ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯೂಷನ್! ಬೇಕೇ? ಏಕೆ?

Last Updated 23 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಮಕ್ಕಳು ಒಂದೆಡೆ ಬೇಸಿಗೆ ರಜೆಯನ್ನು ಸವಿಯುತ್ತಿದ್ದರೆ, ಇನ್ನೊಂದೆಡೆ ಶಾಲಾರಂಭದ ದಿನಗಣನೆಯೂ ಶುರುವಾಗಿಬಿಡುತ್ತದೆ. ಮೇ ಕೊನೆಯ ಭಾಗದಲ್ಲಿ ಇಲ್ಲವೇ ಜೂನ್‌ 1ರಿಂದ ಶಾಲೆಗಳು ಪುನಃ ಆರಂಭಗೊಳ್ಳುತ್ತವೆ.

ಶಾಲೆಗಳಲ್ಲಿ ಅಡ್ಮಿಷನ್‍ ಪ್ರಕ್ರಿಯೆ ಈಗಾಗಲೇ ಒಂದು ಹಂತಕ್ಕೆ ಬಂದಿರುತ್ತದೆ. ಆದರೆ, ಅನೇಕ ‘ಮನೆಪಾಠ’ (ಟ್ಯೂಷನ್‍) ತರಗತಿಗಳಲ್ಲಿ ಈ ವರ್ಷದ ಅಡ್ಮಿಷನ್ ಮುಗಿದು ವರ್ಷವೇ ಆಗಿದೆ! ಇನ್ನು ಕೆಲವಲ್ಲಿ ಮುಂದಿನ ಶೈಕ್ಷಣಿಕ ವರ್ಷದ ಸೇರ್ಪಡೆಯೂ ಮುಗಿದಿದೆ! 
 
ಹತ್ತನೇ ತರಗತಿಯಿಂದ ಪ್ರಾರಂಭವಾಗುವ ‘ಬೇಕೇ ಬೇಕು ಟ್ಯೂಷನ್’ ಎನ್ನುವ ಮನಸ್ಥಿತಿ, ಪಿಯುಸಿ ಹಂತದಲ್ಲಿ ತಾರಕಕ್ಕೇರಿ ನಿಧಾನವಾಗಿ ಮುಂದುವರೆದು ಸ್ನಾತಕೋತ್ತರ ತರಗತಿಗಳವರೆಗೂ ಹೋಗಿ ನಿಲ್ಲುತ್ತದೆ. ನಿಜವಾಗಿ ಟ್ಯೂಷನ್‍ ಬೇಕೆ? ಇದೊಂದು ಗಂಭೀರವಾದ ಪ್ರಶ್ನೆ. ಶಿಕ್ಷಣಕ್ಕೆ ಸಂಬಂಧಪಟ್ಟ ಎಲ್ಲರೂ ಗಂಭೀರವಾಗಿ ಯೋಚಿಸಬೇಕಾದ ವಿಷಯ.
 
‘ಮನೆ ಪಾಠಕ್ಕೆ ಹೋಗುತ್ತಾನೆ’ ಎಂದರೆ ಅವಮಾನ ಎಂಬ ಕಾಲಮಾನದಿಂದ, ‘ಮನೆ ಪಾಠ ಶಿಕ್ಷಣದ ಅವಿಭಾಜ್ಯ ಅಂಗ’ ಎಂದು ಪೋಷಕರು ತಿಳಿದಿರುವ ಈ ಕಾಲಕ್ಕೆ ನಾವು ಬಂದಿದ್ದೇವೆ.
 
ಶಾಲೆಗಳಲ್ಲಿ ನಡೆದ ಪಾಠಗಳು ಕಾರಣಾಂತರದಿಂದ ಸರಿಯಾಗಿ ಅರ್ಥವಾಗದ ಮಕ್ಕಳಿಗೆ ಶಿಕ್ಷಕರು ಬೇರೆಯಾಗಿ ಮನೆಗೆ ಕರೆದೋ ಅಥವಾ ಶಾಲೆಯಲ್ಲಿಯೋ ಹೆಚ್ಚುವರಿಯಾಗಿ ಪಾಠ ಹೇಳುತ್ತಿದ್ದರು.

ಅಲ್ಲಿ ಶಾಲೆಯ ಶಿಕ್ಷಕರು ಪ್ರೀತಿಯಿಂದ ಕರೆದು – ‘ಎಷ್ಟು ಹೇಳಿದರೂ ನಿನ್ನ ತಲೆಗೆ ಹತ್ತುವುದಿಲ್ಲವಲ್ಲೋ?’ ಎಂದು ಪ್ರೀತಿಯಿಂದ ಬೈಯ್ದು, ತಿಂಡಿ ಕೊಟ್ಟು ಪಾಠ ಹೇಳಿಕಳಿಸುತ್ತಿದ್ದರು. ಇಂದು ಎಷ್ಟೋ ಕಡೆ ಮನೆಪಾಠ ದಂಧೆಯ ಸ್ವರೂಪ ಪಡೆದುಕೊಂಡಿದೆ. 
 
ಪ್ರಸ್ತುತ ಮನೆಪಾಠ ಹಲವಾರು ರೂಪಗಳನ್ನು ಪಡೆದುಕೊಂಡಿದೆ. ಟ್ಯೂಷನ್‌ ಮಾಡುವ ಮನೆ ದೊಡ್ಡ ಮಹಲಾಗಿಯೂ, ಕಾಲೇಜನ್ನು ಮೀರಿಸುವ ವ್ಯವಸ್ಥೆಯಾಗಿಯೂ ಬೆಳೆದಿದೆ. ಇಂದಿಗೂ ಅವಶ್ಯಕತೆಯಿರುವ ಮಕ್ಕಳಿಗೆ ಪ್ರೀತಿಯಿಂದ ಯಾವುದೇ ಶುಲ್ಕ ತೆಗೆದುಕೊಳ್ಳದೆ ಪಾಠ ಹೇಳುವ ಶಿಕ್ಷಕರು, ಉಪನ್ಯಾಸಕರಿದ್ದಾರೆ. ಇದು ಒಂದು ಸ್ತರ. 

ಆನಂತರ ಶಾಲಾಶಿಕ್ಷಕರು ಶುಲ್ಕ ವಿಧಿಸಿ ವಿದ್ಯಾರ್ಥಿಗಳಿಗೆ ಮನೆಪಾಠ ಮಾಡುತ್ತಿದ್ದಾರೆ. ಇದರಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಯ ಶಿಕ್ಷಕರಿದ್ದಾರೆ, ಕಾಲೇಜು ಉಪನ್ಯಾಸಕರಿದ್ದಾರೆ.
 
ಮುಂದೆ ಹತ್ತನೇ ತರಗತಿ, ಪದವಿಪೂರ್ವ ಘಟ್ಟದಿಂದ – ನಾವು ಗಂಭೀರವಾಗಿ ಪರಿಗಣಿಸಬೇಕಾದ, ಚರ್ಚಿಸಿ ಯುಕ್ತ ಮಾರ್ಗ ಹುಡುಕಿಕೊಳ್ಳಬೇಕಾದ ಘಟ್ಟ ಆರಂಭವಾಗುತ್ತದೆ.
 
ಇದರ ಜೊತೆ ಜೊತೆಗೆ ಬೀದಿ ಬೀದಿಗಳಲ್ಲಿ ‘ಇಲ್ಲಿ ಒಂದರಿಂದ ಹತ್ತನೇ (ಅಥವಾ ಒಂಬತ್ತನೇ) ತರಗತಿಯವರೆಗೆ ಪಾಠ ಹೇಳಲಾಗುತ್ತದೆ’ ಎಂದು (ಎಷ್ಟೋಬಾರಿ ತಪ್ಪು ಇಂಗ್ಲಿಷಿನಲ್ಲಿ) ಫಲಕ ತೂಗಾಡಿಸಿರುತ್ತಾರೆ. ಇಲ್ಲಿನ ಶಿಕ್ಷಕರು ಬಹುತೇಕ ಹತ್ತನೇ ತರಗತಿ ಇಲ್ಲವೇ ಪಿಯುಸಿ ಪಾಸು ಮಾಡಿ ಗೆದ್ದವರು.

ಶಿಕ್ಷಣ ಕುರಿತಾದ ಯಾವ ಆಲೋಚನೆಯಾಗಲೀ ತರಬೇತಿಯಾಗಲೀ ಇಲ್ಲದ ಇವರುಗಳಲ್ಲಿ ನೂರಾರು ಮಕ್ಕಳು ‘ಪಾಠಕ್ಕೆ’ ಬರುತ್ತಾರೆ. ಇದು ಆತಂಕಕಾರಿ ವಿಷಯ. ಪೋಷಕರು ಈ ಎಲ್ಲವನ್ನೂ ಯೋಚಿಸಬೇಕು.

‘ಪಾಪ! ನಾಲ್ಕು ಮಕ್ಕಳಿಗೆ ಪಾಠ ಹೇಳಿ, ತನ್ನ ಕಾಲ ಮೇಲೆ ತಾನು ನಿಂತಿದ್ದಾಳೆ/ನೆ’ ಎಂಬ ಕನಿಕರವೂ ಇವರ ಪಾಲಿಗಿದೆ. ಆದರೆ, ಶಿಕ್ಷಣದ ನಿಜ ಗುರಿಗಳು ಇವರಿಂದ ಈಡೇರಿಸಲು ಸಾಧ್ಯವೇ? ಇವರಲ್ಲಿ ಕೆಲವರು ಹಿಂದೆ ಶಿಕ್ಷಕರಾಗಿದ್ದವರಿರಬಹುದು, ಆದರೆ ಅಂಥವರ ಸಂಖ್ಯೆ ಕಡಿಮೆ.

ಶಾಲೆಯಲ್ಲಿ ಮಾಡಿಸಿದ್ದನ್ನೇ ಮತ್ತೊಮ್ಮೆ ಓದಿಸಿ ಓಡಿಸುವುದೇ ಟ್ಯೂಷನ್ ಆಗಿದೆ ಇಲ್ಲಿ. ಮಕ್ಕಳಲ್ಲಿ ಕಲಿಕೆ ಆಗುತ್ತಿದೆಯೇ? ಪೋಷಕರು ಯೋಚಿಸಬೇಕಾದ ವಿಷಯ.
 
ಶಿಕ್ಷಣದ ಮುಖ್ಯ ಉದ್ದೇಶವೇನು? ದೇಶಕ್ಕೆ ಯುಕ್ತ ಮಾನವ ಸಂಪನ್ಮೂಲವನ್ನು ಒದಗಿಸುವುದು. ಇದಕ್ಕೆ ಯುಕ್ತ ತರಬೇತಿ ಹೊಂದಿದ, ಆಸಕ್ತ ಶಿಕ್ಷಕರನ್ನು ಒಳಗೊಂಡ ಶಾಲೆ ಕಾಲೇಜುಗಳ ಪಾತ್ರವೇ ಹಿರಿದಾಗಬೇಕು. ಇಲ್ಲಿ ಟ್ಯೂಷನ್‌ಗೆ ಸ್ಥಳವೇ ಇಲ್ಲ. ಆದರೆ, ಟ್ಯೂಷನ್ ಎರಡು ಸಂದರ್ಭಗಳಲ್ಲಿ ಅವಶ್ಯಕತೆಯಿದೆ, ನಡೆಯುತ್ತಿದೆ: 
1. ಹೆಚ್ಚುವರಿ ಬೋಧನೆ ಅಗತ್ಯ. 
2. ಪ್ರವೇಶಪರೀಕ್ಷೆಗಳಿಗೆ ತರಬೇತಿ. 
 
ರಾಷ್ಟ್ರ–ಅಂತರರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಅನೇಕ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರ ವ್ಯಾಪ್ತಿ ಪ್ರೌಢಶಾಲೆಯ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಗಳಿಂದ ಹಿಡಿದು ಐಐಟಿ, ಜೆಇಇ ರೀತಿಯ ಪರೀಕ್ಷೆಗಳವರೆಗೂ ಹಬ್ಬಿದೆ.

ಇಂತಹ ಪರೀಕ್ಷೆಗಳಿಗೆ ಮಕ್ಕಳನ್ನು ಬೇರೆಯೇ ರೀತಿಯಲ್ಲಿ ತಯಾರು ಮಾಡಬೇಕಾಗುತ್ತದೆ. ಆ ಕಾರ್ಯವನ್ನು ಮಾಡಲೆಂದೇ ಅನೇಕ ಟ್ಯೂಷನ್ ಕೇಂದ್ರಗಳು ಹುಟ್ಟಿಕೊಂಡಿವೆ. ಯಶಸ್ಸನ್ನೂ ಗಳಿಸಿವೆ. 
 
ಇತ್ತೀಚೆಗೆ ಸರ್ಕಾರದ ಮಹತ್ವಾಕಾಂಕ್ಷೀ ಯೋಜನೆಯಾದ ‘ಕಿಶೋರ್‍ ವೈಜ್ಞಾನಿಕ್ ಯೋಜನಾ’ – ಇದಕ್ಕೂ ಸಹ ಕಲಿಕಾ ಕೇಂದ್ರಗಳು ತರಬೇತಿಯನ್ನು ನೀಡುತ್ತಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡುವುದು ಈ ಕೇಂದ್ರಗಳಿಂದ ಆಗುತ್ತಿರುವ ಬಹುದೊಡ್ಡ ಪ್ರಯೋಜನ. ಇಲ್ಲಿ ಅನೇಕ ಕಡೆಗಳಲ್ಲಿ ಪದವಿಪೂರ್ವ ಕಲಿಕೆಯ ವಿಜ್ಞಾನ, ಗಣಿತ, ಮತ್ತಿತರ ತಾಂತ್ರಿಕ ವಿಷಯಗಳನ್ನು ಬೋಧಿಸುತ್ತಾರೆ.
 
ಮತ್ತೆ ಕೆಲವೆಡೆ ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ತಯಾರಿ ಮಾತ್ರ ನಡೆಯುತ್ತದೆ. ಇಲ್ಲಿನ ಬಹುತೇಕ ವಿದ್ಯಾರ್ಥಿಗಳು ಸದರಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ತಾಂತ್ರಿಕ, ವೈದ್ಯಕೀಯ ಸೀಟುಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ ಎಂಬುದೂ ಸತ್ಯ. ಅಂದರೆ, ಹೆಚ್ಚಿನ ತರಬೇತಿ ಅಗತ್ಯವಿರುವ ಶಾಲಾ–ಕಾಲೇಜು ಮಕ್ಕಳಿಗೆ ಮತ್ತು ವಿಶಿಷ್ಟ ಪರೀಕ್ಷೆಗಳಿಗೆ ತಯಾರಾಗಲು ‘ಟ್ಯೂಷನ್‍’ ಬೇಕು ಎಂದಾಯಿತು. ಇದರ ಸಾಧಕಬಾಧಕಗಳನ್ನು ಪರಿಶೀಲಿಸೋಣ.
 
ಟ್ಯೂಷನ್ ಅಥವಾ ಮನೆಪಾಠ ಈಗಿರುವ ಸ್ವರೂಪದಲ್ಲಿ ಖಂಡಿತಾ ಅನವಶ್ಯಕ. ನಮ್ಮ ಸದ್ಯದ ಶಾಲಾಕಾಲೇಜಿನ ವ್ಯವಸ್ಥೆಯೇ ಬೆಳೆದು, ಯಾವುದೇ ಹಂತದ ವಿದ್ಯಾರ್ಥಿಯ ಸರ್ವತೋಮುಖ ಬೆಳೆವಣಿಗೆಗೆ ಕಾರಣ ಮತ್ತು ಪೂರಕವಾಗಬೇಕು. ಬೇರೆ ಟ್ಯೂಷನ್‍ ಕೇಂದ್ರಗಳಲ್ಲಿನ ಶಿಕ್ಷಕರಿಗೂ, ಶಾಲಾಕಾಲೇಜು ಶಿಕ್ಷಕರಿಗೂ ಏನು ವ್ಯತ್ಯಾಸ? ಕೆಲವು ಟ್ಯೂಷನ್ ಕೇಂದ್ರಗಳಲ್ಲಿ ನಿವೃತ್ತ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ, ಅಷ್ಟೆ.
 
ಉಳಿದಂತೆ ಅವರ ವಿದ್ಯಾರ್ಹತೆಯೂ ಸೇರಿದಂತೆ ಇತರ ಕೌಶಲಗಳು ಒಂದೇ ಇರುತ್ತವೆ. ಆದರೆ ಶಾಲಾಕಾಲೇಜು ಶಿಕ್ಷಕರಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಕ್ಕಳನ್ನು ಹೇಗೆ ತಯಾರಿ ಮಾಡಬೇಕು ಎಂಬುದು ತಿಳಿದಿರುವುದಿಲ್ಲ. ಅಥವಾ ಹಾಗೆ ತರಬೇತಿ ಕೊಡುವ ಅವಕಾಶವೇ ಒದಗಿರುವುದಿಲ್ಲ.
 
ಸದರಿ ತರಬೇತಿಯನ್ನು ನಮ್ಮ ಶಾಲಾ ಕಾಲೇಜು ಶಿಕ್ಷಕರಿಗೆ ಕೊಟ್ಟದ್ದೇ ಆದಲ್ಲಿ ಹತ್ತಾರು ವರ್ಷಗಳು ಒಬ್ಬ ವಿದ್ಯಾರ್ಥಿಯನ್ನು ನೋಡುವ ಅವಕಾಶವಿರುವ ಇವರು ಖಂಡಿತವಾಗಿ ಟ್ಯೂಷನ್‍ ಕೇಂದ್ರಗಳಲ್ಲಿ ನಡೆಯುವ ತರಬೇತಿಗಿಂತ ಹೆಚ್ಚಿನದನ್ನು ಮಾಡಬಲ್ಲರು. ಇದು ಇಂದಿನ ಅಗತ್ಯ. 
 
ಖಾಸಗಿ ಟ್ಯೂಷನ್‍ ಕೇಂದ್ರಗಳ ಬಹುದೊಡ್ಡ ಸಮಸ್ಯೆಯೆಂದರೆ – ಅವು ವಿಪರೀತ ದುಬಾರಿ ಹಾಗೂ ಎಷ್ಟೋ ಕಡೆ ಆಯ್ದ ವಿದ್ಯಾರ್ಥಿಗಳನ್ನು ಮಾತ್ರ ತೆಗೆದುಕೊಳ್ಳುತ್ತಾರೆ.

ಎಷ್ಟೋ ವಿದ್ಯಾರ್ಥಿಗಳು ಒಂದಕ್ಕಿಂತ ಹೆಚ್ಚು ಕಡೆ ಟ್ಯೂಷನ್‌ಗೆ ಹೋಗುವುದೂ ಇದೆ.  ಮಕ್ಕಳ ಸಮಯ ಶಾಲೆ–ಕಾಲೇಜು ಮತ್ತು ಟ್ಯೂಷನ್ ಇವುಗಳಲ್ಲಿಯೇ ಕಳೆದುಹೋಗುತ್ತಿದೆ. ಅನೇಕ ಮಕ್ಕಳ ಮೇಲೆ ಈ ಅತೀವ ಒತ್ತಡ ಅವು ತಪ್ಪು ಹಾದಿ ಹಿಡಿಯಲು ಕಾರಣವಾಗಿದೆ.
 
ಇದು ಆಗಬಾರದು. (ಕಳೆದ ವರ್ಷ ಪ್ರಶ್ನೆಪತ್ರಿಕೆ ಬಯಲಾದ ಸಂದರ್ಭದಲ್ಲಿ ಕೆಲವು ಬೆರಳುಗಳು ಈ ಟ್ಯೂಷನ್‍ ಕೇಂದ್ರಗಳ ಕಡೆಗೂ ಗುರಿ ಮಾಡಿದ್ದವು. ಇದು ಖಂಡಿತ ನಿಲ್ಲಬೇಕು).
 
ಬದಲಾಗಿ, ನಮ್ಮ ಶಾಲಾಕಾಲೇಜು ಶಿಕ್ಷಕರಿಗೆ ಯುಕ್ತ ತರಬೇತಿಯನ್ನು ನೀಡಿದರೆ ಎಲ್ಲ ವಿದ್ಯಾರ್ಥಿಗಳಿಗೂ ‘ಕಲಿಕೆಯ ಸಿರಿ’ ದೊರೆತಂತಾಗುತ್ತದೆ. ಇದು ಹೆಚ್ಚುವರಿ ಕಲಿಕೆ ಅಗತ್ಯವಿರುವ ವಿದ್ಯಾರ್ಥಿಗಳ ವಿಷಯದಲ್ಲಿಯೂ ನಿಜ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಯತ್ನಿಸುತ್ತಿರುವ ವಿದ್ಯಾರ್ಥಿಗಳ ವಿಷಯದಲ್ಲಿಯೂ ನಿಜ. 
 
ಅಂದರೆ, ಇಲ್ಲಿನ ಕಲ್ಪನೆಯ ಹಂದರ ಬಹುದೊಡ್ಡದು. ಒಂದು ಶಾಲೆ ಅಥವಾ ಕಾಲೇಜು (ಎರಡೂ ಇರುವಂಥ ಸಂಸ್ಥೆಗಳೂ ಸೇರಿದಂತೆ) ಒಂದು ಮಗು ಆ ವಿದ್ಯಾಸಂಸ್ಥೆಯನ್ನು ಸೇರಿದರೆ ಅದಕ್ಕೆ ಬೇಕಾದ ಎಲ್ಲ ಬಗೆಯ ಶಿಕ್ಷಣ, ತರಬೇತಿಗಳು ಅದೇ ಶಾಲೆಯಲ್ಲಿ ದೊರಕುವಂತಾಬೇಕು.

ಆ ವಿದ್ಯಾಸಂಸ್ಥೆ ಇಂತಹ ಕಾರ್ಯವೆಸಗಲು ಸನ್ನದ್ಧರಾಗಿರುವ ಶಿಕ್ಷಕರಿಂದ ಕೂಡಿರಬೇಕು ಹಾಗೂ ಆ ಸಂಸ್ಥೆಯಲ್ಲಿ ಇದಕ್ಕೆ ಬೇಕಾದ ಆಧುನಿಕ ತಂತ್ರಜ್ಞಾನದ ಸವಲತ್ತುಗಳೂ ಸೇರಿದಂತೆ ಎಲ್ಲ ಅಗತ್ಯ ಸಂಪನ್ಮೂಲಗಳನ್ನು ಹೊಂದಿರಬೇಕು.
 
ಇದು ತಿರುಕನ ಕನಸೆಂಬಂತೆ ಕಾಣಬಹುದು. ಆದರೆ, ಗಂಭೀರವಾಗಿ ಯೋಚಿಸಿನೋಡೋಣ. ಭಾರತ ವಿಶ್ವದ ಎರಡನೇ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಹಾಗೂ ಅತಿ ಹೆಚ್ಚು ಸಂಖ್ಯೆಯ ಯುವಜನರನ್ನು ಹೊಂದಿರುವ ದೇಶ. ಇಲ್ಲಿನ ಈ ಯುವಜನರನ್ನು ದೇಶ ಬಳಸಿಕೊಳ್ಳಬಹುದಾದ, ಮಾನವ ಸಂಪನ್ಮೂಲವನ್ನಾಗಿಸುವ ಗುರುತರ ಜವಾಬ್ದಾರಿ ಸರ್ಕಾರ ಹಾಗೂ ಸಮಾಜದ ಮೇಲಿದೆ.
 
ವಾಸ್ತವದಲ್ಲಿ ಇಂದು ಉತ್ತಮ ಶಿಕ್ಷಣ ಕೇವಲ ಹಣವಿದ್ದವರ ಪಾಲಾಗುತ್ತಿದೆ. ಇದು ತಪ್ಪಿ ಯಾವುದೇ ಹಿನ್ನೆಲೆಯಿಂದ ಬರುವ ಮಗುವಿಗೆ ಅದರ ಬೌದ್ಧಿಕ ಶಕ್ತಿಗೆ ಅನುಸಾರವಾದ ಅತ್ಯುತ್ತಮ ಶಿಕ್ಷಣ ಹಾಗೂ ಯುಕ್ತ ತರಬೇತಿ ದೊರೆಯಲೇಬೇಕು. ಇದಕ್ಕಾಗಿ ಸರ್ಕಾರ ವಿಶೇಷ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು.
 
ಪ್ರತಿ ಸರ್ಕಾರಿ, ಖಾಸಗಿ ವಿದ್ಯಾಸಂಸ್ಥೆ ನಿಗದಿತ ಪಠ್ಯ ಮಾತ್ರವಲ್ಲದೆ ಸರ್ಕಾರದ ವಿಶೇಷ ಯೋಜನೆಗಳು, ದೇಶದಲ್ಲಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ, ವ್ಯಕ್ತಿತ್ವವಿಕಸನ ಶಿಕ್ಷಣ, ಮಾನವೀಯತೆ, ವೃತ್ತಿಪರ ಶಿಕ್ಷಣ – ಈ ಎಲ್ಲವನ್ನೂ ಒದಗಿಸುವ ದೇಗುಲಗಳಾಗಬೇಕು. ಶಾಲೆ ಮಕ್ಕಳಿಗೆ ಮಾತ್ರವಲ್ಲ – ಶಿಕ್ಷಕರಿಗೂ, ಪೋಷಕರಿಗೂ ಹಾಗೂ ಸಮಾಜಕ್ಕೂ ಶಾಲೆಯಾಗಬೇಕು.

ಈ ನಿಟ್ಟಿನಲ್ಲಿ ಕಾರ್ಯನಿರತರಾಗುವ ಶಿಕ್ಷಕರಿಗೆ ಯುಕ್ತ ತರಬೇತಿ ಮಾತ್ರವಲ್ಲದೆ ಒಂದು ಗೌರವಯುತ ಜೀವನ ನಡೆಸಲು ಬೇಕಾಗುವಂಥಹ ಸಂಬಳ, ಸಲವತ್ತುಗಳನ್ನು ಒದಗಿಸಬೇಕು. ಜೊತೆಗೆ ಶಿಕ್ಷಕರಿಗೆ ಶಿಕ್ಷಣ ಕೊಡುವನ್ನು ಹೊರತುಪಡಿಸಿ ಇತರ ಎಲ್ಲ ಹೊಣೆಗಾರಿಕೆಗಳಿಂದ ಬಿಡುಗಡೆ ಮಾಡಬೇಕು. 
ಶಿಕ್ಷಣಕ್ಕಿಂತ ಮುಖ್ಯವಾದ ಹಾಗೂ ಹೆಚ್ಚು ಪವಿತ್ರವಾದ ಇಲಾಖೆಯಿರಲು ಸಾಧ್ಯವೆ?
****
ಶೈಕ್ಷಣಿಕ ವರ್ಷದ ಆರಂಭದಲ್ಲಿ ಮಕ್ಕಳಿಗೆ ಪಠ್ಯಪುಸ್ತಕಗಳನ್ನೂ ಲೇಖನ ಸಾಮಗ್ರಿಗಳನ್ನೂ ಹೊಂದಿಸಿಕೊಡುವಂತೆ, ‘ಮನೆಪಾಠ’ದ ವ್ಯವಸ್ಥೆಯನ್ನೂ ಪೋಷಕರು ಮಾಡುವುದಿದೆ. ಆದರೆ, ಟ್ಯೂಷನ್‌ನಿಂದ ಮಕ್ಕಳಿಗೆ ನಿಜವಾದ ಅನುಕೂಲ ಆಗುತ್ತಿದೆಯೇ ಎಂದು ಯೋಚಿಸುವವರು ಕಡಿಮೆ.

ಟ್ಯೂಷನ್‌ ಬೇಕಾಗಿರುವುದು ಎಂಥ ಸಂದರ್ಭದಲ್ಲಿ ಎನ್ನುವ ವಿವೇಕ ಪಾಲಕರಿಗೆ ಇರಬೇಕು. ಅಂತೆಯೇ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅನುವಾಗುವಂತೆ ವಿದ್ಯಾಸಂಸ್ಥೆಗಳು ತಮ್ಮನ್ನು ತಾವು ರೂಪಿಸಿಕೊಳ್ಳಬೇಕಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT