ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಟಿಕೆಟ್‌ ಬೇಕಿತ್ತು...

Last Updated 23 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
‘ಒಳ್ಳೆ ಮಾರ್ಕ್ಸ್‌ ಬಂದ್ರೆ ಮಾತ್ರ ರಜೆಯಲ್ಲಿ ಊರಿಗೆ ಹೋಗೋದು...’
ನಾಲ್ಕನೇ ತರಗತಿಯ ಮಗನಿಗೆ ಅಮ್ಮ ಮಾಡಿದ್ದ ತಾಕೀತನ್ನು ಅವನು ಸವಾಲಾಗಿ ತಗೊಂಡಿದ್ದ. ಎಲ್ಲಾ ವಿಷಯದಲ್ಲೂ 90ರ ಮೇಲೆ ಅಂಕ ಬಂದಿದೆ. ಫಲಿತಾಂಶ ಬಂದು ವಾರ ಕಳೆದರೂ ಊರಿಗೆ ಹೋಗಲು ಮುಹೂರ್ತ ಸಿಕ್ಕಿಲ್ಲ. ಕಾರಣ ಟಿಕೆಟ್ಟು!
 
ಪಕ್ಕದ ಮನೆಯ ನಿಹಾರಿಕಾ, ಅಪ್ಪ ಅಮ್ಮನ ಜತೆ ನಾಸಿಕ್‌ನಲ್ಲಿರೋ ಚಿಕ್ಕಮ್ಮನ ಮನೆಗೆ ಈ ಬಾರಿಯಾದರೂ ಹೋಗೇ ಹೋಗ್ತೀನಿ ಅನ್ನುವ ಸಂಭ್ರಮದಲ್ಲಿದ್ದಳು. ವ್ಯಾಪಾರ ಮುಗಿಸಿ ಬರುವ ಅಪ್ಪನಿಗಾಗಿ ದಿನಾ ರಾತ್ರಿ 10.30ರವರೆಗೂ ಕಾದಿದ್ದೇ ಬಂತು. ‘ಟಿಕೆಟ್‌ ದರ ದುಪ್ಪಟ್ಟಾಗಿದೆ. ಹೋಗಿ ಬರೋಕೆ ತುಂಬಾ ಖರ್ಚಾಗುತ್ತದೆ  ಈ ಸಲ ಹೋಗೋದು ಬೇಡ’ ಎಂದು ಅವಳ ಅಪ್ಪ ಅಮಿತ್‌ ನಂದಾ ನಿನ್ನೆಯಷ್ಟೇ ಖಡಕ್ಕಾಗಿ ಹೇಳಿದರಂತೆ. ನಿಹಾರಿಕಾ ಮಂಕಾಗಿದ್ದಾಳೆ.
 
‘ನಾವು ಪ್ರತಿ ಬೇಸಿಗೆ ರಜೆಯಲ್ಲಿ ನಮ್ಮೂರು ಧಾರವಾಡಕ್ಕೆ ಹೋಗ್ತೇವ್ರಿ. ‘ತತ್ಕಾಲ್‌’ನಲ್ಲಿ ರೈಲು ಟಿಕೆಟ್‌ ಬುಕ್‌ ಮಾಡಿಬಿಡ್ತೀವಿ. ಕೆಲವೊಮ್ಮೆ ಸಿಗಲ್ಲ. ಆಗ ಖಾಸಗಿ ಬಸ್‌ನಲ್ಲಿ ಹೋಗೋದು. ಖಾಸಗಿಯೋರು ಹೆಚ್ಚು ಬಸ್‌ ಹಾಕ್ತಾರ್ರಿ.   ರೇಟು ಜಾಸ್ತಿ ಇದ್ರೂ ಹೋಗೋದು ಹೋಗ್ಲೇಬೇಕಲ್ಲ?’ ವಿಜಯನಗರ ಪೈಪ್‌ಲೈನ್‌ ನಿವಾಸಿ ಚಂದ್ರಲೇಖಾ ಅವರ ಮಾತಿದು. 
 
‘ಟಿಕೆಟ್‌ ಸಿಗ್ಲಿಲ್ಲ ಎಂದು ದೂರಿಕೊಳ್ಳುವಂತಾಗುವುದು ಕೊನೆಯ ಕ್ಷಣದ ನಿರ್ಧಾರದಿಂದ. ಹಬ್ಬ, ಸರ್ಕಾರಿ ರಜಾದಿನಗಳು ಮತ್ತು ವಿಶೇಷವಾಗಿ ಶಾಲೆ ಕಾಲೇಜುಗಳಿಗೆ ರಜೆ ಇರುವ ದಿನಗಳೆಂದರೆ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌, ರೈಲು ಸೀಟುಗಳು ಭರ್ತಿಯಾಗಿರುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ.
 
ಆದರೂ ಮುಂಗಡವಾಗಿ ಸೀಟು ಕಾಯ್ದಿರಿಸದೆ ಜನ ಕೊನೆ ಕ್ಷಣದಲ್ಲಿ ಧಾವಂತಪಡ್ತಾರ್ರೀ’ ಎಂದು ಟೀಕಿಸುತ್ತಾರೆ ಅವರು. ರಜೆ ಮತ್ತು ಇತರ ವಿಶೇಷ ಸಂದರ್ಭಗಳಲ್ಲಿ ಧಾರವಾಡಕ್ಕೆ ಖಾಸಗಿ  ಸ್ಲೀಪರ್ ಕೋಚ್‌ ಬಸ್‌ನಲ್ಲಿ ₹1,200ರವರೆಗೂ ದರ ಇರುತ್ತದೆ. ಇತರ ದಿನಗಳಿಗೆ ಹೋಲಿಸಿದರೆ ಸಾಮಾನ್ಯವಾಗಿ ₹200ರಿಂದ ₹300 ಹೆಚ್ಚು ಇರುತ್ತದೆ.
 
ಕೆಎಸ್‌ಆರ್‌ಟಿಸಿ ಸಹ ರಜೆಯ ನಿಮಿತ್ತ ಹೆಚ್ಚುವರಿ ಬಸ್‌ಗಳನ್ನು ಓಡಿಸುತ್ತದೆ. ಆದರೂ ಮುಂಗಡ ಕಾಯ್ದಿರಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಜತೆಗೆ ಸ್ಥಳದಲ್ಲೇ ಟಿಕೆಟ್‌ ಖರೀದಿಸಿ ಪ್ರಯಾಣಿಸುವವರ ಸಂಖ್ಯೆಯೂ ದೊಡ್ಡದಿದೆ. ರೈಲು ಪ್ರಯಾಣದ ಕತೆ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ.
 
ಕೊನೆಯ ಕ್ಷಣದಲ್ಲಿ ಬುಕಿಂಗ್‌ ಮಾಡಲು/ಟಿಕೆಟ್‌ ಪಡೆಯಲು ಜನ ಒದ್ದಾಡುವುದು ಕೆಎಸ್‌ಆರ್‌ಟಿಸಿ ಮತ್ತು ರೈಲು ನಿಲ್ದಾಣದಲ್ಲಿ, ಬುಕಿಂಗ್‌ ಸೆಂಟರ್‌, ಟ್ರಾವೆಲ್‌ ಏಜೆನ್ಸಿಗಳಲ್ಲಿ ಈಗ ನಿತ್ಯದ ನೋಟ.
 
ಪ್ರತಿ ಏಪ್ರಿಲ್‌ನಲ್ಲಿ ಬೆಂಗಳೂರಿನಿಂದ ಕೇರಳಕ್ಕೆ ಪ್ರಯಾಣಿಸುವ ಕೆ.ವಿ.ಗೋಪಿನಾಥ ಅವರು, ಒಂದೋ ಎರಡು ತಿಂಗಳಿಗೂ ಮೊದಲೇ ರೈಲಿನಲ್ಲಿ ಟಿಕೆಟ್‌ ಕಾಯ್ದಿರಿಸುತ್ತಾರೆ, ಇಲ್ಲವೇ ಟಿಕೆಟ್‌ ಸಿಗದೇ ಇದ್ದರೆ ಪ್ರಯಾಣವನ್ನೇ ರದ್ದುಗೊಳಿಸುತ್ತಾರಂತೆ.
 
‘ರೈಲಿನಲ್ಲಿ ಮುಂಗಡ ಕಾಯ್ದಿರಿಸಿದರೂ ಕೊನೆಯ ಕ್ಷಣದವರೆಗೂ ಟಿಕೆಟ್‌ ಖಾತರಿಯಾಗಿರುವ ಬಗ್ಗೆ ನಮಗೆ ಮಾಹಿತಿ ಸಿಗುವುದಿಲ್ಲ. ಸೀಟು ಸಿಗಲಿಲ್ಲವೆಂದಾದರೆ ಬಸ್‌ನಲ್ಲಿ ಪ್ರಯಾಣಿಸುವ ಸಾಹಸ ಮಾಡುವುದಿಲ್ಲ. ಯಾಕೆಂದರೆ ಪ್ರಯಾಣದರ ₹650ರಿಂದ ₹2,000ಕ್ಕೆ ಏರಿಕೆಯಾಗಿರುತ್ತದೆ. ಇಷ್ಟು ದುಬಾರಿ ದರ ತೆತ್ತು ಪ್ರಯಾಣಿಸುವುದು ಹೇಗೆ?’ ಎಂದು ಗೋಪಿನಾಥ್ ಪ್ರಶ್ನಿಸುತ್ತಾರೆ.
 
ಟಿಕೆಟ್‌ ದರ ಎಷ್ಟೇ ದುಬಾರಿಯಾದರೂ ಊರಿಗೋ– ಟೂರಿಗೋ ಹೋಗುವ ಸಂಭ್ರಮದ ಮುಂದೆ ಅದ್ಯಾವ ಲೆಕ್ಕ ಎನ್ನುವ ಪ್ರಯಾಣಿಕರೂ ಇದ್ದಾರೆ. ಇನ್ನು ಕೆಲವರು ಸ್ವಂತ ವಾಹನದಲ್ಲೋ, ಟ್ಯಾಕ್ಸಿಯಲ್ಲೋ ಹೋಗಿಬಿಡುವುದೂ ಇದೆ.
 
ಐಟಿ ಉದ್ಯೋಗಿ, ಮಂಗಳೂರಿನ ಬಿ.ಕೆ.ಮಧುಕರ ಅವರದು ಜಾಣ ಲೆಕ್ಕಾಚಾರ. ‘ಮೂರು ವಾರಕ್ಕೆ ಮೊದಲೇ ಟಿಕೆಟ್ ಕಾಯ್ದಿರಿಸುವ ಕಾರಣ ಇದುವರೆಗೂ  ಕೊನೆಯ ಕ್ಷಣದಲ್ಲಿ ಪ್ರವಾಸ ರದ್ದುಪಡಿಸಬೇಕಾದ ಪರಿಸ್ಥಿತಿ ಎದುರಾಗಿಲ್ಲ’ ಎನ್ನುತ್ತಾರೆ ಅವರು.
 
‘ಈ ಯಾವ ತಾಪತ್ರಯಗಳೂ ಬೇಡವೆಂದು ಬೇಸಿಗೆ ರಜೆಯಲ್ಲಿ ನಾವು ದೂರದೂರಿಗೆ ಪ್ರವಾಸ ಹೋಗುವುದೇ ಇಲ್ಲ. ಬೆಂಗಳೂರು ಸುತ್ತಮುತ್ತಲಿನ ಯಾವುದಾದರೂ ಸ್ಥಳಗಳಿಗೆ ಹೋಗಿಬರುತ್ತೇವೆ’ ಎಂದು ಹೇಳುತ್ತಾರೆ, ಅರ್ಚನಾ ರಾಮಚಂದ್ರನ್‌. 
***
ಹೆಚ್ಚುವರಿ ರೈಲು, ಬಸ್‌ಗಳೂ ಭರ್ತಿ
ನೈಋತ್ಯ ರೈಲ್ವೆಯ ಹಿರಿಯ ವ್ಯವಸ್ಥಾಪಕ (ಕಮರ್ಷಿಯಲ್‌) ಎನ್‌.ಎಸ್. ಶ್ರೀಧರ ಮೂರ್ತಿ ಅವರು ಹೇಳುವಂತೆ, ಏಪ್ರಿಲ್, ಮೇ ತಿಂಗಳಲ್ಲಿ ವಿಶೇಷ ರೈಲುಗಳೂ ಭರ್ತಿಯಾಗುತ್ತವೆ. ವೇಟಿಂಗ್‌ ಲಿಸ್ಟ್‌ಗಳಲ್ಲಿರುವ ಪ್ರಯಾಣಿಕರಿಗೆ ಪ್ರತಿದಿನ ಆದ್ಯತೆಯ ಮೇರೆಗೆ ಟಿಕೆಟ್‌ ಒದಗಿಸಲಾಗುತ್ತದೆ.

ವಿಶಾಖಪಟ್ಟಣ, ಜೈಪುರ, ಎರ್ನಾಕುಲಂ, ತಿರುಚನಾಪಳ್ಳಿ, ಗುವಾಹಟಿ ಮತ್ತು ಸಂಬಾಲ್‌ಪುರಕ್ಕೆ ಈಗಾಗಲೇ ವಿಶೇಷ ರೈಲು ಸಂಚಾರ ವ್ಯವಸ್ಥೆ ಮಾಡಲಾಗಿದೆ.

‘ಎಲ್ಲಾ ಸುವಿಧಾ ಮತ್ತು ವಿಶೇಷ ರೈಲುಗಳಲ್ಲಿನ ಟಿಕೆಟ್‌ ದರ ಈ ಅವಧಿಯಲ್ಲಿ ವ್ಯತ್ಯಯವಾಗುವುದು ಮಾಮೂಲು’ ಎಂದು ಅವರು ಸಮರ್ಥಿಸಿಕೊಳ್ಳುತ್ತಾರೆ.
ಕೆಎಸ್ಆರ್‌ಟಿಸಿ ಬಸ್‌ಗಳಿಗೆ ಕೌಂಟರ್‌ಗಳಲ್ಲಿ ಬಂದು ಟಿಕೆಟ್‌ ಖರೀದಿಸುವುದಕ್ಕಿಂತಲೂ ಆನ್‌ಲೈನ್‌ ಬುಕಿಂಗ್‌ಗೆ ಜನರು ಆದ್ಯತೆ ಕೊಡುತ್ತಿದ್ದಾರೆ ಎಂದು ಮಾಹಿತಿ ನೀಡುತ್ತಾರೆ, ಬುಕಿಂಗ್‌ ಕೌಂಟರ್‌ನ ಉಸ್ತುವಾರಿ ರಾಜೇಂದ್ರನ್‌.

ಸಾಮಾನ್ಯ, ಸ್ಲೀಪರ್‌, ಕ್ಲಬ್‌, ಎ.ಸಿ, ಎಸಿಯೇತರ ಮುಂತಾದ ಆಯ್ಕೆಗಳು ಕೆಎಸ್ಆರ್‌ಟಿಸಿ ಪ್ರಯಾಣಿಕರಿಗಿವೆ. ಅದರನ್ವಯ ಟಿಕೆಟ್‌ ದರ ₹650ರಿಂದ ₹2000ದ ನಡುವೆ ಇರುತ್ತದೆ ಎಂದು ಅವರು ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT