ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಗೇಕೆ ಶಾಂತಿಯ ಬದುಕಿಲ್ಲ

ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಪ್ರಶ್ನೆ
Last Updated 23 ಏಪ್ರಿಲ್ 2017, 18:57 IST
ಅಕ್ಷರ ಗಾತ್ರ
ನವದೆಹಲಿ: ‘ಈ ದೇಶದಲ್ಲಿ ಮಹಿಳೆಯರು ಯಾಕೆ ಶಾಂತಿಯಿಂದ ಜೀವಿಸುವುದು ಸಾಧ್ಯವಾಗುತ್ತಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ಆಘಾತವನ್ನೂ ವ್ಯಕ್ತಪಡಿಸಿದೆ.

16 ವರ್ಷದ ಬಾಲಕಿಗೆ ಕಿರುಕುಳ ಕೊಟ್ಟು ಆಕೆ ಆತ್ಮಹತ್ಯೆ ಮಾಡಲು ಕಾರಣನಾದ ವ್ಯಕ್ತಿಗೆ ಹಿಮಾಚಲ ಪ್ರದೇಶ ಹೈಕೋರ್ಟ್‌ ಏಳು ವರ್ಷ ಶಿಕ್ಷೆ ವಿಧಿಸಿತ್ತು. ಅದನ್ನು ಪ್ರಶ್ನಿಸಿ ಅಪರಾಧಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ನೇತೃತ್ವದ ಪೀಠ ಈ ಪ್ರಶ್ನೆ ಕೇಳಿದೆ.

ಪ್ರೀತಿಸುವಂತೆ ಹೆಣ್ಣನ್ನು ಬಲವಂತ ಮಾಡುವಂತಿಲ್ಲ. ಪ್ರತಿಯೊಬ್ಬರಿಗೂ ತಮಗೆ ಬೇಕಿರುವ ನಿರ್ಧಾರ ಕೈಗೊಳ್ಳುವ ಹಕ್ಕು ಇದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಮೇಲ್ಮನವಿಯ ತೀರ್ಪನ್ನು ಪೀಠ ಕಾದಿರಿಸಿದೆ.

ಆತ್ಮಹತ್ಯೆ ಮಾಡಿಕೊಂಡ ಬಾಲಕಿಯು ಮರಣಪತ್ರದಲ್ಲಿ ವ್ಯಕ್ತಿ ನೀಡುತ್ತಿರುವ ಕಿರುಕುಳವನ್ನು ಪ್ರಸ್ತಾಪಿಸಿದ್ದಳು. ಆದರೆ ತಪ್ಪಿತಸ್ಥ ವ್ಯಕ್ತಿ ಈ ಮರಣಪತ್ರದ ಸಾಚಾತನವನ್ನೇ ಪ್ರಶ್ನಿಸಿದ್ದಾನೆ.

ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಆಕೆಯ ದೇಹದ ಶೇ 80ರಷ್ಟು ಭಾಗ ಸುಟ್ಟು ಹೋಗಿತ್ತು. ಎರಡು ಕೈಗಳೂ ಸುಟ್ಟಿದ್ದವು. ಹಾಗಾಗಿ ಆಕೆ ಮರಣಪತ್ರ ಬರೆಯಲು ಸಾಧ್ಯವಿಲ್ಲ. ಅಲ್ಲದೆ ಆಕೆ ಮಾತನಾಡುವ ಸ್ಥಿತಿಯಲ್ಲಿಯೂ ಇರಲಿಲ್ಲ ಎಂದು ವ್ಯಕ್ತಿ ವಾದಿಸಿದ್ದಾನೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಪೀಠ, ‘ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿಯನ್ನು ನೀವು ನಿರ್ಮಾಣ ಮಾಡಿದ್ದೀರಿ’ ಎಂದು ಹೇಳಿತು.
2010ರಲ್ಲಿ ಆರೋಪಿಯನ್ನು ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿತ್ತು. ಅದನ್ನು ಅಲ್ಲಿನ ಸರ್ಕಾರ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಪ್ರಕ್ರಿಯೆ ಪಾಲಿಸದೆ ತ್ರಿವಳಿ ತಲಾಖ್ ರದ್ದುಪಡಿಸಿದ ಕೋರ್ಟ್‌

ಉಜ್ಜೈನಿ: ಮುಸ್ಲಿಂ ಧರ್ಮ ಗ್ರಂಥಗಳಲ್ಲಿ ನಿಗದಿಪಡಿಸಲಾದ ಪ್ರಕ್ರಿಯೆಯನ್ನು ಅನುಸರಿಸಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ನೀಡಿದ್ದ ತ್ರಿವಳಿ ತಲಾಖನ್ನು ಇಲ್ಲಿನ ಕೌಟುಂಬಿಕ ನ್ಯಾಯಾಲಯವೊಂದು ರದ್ದುಪಡಿಸಿದೆ.

ತೌಸೀಫ್‌ ಶೇಖ್‌ ಎಂಬಾತ ಹೆಂಡತಿಗೆ ತಲಾಖ್‌ ನೀಡಲು ಸರಿಯಾದ ಪ್ರಕ್ರಿಯೆ ಅನುಸರಿಸಿಲ್ಲ. ಹಾಗಾಗಿ ಈ ತಲಾಖ್‌ ‘ಕಾನೂನುಬಾಹಿರ’ ಎಂದು ಕೌಟುಂಬಿಕ ನ್ಯಾಯಾಲಯ ಹೇಳಿದೆ.

ತೌಸೀಫ್‌ ಮತ್ತು ಆರ್ಶಿ ಖಾನ್‌ ಅವರ ಮದುವೆ 2013ರ ಜನವರಿಯಲ್ಲಿ ನಡೆದಿತ್ತು. ನಂತರ ತೌಸೀಫ್‌ ಹಣ ಕೇಳಲು ಆರಂಭಿಸಿದ್ದ. ಹಣ ನೀಡದಿದ್ದಾಗ ಹೆಂಡತಿಗೆ ಕಿರುಕುಳ ನೀಡಲು ತೊಡಗಿದ. ಅದನ್ನು ಸಹಿಸುವುದು ಅಸಾಧ್ಯವಾದಾಗ ಆರ್ಶಿ ತವರು ಮನೆಗೆ ತೆರಳಿದ್ದರು. ಗಂಡನ ವಿರುದ್ಧ ಅವರು ವರದಕ್ಷಿಣೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನೂ ದಾಖಲಿಸಿದ್ದಾರೆ. ಅದರ ವಿಚಾರಣೆ ನಡೆಯುತ್ತಿದೆ.

2014ರ ಅಕ್ಟೋಬರ್‌ 9ರಂದು ವಿಚಾರಣೆಗೆಂದು ನ್ಯಾಯಾಲಯಕ್ಕೆ ಬಂದಿದ್ದ ಸಂದರ್ಭದಲ್ಲಿ ನ್ಯಾಯಾಲಯದ ಆವರಣದಲ್ಲಿಯೇ ತೌಸೀಫ್‌ ತಲಾಖ್‌ ಹೇಳಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT