ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿಯಲ್ಲಿ ಸೌಕರ್ಯಗಳ ಅಭಿವೃದ್ಧಿಗೆ ಆಗ್ರಹ

Last Updated 23 ಏಪ್ರಿಲ್ 2017, 8:47 IST
ಅಕ್ಷರ ಗಾತ್ರ

ರಾಯಚೂರು: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ   ಬೆಂಗಳೂರಿಗೆ ನಿಯೋಗದ ಮೂಲಕ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಲು ದಿ ಗಂಜ್ ಮರ್ಚೆಂಟ್ಸ್ ಅಸೋಶಿಯೇಷನ್‌ ಪದಾಧಿಕಾರಿಗಳು ನಿರ್ಧರಿಸಿದ್ದಾರೆ.ಶನಿವಾರ ಒಂದು ದಿನ ಸಾಂಕೇತಿಕವಾಗಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬೇಡಿಕೆಗೆ ಸ್ಪಂದಿಸುವಂತೆ ಸರ್ಕಾರಕ್ಕೆ ಹಾಗೂ ವಿವಿಧ ಜನಪ್ರತಿ ನಿಧಿಗಳಿಗೆ ರವಾನಿಸಿದರು. ಆನಂತರ ಸಭೆ ನಡೆಸಿದ ಪದಾಧಿಕಾರಿಗಳು, ಎಪಿಎಂಸಿ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವುದಕ್ಕೆ ಮುಂಬರುವ ದಿನಗಳಲ್ಲಿ ಕೈಗೊಳ್ಳುವ ಕ್ರಮಗಳ ಬಗ್ಗೆ ಚರ್ಚಿಸಿದರು.

‘ಮಾರುಕಟ್ಟೆಯಲ್ಲಿ ವಿದ್ಯುತ್ ದ್ವೀಪಗಳು, ರಸ್ತೆಗಳ ದುರಸ್ತಿ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಮಾಡುತ್ತಿಲ್ಲ  ಶುದ್ಧ ಕುಡಿಯುವ ನೀರು, ಸ್ವಚ್ಛವಾದ ಶೌಚಾಲಯ, ಚರಂಡಿಗಳ ಸ್ವಚ್ಛತೆ ಹಾಗೂ ತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ. ಈ ಕುರಿತು ಸಂಬಂಧಪಟ್ಟ ಕಾರ್ಯದರ್ಶಿಗಳಿಗೆ ಮತ್ತು ಮೇಲಧಿ ಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿರುವುದಿಲ್ಲ. ಸದ್ಯದ ಕಾರ್ಯದರ್ಶಿಯು ಮೂರು ಮಾರುಕಟ್ಟೆಗಳ ಉಸ್ತುವಾರಿ ಹೊಣೆ ನಿಭಾಯಿಸುತ್ತಿದ್ದಾರೆ. ಅವರು ವ್ಯಾಪಾರಸ್ಥರ ಬೇಡಿಕೆಗಳಿಗೆ ಸ್ಪಂದಿಸದೇ ಇರುವುದರಿಂದ ಬೇಡಿಕೆಗಳು ಹಾಗೆಯೇ ಉಳಿದಿರುತ್ತವೆ’ ಎಂದು ಅಸೋಸಿಯೇಷನ್‌ ಅಧ್ಯಕ್ಷ ಬೆಲ್ಲಂ ನರಸಾ ರೆಡ್ಡಿ ತಿಳಿಸಿದರು.

‘ರಾಯಚೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಕಾಯಂ ಕಾರ್ಯದರ್ಶಿಗಳನ್ನು ಸರ್ಕಾರವು ನೇಮಿಸಬೇಕು. ಎಪಿಎಂಸಿ ವ್ಯಾಪಾರಿಗಳ ಕಷ್ಟಗಳನ್ನು ನಿವಾರಿಸಬೇಕು ಎಂದು ಒತ್ತಾಯಿಸಿ ವ್ಯಾಪಾರ ಬಂದ್‌ ಮಾಡಲಾಗಿದೆ’ ಎಂದರು.‘ರಾಜ್ಯದಲ್ಲೆ ಅತಿಹೆಚ್ಚು ಆದಾಯ ತಂದುಕೊಡುವ ಮಾರುಕಟ್ಟೆಗೆ ಶಾಶ್ವತ ಅಧಿಕಾರಿಯನ್ನು ಸರ್ಕಾರ ನೇಮಿಸುತ್ತಿಲ್ಲ. ಎಪಿಎಂಸಿ ಎದುರು ಏಕಾಏಕಿ ತಗ್ಗು ನಿರ್ಮಿಸಿರುವುದರಿಂದ ಲಾರಿಗಳು ಪ್ರವೇಶಿಸುತ್ತಿಲ್ಲ. ಅಲ್ಲಿಂದ ಚೀಲಗಳನ್ನು ತಂದು ಅಂಗಡಿಗೆ ಮುಟ್ಟಿಸುವುದಕ್ಕೆ ಭಾರಿ ಹೆಚ್ಚು ಕೂಲಿ ಕೇಳುತ್ತಿದ್ದಾರೆ. ಇದರಿಂದ ರೈತರಿಗೆ ಹೆಚ್ಚು ಹೊರೆ ಬೀಳುತ್ತದೆ. ರೈತರು ಮತ್ತು ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ’ ಎಂದು ಪದಾ ಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಒಂದು ದಿನ ವ್ಯಾಪಾರ ಸ್ಥಗಿತಗೊಳಿಸಿದ್ದರಿಂದ ಎಪಿಎಂಸಿಗೆ ಸಂಗ್ರಹವಾಗುತ್ತಿದ್ದ ₹17 ಲಕ್ಷ ಕಮಿಷನ್‌ ನಷ್ಟವಾಗಿದೆ. ವ್ಯಾಪಾರಿಗಳಿಗೆ ಕೋಟ್ಯಂತ ರ ಮೊತ್ತದ ವಹಿವಾಟು ನಷ್ಟವಾಗಿದೆ.ಅಸೋಶಿಯೇಷನ್‌ ಕಾರ್ಯದರ್ಶಿ ವಿಶ್ವನಾಥ, ಉಪಾಧ್ಯಕ್ಷರಾದ ಅಶೋಕ ಕುಮಾರ ವರ್ಮಾ, ಗದಾರ ಬೆಟ್ಟಪ್ಪ, ಖಜಾಂಚಿ ಶಂಭು ಭೀಮಾಶಂಕರ ಹಾಗೂ ಕಾರ್ಯಕಾರಿಣಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT