ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳವೆ ಬಾವಿ ದುರಂತ: ಅಡ್ಡಿಯಾಗಿರುವ ಕಲ್ಲುಬಂಡೆ

Last Updated 23 ಏಪ್ರಿಲ್ 2017, 20:33 IST
ಅಕ್ಷರ ಗಾತ್ರ

ಝುಂಜರವಾಡ (ಅಥಣಿ ತಾಲ್ಲೂಕು): ಕೊಳವೆಬಾವಿಯೊಳಗೆ ಕಾಲು ಜಾರಿ ಬಿದ್ದಿರುವ ಬಾಲಕಿ ಕಾವೇರಿ ಮಾದರ (6) ರಕ್ಷಣೆಗಾಗಿ ಅಹೋರಾತ್ರಿಯ ಕಾರ್ಯಾಚರಣೆ ಮುಂದುವರಿದಿದ್ದು, ಕಲ್ಲುಬಂಡೆ ಅಡ್ಡಿಯಾಗಿದೆ.

ಶನಿವಾರ ಮುಸ್ಸಂಜೆಯಿಂದಲೂ ನಿರಂತರ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಜಿಲ್ಲಾಡಳಿತದ ಉನ್ನತ ಮೂಲಗಳ ಪ್ರಕಾರ ಸೋಮವಾರ ನಸುಕಿನ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಬಾಲಕಿಯನ್ನು ಕೊಳವೆಬಾವಿಯೊಳಗಿನಿಂದಲೇ ರಕ್ಷಿಸುವ ಕಾರ್ಯಾಚರಣೆ ವಿಫಲಗೊಳ್ಳುತ್ತಿದ್ದಂತೆಯೇ, ಸುರಂಗ ಮಾರ್ಗ ತೋಡುವ ಕೆಲಸ ಬಿರುಸುಗೊಂಡಿತು. ಬಂಡೆಗಲ್ಲು ತೀವ್ರ ಅಡ್ಡಿಯಾಗಿದ್ದರಿಂದ ಸ್ಥಳೀಯ ಗುತ್ತಿಗೆದಾರರೊಬ್ಬರು ನೀಡಿದ ಸಲಹೆಯಂತೆ, ಕೊಳವೆಬಾವಿ ಕೊರೆಯುವ ಯಂತ್ರದ ಮೂಲಕ ಡ್ರಿಲ್ಲಿಂಗ್‌ ಮಾಡಿ, ಬಂಡೆ ಪುಡಿ ಮಾಡುವ ಕೆಲಸ ಭಾನುವಾರ ರಾತ್ರಿ 8.30ರ ವರೆಗೂ ನಡೆಯಿತು.

‘ಇದೇ ಮೊದಲ ಬಾರಿಗೆ ಕಾರ್ಯಾಚರಣೆಯಲ್ಲಿ ಈ ತಂತ್ರ ಅನುಸರಿಸಲಾಗುತ್ತಿದೆ. ಕಲ್ಲುಬಂಡೆ ಪುಡಿ ಮಾಡಲು ಬ್ರೇಕರ್ ಬಳಸಿದರೂ ವೇಗವಾಗಿ ಸಾಗಲಿಲ್ಲ. ಕೊಳವೆಬಾವಿ ತೋಡುವ ಯಂತ್ರ ಬಳಸಿ, 20 ರಂಧ್ರಗಳನ್ನು 16 ಅಡಿಯವರೆಗೂ ನಾಲ್ಕೂವರೆ ತಾಸಿನಲ್ಲಿ ಡ್ರಿಲ್ಲಿಂಗ್‌ ಮಾಡಿಸಲಾಗಿದೆ’ ಎಂದು ಉನ್ನತ ಮೂಲಗಳು ತಿಳಿಸಿವೆ.

ಕಾವೇರಿ

ಇದೀಗ ಈ ರಂಧ್ರಗಳ ನಡುವಿರುವ ಬಂಡೆಯನ್ನು ಪುಡಿ ಮಾಡಬೇಕಿದೆ. ಬ್ರೇಕರ್‌ ಬಳಸಲಾಗುವುದು. ಇದಕ್ಕೂ ಬಂಡೆ ಮತ್ತೆ ಅಡ್ಡಿಯಾದರೆ ಚಿಕ್ಕ
ಪ್ರಮಾಣದ ಸ್ಫೋಟಕ ಬಳಸಿ, ಬಂಡೆಯನ್ನು ಪುಡಿ ಮಾಡಿ, 26 ಅಡಿಗೂ ಕೊಂಚ ಆಳದ ಸುರಂಗ ಮಾರ್ಗ ನಿರ್ಮಿಸಿ ಬಾಲಕಿಯನ್ನು ರಕ್ಷಿಸಲು
ಯತ್ನಿಸಲಾಗುವುದು’ ಎಂದು ಜಿಲ್ಲಾಡಳಿತದ ಉನ್ನತ ಮೂಲಗಳು ಕಾರ್ಯಾಚರಣೆಯ  ಮುಂದಿನ ಸುಳಿವನ್ನು ‘ಪ್ರಜಾವಾಣಿ’ಗೆ ನೀಡಿವೆ.
ರಕ್ಷಣೆಗೆ ಸುರಂಗ: ‘ಕೊಳವೆಬಾವಿಯಲ್ಲಿ 20ರಿಂದ 25 ಅಡಿ ಆಳದಲ್ಲಿ ಬಾಲಕಿ ಸಿಲುಕಿದ್ದಾಳೆ.

10 ಅಡಿ ಸುರಂಗವನ್ನು ಡಿಗ್ಗಿಂಗ್‌ ಮೂಲಕ ತೋಡಲಾಗಿತ್ತು. 16ರಿಂದ 18 ಅಡಿ ಆಳವನ್ನು ಕೊಳವೆಬಾರಿ ಕೊರೆಯುವ ಯಂತ್ರದ ಮೂಲಕ ಡ್ರಿಲ್ಲಿಂಗ್‌ ಮಾಡಿಸಲಾಗಿದೆ.

ಈ ಡ್ರಿಲ್ಲಿಂಗ್‌ ನಡುವಿರುವ ಬಂಡೆಗಲ್ಲುಗಳನ್ನು ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗುವುದು. ಬಾಲಕಿ ಸಿಲುಕಿರುವ ಸ್ಥಳಕ್ಕಿಂತ ಎರಡ್ಮೂರು ಅಡಿ ತಳದವರೆಗೂ ಸುರಂಗ ತೋಡಿ, ಅಲ್ಲಿಂದ ಮೇಲ್ಭಾಗದ ಸ್ಥಳವನ್ನು ಸೂಕ್ಷ್ಮ ಯಂತ್ರೋಪಕರಣ, ಸಲಕರಣೆಗಳಿಂದ ಬಿಡಿಸಿಕೊಂಡು ಬಾಲಕಿಯನ್ನು ರಕ್ಷಿಸುವ ಕಾರ್ಯತಂತ್ರವನ್ನು ರೂಪಿಸಲಾಗಿದೆ’ ಎಂದು ಹಟ್ಟಿ ಚಿನ್ನದ ಗಣಿ ತಂಡದ ನಾಯಕ, ಹಿರಿಯ ವಿಜ್ಞಾನಿ ಮಧುಸೂದನ ತಿಳಿಸಿದರು.

25 ಅಡಿ ಆಳದಲ್ಲೇ ಲಾಕ್‌: ‘ಪುಣೆಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌.ಡಿ.ಆರ್.ಎಫ್‌), ಬೆಳಗಾವಿಯ ತುರ್ತು ನಿರ್ವಹಣಾ ತಂಡ ಕೊಳವೆಬಾವಿಯೊಳಗಿನಿಂದಲೇ ರಕ್ಷಿಸಲು ನಡೆಸಿದ ಯತ್ನಗಳು ವಿಫಲವಾದರೂ, ಬಾಲಕಿ 25 ಅಡಿ ಆಳದಿಂದ ಕೆಳಗೆ ಜರುಗದಂತೆ ಬಲಗೈಗೆ ಹಾಗೂ ಆಕೆ ಧರಿಸಿರುವ ಬಟ್ಟೆಗೆ ಲಾಕ್‌ ಮಾಡಿ, ಕೊಕ್ಕೆ ಬಳಸಿಕೊಂಡು ಹಗ್ಗ ಕಟ್ಟಲಾಗಿದೆ.

ಬಾಲಕಿಯ ಮೇಲ್ಭಾಗದಲ್ಲಿ ಬಿದ್ದಿದ್ದ ಎರಡರಿಂದ ಮೂರು ಅಡಿಯಷ್ಟು ಮಣ್ಣು ಮತ್ತು ಕಲ್ಲನ್ನು ಇದರ ಜತೆಗೆ ರಕ್ಷಣೆಗಾಗಿ ಆರಂಭದಲ್ಲೇ ಒಳಗೆ ಬಿಟ್ಟಿದ್ದ ಹಗ್ಗವನ್ನು ಮೇಲೆತ್ತಲಾಗಿದೆ’ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡದ ಸಿಬ್ಬಂದಿ ವಿಶಾಲ್‌ ಮಾಹಿತಿ ನೀಡಿದರು.

* ಕಲ್ಲುಬಂಡೆ ಪುಡಿಮಾಡಲು ಕೊಳವೆಬಾವಿ ಕೊರೆಯುವ ಯಂತ್ರ ಬಳಸಲಾಗಿದೆ. ಸೋಮವಾರ ನಸುಕಿನ ವೇಳೆಗೆ ಕಾರ್ಯಾಚರಣೆ ಪೂರ್ಣಗೊಳ್ಳಬಹುದು

-ಎನ್.ಜಯರಾಂ, 
ಜಿಲ್ಲಾಧಿಕಾರಿ

* ಬಾಲಕಿಗೆ ಸತತವಾಗಿ ಆಮ್ಲಜನಕ ಪೂರೈಕೆಯಾಗುತ್ತಿದೆ. ಆಕೆ ಇರುವ ಸ್ಥಳ ಪತ್ತೆಯಾಗಿದೆ ಆದರೂ ಚಲನವಲನ ಸ್ಪಷ್ಟವಾಗಿ ತಿಳಿಯದಾಗಿದೆ
-ಡಾ.ಬಿ.ಆರ್‌.ರವಿಕಾಂತೇಗೌಡ,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಕಾರ್ಯಾಚರಣೆಯ ವಿವಿಧ ಹಂತಗಳು

* ಶನಿವಾರ ಮುಸ್ಸಂಜೆ ವೇಳೆ ಕೊಳವೆಬಾವಿಗೆ ಬಿದ್ದ ಕಾವೇರಿ
* ರಾತ್ರಿ 8.45ರ ವೇಳೆಗೆ ಸ್ಥಳಕ್ಕೆ ತೆರಳಿದ ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ಅಗ್ನಿಶಾಮಕ ದಳ
* ಮಧ್ಯರಾತ್ರಿ 12 ಗಂಟೆಗೆ ಭೇಟಿ ನೀಡಿದ ಬೆಳಗಾವಿಯ ತುರ್ತು ನಿರ್ವಹಣಾ ತಂಡ
* ರಾತ್ರಿ 2.10ಕ್ಕೆ ಹಟ್ಟಿ ಚಿನ್ನದ ಗಣಿಯ ತಜ್ಞರ ತಂಡದ ಭೇಟಿ
* ಭಾನುವಾರ ನಸುಕಿನ 4ರ ವೇಳೆಗೆ ಸ್ಥಳಕ್ಕೆ ಬಂದ ಪುಣೆಯ ಎನ್‌.ಡಿ.ಆರ್‌.ಎಫ್‌. ತಂಡ
* ಸಂಜೆ 4ರ ವೇಳೆಗೆ ಕೊಳವೆಬಾವಿಯಿಂದಲೇ ರಕ್ಷಿಸುವ ಎಲ್ಲ ಯತ್ನ ವಿಫಲ
* 4 ಗಂಟೆಯಿಂದ ಕೊಳವೆಬಾವಿ ಕೊರೆಯುವ ಯಂತ್ರದಿಂದ ಡ್ರಿಲ್ಲಿಂಗ್
* ರಾತ್ರಿ 8.30ಕ್ಕೆ 20 ರಂಧ್ರಗಳ ಡ್ರಿಲ್ಲಿಂಗ್‌ ಮುಕ್ತಾಯ
* ಅಹೋರಾತ್ರಿ ಮುಂದುವರಿದ ಕಾರ್ಯಾಚರಣೆ

ಮುಖ್ಯಾಂಶಗಳು

* 23 ಅಡಿ ಆಳದಲ್ಲಿ ಕಾಣಿಸಿದ ಕಾವೇರಿಯ ಬಲಗೈ
* 175ಕ್ಕೂ ಹೆಚ್ಚು ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ
* 25 ಅಡಿ ಆಳದಲ್ಲೇ ಲಾಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT