ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನವ ಭಾರತ’ಕ್ಕೆ ಮುನ್ನೋಟ

ನೀತಿ ಆಯೋಗದ ನಿರ್ವಹಣಾ ಮಂಡಳಿ ಮೂರನೇ ಸಭೆ
Last Updated 23 ಏಪ್ರಿಲ್ 2017, 20:15 IST
ಅಕ್ಷರ ಗಾತ್ರ

ನವದೆಹಲಿ : ‘ನವ ಭಾರತ’ ನಿರ್ಮಾಣಕ್ಕಾಗಿ 15 ವರ್ಷಗಳ ಸುದೀರ್ಘ ಮುನ್ನೋಟವನ್ನು ನೀತಿ ಆಯೋಗವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮುಂದಿಟ್ಟಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರಾಷ್ಟ್ರಪತಿ ಭವನದಲ್ಲಿ ಭಾನುವಾರ ನಡೆದ ನೀತಿ ಆಯೋಗದ ನಿರ್ವಹಣಾ ಮಂಡಳಿಯ ಮೂರನೇ ಸಭೆಯಲ್ಲಿ ಈ ಮುನ್ನೋಟದ ಬಗ್ಗೆ ಚರ್ಚೆ ನಡೆಯಿತು.

ಜೊತೆಗೆ, ದೇಶದ ಅಭಿವೃದ್ಧಿಗಾಗಿ ಮುಂದಿನ ಏಳು ವರ್ಷಗಳ ಅವಧಿಗೆ ಸರ್ಕಾರದ ಕಾರ್ಯತಂತ್ರ ಮತ್ತು 3 ವರ್ಷಗಳ ಅನುಷ್ಠಾನ ಕಾರ್ಯಸೂಚಿಯ ಬಗ್ಗೆಯೂ ಸಭೆ ಚರ್ಚಿಸಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ದೇಶದ ಚಿಂತಕರ ಚಾವಡಿ ರೂಪಿಸಿರುವ ದೀರ್ಘ, ಮಧ್ಯಮ ಮತ್ತು ಅಲ್ಪಾವಧಿಯ ಕ್ರಿಯಾ ಯೋಜನೆಗಳಿಂದ ಎಲ್ಲ ರಾಜ್ಯಗಳಿಗೆ ಅನುಕೂಲವಾಗಲಿದೆ’ ಎಂದು ಪ್ರತಿಪಾದಿಸಿದರು.

‘ನೀತಿ ಆಯೋಗವು 15 ವರ್ಷಗಳ ಸುದೀರ್ಘ ಮುನ್ನೋಟ, ಏಳು ವರ್ಷಗಳ ಮಧ್ಯಮಾವಧಿ ಕಾರ್ಯತಂತ್ರ ಮತ್ತು ಮೂರು ವರ್ಷಗಳ ಅನುಷ್ಠಾನ ಕಾರ್ಯಸೂಚಿ ಸಿದ್ಧಪಡಿಸುತ್ತಿದೆ’ ಎಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ಹೇಳಿದರು.

ಎಲ್ಲ ರಾಜ್ಯಗಳ ಒಗ್ಗಟ್ಟಿನ ಶ್ರಮ ಮತ್ತು ಸಹಕಾರಗಳಿಂದ ‘ನವ ಭಾರತ’ ನಿರ್ಮಾಣದ ಕನಸನ್ನು ಸಾಕಾರಗೊಳಿಸಬಹುದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಬದಲಾಗುತ್ತಿರುವ ಜಾಗತಿಕ ಪ್ರವೃತ್ತಿಗಳಿಗೆ ದೇಶವನ್ನು ತಯಾರುಗೊಳಿಸಲು ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ಚರ್ಚಿಸುವುದಕ್ಕಾಗಿ ‘ಟೀಮ್‌ ಇಂಡಿಯಾ’ ಇಲ್ಲಿ ಸೇರಿದೆ ಎಂದು ಪ್ರಧಾನಿ ಬಣ್ಣಿಸಿದರು.

75ನೇ ಸ್ವಾತಂತ್ರ್ಯೋತ್ಸವದ ವರ್ಷವಾದ 2022ರಲ್ಲಿ ಭಾರತ ಹೇಗಿರಬೇಕು ಎಂಬುದನ್ನು ಕಲ್ಪಿಸಿಕೊಳ್ಳಲು ಮತ್ತು ಅದಕ್ಕಾಗಿ ನಿಗದಿಪಡಿಸಿರುವ ಗುರಿಗಳನ್ನು ಸಾಧಿಸಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.

ನೀತಿ ಆಯೋಗ ಎಂದರೆ, ಅದು ಎಲ್ಲರ ಸಹಭಾಗಿತ್ವದ ಸಂಸ್ಥೆ. ಯೋಚನೆಗಳು ಇದರ  ಶಕ್ತಿಯೇ ಹೊರತು ಆಡಳಿತಾತ್ಮಕ ಅಥವಾ ಹಣಕಾಸಿನ ನಿಯಂತ್ರಣವಲ್ಲ. ಬಜೆಟ್‌ ಅಥವಾ ಯೋಜನೆಗಳಿಗೆ ಅನುಮತಿ ಪಡೆಯಲು ಮುಖ್ಯಮಂತ್ರಿಗಳು ನೀತಿ ಆಯೋಗದ ಬಳಿಗೆ ಬರುವ ಅಗತ್ಯವಿಲ್ಲ ಎಂದರು.

ಮೂಲಸೌಕರ್ಯಕ್ಕೆ ಒತ್ತುಕೊಡಿ: ‘ತ್ವರಿತ ಆರ್ಥಿಕ ಅಭಿವೃದ್ಧಿಗಾಗಿ ಬಂಡವಾಳ ವೆಚ್ಚ ಮತ್ತು ಮೂಲಸೌಕರ್ಯ ಸೃಷ್ಟಿಗೆ ರಾಜ್ಯಗಳು ಇನ್ನಷ್ಟು ವೇಗ ನೀಡುವ ಅಗತ್ಯವಿದೆ’ ಎಂದು ಮೋದಿ ಹೇಳಿದರು.

‘ದೇಶದಲ್ಲಿನ ಮೂಲಸೌಕರ್ಯ ಕೊರತೆಯು ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗಿದೆ. ರಸ್ತೆಗಳು, ಬಂದರುಗಳು, ವಿದ್ಯುತ್‌ ಮತ್ತು ರೈಲುಗಳಂತಹ ಅಗತ್ಯ ಮೂಲಸೌಕರ್ಯಕ್ಕೆ ಹೆಚ್ಚು ವೆಚ್ಚ  ಮಾಡುವುದರಿಂದ ಪ್ರಗತಿಯ ವೇಗ ಹೆಚ್ಚಲಿದೆ’ ಎಂದರು.

ಬಜೆಟ್‌ ದಿನಾಂಕದಲ್ಲಿ ಮಾಡಿರುವ ಬದಲಾವಣೆಯನ್ನು ಪ್ರಸ್ತಾಪಿಸಿದ ಅವರು,  ಕೃಷಿ ಆದಾಯ ಅತ್ಯಂತ ಪ್ರಮುಖವಾದ ರಾಷ್ಟ್ರದಲ್ಲಿ, ಒಂದು ವರ್ಷದ ಕೃಷಿ ಆದಾಯ ಕೈಸೇರಿದ ತಕ್ಷಣ ಬಜೆಟ್‌ ಸಿದ್ಧಪಡಿಸಬೇಕು ಎಂದು ಅಭಿಪ್ರಾಯಪಟ್ಟರು.

‘ವಿಳಂಬ ಮಾಡದಿರಿ’: ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೊಳಿಸಲು ಅನುಕೂಲವಾಗುವಂತೆ  ರಾಜ್ಯಗಳು,  ತಮ್ಮ ಜಿಎಸ್‌ಟಿ ಕಾಯ್ದೆಗಳನ್ನು  ವಿಳಂಬ ಮಾಡದೇ ಜಾರಿಗೆ ತರಬೇಕು ಎಂದು ಮೋದಿ ಸೂಚಿಸಿದರು.

ಮಮತಾ, ಕೇಜ್ರಿವಾಲ್‌ ಗೈರು (ನವದೆಹಲಿ ವರದಿ): ನೀತಿ ಆಯೋಗದ ಆಡಳಿತ ಮಂಡಳಿ ಸಭೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಗೈರಾಗಿದ್ದರು.

ಕೇಜ್ರಿವಾಲ್‌ ಬದಲಾಗಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಜರಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ಮೋದಿ ಹೇಳಿದ್ದು...

* ‘ಭಾರತ–2022’ಕ್ಕೆ ಗುರಿಗಳನ್ನು ನಿಗದಿಪಡಿಸಿ ಅವುಗಳನ್ನು ಈಡೇರಿಸಲು ರಾಜ್ಯಗಳು, ಸ್ಥಳೀಯ ಆಡಳಿತ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಶ್ರಮಿಸಬೇಕು

* ಸರ್ಕಾರಿ ಖರೀದಿಯಲ್ಲಿ ಪಾರದರ್ಶಕತೆ ಹೆಚ್ಚಿಸುವುದಕ್ಕಾಗಿ ರಾಜ್ಯಗಳು  ಸರ್ಕಾರದ ಇ–ಮಾರ್ಕೆಟ್‌ಪ್ಲೇಸ್‌ ಪೋರ್ಟಲ್‌ ಬಳಸಬೇಕು

* ಭೀಮ್‌ ಮತ್ತು ಆಧಾರ್‌ ತಂತ್ರಜ್ಞಾನಗಳನ್ನು ಬಳಸಿ. ಇದರಿಂದ ರಾಜ್ಯಗಳಿಗೆ ಹೆಚ್ಚು ಉಳಿತಾಯವಾಗಲಿದೆ

* ಜನವರಿಯಿಂದ ಡಿಸೆಂಬರ್‌ ಅವಧಿಯನ್ನು ಆರ್ಥಿಕ ವರ್ಷ ಎಂದು ಪರಿಗಣಿಸಬೇಕು ಎಂಬ ಸಲಹೆಗಳ ಬಗ್ಗೆ ರಾಜ್ಯಗಳು ಯೋಚಿಸಬೇಕು

* ಏಕಕಾಲಕ್ಕೆ ಎಲ್ಲ ಚುನಾವಣೆಗಳನ್ನು ನಡೆಸುವ ಪ್ರಸ್ತಾವದ ಬಗೆಗಿನ ಚರ್ಚೆಯನ್ನು ಮುಂದುವರಿಸಬೇಕು

* ತಮ್ಮ ರಾಜ್ಯದಲ್ಲಿರುವ ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿಗಳ ರಕ್ಷಣೆಗೆ ಸರ್ಕಾರಗಳು ಕ್ರಮ ಕೈಗೊಳ್ಳಬೇಕು

300 ಅಂಶಗಳ ಕ್ರಿಯಾಯೋಜನೆ
ದೇಶದ ಆರ್ಥಿಕ ಅಭಿವೃದ್ಧಿಗೆ ಇನ್ನಷ್ಟು ಉತ್ತೇಜನ ನೀಡುವುದಕ್ಕಾಗಿ ನೀತಿ ಆಯೋಗವು 300 ಅಂಶಗಳ ಕ್ರಿಯಾ ಯೋಜನೆಯನ್ನು ಸಭೆಯ ಮುಂದಿಟ್ಟಿದೆ.

ಈ ಅಂಶಗಳು, ಆಯೋಗದ ಉಪಾಧ್ಯಕ್ಷ ಅರವಿಂದ ಪನಗರಿಯಾ ಅವರು ಮಂಡಿಸಿದ್ದ 15 ವರ್ಷಗಳ ಸುದೀರ್ಘ ಮುನ್ನೋಟದ ಭಾಗವಾಗಿತ್ತು  ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಆದರೆ, ಕ್ರಿಯಾ ಯೋಜನೆಗಳ ವಿವರಗಳು ಲಭ್ಯವಾಗಿಲ್ಲ.

‘ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿ ಸಿದ್ಧಪಡಿಸಿದ್ದ ಕರಡು ಕ್ರಿಯಾ ಯೋಜನೆಗಳ ಕುರಿತು ಪನಗರಿಯಾ ಸಭೆಯಲ್ಲಿ ಪ್ರಸ್ತಾಪಿಸಿದರು’ ಎಂದು
ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT