ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಮಿ, ಆಶಿಶ್‌ ನೆಹ್ರಾ ನಡುವೆ ಪೈಪೋಟಿ

ಆಯ್ಕೆ ಸಮಿತಿಗೆ ಸವಾಲು
Last Updated 23 ಏಪ್ರಿಲ್ 2017, 20:36 IST
ಅಕ್ಷರ ಗಾತ್ರ

ನವದೆಹಲಿ: ಇಂಗ್ಲೆಂಡ್‌ನಲ್ಲಿ ಜೂನ್‌ನಲ್ಲಿ ಆಯೋಜನೆಯಾಗಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಗೆ ಕೆಲ ದಿನಗಳಲ್ಲಿ ಭಾರತ ತಂಡದ ಆಯ್ಕೆ ನಡೆಯಲಿದ್ದು ವೇಗದ ಬೌಲರ್‌ಗಳಾದ ಮೊಹಮ್ಮದ್‌ ಶಮಿ ಮತ್ತು ಅನುಭವಿ ಆಶಿಶ್‌ ನೆಹ್ರಾ ನಡುವೆ ತಂಡದಲ್ಲಿ ಸ್ಥಾನ ಗಳಿಸಲು ಪೈಪೋಟಿ ಏರ್ಪಟ್ಟಿದೆ.

‘ಮಿನಿ ವಿಶ್ವಕಪ್‌’ ಎಂದೇ ಹೆಸರಾಗಿ ರುವ ಚಾಂಪಿಯನ್ಸ್ ಟ್ರೋಫಿಯು 18 ದಿನ ನಡೆಯಲಿದೆ. ಎಂಟು ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಈ ಟೂರ್ನಿಗೆ ಏಪ್ರಿಲ್‌ 25ರ ಒಳಗಾಗಿ ಬಿಸಿಸಿಐ 15 ಆಟಗಾರರನ್ನು ಒಳಗೊಂಡ ಭಾರತ ತಂಡವನ್ನು ಪ್ರಕಟಿಸಬೇಕಿದೆ. ಆದ್ದರಿಂದ ತಂಡಕ್ಕೆ ಯಾರನ್ನು ಆಯ್ಕೆ ಮಾಡಬೇಕೆನ್ನುವುದೇ ಬಿಸಿಸಿಐ ಆಯ್ಕೆ ಸಮಿತಿಗೆ ಸವಾಲಿನ ಕೆಲಸವಾಗಿದೆ.

ಆದಾಯ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಮತ್ತು ಬಿಸಿಸಿಐ ನಡುವೆ ಜಟಾಪಟಿ ನಡೆಯುತ್ತಿದೆ. ಈ ವಿವಾದ ಮೊದಲು ಪರಿಹಾರವಾಗಬೇಕು ಎಂದು ವಿಶ್ವದ ಶ್ರೀಮಂತ ಕ್ರಿಕೆಟ್‌ ಮಂಡಳಿ ಬಿಸಿಸಿಐ ಪಟ್ಟು ಹಿಡಿದಿದೆ. ಬಳಿಕವಷ್ಟೇ ಚಾಂಪಿಯನ್ಸ್‌ ಟ್ರೋಫಿಗೆ ಭಾರತ ತಂಡದ ಆಯ್ಕೆ ದಿನಾಂಕ ಅಂತಿಮಗೊಳ್ಳಲಿದೆ.

ಡೆತ್‌ ಓವರ್‌ಗಳಲ್ಲಿ ಚುರುಕಾಗಿ ಬೌಲ್‌ ಮಾಡುವ ವೇಗಿ ಜಸ್‌ಪ್ರೀತ್‌ ಬೂಮ್ರಾ, ಭುವನೇಶ್ವರ್‌ ಕುಮಾರ್ ಮತ್ತು ಉಮೇಶ್ ಯಾದವ್‌ ಅವರು ತಂಡದಲ್ಲಿ ಸ್ಥಾನ ಲಭಿಸುವ ಸಾಧ್ಯತೆ ಹೆಚ್ಚಿದೆ. ವೇಗಿ ಮತ್ತು ಆಲ್‌ರೌಂಡರ್ ಆಗಿರುವ ಹಾರ್ದಿಕ್‌ ಪಾಂಡ್ಯ ಕೂಡ ಸ್ಥಾನ ಪಡೆಯುವ ನಿರೀಕ್ಷೆಯಿದೆ.

15 ಸದಸ್ಯರ ತಂಡದಲ್ಲಿ ಒಟ್ಟು ಐವರು ವೇಗಿಗಳನ್ನು ಆಯ್ಕೆ ಮಾಡುವ ಲೆಕ್ಕಾಚಾರ ಹೊಂದಿರುವ ಬಿಸಿಸಿಐ ಮೊಹಮ್ಮದ್ ಶಮಿ ಅಥವಾ ನೆಹ್ರಾ ಇವರಲ್ಲಿ ಯಾರಿಗೆ ಸ್ಥಾನ ಕೊಡಬೇಕು ಎನ್ನುವುದರ ಬಗ್ಗೆ ಚಿಂತನೆ ನಡೆಯುತ್ತಿದೆ.

ಪದೇ ಪದೇ ಗಾಯದ ಸಮಸ್ಯೆ ಎದು ರಿಸುತ್ತಿರುವ ಶಮಿ 2015ರಲ್ಲಿ ಆಸ್ಟ್ರೇ ಲಿಯಾದಲ್ಲಿ ನಡೆದ ಐಸಿಸಿ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಆಡಿದ್ದೇ ಕೊನೆಯ ಏಕದಿನ ಪಂದ್ಯವಾಗಿದೆ. ಎಡಗೈ ವೇಗಿ ನೆಹ್ರಾ 2011ರ ವಿಶ್ವಕಪ್‌ ನಲ್ಲಿ ತಮ್ಮ ಕೊನೆಯ ಅಂತರರಾಷ್ಟ್ರೀಯ ಏಕದಿನ ಪಂದ್ಯವಾಡಿದ್ದರು. ಆದರೆ ನೆಹ್ರಾ ಹೋದ ವರ್ಷ ಟ್ವೆಂಟಿ–20 ತಂಡ ದಲ್ಲಿ ಸ್ಥಾನ ಗಳಿಸಿ ಗಮನ ಸೆಳೆದಿದ್ದರು.

ಬಿಸಿಸಿಐನ ಅಧಿಕಾರಿಗಳ ಪ್ರಕಾರ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ನೆಹ್ರಾ ಪರ ಒಲವು ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ನೆಹ್ರಾ ವೇಗದ ಬೌಲಿಂಗ್‌ನಲ್ಲಿ ಅಪಾರ ವಾದ ಜ್ಞಾನ ಹೊಂದಿದ್ದಾರೆ. ಜೊತೆಗೆ ಹೆಚ್ಚು ಅನುಭವವೂ ಇದೆ. ಇದರಿಂದ ತಂಡದ ಯುವ ಆಟಗಾರರಿಗೆ ಅನುಕೂಲವಾಗುತ್ತದೆ ಎನ್ನುವ ಲೆಕ್ಕಾಚಾರ ಕೊಹ್ಲಿ ಅವರದ್ದಾಗಿದೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT