ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿಯಲ್ಲಿ ಅಭಿವೃದ್ಧಿ ಪರ್ವ

Last Updated 23 ಏಪ್ರಿಲ್ 2017, 8:29 IST
ಅಕ್ಷರ ಗಾತ್ರ

ಕಲಬುರ್ಗಿ: ‘ರಸ್ತೆ, ಚರಂಡಿ, ಉದ್ಯಾನ ಇಲ್ಲ; ಶಾಲಾ–ಕಾಲೇಜು ಸರಿ ಇಲ್ಲ. ಇದೆಂಥಾ ಊರು ಎಂಬ ಟೀಕೆಗೆ ಕಲಬುರ್ಗಿ ಗುರಿಯಾಗಿತ್ತು. ಈಗ ಚಿತ್ರಣ ಬದಲಾಗಿದೆ. ಕಷ್ಟಪಟ್ಟು 371 (ಜೆ) ಜಾರಿಮಾಡಿಸಿದ್ದು, ಇದರಿಂದ ಸೌಲಭ್ಯದ ಹೆಬ್ಬಾಗಿಲು ತೆರೆದು, ಅಭಿವೃದ್ಧಿ ಪರ್ವ ಆರಂಭಗೊಂಡಿದೆ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಶನಿವಾರ ನಗರದ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಬರೀ ಭಾಷಣ ಮಾಡಿ ಹೋಗಿಲ್ಲ. ಕಾಳಜಿಯಿಂದ ಕೆಲಸ ಮಾಡಿದ್ದೇವೆ. ನನಗೇನು ಸಿಕ್ಕಿತು ಎನ್ನುವುದಕ್ಕಿಂತ ನಮಗೇನು ಸಿಕ್ಕಿತು ಎಂದು ಕೇಳಬೇಕು. ದುಡ್ಡಿನ ಮೇಲೆ ಚುನಾವಣೆ ಆದರೆ, ನಮ್ಮಂಥವರು ಯಾರೂ ಆರಿಸಿ ಬರಲ್ಲ. ನಾವೂ ನಿಮ್ಮ ಬಳಿ ಬರಲ್ಲ. ಸಂವಿಧಾನ ರಕ್ಷಿಸುವವರನ್ನು ಆಯ್ಕೆಮಾಡಿ’ ಎಂದು ರಾಜಾಪುರದಲ್ಲಿ ನಡೆದ ಸಮಾರಂಭದಲ್ಲಿ ಹೇಳಿದರು.

‘ರಾಜಾಪುರದಿಂದ ಐವಾನ್‌–ಇ–ಶಾಹಿ ಬಡಾವಣೆ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಬದ್ಧ. ಮಧ್ಯದಲ್ಲಿ 2–3 ಮನೆಗಳು ಬರುತ್ತಿದ್ದು, ನೀವು ಅವರನ್ನು ಒಪ್ಪಿಸಿ,  ನಿಯಮಾನುಸಾರ ಅವರಿಗೆ ಪರಿಹಾರ ಕೊಡಿಸುತ್ತೇವೆ’ ಎಂದು ಅಲ್ಲಿಯ ಮುಖಂಡರನ್ನು ಕೋರಿದರು.

ಹೆದ್ದಾರಿ: ಸೊಲ್ಲಾಪುರದಿಂದ ಅಫಜಲಪುರ, ಕಲಬುರ್ಗಿ, ಶಹಾಬಾದ್, ವಾಡಿ, ನಾಲವಾರ, ಯಾದಗಿರಿ, ರಾಯಚೂರು ಮಾರ್ಗವಾಗಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಯನ್ನು ₹1,400 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಇದು ಈ ಭಾಗದ ಅಭಿವೃದ್ಧಿಗೆ ಪೂರಕವಾಗಿದೆ’ ಎಂದರು.

ನಗರ ಸೌಂದರ್ಯಕ್ಕೆ ಒತ್ತು: ಜಗತ್‌ ವೃತ್ತದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಗರದ ಸೌಂದರ್ಯ ವೃದ್ಧಿ ಹಾಗೂ ಮೂಲ­ಸೌಲಭ್ಯ ಅಭಿವೃದ್ಧಿಗೆ ಒತ್ತು ನೀಡಬೇಕು. ಮೀಸಲಿಟ್ಟ ಸ್ಥಳಗಳಲ್ಲಿ ಉದ್ಯಾನ ನಿರ್ಮಿ­ಸಬೇಕು. ಇಲ್ಲದಿದ್ದರೆ ಅಲ್ಲಿ ಕಟ್ಟಡಗಳು ತಲೆ ಎತ್ತುತ್ತವೆ’ ಎಂದು ಎಚ್ಚರಿಸಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಶಾಸಕ­ರಾದ ಖಮರುಲ್‌ ಇಸ್ಲಾಂ, ಇಕ್ಬಾಲ್ ಅಹ್ಮದ್ ಸರಡಗಿ, ಮೇಯರ್‌ ಶರಣ­ಕುಮಾರ ಮೋದಿ, ಕಲಬುರ್ಗಿ ನಗರಾ­ಭಿ­ವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್ ಅಸಗರ್ ಚುಲಬುಲ್, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭಾಗನಗೌಡ ಪಾಟೀಲ ಸಂಕನೂರ, ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯ ಬಿಸ್ವಾಸ್,  ಪಾಲಿಕೆ ಆಯುಕ್ತ ಪಿ. ಸುನೀಲ್‌ಕುಮಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT