ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುಣಮಟ್ಟದ ಸಂಶೋಧನೆಯಿಂದ ವಿಶ್ವಮಾನ್ಯತೆ’

Last Updated 23 ಏಪ್ರಿಲ್ 2017, 8:23 IST
ಅಕ್ಷರ ಗಾತ್ರ

ದಾವಣಗೆರೆ: ಶೈಕ್ಷಣಿಕ ಹಾಗೂ ಸಂಶೋಧನೆಯ ಗುಣಮಟ್ಟದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಗುಣವನ್ನು ಬೆಳೆಸಿಕೊಂಡಾಗ ಮಾತ್ರ ವಿಶ್ವವಿದ್ಯಾಲಯಗಳು ವಿಶ್ವದರ್ಜೆಯ ಮಾನ್ಯತೆ ಪಡೆಯಲು ಸಾಧ್ಯ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲ ಯದ ವಿಶ್ರಾಂತ ಕುಲಪತಿ ಪ್ರೊ.ಎಚ್.ಪಿ.ಖಿಂಚಾ ತಿಳಿಸಿದರು.ತಾಲ್ಲೂಕಿನ ತೋಳಹುಣಸೆಯಲ್ಲಿ ರುವ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಶನಿವಾರ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಮತ್ತು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ರೂಸಾ ಅನುದಾನಿತ ವಿಶ್ವವಿದ್ಯಾಲಯಗಳ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.

‘ವಿಶ್ವದ್ಯಾಲಯಗಳು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳಲು ಸಮಾಜದ ಸರ್ವತೋಮುಖ ಅಭಿವೃದ್ಧಿಯಲ್ಲಿ ಸಹಭಾಗಿತ್ವ ವಹಿಸಬೇಕು. ಸಂಶೋಧನೆ ಮತ್ತು ಅಂತರರಾಷ್ಟ್ರೀಯ ಕಾರ್ಯಾ ಗಾರಗಳನ್ನು ಹಮ್ಮಿಕೊಂಡು ಶೈಕ್ಷಣಿಕ ವಲಯದ ಸುಸ್ಥಿರ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.‘ಸಮಾಜದಲ್ಲಿ ವ್ಯಕ್ತಿಯ ಪ್ರತಿಭೆ ಗುರುತಿಸಲಾಗುತ್ತಿದೆ. ಆದ್ದರಿಂದ ಇಂದು ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಕೌಶಲ ಅಭಿವೃದ್ಧಿ ಹಾಗೂ ಜ್ಞಾನಮಟ್ಟದ ವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ. ಆದರೆ, ಇಂದು ಶಿಕ್ಷಣ ಸಂಸ್ಥೆಗಳು ವ್ಯಾಪಾ ರೀಕರಣಗೊಂಡಿದ್ದು, ವಿದ್ಯಾರ್ಥಿಗಳ ಕೌಶಲಾಭಿವೃದ್ಧಿಗೆ ಒತ್ತು ಸಿಗುತ್ತಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಶೈಕ್ಷಣಿಕ ರಂಗದ ಮೇಲೆ ಸರ್ಕಾರದ ನೀತಿ, ನಿಯಮಗಳು, ಕಾನೂನು ಕಾಯ್ದೆ ಗಳು ಹೇರಿದ್ದು, ಸ್ವಯಂ ನಿಯಂತ್ರಣ ಕಳೆದುಕೊಂಡು ಗೊಂದಲದ ಗೂಡಾಗಿ ಪರಿವರ್ತನೆಗೊಂಡಿದೆ. ಹಾಗಾಗಿ, ಪ್ರಸ್ತುತ ದೇಶದಲ್ಲಿ ಶೈಕ್ಷಣಿಕ ಸುಧಾರಣೆ ಕಂಡುಕೊಳ್ಳುವುದು ಕಷ್ಟಕರ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇಸ್ರೋದ ವೈಜ್ಞಾನಿಕ ಸಲಹೆಗಾರ ಡಾ.ಟಿ.ಜಿ.ಕೆ.ಮೂರ್ತಿ ಮಾತನಾಡಿ, ‘ದೇಶದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಅತ್ಯಂತ ಅವಶ್ಯಕ. ಮಾನವ ಅಭಿವೃದ್ಧಿಯಾದರೆ ಅದೇ ಸಂಪನ್ಮೂಲವಾಗಿ ಮಾರ್ಪಾಡಾಗುತ್ತದೆ. ಆದ್ದರಿಂದ ವಿಶ್ವವಿದ್ಯಾಲಯಗಳು ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಸೃಜನಶೀಲತೆಯನ್ನು ಹೊರತರಲು ವೇದಿಕೆ ಕಲ್ಪಿಸಿಕೊಡಬೇಕು. ಆ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು’ ಎಂದು ತಿಳಿಸಿದರು.

‘ಭಾರತದ ಬಾಹ್ಯಾಕಾಶ ಸಂಶೋಧನೆಯ ಬಗ್ಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅಸಡ್ಡೆಯ ಮಾತುಗಳನ್ನು ಆಡುತ್ತಿವೆ. ಆದರೆ, ಇಂದು ಇಸ್ರೋ ಚಂದ್ರಯಾನ ಮತ್ತು ಮಂಗಳಯಾನಗಳನ್ನು ಯಶಸ್ವಿ ಗೊಳಿಸಿದೆ. ಒಂದೇ ಬಾರಿ 104 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಮೂಲಕ ಅಭಿವೃದ್ಧಿ ಹೊಂದಿದ ದೇಶಗಳನ್ನು ಹುಬ್ಬೇರಿಸುವಂತೆ ಮಾಡಿದೆ. ಇತರೆ ರಾಷ್ಟ್ರಗಳು ತಮ್ಮ ಉಪಗ್ರಹಗಳ ಉಡಾವಣೆಗೆ ಭಾರತದ ಸಹಕಾರ ಕೋರುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಸಂತಸ ವ್ಯಕ್ತಪಡಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಬಿ.ಕಲಿವಾಳ್‌ ಮಾತನಾಡಿ, ‘ದೇಶದಲ್ಲೇ ‘ರೂಸಾ’ ಅನುದಾನ ಪಡೆದ ಕಿರಿಯ ವಿಶ್ವವಿದ್ಯಾಲಯ ನಮ್ಮದು, ಈ ಅನುದಾನ ಬಳಸಿ ಮೂಲಸೌಕರ್ಯ ಕಲ್ಪಿಸಲಾಗುವುದು. ಶಿಕ್ಷಣ ಸಂಸ್ಥೆಗಳಲ್ಲಿ ಮಾನವ ಸಂಪನ್ಮೂಲದ ಕೊರತೆ ಕಾಡುತ್ತಿದೆ. ಅದನ್ನು ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು’ ಎಂದು ತಿಳಿಸಿದರು.

ರಾಜ್ಯ ಉನ್ನತ ಶಿಕ್ಷಣ ಮಂಡಳಿ ಕಾರ್ಯಕಾರಿ ನಿರ್ದೇಶಕ ಡಾ.ಎಸ್.ಎ. ಕೋರಿ, ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎ.ಎಚ್.ರಾಜಾಸಾಬ್, ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ. ಭೈರಪ್ಪ, ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎಸ್.ವಿ ಹಲಸೆ, ಪರೀಕ್ಷಾಂಗ ಕುಲಸಚಿವ ಪ್ರೊ. ಗಂಗಾನಾಯ್ಕ ಮತ್ತು ವಿವಿಧ ವಿಶ್ವವಿದ್ಯಾಲಯಗಳ ಕುಲಸಚಿವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT