವಿಶಾಲವಾದ ದೊಡ್ಡ ಹೊಂಡಕ್ಕೆ ‘ದೇವದ್ರೋಣಿ’ ಎಂದು ಬಳಸಲಾಗಿದೆ.  ಸಂಗಮೇಶ್ವರ ದೇವಾ ಲಯ ಪಕ್ಕದಲ್ಲಿರುವ ವಿಶಾಲವಾದ ಹೊಂಡದಲ್ಲಿ ಚತುರ್ಮುಖ (ಬ್ರಹ್ಮ) ಶಿವಲಿಂಗ ಕಲ್ಲಿನ ಮಂಟಪವು ನೀರಿನಲ್ಲಿ ತೇಲುತ್ತಿರುವಂತಿದೆ. ಮೊದಲನೇ ಪುಲಿಕೇಶಿ ಕಾಲದಲ್ಲಿ ನಿರ್ಮಿಸಿರ ಬಹುದು ಎಂದು ಇತಿಹಾಸ ತಜ್ಞರು ಹೇಳುವರು.

ಮಹಾಕೂಟೇಶ್ವರ ದೇವಾಲಯ ವನ್ನು ಉತ್ತರ, ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಬೆಟ್ಟಗಳ ಇಳಿಜಾರು ಕಣಿವೆ ಪ್ರದೇಶದ ಪೂರ್ವ ದಿಕ್ಕಿನಲ್ಲಿ ನಿರ್ಮಿಸಿ ದ್ದಾರೆ. ದೇವಾಲಯದ ಪರಿಸರದ ಮೇಲಿನ ಭಾಗದಲ್ಲಿ ಅಂದಾಜು 30 ಕಿ.ಮೀ. ಬೆಟ್ಟದಿಂದ ಆವರಿಸಿದೆ. ಈ ಬೆಟ್ಟದಲ್ಲಿ ನೂರಾರು ಆಯುರ್ವೇದ ಔಷಧಿ ಸಸ್ಯಗಳನ್ನು ಕಾಣಬಹುದಾಗಿದೆ. ಬೆಟ್ಟದ ಕಲ್ಬಂಡೆಗಳ ಗರ್ಭದಿಂದ ನೀರು ಹರಿದು ಇಲ್ಲಿನ ಹೊಂಡಗಳಿಗೆ  ಸಂಗ್ರಹ ವಾಗುತ್ತದೆ.

ಹೊಂಡದಿಂದ ವರ್ಷದುದ್ದಕ್ಕೂ ಕಾಲುವೆ ಮೂಲಕ ನೀರು ಹರಿದು ರೈತರ ಹೊಲಗಳು ಹಸಿರಾಗಿವೆ. ಸುತ್ತ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಬಾಳೆ, ತೆಂಗು, ಕಬ್ಬು, ಎಲೆಬಳ್ಳಿ ಮತ್ತಿತರ ತೋಟಗಾರಿಕೆ ಬೆಳೆಯನ್ನು ಬೆಳೆಯುತ್ತಿದ್ದಾರೆ. ಸುತ್ತ ಹಸಿರಿನಿಂದ ಕಂಗೊಳಿಸಿ ಪ್ರವಾಸಿಗರನ್ನು ಆಕರ್ಷಿಸಿದೆ.ದೇವಾಲಯಕ್ಕೆಬರುವ ಭಕ್ತರು ಹೊಂಡದ ನೀರನ್ನು ತೀರ್ಥದ ರೂಪ ದಲ್ಲಿ ಹಿತ್ತಾಳೆಯ ತಿರುಗಿಸುವ ತಂಬಿಗೆ ಯಲ್ಲಿ ಪ್ರತಿ ಅಮಾವಾಸ್ಯೆಯಲ್ಲಿ ತುಂಬಿ ಕೊಂಡು ಹೋಗಿ ಬರುವ ಅಮಾವಾಸ್ಯೆಯವರೆಗೆ ಮನೆಯಲ್ಲಿ ಪೂಜಿಸಿ ತೀರ್ಥವನ್ನು ಸೇವಿಸುವ ಪದ್ಧತಿ ಇನ್ನೂ ಉಳಿದಿದೆ.

ಈಗ ದೇವಾಲಯದ  ಪಕ್ಕದಲ್ಲಿ ಬಾಟಲಿಯಲ್ಲಿ ಹೊಂಡದ ತೀರ್ಥವನ್ನು ಮಾರಾಟ ಮಾಡು ತ್ತಿದ್ದಾರೆ.ಇಲ್ಲಿ ವಿಶಾಲವಾಗಿ ಬೆಳೆದ ಆಲದ ಮರಗಳು ನೂರಾರು ವರ್ಷಗಳಿಂದ ನೆರಳು, ಸುತ್ತಲಿನ ಹಸಿರು ಸೌಂದರ್ಯ ದಿಂದ ಪ್ರವಾಸಿಗರಿಗೆ ಇದೊಂದು ಪ್ರಶಾಂತವಾದ ನಿಸರ್ಗ ಧಾಮವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT