ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಕೊರತೆ, ವಿದ್ಯುತ್‌ ಅಸಮರ್ಪಕ ಪೂರೈಕೆ

Last Updated 23 ಏಪ್ರಿಲ್ 2017, 6:46 IST
ಅಕ್ಷರ ಗಾತ್ರ

ಬಳ್ಳಾರಿ: ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಪೈಕಿ ಹಲವೆಡೆ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಮೂಲಸೌಕರ್ಯವಿಲ್ಲದೆ ಜನಬಳಕೆಗೆ ದೊರಕದ ಪರಿಸ್ಥಿತಿಯಲ್ಲಿವೆ. ಕೊಳವೆಬಾವಿಗಳು ವಿಫಲವಾದ ಪರಿಣಾಮ ಹೊಸ ಕೊಳವೆಬಾವಿ ಕೊರೆದರೂ ನೀರು ಸಿಗುವ ಖಚಿತತೆ ಇಲ್ಲವಾಗಿದೆ. ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆಯಬೇಕೆಂದರೆ, ಅಲ್ಲಿಯೂ ನೀರಿನ ಇಳುವರಿಯ ಕುರಿತು ಭರವಸೆ ಇಲ್ಲವಾಗಿದೆ...ನಗರದ ತಾಲ್ಲೂಕು ಪಂಚಾಯಿತಿಯಲ್ಲಿ ಶನಿವಾರ ನಡೆದ ಕೆಡಿಪಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪ್ರಸ್ತಾಪವಾದ ಸಂಗತಿಗಳಿವು.

‘ಬೆಳಗಲ್ಲು ಪಂಚಾಯಿತಿಯ ಹರಗಿನಡೋಣಿಯಲ್ಲಿ ಕೊಳವೆಬಾವಿಗಳು ಬತ್ತಿವೆ. ತೊಟ್ಟಿ ನಿರ್ಮಿಸಿ ನೀರು ಶೇಖರಿಸುವ ಪ್ರಯತ್ನವೂ ಕೈಗೂಡಿಲ್ಲ. ಎಂಟು ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದರೂ ನೀರಿನ ಕೊರತೆ ನೀಗಿಸಲು ಆಗಿಲ್ಲ’ ಎಂದು ಅಭಿವೃದ್ಧಿ ಅಧಿಕಾರಿ ಅಸಹಾಯಕತೆ ವ್ಯಕ್ತಪಡಿಸಿದರು.‘ಬೆಳಗಲ್ ತಾಂಡಾದಲ್ಲಿರುವ ನೀರಿನ ಘಟಕಕ್ಕೆ ಕಚ್ಚಾ ನೀರು ಪೂರೈಸಲು ಆಗುತ್ತಿಲ್ಲ’ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಕಾರ್ಯನಿರ್ವಾಹಕ ಅಧಿಕಾರಿ ಜಾನಕಿರಾಂ, ‘ಟ್ಯಾಂಕರ್‌ ಮೂಲಕ ನೀರು ಪೂರೈಸಿ’ ಎಂದು ಸೂಚಿಸಿದರು.
‘ಕೊಳಗಲ್‌ ಪಂಚಾಯಿತಿ ವ್ಯಾಪ್ತಿಯ ಕೃಷ್ಣಾನಗರ ಕ್ಯಾಂಪ್‌ನಲ್ಲಿರುವ ನೀರಿನ ಘಟಕದ ಮೆಂಬರಿನ್‌ನಿಂದ ಸೋರಿಕೆಯಾಗಿ ಘಟಕದ ತುಂಬ ನೀರು ತುಂಬುತ್ತಿದೆ’ ಎಂದು ಮತ್ತೊಬ್ಬ ಅಧಿಕಾರಿ ದೂರಿದರು.

‘ಬಾದನಹಟ್ಟಿ ಪಂಚಾಯಿತಿಯಲ್ಲಿ ವಿದ್ಯುತ್‌ ಪೂರೈಕೆ ಕೇವಲ ಏಳು ಗಂಟೆ ಇರುವುದರಿಂದ ಎಲ್ಲರಿಗೂ ಶುದ್ಧ ಕುಡಿಯುವ ನೀರು ಪೂರೈಸಲು ಆಗುತ್ತಿಲ್ಲ’ ಎಂದು ಅಧಿಕಾರಿ ಅಸಹಾಯಕತೆ ವ್ಯಕ್ತಪಡಿಸಿದರು.‘ನೀರಿನ ಘಟಕದ ಮೆಂಬರಿನ್‌, ಮೋಟರ್‌ ಎರಡನ್ನೂ ಬದಲಾಯಿಸಬೇಕು’ ಎಂದು ಚಾನಾಳ್‌ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನವಿ ಮಾಡಿದರು.  ‘ನೀರಿನ ಘಟಕವನ್ನು ಸರಿಯಾಗಿ ಪ್ರತಿಷ್ಠಾಪಿಸಿಲ್ಲ. ಒಂದು ಕಿ.ಮೀ ದೂರದಿಂದ ಘಟಕಕ್ಕೆ ನೀರು ಹರಿಸುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ಘಟಕಕ್ಕೆಂದೇ ಹೊಸ ಕೊಳವೆಬಾವಿ ಕೊರೆಸುವುದು ಸೂಕ್ತ’ ಎಂದು ಡಿ.ಕಗ್ಗಲ್ ಪಂಚಾಯಿತಿ ಅಧಿಕಾರಿ ಗಮನಸೆಳೆದರು.

‘ಇದ್ದ ಎರಡು ಕೊಳವೆಬಾವಿಗಳೂ ಒಣಗಿವೆ. ಹೀಗಾಗಿ ನೀರಿನ ಘಟಕಕ್ಕೆ ಕಚ್ಚಾ ನೀರು ಇಲ್ಲವಾಗಿದೆ. ಇಬ್ಬರು ರೈತರು ಕೊಳವೆಬಾವಿ ಬಾಡಿಗೆಗೆ ಕೊಡಲು ಮುಂದೆ ಬಂದಿದ್ದಾರೆ. ಆದರೆ ಅಲ್ಲಿ ಎಷ್ಟು ನೀರು ದಕ್ಕುತ್ತದೆ ಎಂಬುದು ಸ್ಪಷ್ಟವಿಲ್ಲ. ಬಾಡಿಗೆಗೆ ಪಡೆದರೂ ರೈತರ ಹೊಲದಿಂದ ಪಂಚಾಯಿತಿಯೇ ಪೈಪ್‌ಲೈನ್‌ ಹಾಕಿ, ಮೋಟರ್‌ ಅಳವಡಿಸಬೇಕಾಗುತ್ತದೆ’ ಎಂದು ಶಂಕರಬಂಡೆ ಪಂಚಾಯಿತಿ ಅಧಿಕಾರಿ ವಿವರಿಸಿದರು.ಅಧ್ಯಕ್ಷೆ ರಮೀಜಾಬೀ, ಉಪಾಧ್ಯಕ್ಷ ಮಲ್ಲಿಕಾರ್ಜುನ, ಸಹಾಯಕ ನಿರ್ದೇಶಕ ಬಸವರಾಜ ಮತ್ತು ತಹಶೀಲ್ದಾರ್‌ ರೆಹಮಾನ್‌ಪಾಷಾ ಉಪಸ್ಥಿತರಿದ್ದರು.

ವೋಲ್ಟೇಜ್‌ ಕೊರತೆ ಪತ್ತೆ!
ವಿದ್ಯುತ್‌ ಕೊರತೆಯನ್ನೇ ನೀಡದಿದ್ದರೂ, ಅಲ್ಲಿ ವೋಲ್ಟೇಜ್‌ ಕೊರತೆ ಇದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಿರಿಯ ಎಂಜಿನಿಯರ್‌ ರವಿ ಅವರು ದಮ್ಮೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಹೇಳಿರುವ ವಿಲಕ್ಷಣ ಸಂಗತಿಯೂ ಸಭೆಯಲ್ಲಿ ಬೆಳಕಿಗೆ ಬಂತು.‘ಕಚ್ಚಾ ನೀರಿನ ಮೂಲವಿಲ್ಲದೇ ಇರುವುದರಿಂದ ನೀರಿನ ಘಟಕ ಸಿದ್ಧಗೊಂಡಿಲ್ಲ. ವೋಲ್ಟೇಜ್‌ ಸಾಲದು ಎಂಬ ಕಾರಣಕ್ಕೆ ಟ್ರಾನ್ಸ್‌ಫಾರ್ಮರ್‌ ಬದಲಿಸಲಾಗಿದೆ. ಆದರೆ ಇನ್ನೂ ಘಟಕಕ್ಕೆ ವಿದ್ಯುತ್‌ ಸಂಪರ್ಕವನ್ನೇ ಕೊಟ್ಟಿಲ್ಲ’ ಎಂದರು.‘ವಿದ್ಯುತ್‌ ಸಂಪರ್ಕವನ್ನೇ ನೀಡದೇ ವೋಲ್ಟೇಜ್‌ ಹೇಗೆ ಅಳೆದರು’ ಎಂದು ಕಾರ್ಯನಿರ್ವಹಣಾಧಿಕಾರಿ ಪ್ರಶ್ನೆಗೆ ಉತ್ತರ ದೊರಕಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT