ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತಿನ ಶ್ರೇಷ್ಠ ಆಟಗಾರ

ರೊನಾಲ್ಡೊ ಫುಟ್‌ಬಾಲ್‌
Last Updated 23 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಕ್ರಿಸ್ಟಿಯಾನೊ ರೊನಾಲ್ಡೊ 32ರ ಹರೆಯದಲ್ಲೂ ಜಗತ್ತಿನ ಫುಟ್‌ಬಾಲ್‌ ಅಭಿಮಾನಿಗಳ ಅಚ್ಚುಮೆಚ್ಚಿನ ಆಟಗಾರ ಎನಿಸಿದ್ದಾರೆ. ತಮ್ಮ ಅಪ್ರತಿಮ ಕಾಲ್ಚಳಕದಿಂದಾಗಿ ಅವರು 2018ರ ಫಿಫಾ ವಿಶ್ವಕಪ್‌ನಲ್ಲಿ ಆಡುವ ‘ಫೇವರೆಟ್‌ ಸ್ಪರ್ಧಿ’ ಎನಿಸಿದ್ದಾರೆ.
 
ಜಗತ್ತಿನ ಶ್ರೇಷ್ಠ ಫುಟ್‌ಬಾಲ್ ಆಟಗಾರರಾದ ಪೆಲೆ ಹಾಗೂ ಮರಡೊನಾ ಅವರ ಸಾಲಿನಲ್ಲಿ ನಿಲ್ಲುವ  ಸಾಮರ್ಥ್ಯ ಹೊಂದಿರುವ ಏಕೈಕ ಆಟಗಾರರಾಗಿ ಅವರು ಬೆಳೆದಿದ್ದಾರೆ.
 
ರೊನಾಲ್ಡೊ ಫುಟ್‌ಬಾಲ್ ಅಂಗಳದಲ್ಲಿ ಆಡುತ್ತಿದ್ದರೆ ಅಭಿಮಾನಿಗಳಲ್ಲಿ ಮಿಂಚಿನ  ಸಂಚಾರದ ಅನುಭವ ಆಗುತ್ತದೆ. ಅವರು ತಮ್ಮ ಎರಡೂ ಕಾಲುಗಳಲ್ಲಿ ಚೆಂಡನ್ನು ನಿಯಂತ್ರಿಸುವ ಕಲೆಗೆ ಮಾರುಹೋಗದವರೇ ಇಲ್ಲ. ರಭಸವಾಗಿ ಚೆಂಡನ್ನು ಒದೆಯುವಾಗ ರೊನಾಲ್ಡೊ ತಮ್ಮ ಬಲಗಾಲನ್ನು ಹೆಚ್ಚು ಬಳಸುತ್ತಾರೆ. ಮುಂಚೂಣಿ ಆಟಗಾರನಾಗಿ ಕ್ರಿಸ್ಟಿಯಾನೊ ಜಗತ್ತಿಗೆ ಚಿರಪರಿಚಿತರಾಗಿದ್ದಾರೆ.
 
ಬಡಕುಟುಂಬದಲ್ಲಿ ಹುಟ್ಟಿದ ರೊನಾಲ್ಡೊ 12ರ ವಯಸ್ಸಿನಲ್ಲೇ ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದರು. ತಾಯಿ ಅಡುಗೆ ಕೆಲಸ ಮಾಡುತ್ತಿದ್ದರೆ, ತಂದೆ ಉದ್ಯಾನವನದಲ್ಲಿ ಪೌರ ಕಾರ್ಮಿಕರಾಗಿದ್ದರು.  ಅವರಿಗೆ ಒಬ್ಬ ಅಣ್ಣ. ಇಬ್ಬರು ತಂಗಿಯರು ಇದ್ದಾರೆ. 
 
ರೊನಾಲ್ಡೊ ಅವರಲ್ಲಿದ್ದ ಫುಟ್‌ಬಾಲ್‌ ಆಸಕ್ತಿಯನ್ನು ಮೊದಲು ಗುರುತಿಸಿ ಪೋಷಿಸಿದ್ದು ಅವರ ತಾಯಿ.ಆರಂಭದಲ್ಲಿ ಸ್ಪೋರ್ಟಿಂಗ್ ಕ್ಲಬ್‌ ಸೇರಿಕೊಂಡ ಅವರು 2003ರವರೆಗೆ ಪೋರ್ಚುಗಲ್ ರಾಷ್ಟ್ರೀಯ ತಂಡಕ್ಕಾಗಿ ಆಡಿದರು.  ಇಲ್ಲಿ ತಂಡದ ನಾಯಕರಾಗಿ ಸಾಕಷ್ಟು ಪಂದ್ಯಗಳನ್ನು ಗೆದ್ದುಕೊಂಡಿದ್ದಾರೆ. 
 
2003ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಸೇರಿದರು. ಈ ಕ್ಲಬ್‌ನಲ್ಲಿ ಆಡಿದ ಮೊದಲ ಪೋರ್ಚುಗಲ್ ಆಟಗಾರ ಅವರಾಗಿದ್ದರು. ಇಲ್ಲಿ ರೊನಾಲ್ಡೊ ತಮ್ಮ ಆಟದಲ್ಲಿ ಪ್ರತ್ಯೇಕವಾದ ಅಸ್ಮಿತೆ ಕಂಡುಕೊಂಡರು. ಮುಂಚೂಣಿ ಆಟಗಾರರಾಗಿ ಸಾಮರ್ಥ್ಯ ವೃದ್ಧಿಸಿಕೊಂಡರು. 
 
ವಿಶ್ವದ ಅತ್ಯಂತ ಶ್ರೀಮಂತ ಫುಟ್‌ಬಾಲ್‌ ಕ್ಲಬ್ ರಿಯಲ್ ಮ್ಯಾಡ್ರಿಡ್‌ನಿಂದ ರೊನಾಲ್ಡೊಗೆ ಆಹ್ವಾನ ಬಂತು. 2009ರಲ್ಲಿ ಅವರು ಈ ಕ್ಲಬ್‌ ಸೇರಿದರು. ಇಲ್ಲಿಂದ ಮುಂದೆ ಅವರ ಫುಟ್‌ಬಾಲ್ ಆಟದ ಎರಡನೇ ಅಧ್ಯಾಯ ಆರಂಭವಾಯಿತು.
 
ರೊನಾಲ್ಡೊ ಅವರ ಸಾರಥ್ಯದಲ್ಲಿ 2014ರಲ್ಲಿ ರಿಯಲ್ ಮ್ಯಾಡ್ರಿಡ್ ತಂಡ ಯುರೋಪಿಯನ್ ಚಾಂಪಿಯನ್ಸ್ ಲೀಗ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.
12 ವರ್ಷಗಳ ಬಿಡುವಿನ ಬಳಿಕ ಸಿಕ್ಕ ಈ ಪ್ರಶಸ್ತಿ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ಜತೆಗೆ ಜಗತ್ತಿನ ಶ್ರೀಮಂತ ಆಟಗಾರರ ಪಟ್ಟಿಯಲ್ಲೂ ಅವರ ಹೆಸರು ಸೇರಿಕೊಂಡಿದೆ.
 
ಚಾಂಪಿಯನ್ಸ್ ಲೀಗ್‌ನಲ್ಲಿ ಆಡಿದ 11 ಪಂದ್ಯಗಳಲ್ಲಿ ಅವರು 17 ಗೋಲು ಗಳಿಸಿದ್ದರು. ಮೆಸ್ಸಿ ಹೆಸರಿನಲ್ಲಿದ್ದ (15ಗೋಲು) ದಾಖಲೆಯನ್ನು ಅವರು ಅಳಿಸಿ ಹಾಕಿದ್ದರು. ಇದರಿಂದಾಗಿ ವರ್ಷದ ಶ್ರೇಷ್ಠ ಆಟಗಾರ ಪುರಸ್ಕಾರ ಪಡೆದುಕೊಂಡರು.
 
ಈ ವರ್ಷದ ಚಾಂಪಿಯನ್ಸ್ ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ರೊನಾಲ್ಡೊ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.  ಇದರಿಂದಾಗಿ ಮ್ಯಾಡ್ರಿಡ್ ತಂಡ ಸೆಮಿಫೈನಲ್ ಪ್ರವೇಶಿಸಿದೆ. 
 
ಬುಧವಾರ ನಡೆದ ಬೇರ್ಯನ್ ಮ್ಯಾನಿಚ್ ವಿರುದ್ಧದ ಪಂದ್ಯದಲ್ಲಿ ಮ್ಯಾಡ್ರಿಡ್‌ ಕ್ಲಬ್‌ 4–2 ಗೋಲುಗಳಲ್ಲಿ ವಿಜಯಭೇರಿ ಬಾರಿಸಿತ್ತು. ಇದರಲ್ಲಿ ಮೂರು ಗೋಲುಗಳು ರೊನಾಲ್ಡೊ ಅವರಿಂದ ದಾಖಲಾಗಿದ್ದವು. ಈ ಪ್ರದರ್ಶನದ ಮೂಲಕ ರೊನಾಲ್ಡೊ ಮುಂಬರುವ 2018ರ ವಿಶ್ವಕಪ್‌ನಲ್ಲಿ ಮಿಂಚುವ ಸಂದೇಶ ರವಾನಿಸಿದ್ದಾರೆ. 
 
ಇತ್ತೀಚಿನ ವರ್ಷಗಳಲ್ಲಿ ಯುರೋಪಿಯನ್ ಫುಟ್‌ಬಾಲ್‌ನಲ್ಲಿ ಸಾಕಷ್ಟು ಯುವ ಆಟಗಾರರು ಮಿಂಚುತ್ತಿದ್ದಾರೆ. ಎಲ್ಲರ ನಡುವೆ  ರೊನಾಲ್ಡೊ ಇಂದಿಗೂ ಹೊಳೆಯುವ ನಕ್ಷತ್ರದಂತೆ ಕಾಣುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT