ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಫಿ ತೋಟಕ್ಕೆ ಕೂಲಿಗೆ ಹೋಗ್ತೀನಿ’

Last Updated 23 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಒಂದು ಎಕರೆ ನಾಲ್ಕು ಗುಂಟೆ ಜಮೀನು. ಅದರಲ್ಲಿ 40 ತೆಂಗಿನ ಮರಗಳಿದ್ದವು. ಒಂದು ವರ್ಷದಿಂದ ಎಲ್ಲ ಒಣಗಿವೆ. ಸುಳಿಬಿದ್ದ ಮೇಲೆ ಮರ ಇದ್ದೂ ಪ್ರಯೋಜನವಿಲ್ಲ. ಅದನ್ನು ಕಡಿಸಿ ಹಾಕಿ, ಕಾಫಿ ತೋಟಗಳಿಗೆ ಕೂಲಿಗೆ ಹೋಗ್ತೀನಿ’

–ಹೊಸದುರ್ಗ ತಾಲ್ಲೂಕು ಗುಡ್ಡದನೇರಲಕೆರೆ ರಾಮಪ್ಪ ಮಾರ್ಮಿಕವಾಗಿ ಮಾತನಾಡಿದರು. ರಾಮಪ್ಪ ಮಾತ್ರವಲ್ಲ. ಮಳೆಯಾಶ್ರಿತ ತೆಂಗು ಬೆಳೆಗಾರರ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಹೊಸದುರ್ಗ, ಹಿರಿಯೂರು ಹಾಗೂ ಹೊಳಲ್ಕೆರೆ ತಾಲ್ಲೂಕುಗಳಲ್ಲಿ ಬರಗಾಲದಿಂದ ತೆಂಗಿನ ಮರಗಳನ್ನು ಕಳೆದುಕೊಂಡ ನೂರಾರು ರೈತರು ಇದೇ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಹೊಸದುರ್ಗ ಮತ್ತು ಹಿರಿಯೂರು ತಾಲ್ಲೂಕಿನ ತೆಂಗಿನ ಬೀಡಿನಲ್ಲಿ ಸಂಚರಿಸಿದರೆ ಮೂರು ತಲೆಮಾರಿನಷ್ಟು ಹಳೆಯದಾದ ತೆಂಗಿನ ಮರಗಳು ಎರಡು ವರ್ಷಗಳ ತೀವ್ರ ಬರೆಕ್ಕೆ ನೆಲ ಕಚ್ಚಿರುವುದು, ಸುಳಿ, ಹೊಂಬಾಳೆ ಹೊಡೆಯುವ ಸಸಿಗಳೂ ಬಿಸಿಲಿನ ತಾಪಕ್ಕೆ ಸೋತು ತಲೆಬಗ್ಗಿಸಿರುವಂಥ  ದೃಶ್ಯಗಳು ಕಾಣುತ್ತವೆ.

57,535 ಹೆಕ್ಟೇರ್ ತೆಂಗು : ಜಿಲ್ಲೆಯ ಆರು ತಾಲ್ಲೂಕುಗಳಲಿ 57,535 ಹೆಕ್ಟೇರ್ ತೆಂಗಿನ ಕೃಷಿ ಇದೆ. ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಹಿರಿಯೂರು ತಾಲ್ಲೂಕು ಜವನಗೊಂಡನಹಳ್ಳಿ ಹಾಗೂ ಧರ್ಮಪುರ, ಬ್ಯಾಡರಹಳ್ಳಿ, ಹೊಸದುರ್ಗ ತಾಲ್ಲೂಕಿನ ಗುಡ್ಡದನೇರಲಕೆರೆ, ಮತ್ತೋಡು, ಕಂಚಿಪುರ,  ಮದುರೆ, ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕಿನ ಕೊಳವೆಬಾವಿ ಆಶ್ರಿತ ಗ್ರಾಮಗಳಲ್ಲಿ ನೂರಾರು ಎಕರೆ ತೆಂಗಿನ ಬೆಳೆ ಒಣಗಿದೆ.

ಮರ ಕಡಿಯುತ್ತಿರುವ ರೈತರು: ಹೊಳಲ್ಕೆರೆ ತಾಲ್ಲೂಕಿನ ಎಚ್.ಡಿಪುರ, ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕಿನಲ್ಲಿ ತೆಂಗಿನ ಬೆಳೆಯದ್ದೂ ಇದೇ ಕಥೆ. ಹೊಸದುರ್ಗ ತಾಲ್ಲೂಕಿನಲ್ಲೂ ಪರಿಸ್ಥಿತಿ ಇದಕ್ಕಿಂತ ತುಸು ಕೆಟ್ಟದಾಗಿದೆ.

ಗುಡ್ಡದನೇರಲಕೆರೆ, ಮತ್ತೋಡು, ಕಂಚಿಪುರ, ಕಿಟ್ಟದಾಳು, ಮದುರೆ ಭಾಗದಲ್ಲಿ ಕೊಳವೆಬಾವಿ ಆಶ್ರಿತ ತೆಂಗು ಬೆಳೆ ಹೆಚ್ಚು ಹಾಳಾಗಿದೆ. ಸಣ್ಣ ಹಿಡುವಳಿದಾರರ (ಎರಡು ಎಕರೆ ಒಳಗಿನ ತೋಟ) ತೋಟಗಳು ಸಂಪೂರ್ಣ ಒಣಗಿವೆ.

* ಫೆಬ್ರುವರಿ ಅಂತ್ಯದವರೆಗೂ ತೆಂಗು ಬೆಳೆ ನಷ್ಟವಾಗಿರುವ ಪ್ರಮಾಣವನ್ನು ಸಮೀಕ್ಷೆ ಮಾಡಿಸಲಾಗಿದೆ, ಆ ಪ್ರಕಾರ ಜಿಲ್ಲೆಯಲ್ಲಿ 372.6 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಮಾರ್ಚ್–ಏಪ್ರಿಲ್ ತಿಂಗಳಲ್ಲಿ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದೆ.

- ಬಾಲಕೃಷ್ಣ, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT