ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿ ವಿಕೋಪ ನಿಧಿ: ಕೇಂದ್ರದ ತಾರತಮ್ಯ ನೀತಿ– ಸಿದ್ದರಾಮಯ್ಯ ಆರೋಪ

Last Updated 23 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಕೃಷಿಯನ್ನೇ ಆಧರಿಸಿ­ರುವ ಕರ್ನಾಟಕದಲ್ಲಿ ಕಳೆದ ಆರು ವರ್ಷಗಳಿಂದ ಭೀಕರ ಬರಗಾಲ ತಲೆದೋರಿದ್ದು, ರೈತರ ಸ್ಥಿತಿ ಚಿಂತಾಜನಕವಾಗಿದೆ. ಆದರೆ, ಕೇಂದ್ರ ಸರ್ಕಾರವು ರಾಜ್ಯ ಪ್ರಕೃತಿ ವಿಕೋಪ ನಿಧಿಗೆ (ಎಸ್‌ಡಿಆರ್‌ಎಫ್‌) ಅನುದಾನ ಹಂಚಿಕೆ ಮಾಡುವಲ್ಲಿ ತೀವ್ರ ತಾರತಮ್ಯ ನೀತಿ ಅನುಸರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ರಾಷ್ಟ್ರಪತಿ ಭವನದಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ನೀತಿ ಆಯೋಗದ ಮೂರನೇ ಆಡಳಿತ ಮಂಡಳಿ ಸಭೆಯಲ್ಲಿ ಅವರು ಮಾತನಾಡಿದರು.

ಕರ್ನಾಟಕವು ಅತಿ ಹೆಚ್ಚು ಒಣ ಭೂಮಿ ಹೊಂದಿರುವ ದೇಶದ ಎರಡನೇ ಅತಿ ದೊಡ್ಡ ರಾಜ್ಯ. ಅಂತೆಯೇ  ಬರದಿಂದ ರಾಜ್ಯದ ರೈತರು ತೀವ್ರ ನಷ್ಟ ಅನುಭವಿಸುತ್ತಾರೆ. ಅದೇ ರೀತಿ, ಅನಿರೀಕ್ಷಿತ ಪ್ರವಾಹದಿಂದಲೂ ಜನತೆಗೆ ಸಾಕಷ್ಟು ಸಮಸ್ಯೆ ಎದುರಾಗುತ್ತದೆ. ಆದರೆ, 2015–20ನೇ ಸಾಲಿಗಾಗಿ ರಾಜ್ಯಕ್ಕೆ ಮಂಜೂರು ಮಾಡಿರುವ ರಾಜ್ಯ ಪ್ರಕೃತಿ ವಿಕೋಪ ನಿಧಿಯು ಕೇವಲ ₹ 1,375 ಕೋಟಿ. ಇದು ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕೇಂದ್ರ ಸರ್ಕಾರ ಹಂಚಿಕೆ ಮಾಡಿರುವ ಅತಿ ಕಡಿಮೆ ಅನುದಾನವಾಗಿದೆ ಎಂದು ಅವರು ದೂರಿದರು.

ಕೇಂದ್ರವು ಜಾರ್ಖಂಡ್‌ಗೆ ₹ 3,376 ಕೋಟಿ, ಮಹಾರಾಷ್ಟ್ರಕ್ಕೆ ₹ 5,484 ಕೋಟಿ, ತಮಿಳುನಾಡಿಗೆ ₹ 7,376 ಕೋಟಿ, ರಾಜಸ್ಥಾನಕ್ಕೆ ₹ 4,363 ಕೋಟಿ ಹಂಚಿಕೆ ಮಾಡಿದೆ. ಕರ್ನಾಟಕವು ನೈಸರ್ಗಿಕ ವಿಕೋಪದಿಂದ ಎದುರಿಸುತ್ತಿರುವ ಸಂಕಷ್ಟವನ್ನು ಪರಿಗಣಿಸಿ ಕೂಡಲೇ ಅಗತ್ಯ ಪ್ರಮಾಣದ ಅನುದಾನ ಹಂಚಿಕೆ ಮಾಡಬೇಕು ಎಂದು ಅವರು ಕೋರಿದರು.

ಕಳೆದ ವರ್ಷ ಬರದಿಂದಾಗಿ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ₹ 17,193 ಕೋಟಿ ಮೌಲ್ಯದ ಬೆಳೆ ನಷ್ಟ ಆಗಿದ್ದು, ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿ (ಎನ್‌ಡಿಆರ್‌ಎಫ್‌) ಅಡಿ ನಿಯಮಾನುಸಾರ ₹ 4,702.54 ಕೋಟಿ ಪರಿಹಾರಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ, ರಾಜ್ಯಕ್ಕೆ ಮಂಜೂರಾದ ಮೊತ್ತ ಕೇವಲ ₹ 1,685.54 ಕೋಟಿ ಎಂದು ಅವರು ವಿವರಿಸಿದರು.

ಹಿಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ₹ 7,097.89 ಕೋಟಿ ಮೌಲ್ಯದ ಬೆಳೆ ನಷ್ಟವಾಗಿದ್ದು, ₹ 3,310 ಕೋಟಿ  ಪರಿಹಾರಕ್ಕೆ ಮನವಿ ಸಲ್ಲಿಸಲಾಗಿದೆ. ಮಂಜೂರು ಮಾಡುವಾಗ ರಾಜ್ಯದ ಸಂಕಷ್ಟಕ್ಕೆ ಕೇಂದ್ರವು ಆದ್ಯತೆ ನೀಡಬೇಕು ಎಂದು ಅವರು ಮನವಿ ಮಾಡಿದರು.

ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯೂ  ಸೇರಿದಂತೆ ಕೇಂದ್ರ ಸರ್ಕಾರಿ ಪ್ರಾಯೋಜಿತ ಯೋಜನೆಗಳಿಗೆ ಹಂಚಿಕೆಯಾಗಿರುವ ಅನುದಾನದಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿತ ಉಂಟಾಗಿದೆ.

ಇದರಿಂದ ರಾಜ್ಯದ ಅಭಿವೃದ್ಧಿಗೆ ತೀವ್ರ ತೊಂದರೆಯಾಗಿದೆ. ಈ ಕೊರತೆಯನ್ನು ನೀಗಿಸಲು ಪ್ರಸಕ್ತ ಸಾಲಿನಲ್ಲಿ ಹೆಚ್ಚುವರಿಯಾಗಿ ₹ 1185.62 ಕೋಟಿ ಅನುದಾನ  ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಜಿಎಸ್‌ಟಿ ಪರಿಹಾರಕ್ಕೆ ಆಗ್ರಹ
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾಯ್ದೆಯಿಂದಾಗಿ ರಾಜ್ಯಗಳು ಅನುಭವಿಸುವ ಆದಾಯ ನಷ್ಟಕ್ಕೆ ಸೂಕ್ತ ಪರಿಹಾರ ಮಂಜೂರು ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT