ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಟುಕು ಕ್ರಿಕೆಟ್‌ನ ‘ಬಿಗ್ ಬಾಸ್’

Last Updated 23 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಒಂದು ದಶಕದಿಂದ ಬೌಲರ್‌ಗಳ ಪಾಲಿಗೆ ‘ನಗುಮುಖದ ಹಂತಕ’ನಂತೆ ಕಾಡುತ್ತಿರುವ ಬ್ಯಾಟ್ಸ್‌ಮನ್ ಯಾರು ಎಂಬ ಪ್ರಶ್ನೆಗೆ ಬೆಂಗಳೂರಿನ ಪುಟಾಣಿ ಮಕ್ಕಳೂ  ಹೇಳುವ ಒಂದೇ ಹೆಸರು ಕ್ರಿಸ್ ಗೇಲ್.
 
ದೂರದ ಜಮೈಕಾ ದೇಶದ ಗೇಲ್‌ಗೆ ಬೆಂಗಳೂರು ಎರಡನೇ ತವರುಮನೆ ಯಿದ್ದಂತೆ. ಇಂಡಿಯನ್ ಪ್ರೀಮಿಯರ್‌ ಲೀಗ್ (ಐಪಿಎಲ್) ಟೂರ್ನಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮೂಲಕ ಕರ್ನಾಟಕದಲ್ಲಿಯೂ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿರುವ ಸ್ಫೋಟಕ ಬ್ಯಾಟ್ಸ್‌ಮನ್. ಇದೀಗ ಚುಟುಕು ಕ್ರಿಕೆಟ್ ಮಾದರಿಯಲ್ಲಿ ಹತ್ತು ಸಹಸ್ರ ರನ್‌ಗಳನ್ನು ಕಲೆ ಹಾಕಿರುವ ದಾಖಲೆ ಮಾಡಿದ್ದಾರೆ. 
 
ಅಂತರರಾಷ್ಟ್ರೀಯ, ದೇಶಿ ಲೀಗ್‌ಗಳು ಸೇರಿದಂತೆ ಒಟ್ಟು 290 ಟ್ವೆಂಟಿ–20 ಪಂದ್ಯಗಳಲ್ಲಿ ಅವರು ಈ ಸಾಧನೆ ಬರೆದಿದ್ದಾರೆ. ಹತ್ತು ಸಾವಿರ ರನ್ ಕ್ಲಬ್‌ನ ‘ಸಂಸ್ಥಾಪಕ ಸದಸ್ಯ’ರೂ ಆಗಿದ್ದಾರೆ. ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕ್ಲಮ್ ಇವರ ಕ್ಲಬ್ ಸೇರಲು ಇನ್ನೂ 2400 ರನ್ ಗಳಿಸಬೇಕು.
 
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇನ್ನೂ ನಾಲ್ಕು ಸಾವಿರಕ್ಕೂ ಅಧಿಕ ರನ್‌ ಗಳಿಸಬೇಕು. ಕ್ರಿಕೆಟ್‌ನ ಇಂತಹ ದಿಗ್ಗಜರಿಗೇ 37 ವರ್ಷದ ಗೇಲ್ ಸ್ವತಃ ಮೈಲುಗಲ್ಲಾಗಿ ನಿಂತಿದ್ದಾರೆ.   
 
ದೈತ್ಯ ಪ್ರತಿಭೆ
ಸೀಮಿತ ಓವರ್‌ಗಳಲ್ಲಿ ಕ್ರಿಕೆಟ್‌ನಲ್ಲಿ ದಾಖಲೆಗಳ ರಾಶಿಯನ್ನೇ ಗುಡ್ಡೆ ಹಾಕಿರುವ ಆಟಗಾರ ಗೇಲ್. ಅದೇ ರೀತಿ ಕೋಟಿ ಕೋಟಿ ಹಣವು ಅವರ ಖಾತೆಗೆ ಹರಿದು ಬಂದಿದೆ. ಅವರ ಪ್ರತಿಭೆಗೆ ತಕ್ಕಂತೆ ಕ್ರಿಕೆಟ್ ಜಗತ್ತು ಕೂಡ  ಮೌಲ್ಯ ನೀಡಿದೆ.  
 
1960–1980ರ ಅವಧಿಯಲ್ಲಿ ದೈತ್ಯ ಶಕ್ತಿಯಾಗಿದ್ದ ವೆಸ್ಟ್‌ ಇಂಡೀಸ್ ತಂಡವು ನಂತರದ ದಶಕದಲ್ಲಿ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳ ಅಬ್ಬರದ ಎದುರು ಮಂಕಾಯಿತು. ಅದರಲ್ಲೂ 1983ರಲ್ಲಿ ಭಾರತ ಏಕದಿನ ವಿಶ್ವಕಪ್ ಗೆದ್ದ ಮೇಲೆ ವಿಂಡೀಸ್ ದೈತ್ಯ ಶಕ್ತಿ ಮರೆಯಾಗತೊಡಗಿತ್ತು.
 
ಆದರೂ ಕರ್ಟ್ನಿ ವಾಲ್ಶ್, ಬ್ರಯಾನ್ ಲಾರಾ, ಶಿವನಾರಾಯಣ್ ಚಂದ್ರಪಾಲ್ ಅವರಂತಹ ಕೆಲವೇ ಆಟಗಾರರು ವಿಂಡೀಸ್ ಶಕ್ತಿಯನ್ನು ಉಳಿಸಿ ಬೆಳೆಸಲು ಹೆಣಗಾಡುತ್ತಿದ್ದರು.  ಆದರೂ ದ್ವೀಪರಾಷ್ಟ್ರದ ಕ್ರಿಕೆಟ್ ಮಂಡಳಿಯ ರಾಜಕೀಯ, ಸ್ವಜನಪಕ್ಷಪಾತಗಳಿಂದ ಆಟ ಜರ್ಜರಿತವಾಯಿತು. 
 
1999ರಲ್ಲಿ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಕಾಲಿಟ್ಟ ನಂತರ ಕ್ರಿಸ್‌ ಗೇಲ್ ಮತ್ತೆ ವಿಂಡೀಸ್ ವೈಭವ ಮರಳಿ ತರುವ ಮಟ್ಟಕ್ಕೆ ಬೆಳೆಯುತ್ತಾರೆಂದು ಯಾರೂ ಊಹಿಸಿರಲಿಲ್ಲ. ಆರಂಭಿಕ ದಿನಗಳಲ್ಲಿಯೂ ಅವರ ಬ್ಯಾಟ್‌ ಬೆಂಕಿ ಉಗುಳಲಿಲ್ಲ. ಆದರೆ, ಕೆಲವು ತಿಂಗಳೂಗಳ ನಂತರ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಭುಜಬಲ ಮೆರೆಯಲಾಂಭಿಸಿತು. 
 
2006ರಲ್ಲಿ ಟ್ವೆಂಟಿ–20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ನಂತರ ಅವರು ಹಿಂದಿರುಗಿ ನೋಡಲಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ಜಗತ್ತಿನ ಎಲ್ಲ ದೇಶಗಳ ಪ್ರಮುಖ ಲೀಗ್‌ಗಳ ತಂಡಗಳು ಗೇಲ್‌ ಅವರನ್ನು ಸೇರಿಸಿಕೊಳ್ಳಲು ಪೈಪೋಟಿಗೆ ಬಿದ್ದವು. ಅದರ ಫಲವಾಗಿ ಹೆಚ್ಚು ಪಂದ್ಯಗಳಲ್ಲಿ ಮಿಂಚುವ ಮೂಲಕ ರನ್‌ಗಳ ರಾಶಿ ಹಾಕಿದ್ದಾರೆ. 
 
ಆಲ್‌ರೌಂಡ್ ಆಟದ ಸಾಧನೆ
ಗೇಲ್ ಬ್ಯಾಟಿಂಗ್ ಮೂಲಕವೇ ಹೆಚ್ಚು ಚಿರಪರಿಚಿತ. ಆದರೆ ಅವರೊಬ್ಬ ಪರಿಪೂರ್ಣ ಆಲ್‌ರೌಂಡರ್ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇದು ಹೆಚ್ಚು ಪ್ರಚಾರ ಪಡೆದಿಲ್ಲ. ಬಲಗೈ ಸ್ಪಿನ್ನರ್ ಗೇಲ್ ಅವರು ಟೆಸ್ಟ್‌ನಲ್ಲಿ 73, ಏಕದಿನ ಕ್ರಿಕೆಟ್‌ನಲ್ಲಿ 163 ಮತ್ತು ಟ್ವೆಂಟಿ–20 ಕ್ರಿಕೆಟ್‌ನಲ್ಲಿ 17 ವಿಕೆಟ್‌ಗಳನ್ನು ಗಳಿಸಿದ್ದಾರೆ. 
 
ತಂಡಕ್ಕೆ ಅಗತ್ಯ ಬಿದ್ದಾಗ ವಿಕೆಟ್‌ಕೀಪಿಂಗ್ ಕೂಡ ಮಾಡಿದ್ದಾರೆ. ‘ಗೇಲ್ ಕಳಪೆ ಫೀಲ್ಡರ್’ ಎಂದು ಇತ್ತೀಚೆಗೆ  ಟೀಕೆಗಳು  ವ್ಯಕ್ತವಾಗಿದ್ದವು. ಆದರೆ, ಮೂರು ಮಾದರಿಗಳಲ್ಲಿಯೂ ಸೇರಿ ಗೇಲ್ ಪಡೆದ ಕ್ಯಾಚ್‌ಗಳ ಸಂಖ್ಯೆ 224! 
 
ರಂಗುರಂಗಿನ ವ್ಯಕ್ತಿತ್ವ, ವಿವಾದಗಳು 
ಮೈದಾನದೊಳಗೆ ಕಠಿಣ ಬ್ಯಾಟ್ಸ್‌ಮನ್ ಆಗಿಬಿಡುವ ಗೇಲ್ ಆಟದಂಗಳದ ಹೊರಗಿನ ಬದುಕು  ವಿವಾದಗಳಿಂದ ಹೊರತಾಗಿಲ್ಲ. ಕೆಳ ಮಧ್ಯಮವರ್ಗದ ಹೆನ್ರಿ ಗೇಲ್ ದಂಪತಿಯ ಆರು ಮಕ್ಕಳಲ್ಲಿ ಕ್ರಿಸ್ ಐದನೇಯವರು.

ಪೊಲೀಸ್ ಪೇದೆಯಾಗಿದ್ದ ತಂದೆ ಕುಟುಂಬ ನಿರ್ವಹಣೆಗೆ ಹೆಣಗಾಡುತ್ತಿದ್ದರು. ಆದರೆ ಇವತ್ತು ಕ್ರಿಸ್ ಅವರ ಮನೆಯೇ 200 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ್ದಾಗಿದೆ.  
 
ನೃತ್ಯ, ಸಂಗೀತದ ಪ್ರೇಮಿಯಾಗಿರುವ ಗೇಲ್ ಅವರ ಗಂಗ್ನಂ ಶೈಲಿಯ ಡ್ಯಾನ್ಸ್ ಜನಪ್ರಿಯವಾಗಿತ್ತು. ಈ ಬಾರಿಯ ಐಪಿಎಲ್‌ನಲ್ಲಿ ಸಾಲ್ಟ್ ಬೇ ಶೈಲಿಯನ್ನು ಪರಿಚಯಿಸಿದ್ದಾರೆ. 
 
ಆದರೂ ಜಮೈಕಾ ಸರ್ಕಾರದಿಂದ ಮತ್ತು ವೆಸ್ಟ್‌ ಇಂಡೀಸ್ ಕ್ರಿಕೆಟ್‌ ಮಂಡಳಿಯಿಂದ ಸೂಕ್ತ ಮಾನ್ಯತೆ ಮತ್ತು ಗೌರವಗಳು ಸಿಕ್ಕಿಲ್ಲ ಎಂಬ ಅಸಮಾಧಾನವನ್ನು ಗೇಲ್ ಹಲವು ಬಾರಿ ಹೊರಹಾಕಿದ್ದಾರೆ. ಆಸ್ಟ್ರೇಲಿಯಾ ದಲ್ಲಿ ಟಿವಿ ವಾಹಿನಿಯ ನಿರೂಪಕಿಯನ್ನು ಛೇಡಿಸಿ ವಿವಾದಕ್ಕೊಳಗಾಗಿದ್ದರು.
 
ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವ ಅವರನ್ನು ಕಳೆದ ಹಲವು ಬಾರಿ ವಿಂಡೀಸ್ ಏಕದಿನ ಮತ್ತು ಟ್ವೆಂಟಿ–20 ತಂಡದ ಆಯ್ಕೆಗೂ ಪರಿಗಣಿಸಿಲ್ಲ. ಆದರೆ ಐಪಿಎಲ್ ಸೇರಿದಂತೆ ಇನ್ನುಳಿದ ಲೀಗ್‌ಗಳಲ್ಲಿ ತಮಗೆ ಸಿಕ್ಕ ಅವಕಾಶಗಳಲ್ಲಿ ಅವರು ಮಿಂಚುತ್ತಿದ್ದಾರೆ. 
****
ಟ್ವೀಟ್ ಮಾಡಿದ ಮಲ್ಯ
ಮೇ 17ರಂದು ಲಂಡನ್‌ನಲ್ಲಿ ಬಂಧಿಸಲ್ಪಟ್ಟಿದ್ದ ಭಾರತದ ಉದ್ಯಮಿ ವಿಜಯ್ ಮಲ್ಯ ಅವರು ತಮಗೆ ಜಾಮೀನು ಸಿಕ್ಕ ನಂತರ ಮೊದಲಿಗೆ ಮಾಡಿದ ಕೆಲಸ ಏನು ಗೊತ್ತೆ?

ಅವತ್ತು ರಾಜ್‌ಕೋಟ್‌ನಲ್ಲಿ ಅಬ್ಬರದ ಅರ್ಧಶತಕ ಬಾರಿಸಿ, ಹತ್ತು ಸಾವಿರ ರನ್‌ ಗಡಿ ದಾಟಿದ್ದ  ಕ್ರಿಸ್ ಗೇಲ್ ಅವರನ್ನು ಮಲ್ಯ ಟ್ವಿಟರ್ ಮೂಲಕ ಅಭಿನಂದಿಸಿದ್ದರು. ‘ಅಭಿನಂದನೆಗಳು ಯುನಿವರ್ಸಲ್ ಬಾಸ್’ ಎಂದು ಆರ್‌ಸಿಬಿ ಫ್ರಾಂಚೈಸ್‌ನ ಮಾಜಿ ಮಾಲೀಕ ಮಲ್ಯ ಟ್ವೀಟ್ ಮಾಡಿದ್ದರು.
****
ಗೇಲ್ ಪ್ರಮುಖ ದಾಖಲೆಗಳು
lಟ್ವೆಂಟಿ–20 ಮಾದರಿಯ ಕ್ರಿಕೆಟ್‌ನಲ್ಲಿ ಹತ್ತು ಸಾವಿರ ರನ್‌ ಗಳಿಸಿದ ಮೊಟ್ಟಮೊದಲ ಆಟಗಾರ
lಅಂತರರಾಷ್ಟ್ರೀಯ  ಕ್ರಿಕೆಟ್‌ನ ಮೂರು ಮಾದರಿಗಳಲ್ಲಿಯೂ ಶತಕ ದಾಖಲಿಸಿದ ಮೊದಲ ಆಟಗಾರ
l ಅಂತರರಾಷ್ಟ್ರೀಯ, ಲೀಗ್, ಟ್ವೆಂಟಿ–20 ಕ್ರಿಕೆಟ್, ಟ್ವೆಂಟಿ–20 ವಿಶ್ವಕಪ್ ಟೂರ್ನಿಗಳಲ್ಲಿ ಶತಕ ಬಾರಿಸಿದ ದಾಖಲೆ
lಟೆಸ್ಟ್‌ ಪಂದ್ಯದ ಮೊದಲ ಎಸೆತದಲ್ಲಿ ಸಿಕ್ಸರ್ ಹೊಡೆದ ಏಕೈಕ ಬ್ಯಾಟ್ಸ್‌ಮನ್ (2012ರಲ್ಲಿ ಮೀರ್‌ಪುರದಲ್ಲಿ ಬಾಂಗ್ಲಾ ಎದುರು)
lಅಂತರರಾಷ್ಟ್ರೀಯ ಏಕದಿನ ಸರಣಿ ಮತ್ತು ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ದ್ವಿಶತಕ ಗಳಿಸಿದ ವೆಸ್ಟ್ ಇಂಡೀಸ್‌ನ ಏಕೈಕ ಆಟಗಾರ
l ಟೆಸ್ಟ್‌ನಲ್ಲಿ ತ್ರಿಶತಕ, ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ, ಟ್ವೆಂಟಿ–20ಯಲ್ಲಿ ಶತಕ ದಾಖಲಿಸಿದ ವಿಶ್ವದ ಏಕೈಕ ಆಟಗಾರ
l ಚುಟುಕು ಕ್ರಿಕೆಟ್‌ನಲ್ಲಿ ಶರವೇಗದ ಅರ್ಧಶತಕ ಹೊಡೆದ ದಾಖಲೆಯನ್ನು ಭಾರತದ ಯುವರಾಜ್‌ ಸಿಂಗ್ ಜೊತೆ ಹಂಚಿಕೊಂಡಿದ್ದಾರೆ. (12 ಎಸೆತಗಳಲ್ಲಿ 50)
l2015ರ ಏಕದಿನ ವಿಶ್ವಕಪ್‌ನಲ್ಲಿ  ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ ಅತಿ ವೇಗದ ದ್ವಿಶತಕ ಸಾಧನೆ (138 ಎಸೆತಗಳಲ್ಲಿ 200)
lಟ್ವೆಂಟಿ–20 ಮಾದರಿಯಲ್ಲಿ ವೈಯಕ್ತಿಕ ಶ್ರೇಷ್ಠ (175*) ಸ್ಕೋರ್ ದಾಖಲೆ, ಆರ್‌ಸಿಬಿ ಪರ ಅವರು ಪುಣೆ ವಾರಿಯರ್ಸ್ ವಿರುದ್ಧ 66 ಎಸೆತಗಳಲ್ಲಿ ಹೊಡೆದಿದ್ದರು.
lಟ್ವೆಂಟಿ–20ಯಲ್ಲಿ ಅತಿ ಹೆಚ್ಚು ಸಿಕ್ಸರ್‌ ಹೊಡೆದ ಹೆಗ್ಗಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT