ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಸಾಯನಿಕ ಗೊಬ್ಬರ ಬಳಕೆ ಹೆಚ್ಚಿದರೆ ಆಪತ್ತು

Last Updated 23 ಏಪ್ರಿಲ್ 2017, 10:40 IST
ಅಕ್ಷರ ಗಾತ್ರ

ಸಕಲೇಶಪುರ: ಕೃಷಿ ಕ್ಷೇತ್ರದಲ್ಲಿ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಕೆ ಹೀಗೆ ಮುಂದುವರಿದರೆ ಬರುವ ದಿನಗಳಲ್ಲಿ ಭೂ ಫಲವತ್ತತೆ ಹಾಗೂ ಪರಿಸರ ಎಲ್ಲವೂ ವಿನಾಶದ ಅಂಚಿಗೆ ತಲುಪುತ್ತದೆ ಎಂದು ನಿಸರ್ಗಚಿಕಿತ್ಸಾ ತಜ್ಞ ಬಸವಾನಂದ ಸ್ವಾಮಿಜಿ ಹೇಳಿದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಮಲೆನಾಡು ವೀರಶೈವ ಸಮಾಜ, ಹಾಸನ ಮತ್ತು ಕೊಡಗು ಜಿಲ್ಲಾ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಶನಿವಾರ ಇಲ್ಲಿಯ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ‘ವಚನಗಳಲ್ಲಿ ಕೃಷಿ ಪ್ರಜ್ಞೆ ಮತ್ತು ಪ್ರಸ್ತುತದಲ್ಲಿ ಕೃಷಿ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ರಸಗೊಬ್ಬರ, ಕೀಟನಾಶಕ ಬಳಕೆ ಸಂಪೂರ್ಣ ನಿಷೇಧಿಸಿರುವ ಸಿಕ್ಕಿಂ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳೇ ಇಲ್ಲ.  ಹೆಚ್ಚು ಬಳಸುವ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ  ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ ಎಂದು ಹೇಳಿದರು.

ಕೃಷಿಯಲ್ಲಿ ಹೆಚ್ಚು ಲಾಭ ಮಾಡುವ ಏಕೈಕ ಉದ್ದೇಶದಿಂದ ಸಾಲ ಮಾಡಿ ಹೆಚ್ಚು ಕೀಟನಾಶಕ, ರಸಗೊಬ್ಬರ, ಯಂತ್ರೋಪಕರಣಗಳ ಬಳಸಲಾಗುತ್ತದೆ.  ಪ್ರಕೃತಿ ವಿರುದ್ಧವಾಗಿ ಹೋಗುತ್ತಿರುವ ಪರಿಣಾಮ ರೈತರು ಆರೋಗ್ಯ ಹಾಳು ಮಾಡಿಕೊಳ್ಳುವ ಜತೆಗೆ ನಷ್ಟ ಅನುಭವಿಸಿ ಆತ್ಮಹತ್ಯೆಗೆ ಮುಂದಾಗಿರುವುದು ದುರಂತ ಎಂದರು. ಎಚ್ಚೆತ್ತುಕೊಂಡು ಪ್ರಕೃತಿ ರಕ್ಷಿಸದಿದ್ದರೆ ಮುಂದಿನ ಪೀಳಿಗೆ ಕ್ಷಮಿಸುವುದಿಲ್ಲ.  ಭೂಮಿ, ಗಾಳಿ, ನೀರು ದೇವರ ಅಂಶ ಎಂದು ಪ್ರೀತಿಸಿ ಶುದ್ಧೀಕರಿಸಿ ಉಳಿಸಬೇಕು ಎಂದರು.

ಸುತ್ತೂರು ಮಠದ ಶಿವರಾತ್ರೀ ದೇಶೀಕೇಂದ್ರಸ್ವಾಮಿಜಿ ಮಾತನಾಡಿ, ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕ ಬಳಕೆ ಸಂಪೂರ್ಣವಾಗಿ ನಿಲ್ಲಬೇಕು. ರೈತರು  ಸಾವಯವ ಕೃಷಿಯತ್ತ ಮರಳಿ ಬರಬೇಕು. ಇದರಿಂದ ಮಾತ್ರ ಪರಿಸರ ಸಂರಕ್ಷಣೆ, ಹೆಚ್ಚು ಉತ್ಪಾದನಾ ವೆಚ್ಚ ಇಲ್ಲದ, ನಷ್ಟವಿಲ್ಲದ ಕೃಷಿ ಸಾಧ್ಯ ಎಂದರು.ಲೇಖಕಿ ಸುಶೀಲಾ ಸೋಮಶೇಖರ್‌ ‘ಶರಣ ಸಂಸ್ಕೃತಿ’ ಮತ್ತು ‘ನೆನಪಿನಂಗಳ’ ಎಂಬ ಕೃತಿಗಳನ್ನು, ಶರಣ ಸಾಹಿತ್ಯ ಪರಿಷತ್‌ ತಾಲ್ಲೂಕು ಅಧ್ಯಕ್ಷ ಬಿ.ಡಿ. ಬಸವಣ್ಣ ಬಿಡುಗಡೆ ಮಾಡಿದರು. ‘ಕೃಷಿ ಸಂಸ್ಕೃತಿಯಲ್ಲಿ ಜೀವನ ಮೌಲ್ಯ’ ಕುರಿತು ಚಟ್ನಳ್ಳಿ ಮಹೇಶ್‌ ಮಾತನಾಡಿದರು. ‘ಶರಣರ ವಿಚಾರ ಧಾರೆಯಲ್ಲಿ ಕೃಷಿ’ ಕುರಿತು ಪ್ರಾಧ್ಯಾಪಕ ಡಾ. ಶಶಿಧರ್‌ ಮಾತನಾಡಿದರು. ‘ಕೃಷಿ ಹೇಗಿರಬೇಕು’ ಕುರಿತು ನಾರಾಯಣಪುರ ಚಂದ್ರಶೇಖರ್‌ ಮಾತನಾಡಿದರು.

ಸನ್ಮಾನ: ಆಕಾಶವಾಣಿ ಕೃಷಿ ವಿಭಾಗದ  ನಿರ್ವಾಹಕ ಡಾ. ವಿಜಯ್‌ ಅಂಗಡಿ, ಪ್ರಗತಿಪರ ರೈತ ಧರ್ಮಲಿಂಗಂ, ಲಿಂಗ ರಾಜ್‌ ಇವರನ್ನು ಸನ್ಮಾನಿಸಲಾಯಿತು. ಉಪವಿಭಾಗಾಧಿಕಾರಿ ಪಿ. ಶಿವರಾಜ್‌, ಲೇಖಕಿ ಸುಶೀಲಾ ಸೋಮಶೇಖರ್‌,  ಪ್ರಗತಿಪರ ರೈತ ವೈ.ಸಿ. ರುದ್ರಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ನಾಯಕರಳ್ಳಿ ಮಂಜೇಗೌಡ. ಜಾವಗಲ್‌ ಪ್ರಸನ್ನ, ಮಲೆನಾಡು ವೀರಶೈವ ಸಮಾಜ ಅಧ್ಯಕ್ಷ ಎಚ್‌.ಎಂ. ಶಶಿಧರ್‌, ಕದಳಿ ವೇದಿಕೆ ಜಿಲ್ಲಾ ಅಧ್ಯಕ್ಷೆ ತೀರ್ಥಿಕುಮಾರಿ, ಯುವ ವೇದಿಕೆ ಜಿಲ್ಲಾ ಅಧ್ಯಕ್ಷ ಕೆ.ಸಿ. ಕರುಣಾಕರ್‌, ಡಾ. ಪಾಟೀಲ್‌, ಕೊಟ್ರೇಶ್‌ ಉಪ್ಪಾರ್‌, ಗಿರಿಮನೆ ಶ್ಯಾಮರಾವ್‌ ಕೃತಿ ಪರಿಚಯಿಸಿದರು.ಶಾರದಾ ಗುರುಮೂರ್ತಿ ಹಾಗೂ ನಂದಿನಿ ವಿಶ್ವನಾಥ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT