ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ವರ್ಷದ ಬಳಿಕವೂ ನಿರ್ಮಾಣವಾಗದ ಸಬ್‌ವೇ

Last Updated 23 ಏಪ್ರಿಲ್ 2017, 19:55 IST
ಅಕ್ಷರ ಗಾತ್ರ

ಬೆಂಗಳೂರು: ನಮ್ಮ ಮೆಟ್ರೊ ಪೀಣ್ಯ –ನಾಗಸಂದ್ರ  ನಡುವಿನ ಎತ್ತರಿಸಿದ ಮಾರ್ಗದಲ್ಲಿ ಮೆಟ್ರೊ ಸಂಚಾರ ಆರಂಭವಾಗಿ ಎರಡು ವರ್ಷಗಳೇ ಕಳೆದಿವೆ.  ಆದರೆ, ಈ ಮಾರ್ಗದ ಮೂರು ಮೆಟ್ರೊ ನಿಲ್ದಾಣಗಳ ಬಳಿ ಸಬ್‌ವೇ ನಿರ್ಮಿಸುವ ಯೋಜನೆ ಇನ್ನೂ ಜಾರಿಯಾಗಿಲ್ಲ.

ಇಲ್ಲಿನ ಮೆಟ್ರೊ ನಿಲ್ದಾಣಗಳನ್ನು ತಲುಪಲು ರಾಷ್ಟ್ರೀಯ ಹೆದ್ದಾರಿಯನ್ನು ದಾಟಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಇಲ್ಲಿ ಏಪ್ರಿಲ್‌ 11ರಂದು ನಾಗಸಂದ್ರ ಮೆಟ್ರೊ ನಿಲ್ದಾಣದ ಬಳಿ ಬಾಲಕಿ ಆರ್‌.ಪೂಜಾ (16 ವರ್ಷ) ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿತ್ತು. ಎರಡು ದಿನಗಳ ಬಳಿಕ ಬಾಲಕಿ ಮೃತಪಟ್ಟಿದ್ದರು.

‘ಮಗಳು  ಮೆಟ್ರೊ ನಿಲ್ದಾಣಕ್ಕೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಇಲ್ಲಿ ಮೆಟ್ರೊ ನಿಲ್ದಾಣ ತಲುಪಲು ಸೂಕ್ತ ವ್ಯವಸ್ಥೆ ಇಲ್ಲ.  ಹಾಗಾಗಿ  ಮೆಟ್ರೊದಲ್ಲಿ ಪ್ರಯಾಣಿಸುವ ನೂರಾರು ಮಂದಿ ಇಲ್ಲಿ ಅಪಾಯವನ್ನು ಲೆಕ್ಕಿಸದೆ ರಸ್ತೆ ದಾಟುತ್ತಿದ್ದಾರೆ. ಅನೇಕರು ರಸ್ತೆ ಅಪಘಾತದಿಂದ ಗಾಯಗೊಂಡಿದ್ದಾರೆ. ನಾವು ನಮ್ಮ ಮಗಳನ್ನೇ   ಕಳೆದು ಕೊಂಡೆವು. ಆಕೆಯ ಸಾವಿಗೆ ಮೂಲಸೌಕರ್ಯ ಕೊರತೆಯೂ ಕಾರಣ’ ಎನ್ನುತ್ತಾರೆ ಪೂಜಾ ಅವರ ತಂದೆ ಪಿ.ರಾಜಶೇಖರ್‌.

ಪ್ರಗತಿ ಶೂನ್ಯ: ನಾಗಸಂದ್ರ, ಜಾಲಹಳ್ಳಿ ಹಾಗೂ ದಾಸರಹಳ್ಳಿ ಮೆಟ್ರೊ ನಿಲ್ದಾಣಗಳ ಬಳಿ ಸಬ್‌ ವೇ ನಿರ್ಮಿಸಲು ಬಿಎಂಆರ್‌ಸಿಎಲ್‌ 2015ರ ಜನವರಿಯಲ್ಲಿ  ಟೆಂಡರ್‌ ಆಹ್ವಾನಿಸಿತ್ತು. ₹ 9.61 ಕೋಟಿ ಮೊತ್ತದ ಈ ಕಾಮಗಾರಿಯಲ್ಲಿಆ ಬಳಿಕ ಯಾವ ಪ್ರಗತಿಯೂ ಆಗಿಲ್ಲ.

‘ಸಬ್ ವೇ  ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್‌ಎಐ) ಇನ್ನೂ ಅನುಮತಿ ನೀಡಿಲ್ಲ’ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು ತಿಳಿಸಿದರು. ಆದರೆ, ಇದನ್ನು ಒಪ್ಪಲು ಎನ್ಎಚ್‌ಎಐ ಸಿದ್ಧವಿಲ್ಲ.

‘ಸಬ್‌ ವೇಗಳ ನಿರ್ಮಾಣಕ್ಕೆ ನವದೆಹಲಿಯಲ್ಲಿರುವ ಎನ್ಎಚ್‌ಎಐ  ಕೇಂದ್ರ ಕಚೇರಿ 2016ರ ಜೂನ್‌ನಲ್ಲಿ   ಅನುಮತಿ ನೀಡಿದೆ. ಸಬ್‌ವೇ ಕೆಲಸವನ್ನು ಆರಂಭಿಸುವಂತೆ ನಾಲ್ಕು ತಿಂಗಳ ಹಿಂದೆ ಬಿಎಂಆರ್‌ಸಿಎಲ್‌ಗೆ ಮತ್ತೊಂದು ಪತ್ರ ಬರೆದು ನೆನಪಿಸಲಾಗಿದೆ. ಅದಕ್ಕೆ ಇನ್ನೂ ಉತ್ತರ ಬಂದಿಲ್ಲ’ ಎಂದು
ಎನ್ಎಚ್‌ಎಐ ಅಧಿಕಾರಿಯೊಬ್ಬರು ತಿಳಿಸಿದರು.

‘ಸಬ್‌ ವೇ ನಿರ್ಮಿಸುವುದೂ ಮೆಟ್ರೊ ಯೋಜನೆಯ ಭಾಗವಾಗಿತ್ತು. ಇಲ್ಲಿ ಮೆಟ್ರೊ ಸಂಚಾರ ಆರಂಭಿಸುವ ಮುನ್ನವೇ ಸಬ್‌ ವೇ ನಿರ್ಮಿಸಬೇಕಿತ್ತು’ ಎಂದರು.

*
ನಾಗಸಂದ್ರ ಮೆಟ್ರೊ ನಿಲ್ದಾಣದ ಬಳಿ ನಿತ್ಯ ನೂರಾರು ಮಂದಿ ರಸ್ತೆ ದಾಟುತ್ತಾರೆ. ಇಲ್ಲಿರುವ ಸ್ಕೈವಾಕ್‌  ನಿಲ್ದಾಣದಿಂದ 250 ಮೀ. ದೂರದಲ್ಲಿದೆ.  ಆದಷ್ಟು ಬೇಗ ಸಬ್‌ವೇ ನಿರ್ಮಿಸಿ.
-ಸುಭಾಷ್‌ ಶೆಟ್ಟಿ,
ನಾಗಸಂದ್ರದ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT