ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಕೆ ವಿರುದ್ಧ ಚಾಟಿ ಬೀಸಿದ ಅಭಿಮಾನಿಗಳು

Last Updated 23 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಸಾವಿರ ಕೋಟಿ ರೂಪಾಯಿ ಬಜೆಟ್‌ನ ‘ಮಹಾಭಾರತ’ದಲ್ಲಿ ಪಾತ್ರಗಳ ಆಯ್ಕೆ ಪ್ರಕ್ರಿಯೆ ಇನ್ನು ಶುರುವಾಗಬೇಕಷ್ಟೇ. ಆದರೆ ಕಮಾಲ್ ಆರ್.ಖಾನ್‌ (ಕೆಆರ್‌ಕೆ) ಎಂಬಾತ ಮೋಹನ್‌ಲಾಲ್‌ ಬಗ್ಗೆ ಮಾಡಿರುವ ಟ್ವೀಟ್‌ ಭಾರಿ ವಿವಾದ ಹುಟ್ಟು ಹಾಕಿದೆ. ಯಾರು ಯಾವ ಪಾತ್ರ ಮಾಡಬೇಕು, ಮಾಡಬಾರದು ಎಂಬ ವಾಕ್ಸಮರಕ್ಕೆ ಸಾಮಾಜಿಕ ಮಾಧ್ಯಮಗಳು ವೇದಿಕೆಯಾಗಿವೆ.
 
‘ಪರಿಪೂರ್ಣ ನಟ’ (ದಿ ಕಂಪ್ಲೀಟ್ ಆ್ಯಕ್ಟರ್‌) ಮೋಹನ್‌ಲಾಲ್ ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲಿ ಜನಪ್ರಿಯರು. ಕೆಆರ್‌ಕೆ ಟ್ವೀಟ್‌ಗೆ ಮೋಹನ್‌ಲಾಲ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗೆಂದು ಮೋಹನ್‌ಲಾಲ್ ಅಭಿಮಾನಿಗಳು ಸುಮ್ಮನಿದ್ದಾರೆ ಎಂದು ಭಾವಿಸಬೇಡಿ.
 
‘ಮೋಹನ್‌ಲಾಲ್ ನೀವು ಛೋಟಾ ಭೀಮ್‌ ಥರ ಕಾಣ್ತೀರಿ. ಅದ್ಹೇಗೆ ‘ಮಹಾಭಾರತ’ದಲ್ಲಿ ಭೀಮನ ಪಾತ್ರ ಮಾಡಬಲ್ಲಿರಿ? ಬಿ.ಆರ್.ಶೆಟ್ಟಿ ಅವರ ದುಡ್ಡನ್ನೇಕೆ ಹಾಳು ಮಾಡ್ತೀರಿ?’ (Sir @Mohanlal you look like Chota Bheem so then how will u play role of Bheem in Mahabharata? Why do you want to waste money of B R shetty?) ಎಂಬ ಕೆಆರ್‌ಕೆ ಟ್ವೀಟ್ ನೋಡಿ ಮೋಹನ್‌ಲಾಲ್‌ ಅಭಿಮಾನಿಗಳು ಕುದ್ದು ಹೋಗಿದ್ದರು.
 
ಕೆಆರ್‌ಕೆ ಈ ಹಿಂದೆ ಸೋನಾಕ್ಷಿ ಸಿನ್ಹಾ, ರಣವೀರ್‌ ಸಿಂಗ್‌ ಕುರಿತೂ ಇದೇ ರೀತಿ ಟ್ವೀಟ್‌ ಮಾಡಿದ್ದರು. ಆದರೆ ಯಾರೂ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಈ ಬಾರಿ, ಸಾವಿರ ಕೋಟಿ ಬಜೆಟ್‌ನ ಚಿತ್ರ ಎಂಬ ಹೆಗ್ಗಳಿಕೆಯ ‘ಮಹಾಭಾರತ’ದಲ್ಲಿ ತಮ್ಮ ನೆಚ್ಚಿನ ನಟ ಪಾತ್ರ ಮಾಡಬೇಕೆಂಬ ಮಹದಾಸೆಗೆ ಕೆಆರ್‌ಕೆ ಅಡ್ಡಗಾಲು ಹಾಕಿದರೆ ಮಾಲಿವುಡ್‌ ಪ್ರೇಕ್ಷಕರು ಸುಮ್ಮನಿರುತ್ತಾರೆಯೇ?
 
ಈ ಟ್ವೀಟ್ ಸಮರವು ಮಲಯಾಳ ಚಿತ್ರರಂಗದಲ್ಲಿ ಹೊಸ ಸಂಚಲನವೊಂದಕ್ಕೆ ಕಾರಣವಾಗಿರುವುದು ಕುತೂಹಲದ ಸಂಗತಿ. ಮೋಹನ್‌ಲಾಲ್‌ ಮತ್ತು ಮಮ್ಮುಟ್ಟಿ ಅಭಿಮಾನಿಗಳು ಒಗ್ಗೂಡಿ ಕೆಆರ್‌ಕೆ ಮೇಲೆ ಟ್ರೋಲ್‌ ಮಾಡುತ್ತಿದ್ದಾರೆ. 
 
‘ಮಲ್ಲು ಸೈಬರ್‌ ಸೋಲ್ಜರ್ಸ್‌’ ಎಂಬ ಮಲೆಯಾಳಿ ನೆಟಿಜನ್ನರ ಬಳಗ ಕೆಆರ್‌ಕೆ ವಿರುದ್ಧ  ಹೊಸ ಅಸ್ತ್ರ ಪ್ರಯೋಗಿಸಿದೆ. ಈ ಸೈಬರ್‌ ಯೋಧರೆಲ್ಲಾ ಮೊನ್ನೆ ತುರ್ತು ಸಭೆ ಸೇರಿ, ಕೆಆರ್‌ಕೆ ವಿರುದ್ಧ ಸೈಬರ್‌ ದಾಳಿ ನಡೆಸಿ ಆತನ ಖಾಸಗಿ ಇಮೇಲ್‌ ಐ.ಡಿಯನ್ನೂ ಹ್ಯಾಕ್‌ ಮಾಡಿದ್ದಾರೆ. ಅಲ್ಲದೆ, ಕೆಆರ್‌ಕೆಯ ‘ಗೂಗಲ್‌ ಆ್ಯಡ್‌ ಸೆನ್ಸ್‌’ ಖಾತೆಯಲ್ಲಿ ಮಾರ್ಪಾಟು ಮಾಡುವ ಮೂಲಕ ಆದಾಯಕ್ಕೆ ಕತ್ತರಿ ಹಾಕಿದ್ದಾರೆ.
 
ಈ ಮಾಹಿತಿಯನ್ನು  @TheMalluCyberSoldiers ಫೇಸ್‌ಬುಕ್ ಖಾತೆಯಲ್ಲಿ ಹೆಮ್ಮೆಯಿಂದ ಪ್ರಕಟಿಸಲಾಗಿದೆ. ಇದೇ ಹೊತ್ತಿಗೆ, ‘ಮಹಾಭಾರತ ಸಿನಿಮಾದಲ್ಲಿ ನಾನು ಶ್ರೀಕೃಷ್ಣನ ಪಾತ್ರ ಮಾಡಲು ಬಯಸುತ್ತೇನೆ. ಯಾಕೆಂದರೆ, ನಾನೂ ಶ್ರೀಕೃಷ್ಣನ ಜನ್ಮಭೂಮಿಯಾದ ಉತ್ತರಪ್ರದೇಶದವನು’ ಎಂಬ ಕೆಆರ್‌ಕೆ ಹೇಳಿಕೆ ನಗೆಪಾಟಲಿಗೀಡಾಗಿದೆ.
 
ಒಟ್ಟಿನಲ್ಲಿ, ಸಾವಿರ ಕೋಟಿ ಬಜೆಟ್‌ನ ಚಿತ್ರದ ನೆಪದಲ್ಲಿ ಶುರುವಾಗಿರುವ ಟ್ವಿಟರ್‌ ಕುರುಕ್ಷೇತ್ರ ಹೇಗೆ ಅಂತ್ಯ ಕಾಣುತ್ತದೆ ಎಂಬುದನ್ನು ಎಲ್ಲರೂ ಕುತೂಹಲದಿಂದ ಗಮನಿಸುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT