ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನರ್ವಸತಿ ಕಲ್ಪಿಸಿ, ಒತ್ತುವರಿ ತೆರವಿಗೆ ಚಿಂತನೆ

ಬೆಳ್ಳಂದೂರು ಕೆರೆಗೆ ಸೇರಿದ ಜಾಗದಲ್ಲಿವೆ 70ಕ್ಕೂ ಅಧಿಕ ಮನೆಗಳು
Last Updated 23 ಏಪ್ರಿಲ್ 2017, 20:10 IST
ಅಕ್ಷರ ಗಾತ್ರ

ಬೆಂಗಳೂರು: ಬೆಳ್ಳಂದೂರು ಕೆರೆ ಪುನರುಜ್ಜೀವನದ ಹೊಣೆ ಹೊತ್ತ  ಇಲಾಖೆಗಳ  ನಿರ್ಲಕ್ಷ್ಯ ಧೋರಣೆ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್‌ಜಿಟಿ) ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಕೆರೆಗೆ ಸಂಬಂಧಿಸಿದ ಜಾಗದ ಒತ್ತುವರಿಗಳನ್ನು ಸಂಪೂರ್ಣ ತೆರವುಗೊಳಿಸಲು ಜಿಲ್ಲಾಡಳಿತ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಚಿಂತನೆ ನಡೆಸಿವೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ 6 ಗ್ರಾಮಗಳಲ್ಲಿ ಹಾಗೂ ಪೂರ್ವ ತಾಲ್ಲೂಕಿನ 4 ಗ್ರಾಮಗಳಲ್ಲಿ ಕೆರೆ ವ್ಯಾಪಿಸಿರುವ ಬೆಳ್ಳಂದೂರು ಕೆರೆ 919 ಎಕರೆಯಷ್ಟು ವಿಶಾಲವಾಗಿದೆ.  ಕೆರೆಯ ವಿಸ್ತೀರ್ಣದ ಬಗ್ಗೆ  ಖಚಿತ ಮಾಹಿತಿ ಪಡೆಯಲು ಭೂಮಾಪನಾ ಇಲಾಖೆಯ ಸಹಕಾರದಲ್ಲಿ ಜಿಲ್ಲಾಡಳಿತ ಸಮೀಕ್ಷೆ ಕೈಗೆತ್ತಿಕೊಂಡಿತ್ತು.

ಸರ್ವೆ ಸಂಖ್ಯೆ 2, ಸರ್ವೆ ಸಂಖ್ಯೆ 3, 17 ಹಾಗೂ 24ರಲ್ಲಿ ಒಟ್ಟು11 ಎಕರೆ ಒತ್ತುವರಿಯಾಗಿರುವುದು ಇದರಿಂದ ಬಹಿರಂಗಗೊಂಡಿತ್ತು. 4.18 ಎಕರೆ ಸರ್ಕಾರಿ   ಜಾಗ ಒತ್ತುವರಿಯಾಗಿದ್ದು, ಅಲ್ಲಿ ರಸ್ತೆ ನಿರ್ಮಾಣವಾಗಿತ್ತು. ಪ್ರಸ್ತುತ 760 ಎಕರೆ ಜಾಗದಲ್ಲಿ ಮಾತ್ರ ನೀರು ಇದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ. 

ಒತ್ತುವರಿ ತೆರವು: ‘2016ರ ಮೇನಲ್ಲಿ ಬಹುತೇಕ ಒತ್ತುವರಿಯನ್ನು ತೆರವುಗೊಳಿಸಿದ್ದೇವೆ. ಅಂಬೇಡ್ಕರ್‌ ನಗರದಲ್ಲಿ  ಅರ್ಧ ಎಕರೆಯಷ್ಟು ಜಾಗ ಒತ್ತುವರಿ
ಯಾಗಿದೆ. ಅಲ್ಲಿ ಕೆಲವರು ಮನೆ ನಿರ್ಮಿಸಿಕೊಂಡಿದ್ದಾರೆ. ಅವರಿಗೆ ಪುನರ್ವಸತಿ ಕಲ್ಪಿಸಿ ಒತ್ತುವರಿ ತೆರವುಗೊಳಿಸುವ ಚಿಂತನೆ ಇದೆ. ಈ ಬಗ್ಗೆ   ಬಿಡಿಎ ಜೊತೆ ಉಪವಿಭಾಗಾಧಿಕಾರಿಗಳು  ಈಗಾಗಲೇ ಮಾತುಕತೆ ನಡೆಸಿದ್ದಾರೆ’ ಎಂದು ನಗರ ಜಿಲ್ಲಾಧಿಕಾರಿ ವಿ.ಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಂಬೇಡ್ಕರ್‌ ನಗರದಲ್ಲಿ ಕೆರೆಗೆ ಸಂಬಂಧಿಸಿದ ಜಾಗದಲ್ಲಿ 70ಕ್ಕೂ ಹೆಚ್ಚು ಮನೆಗಳಿವೆ. ಇತ್ತೀಚೆಗೆ ಮನೆಗಳ ಸಂಖ್ಯೆ ಹೆಚ್ಚಳವಾಗಿರುವ ಮಾಹಿತಿ ಇದೆ. ಅವುಗಳನ್ನು ತೆರವುಗೊಳಿಸ ಬೇಕಾಗುತ್ತದೆ. ಅದಕ್ಕೂ ಮುನ್ನ ಅಲ್ಲಿ ನೆಲೆಸಿರುವವರಿಗೆ ಪುನರ್ವಸತಿ ಹೇಗೆ ಕಲ್ಪಿಸಬಹುದು ಎಂಬ ಬಗ್ಗೆ ಸಮಾ
ಲೋಚನೆ ನಡೆಸಿದ್ದೇವೆ’ ಎಂದು  ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌ ತಿಳಿಸಿದರು.

‘ಈ ವಾರ ಸ್ಥಳಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ಬಗ್ಗೆ ಮಾಹಿತಿ ಪಡೆಯುತ್ತೇನೆ. ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT