ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ವೈದ್ಯರ ವಿಶ್ವಾಸ ಪಡೆದೇ ಕಾಯ್ದೆ ಜಾರಿ

Last Updated 23 ಏಪ್ರಿಲ್ 2017, 8:14 IST
ಅಕ್ಷರ ಗಾತ್ರ

ಶಿವಮೊಗ್ಗ: ಖಾಸಗಿ ವೈದ್ಯಕೀಯ ಕ್ಷೇತ್ರದ ನಿಯಂತ್ರಣಕ್ಕೆ ಕಾಯ್ದೆ ರೂಪಿಸಲು ಸರ್ಕಾರವು ನಿವೃತ್ತ ನ್ಯಾಯಮೂರ್ತಿ ವಿಕ್ರಮ್‌ಜಿತ್‌ ಸೇನ್‌ ನೇತೃತ್ವದ ಸಮಿತಿ ರಚಿಸಿದೆ. ವರದಿ ಅಂಗೀಕರಿಸುವ ಮೊದಲು ಖಾಸಗಿ ವೈದ್ಯರ ಜತೆ ಚರ್ಚಿಸಲಾಗು ವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.ನಗರದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಖಾಸಗಿ ವೈದ್ಯರು ಮತ್ತು ನರ್ಸಿಂಗ್‌ ಹೋಂ ಮಾಲೀಕರ ಸಂಘ ಹಮ್ಮಿಕೊಂಡಿದ್ದ ರಾಜ್ಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರಮ ಜೀವನದ ಕಾರಣ ಹಿಂದೆ ದೀರ್ಘ ಆಯಸ್ಸು ಪಡೆದಿದ್ದ ಗ್ರಾಮೀಣ ಜನರು ಇಂದು ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದು ಬದಲಾದ ಜೀವನಶೈಲಿಯ  ಫಲ ಎಂದು ಕಳವಳ ವ್ಯಕ್ತಪಡಿಸಿದರು.‘ವೈದ್ಯರು ವಾಣಿಜ್ಯ ಮನೋಭಾವ ತೊರೆದು ಮಾನವೀಯ ಮೌಲ್ಯ, ಸೇವಾ ಮನೋಭಾವದ ಮೇಲೆ ರೋಗಿಗಳ ಆರೈಕೆ ಮಾಡಬೇಕು. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ಲಭಿಸಬೇಕು. ವೈದ್ಯರು ಕೆಲವು ನ್ಯೂನತೆ ಸರಿಪಡಿಸಿಕೊಂಡು ಸೇವೆ ಸಲ್ಲಿಸಬೇಕು’ ಎಂದು ಸಲಹೆ ನೀಡಿದರು.

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸಾಕಷ್ಟು ಸುಧಾರಣೆ ಕಾಣಬೇಕಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುವ ವೈದ್ಯರಿಗಾಗಿ ಸರ್ಕಾರ ಹಲವು ಸೌಲಭ್ಯ ಒದಗಿಸಿದೆ. ಆದರೂ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ವೈದ್ಯಕೀಯ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಸರ್ಕಾರಿ ವೈದ್ಯಕೀಯ ಕಾಲೇಜಿನ ಮೊರೆ ಹೋಗುತ್ತಾರೆ. ಆದರೆ, ಪದವಿ ಪೂರೈಸಿದ ನಂತರ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಆಸಕ್ತಿ ತೋರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಲಭಿಸುವಂತಾಗಬೇಕು. ವೈದ್ಯರು ಮಾನವೀಯ ಗುಣ ಬೆಳೆಸಿಕೊಳ್ಳಬೇಕು. ಖಾಸಗಿ ಆಸ್ಪತ್ರೆಯ ವೈದ್ಯರಲ್ಲಿ ಸೇವಾ ಮನೋಭಾವ ಇದ್ದಾಗ ಮಾತ್ರ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಸಾಧ್ಯ ಎಂದರು.ಹಿಂದೆ ರಾಜ್ಯದಲ್ಲಿ ಕೇವಲ 4 ಸರ್ಕಾರಿ ವೈದ್ಯಕೀಯ ಕಾಲೇಜುಗಳು ಇದ್ದವು. ತಮ್ಮ ಶ್ರಮದ ಫಲವಾಗಿ ಅವುಗಳ ಸಂಖ್ಯೆ ಇಂದು 23ಕ್ಕೆ ಹೆಚ್ಚಳವಾಗಿದೆ. ಇಷ್ಟೊಂದು ಸಂಖ್ಯೆಯ ಸರ್ಕಾರಿ ಕಾಲೇಜುಗಳು ಇರುವುದು ರಾಜ್ಯದಲ್ಲಿ ಮಾತ್ರ. ಪ್ರತಿ ಜಿಲ್ಲೆಯಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇರಬೇಕು ಎನ್ನುವುದು ಸರ್ಕಾರದ ಆಶಯ ಎಂದು ಮಾಹಿತಿ ನೀಡಿದರು.

ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಕಾಯ್ದೆ ಜಾರಿಗೆ ತರುವುದು ಗುಣಮಟ್ಟದ ವೈದ್ಯಕೀಯ ಸೇವೆ ಎಲ್ಲರಿಗೂ ಸಿಗಲಿ ಎನ್ನುವ ಕಾರಣಕ್ಕೆ. ಬೆದರಿಸಲು ಅಲ್ಲ ಎಂದು ಸ್ಪಷ್ಟಪಡಿಸಿದರು.ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ‘ಇದು ಬದಲಾವಣೆ ಕಾಲ. ನಮ್ಮ ಚಿಂತನೆಗಳು ಈ ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಸರ್ಕಾರ ಖಾಸಗಿ ವೈದ್ಯಕೀಯ ಸೇವೆ ಕಡೆಗಣಿಸುವುದಿಲ್ಲ. ಹಾಗೆಯೇ, ವೈದ್ಯರೂ ಆರೋಗ್ಯ ಕ್ಷೇತ್ರಕ್ಕೆ ಹೊಸ ಸ್ವರೂಪ ತಂದು ಕೊಡುವಲ್ಲಿ ಶ್ರಮಿಸ ಬೇಕು’ ಎಂದು ಕರೆ ನೀಡಿದರು.

‘ಖಾಸಗಿ ವೈದ್ಯರು ಮತ್ತು ನರ್ಸಿಂಗ್ ಹೋಂ ಮಾಲೀಕರ ಸಂಘದ ಅಧ್ಯಕ್ಷ ಡಾ.ಮಲ್ಲೇಶ್‌ ಹುಲ್ಲುಮನಿ ಮಾತನಾಡಿ, ಖಾಸಗಿ ಆಸ್ಪತ್ರೆಗಳಿಗೆ ಸಾಮಾಜಿಕ ಕಳಕಳಿ ಇಲ್ಲ ಎಂದು ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿದೆ. ಆದರೆ, ಶೇ 80 ರಷ್ಟು ಖಾಸಗಿ ಆಸ್ಪತ್ರೆಗಳು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿವೆ. ಖಾಸಗಿ ಆಸ್ಪತ್ರೆಗಳನ್ನು ಸರ್ಕಾರ ತನ್ನ ಬಹುದೊಡ್ಡ ಸಂಪನ್ಮೂಲ ಎಂದು ಪರಿಗಣಿಸಬೇಕು’ ಎಂದರು.

ಶಾಸಕರಾದ ಕೆ.ಬಿ.ಪ್ರಸನ್ನ ಕುಮಾರ್, ಮಧು ಬಂಗಾರಪ್ಪ, ಆರ್.ಪ್ರಸನ್ನ ಕುಮಾರ್, ಜಿಲ್ಲಾಧಿಕಾರಿ ಡಾ.ಎಂ. ಲೋಕೇಶ್, ‘ಕಾಡಾ’ ಅಧ್ಯಕ್ಷ ಸುಂದರೇಶ್, ಸಂಘದ ಮಾಜಿ ಅಧ್ಯಕ್ಷ ಡಾ.ಪಿ.ವಿ.ಕಂಚಿ, ಕಾರ್ಯಕ್ರಮದ ರೂವಾರಿ ಡಾ.ವೈ.ಎಸ್‌. ಮಂಜುನಾಥ್‌, ಮೆಗ್ಗಾನ್‌ ಆಸ್ಪತ್ರೆ ನಿವಾಸಿ ವೈದ್ಯಾಧಿಕಾರಿ ಡಾ.ರಘುನಂದನ್, ಬಿ.ವೆಂಕಟರಾವ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT