ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ನೀರಿನ ಘಟಕಗಳಿಂದ ‘ಕಣ್ಣಾಮುಚ್ಚಾಲೆ’

Last Updated 23 ಏಪ್ರಿಲ್ 2017, 8:42 IST
ಅಕ್ಷರ ಗಾತ್ರ

ರಾಯಚೂರು: ನಗರದ ವಿವಿಧ ಬಡಾವಣೆಗಳಲ್ಲಿ ಖಾಸಗಿ ಏಜೆನ್ಸಿ ಸ್ಥಾಪಿಸಿರುವ ಶುದ್ಧ ನೀರಿನ ಘಟಕ (ಆರ್‌ಒ ಪ್ಲಾಂಟ್‌)ಗಳು ಜನರ ಬೇಡಿಕೆಗೆ ತಕ್ಕಂತೆ ನೀರು ಸರಬರಾಜು ಮಾಡುವುದಕ್ಕೆ ಸಾಧ್ಯವಾಗದೆ ಕಣ್ಣಾಮುಚ್ಚಾಲೆ ಆಟವಾಡುತ್ತಿವೆ. ಶುದ್ಧ ನೀರು ಆರಂಭ ಮತ್ತು ಸ್ಥಗಿತ ಅನಿಶ್ಚಿತವಾಗಿದ್ದು ಜನರು ಗಂಟೆಗಟ್ಟಲೆ ಕಾದು ನಿಲ್ಲುವಂತಾಗಿದೆ.

ಶುದ್ಧ ನೀರು ಪಡೆಯುವುದಕ್ಕೆ ನಾಲ್ಕು ನಲ್ಲಿಗಳನ್ನು ಹಾಕಲಾಗದೆ. ಅವುಗಳಲ್ಲಿ ಒಂದು ಮಾತ್ರ ಕಾರ್ಯನಿರ್ವಹಿಸುತ್ತದೆ. ಏಕಕಾಲಕ್ಕೆ ಎಲ್ಲಾ ನಲ್ಲಿಗಳಲ್ಲಿ ನೀರು ಒದಗಿಸುವಷ್ಟು ಸಂಗ್ರಹ ಇರುವುದಿಲ್ಲ. ತುರ್ತು ಕುಡಿಯುವ ನೀರಿಗಾಗಿ ಬಂದವರು ಕೂಡಾ ಕಾಯದೇ ವಿಧಿಯಿಲ್ಲ ಎನ್ನುವ ಪರಿಸ್ಥಿತಿ   ನಿರ್ಮಾಣವಾಗಿದೆ. ಶುದ್ಧ ನೀರಿನ ಸಂಗ್ರಹವು ಇದ್ದಕ್ಕಿದ್ದಂತೆ ಖಾಲಿಯಾದರೆ ಘಟಕವನ್ನು ಸಂಪೂರ್ಣ ಬಂದ್‌ ಮಾಡಲಾಗುತ್ತದೆ. ಮತ್ತೆ ನೀರು ಪಡೆಯಲು ಒಂದರಿಂದ ಎರಡು ಗಂಟೆಗಳ ಕಾಲ ಜನರು ಕಾದು ನಿಲ್ಲಬೇಕಾಗುತ್ತದೆ.

20 ಲೀಟರ್‌ ಡಬ್ಬಿಗಳಲ್ಲಿ ಅಥವಾ ಪ್ಲಾಸ್ಟಿಕ್‌ ಕೊಡಗಳಲ್ಲಿ ನೀರು ಪಡೆಯುವುದಕ್ಕೆ ಅವಕಾಶವಿದೆ. 20 ಲೀಟರ್‌ ನೀರು ಪಡೆಯುವುದಕ್ಕೆ ₹8 ಪಾವತಿಸಬೇಕು. ನೀರಿನ ಡಬ್ಬಿಗೆ ಮುಚ್ಚಳ ಬೇಕಿದ್ದರೆ ₹2 ಹೆಚ್ಚುವರಿ ಕೊಡಬೇಕು. ಶುದ್ಧ ನೀರಿಗೆ ಬೇಡಿಕೆ ವಿಪರೀತವಾಗಿದೆ. ಹೀಗಾಗಿ ಶುದ್ಧ ನೀರಿನ ಘಟಕಗಳ ಎದುರು ಯಾವಾಗ ನೋಡಿದರೂ ಜನದಟ್ಟಣೆ ಕಂಡು ಬರುತ್ತಿದೆ. ಸುತ್ತಮುತ್ತಲಿನ ಬಡಾವಣೆಗಳಿಂದ ನೀರಿನ ಘಟಕ ಇರುವ ಕಡೆಗೆ ಬೈಕ್‌ ಹಾಗೂ ಇನ್ನಿತರ ವಾಹನಗಳನ್ನು ತೆಗೆದುಕೊಂಡು ಬಂದು ಜನರು ನೀರು ಪಡೆಯುತ್ತಿದ್ದಾರೆ. ಬೇಸಿಗೆಯಲ್ಲಿ ಶುದ್ಧ ನೀರಿಗೆ ಭಾರಿ ಬೇಡಿಕೆ ಬಂದಿದೆ.

ನಗರಸಭೆಯಿಂದ ಒಂದು ದಿನ ಬಿಟ್ಟು ದಿನಕ್ಕೆ ನೀರು ಪೂರೈಕೆ ಯಾಗುತ್ತಿದೆ. ಆದರೆ ಕುಡಿಯುವುದಕ್ಕೆ ಅದು ಯೋಗ್ಯವಾಗಿರುವುದಿಲ್ಲ. ಕಪ್ಪು ಅಥವಾ ಕೆಂಪು ವರ್ಣದಲ್ಲಿ ನೀರು ಕಲ್ಮಶವಾಗಿರುತ್ತದೆ. ಹೀಗಾಗಿ ಮಧ್ಯಮ ವರ್ಗ ಹಾಗೂ ಕೆಳ ಮಧ್ಯಮ ವರ್ಗದ ಜನರು ಶುದ್ಧ ನೀರನ್ನು ಖರೀದಿಸುವುದು ಸಾಮಾನ್ಯವಾಗಿದೆ. ನೀರು ಮಾರಾಟ ಖಾಸಗಿ ಕಂಪೆನಿಗಳು ಮನೆಮನೆಗೆ ನೀರು ತಲುಪಿಸುತ್ತಾರೆ. ಇದಕ್ಕಾಗಿ ಪ್ರತಿ 20 ಲೀಟರ್‌ ನೀರಿಗೆ ₹30 ರಿಂದ ₹40 ಕೊಡಬೇಕು.

ಪರವಾನಿಗೆ ಪಡೆದ ಏಜೆನ್ಸಿ:  ಅಗ್ಗ ದರದಲ್ಲಿ ಶುದ್ಧ ನೀರು ಕೊಟ್ಟು ನಗರದ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ‘ಡಾಕ್ಟರ್‌ ವಾಟರ್‌’ ಎನ್ನುವ ಖಾಸಗಿ ಏಜೆನ್ಸಿ ನಗರಸಭೆಯಿಂದ ಪರವಾನಗಿ ಪಡೆದಿದೆ. ಒಟ್ಟು ಎಂಟು ಘಟಕಗಳನ್ನು ಸ್ಥಾಪಿಸುವುದಕ್ಕೆ ಪರವಾನಗಿ ನೀಡಲಾಗಿದೆ. ಇದಕ್ಕಾಗಿ ಸರ್ಕಾರಿ ಜಾಗ ಗಳನ್ನು ಗುರುತಿಸಲಾಗಿದೆ. ಐಡಿಎಸ್‌ಎಂಟಿ ಲೇಔಟ್‌, ಜ್ಯೋತಿ ಕಾಲೊನಿ, ನಿಜಲಿಂಗಪ್ಪ ಕಾಲೊನಿ, ಜವಾ ಹರ ನಗರ ಹಾಗೂ ಡ್ಯಾಡಿ ಕಾಲೊನಿಗಳಲ್ಲಿ ಸ್ಥಾಪಿಸಿದ ನೀರಿನ ಘಟಕಗಳು ಚೆನ್ನಾಗಿ ಕಾರ್ಯನಿ ರ್ವಹಿಸುತ್ತಿವೆ. ಮಾರ್ಚ್‌ ಆರಂಭದಿಂದ ಘಟಕಗಳ ಎದುರು ಜನರು ನೀರಿಗಾಗಿ ಕಾದು ನಿಲ್ಲುವುದು ಹೆಚ್ಚಾಗುತ್ತಿದೆ.

‘ಶುದ್ಧ ನೀರಿನ ಘಟಕದಿಂದ ಒಳ್ಳೆಯ ನೀರು ಸಿಗುತ್ತಿದೆ. ಆದರೆ ಯಾವಾಗ ನೀರು ಕೊಡುತ್ತಾರೆ ಎಂಬುದಕ್ಕೆ ಸಮ ಯವೇ ಇಲ್ಲ. ಯಾವಾಗ ನೋಡಿದರೂ ಪಾಳಿ ಇರುತ್ತದೆ. ನೀರು ಸಿಗುವ ಭರವಸೆ ಇದ್ದರೆ ಕಾದು ನಿಂತುಕೊಳ್ಳಬಹುದು. ಇದ್ದಕ್ಕಿದ್ದಂತೆ ನೀರು ಖಾಲಿಯಾಗುತ್ತದೆ. ಹೆಚ್ಚಿನ ಸಾಮರ್ಥ್ಯ ಇರುವ ಘಟಕಗಳನ್ನು ಮಾಡಿದರೆ ಜನರಿಗೆ ಅನುಕೂ ಲವಾಗುತ್ತದೆ.  ಕೆಲವರು 10 ಡಬ್ಬಿಗ ಳನ್ನು ತಂದು ಇಟ್ಟಿರುತ್ತಾರೆ. ಘಟಕ ನೋಡಿಕೊಳ್ಳುವ ಹುಡುಗರು ಅಂಥವರ ಪರ ವಹಿಸಿ ಮಾತನಾಡುತ್ತಾರೆ. ಇದನ್ನು ತಪ್ಪಿಸಬೇಕು’ ಎನ್ನುತ್ತಾರೆ ಜ್ಯೋತಿ ಕಾಲೊನಿ ನಿವಾಸಿ ರಂಗಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT