ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂತು ಬೂದುಬಕ, ಪುಟಾಣಿಗಳಿಗೆ ತವಕ

ಛಾಯಾಗ್ರಾಹಕಿ: ಪ್ರೇಮಾ ಕಾಕಡೆ
Last Updated 23 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ನೀರಿನ  ಆಸರೆ ಇರುವ (Wet-Lands)  ಉತ್ತರ ಭಾರತದ ಭರತ್‌ಪುರ, ಮಂಗಳಜೋಡಿ, ಸುಲ್ತಾನ್‌ಪುರ ಇತ್ಯಾದಿ ಪಕ್ಷಿಧಾಮಗಳಿಂದ ಚಳಿಗಾಲದ ಕಡು ಶೀತ ಆರಂಭವಾಗುವ ಮೊದಲೇ ಅನೇಕ ಜಾತಿಯ ಪಕ್ಷಿಗಳು ದಕ್ಷಿಣದತ್ತ ಹಾರಿ ಬರುತ್ತವೆ. ಇದು ಈ ಹಕ್ಕಿಗಳ ಸಂತಾನೋತ್ಪತ್ತಿ ಅವಧಿಯೂ ಹೌದು.
 
ಬೆಂಗಳೂರು ಮತ್ತು ಸುತ್ತಮುತ್ತಲ ಅನೇಕ ಕೆರೆಗಳಲ್ಲಿ ವಲಸೆ ಹಕ್ಕಿಗಳು ಕಾಣಿಸಿಕೊಳ್ಳುವುದು ಸಹಜ ವಿದ್ಯಮಾನ. ಹೊಸಕೋಟೆ ರಸ್ತೆ ಸಮೀಪದ ಸುಂದರ ಕೆರೆಯು ನೂರಕ್ಕೂ ಹೆಚ್ಚಿನ ವಿಭಿನ್ನ ಬಗೆಯ ವಲಸೆ ಹಕ್ಕಿಗಳಿಗೆ ಆಕರ್ಷಣೆಯ ತಾಣವಾಗಿದೆ.
 
ಈ ಚಿತ್ರ ತೆಗೆದವರ ಹೆಸರು ಪ್ರೇಮಾ ಕಾಕಡೆ. ಏಪ್ರಿಲ್ ತಿಂಗಳ ಆರಂಭದಲ್ಲಿ ಮುಂಜಾನೆ ಸೂರ್ಯನ ಹೊಂಗಿರಣಗಳು  ನೀರಿನ ಅಲೆಗಳನ್ನು ಸವರುತ್ತಾ ಮೇಲೇಳುತ್ತಿತ್ತು. ‘ಬೂದು ಮಂಗಟ್ಟೆ’ (Garganey) ಮತ್ತು  ಉದ್ದಗುಲಾಬಿ ಕಾಲಿನ ‘ಮೆಟ್ಟುಗಾಲು’ (Black Winged  Stilt)  ಎಂಬ  ಎರಡು ಜಾತಿಯ ವಲಸೆ ಪಕ್ಷಿಗಳು ಆಹಾರ ಅರಸುತ್ತಿದ್ದವು. ಈ ಪಕ್ಷಿಗಳ ಸಾಲಿನ ಮಧ್ಯೆಯೇ ಮೂರು ಅಡಿ ಎತ್ತರದ  ‘ಬೂದುಬಕವೊಂದು (Grey Heron)  ಮೀನಿನ ಹುಡುಕಾಟಕ್ಕೆಂದು ರಭಸದಿಂದ ಬಂದಿಳಿಯಿತು. ಆ ಕ್ಷಣ ಅಲ್ಲಿದ್ದ ಐದೂ ಸಣ್ಣ ಹಕ್ಕಿಗಳು ಆತಂಕದಿಂದ ನಡುಗಿದವು.
 
ತಮ್ಮ ಮನೆಯ ಹಿತ್ತಲಿನಲ್ಲಿ ಗಿಡ ಮರಗಳನ್ನು ಬೆಳೆಸಿ, ನೀರಿನ  ಅನುಕೂಲತೆ ಮಾಡಿದ್ದಾರೆ ಪ್ರೇಮಾ.  ಕೇವಲ ಫೋಟೊ ತೆಗೆಯಲು ಮಾತ್ರ ಇವರ ಪಕ್ಷಿ ಪ್ರೇಮ ಸೀಮಿತವಾಗಿಲ್ಲ.  ಚಿತ್ರಕಲೆಯಲ್ಲೂ ಪ್ರಾವೀಣ್ಯತೆ ಇದೆ. ಕಳೆದ ಆರು ವರ್ಷಗಳಿಂದ ಪ್ರವಾಸ ಹಾಗೂ ಛಾಯಾಗ್ರಹಣದ ಹವ್ಯಾಸ ಬೆಳೆಸಿಕೊಂಡಿದ್ದಾರೆ. ವನ್ಯಜೀವಿ ಹಾಗೂ ಲ್ಯಾಂಡ್‌ಸ್ಕೇಪ್ ಫೋಟೋಗ್ರಫಿ  ಅವರ ಆಸಕ್ತಿಯ ಕ್ಷೇತ್ರ.
 
ಈ ಚಿತ್ರ ತೆಗೆಯಲು ಅವರು  ಬಳಸಿರುವ ಕ್ಯಾಮೆರಾ ನಿಕಾನ್ D 5300,   ನಿಕಾನ್‌ ಜೂಂ ಲೆನ್ಸ್ 200–500 ಎಂ.ಎಂ., ಫೋಕಲ್  ಲೆಂಗ್ತ್ F/500 ಎಂ.ಎಂ, ಷಟರ್ ವೇಗ 1/500 ಸೆಕೆಂಡ್,  ಐ.ಎಸ್.ಒ. 400, ಟ್ರೈಪಾಡ್ ಅಳವಡಿಸಲಾಗಿದೆ.
 
ಈ ಛಾಯಾಚಿತ್ರದ ತಾಂತ್ರಿಕ  ಹಾಗೂ ಕಲಾತ್ಮಕ ವಿಶ್ಲೇಷಣೆ ಇಂತಿದೆ...
lನೋಡುಗನ ಕಣ್ಣನ್ನು ಒಮ್ಮೆಲೆ ತನ್ನತ್ತ ಸೆಳೆಯಬಲ್ಲ ಗುಣ ಈ ಚಿತ್ರಕ್ಕೆ ಇದೆ. ಎಕ್ಸ್‌ಪೋಶರ್‌ನ  ಎಲ್ಲ ಅಂಶಗಳನ್ನೂ  ಸೂಕ್ತವಾಗಿ  ಅಳವಡಿಸಲಾಗಿದೆ.
lವಸ್ತುಗಳ ಚಲನೆ, ಜೊತೆಗೆ  ಸತತವಾದ   ನೀರಿನ ಅಲೆಗಳ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು, ಷಟರ್ ವೇಗವನ್ನು  1/500 ಸೆಕೆಂಡ್ ಇಟ್ಟಿರುವುದು ಹಾಗೂ ಟ್ರೈಪಾಡ್  ಉಪಯೋಗಿಸಿರುವುದು  ಶ್ಲಾಘನೀಯ ನಿರ್ಧಾರ.
 
lಅಪರ್ಚರ್ ಮೋಡ್‌ನಲ್ಲಿ  F8  ಇಟ್ಟು ಕ್ಲಿಕ್ಕಿಸಿರುವುದರಿಂದ ಬಹು ಕಡಿಮೆ (shallow)   ಸಂಗಮ ವಲಯವನ್ನು (ಡೆಪ್ತ್‌ ಆಫ್ ಫೀಲ್ಡ್ ಆಫ್ ಫೋಕಸ್)  ಬಳಸಿದಂತಾಗಿದೆ. ಬೂದುಬಕ ಮತ್ತು ಅದರ ಕಾಲಿನ ಬಳಿ ಇರುವ ‘ಬೂದು ಮಂಗಟ್ಟೆ’ ಮಾತ್ರ ಉತ್ತಮವಾಗಿ ಫೋಕಸ್ ಆಗಿವೆ. ಇನ್ನಿತರ ಭಾಗಗಳು  ಔಟ್ ಆಫ್ ಫೋಕಸ್ ಆಗಿವೆ. 
 
lಅಪರ್ಚರ್ ಹೆಚ್ಚಿಸಿದ್ದರೆ (F11) ಆಗ  ಫೋಕಸಿಂಗ್‌ನ ವ್ಯಾಪ್ತಿ ಹೆಚ್ಚುತ್ತಿತ್ತು. ಅದಕ್ಕೆ ಪೂರಕವಾಗಿ, ಷಟರ್ ವೇಗವನ್ನು 1/350 ಸೆಕೆಂಡ್ ಇಡಬೇಕಾಗುತ್ತಿತ್ತು. ಆಗ ನೀರಿನ ಮೇಲಿನ ಸಣ್ಣ ಅಲೆಗಳೂ, ಉಳಿದ ನಾಲ್ಕೂ ಸಣ್ಣ ಹಕ್ಕಿಗಳೂ ಸ್ಫುಟವಾಗಿ ಫೋಕಸ್ ಆಗಿ ಇಡೀ ಚೌಕಟ್ಟಿನ ಸೊಬಗು ಹೆಚ್ಚುತ್ತಿತ್ತು.
lಕಲಾತ್ಮಕ ಆಯಾಮದಿಂದ ವಿಶ್ಲೇಷಿಸುವುದಾದರೆ, ಮುಂಜಾನೆ ಬೆಳಕಿನ ಉತ್ತಮ ಉಪಯೋಗ,   ಚೌಕಟ್ಟಿನಲ್ಲಿರುವ ಎಲ್ಲ ಸಂಗತಿಗಳೂ ಒಂದಕ್ಕೊಂದು ಪೂರಕವಾಗಿರುವುದು ಮತ್ತು ಚಿತ್ರ ಸಂಯೋಜನೆ ಗಮನ ಸೆಳೆಯುವಂತಿದೆ.
 
l‘ಬೂದುಬಕ’ದ ಬಿಚ್ಚಿದ ರೆಕ್ಕೆಗಳ ಮಾಟ, ತವಕದಿಂದ ಹೆದರಿದ ‘ಬೂದು ಮಂಗಟ್ಟೆ’ ಮತ್ತು ‘ಮೆಟ್ಟುಗಾಲು’ ಪುಟಾಣಿ ಹಕ್ಕಿಗಳು ದೌಡಾಯಿಸುತ್ತಿರುವ ಪರಿ, ಚಿತ್ರ ಹೇಳ ಬಯಸುವ ಕತೆಯ ಗಂಭೀರತೆಯನ್ನು ಪ್ರಸ್ತುತಪಡಿಸುತ್ತದೆ. ‘ಇದು ಬರೀ ಅನ್ಯೋನ್ಯ ತಾಯಿ- ಪಾಪುಗಳ ಸುಂದರ ಬೆಳಗಲ್ಲೋ ಅಣ್ಣಾ’ ಎಂಬ ಕಟು ಸತ್ಯವನ್ನೂ ಸಾದರಪಡಿಸುತ್ತದೆ.
ಕೆ.ಎಸ್.ರಾಜಾರಾಮ್, ksrajaram173@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT