ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಟೆಕ್‌ ವೇಶ್ಯಾವಾಟಿಕೆಗೆ ಹೆಡ್‌ ಕಾನ್‌ಸ್ಟೆಬಲ್‌ ಕಾವಲು

Last Updated 23 ಏಪ್ರಿಲ್ 2017, 20:12 IST
ಅಕ್ಷರ ಗಾತ್ರ

ಬೆಂಗಳೂರು:  ಬಿ.ಟಿ.ಎಂ ಬಡಾವಣೆಯಲ್ಲಿ ನಡೆಯುತ್ತಿದ್ದ ಹೈಟೆಕ್‌ ವೇಶ್ಯಾವಾಟಿಕೆಯಲ್ಲಿ ಶಾಮೀಲಾಗಿದ್ದ ಆರೋಪದಡಿ ಹೆಡ್‌ ಕಾನ್‌ಸ್ಟೆಬಲ್‌ ಕರಿಬಸವಯ್ಯ (38) ಅವರನ್ನು ಮೈಕೊ ಲೇಔಟ್‌ ಠಾಣೆಯ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

‘ಪರಪ್ಪನ ಅಗ್ರಹಾರ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಅವರು, ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪಿಗಳಿಗೆ ಸಹಾಯ ಮಾಡುತ್ತಿದ್ದರು. ಜತೆಗೆ ಡಿಸಿಪಿ, ಎಸಿಪಿ, ಇನ್‌ಸ್ಪೆಕ್ಟರ್‌ಗೆ ಮಾಮೂಲಿ ನೀಡಬೇಕೆಂದು ಹೇಳಿ ಪ್ರತಿ ತಿಂಗಳು ₹3 ಲಕ್ಷ ವಸೂಲಿ ಮಾಡುತ್ತಿದ್ದರು’ ಎಂದು ತನಿಖಾಧಿಕಾರಿ ತಿಳಿಸಿದರು.

‘ಕುವೆಂಪುನಗರದ ಬಂಗಲೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದು ಕಳೆದ ವಾರ ದಾಳಿ ಮಾಡಿದ್ದೆವು. ಈ ವೇಳೆ  ಉಸ್ಮಾನ್, ನರೇಶ್ ಸಿಂಗ್, ಪರ್ವೇಜ್ ಖಾನ್ ಮತ್ತು ಸರವಣ ಎಂಬುವರನ್ನು ಬಂಧಿಸಿದ್ದೆವು. ಅವರು ವಿಚಾರಣೆ ವೇಳೆ ಕರಿಬಸವಯ್ಯ ಹೆಸರು ಬಾಯ್ಬಿಟ್ಟಿದ್ದರು. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ’ ಎಂದು ವಿವರಿಸಿದರು.

ಬಂಗಲೆ ಬಾಡಿಗೆ ಕೊಡಿಸಿದ್ದ: ‘ಮಡಿವಾಳ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಕರಿಬಸವಯ್ಯ, ಕೆಲ ತಿಂಗಳ ಹಿಂದಷ್ಟೇ ಪರಪ್ಪನ ಅಗ್ರಹಾರ ಠಾಣೆಗೆ ವರ್ಗಾವಣೆಗೊಂಡಿದ್ದರು. ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪಿಗಳು ನಗರದವರೇ ಆಗಿದ್ದು, ಮೊದಲಿನಿಂದಲೂ ಅವರ ಕೆಲಸಕ್ಕೆ ಹೆಡ್‌ ಕಾನ್‌ಸ್ಟೆಬಲ್‌ ಸಹಾಯ ಮಾಡುತ್ತಿದ್ದರು’ ಎಂದು ತನಿಖಾಧಿಕಾರಿ ವಿವರಿಸಿದರು.

‘ಕುವೆಂಪುನಗರದ ಬಂಗಲೆಯನ್ನು ಆರೋಪಿಗಳಿಗೆ ಬಾಡಿಗೆ ಕೊಡಿಸಿದ್ದ ಕರಿಬಸವಯ್ಯ, ‘ಮನೆಗೆ ಐಎಎಸ್‌, ಐಪಿಎಸ್‌, ಪ್ರತಿಷ್ಠಿತ ಕಂಪೆನಿಯ ಅಧಿಕಾರಿಗಳು ಬಂದು ಹೋಗುತ್ತಾರೆ’ ಎಂದು ಮಾಲೀಕರಿಗೆ ಹೇಳಿದ್ದರು. ಹೆಚ್ಚು ಗಿರಾಕಿಗಳನ್ನು ಸೆಳೆದು  ಮಾಮೂಲಿ ಹೆಚ್ಚಿಸುವಂತೆಯೂ ಒತ್ತಡ ಹೇರಿದ್ದರು’ ಎಂದು ತಿಳಿಸಿದರು.

ವೆಬ್‌ಸೈಟ್‌, ವಾಟ್ಸ್‌್ಆ್ಯಪ್‌ ಮೂಲಕ ಸಂಪರ್ಕ: ‘ಆರೋಪಿ ಉಸ್ಮಾನ್, ವೇಶ್ಯಾವಾಟಿಕೆಗಾಗಿ ವೆಬ್‌ಸೈಟ್‌ ತೆರೆದಿದ್ದ. ಅದರಲ್ಲಿ ಯುವತಿಯರ ಚಿತ್ರಗಳನ್ನು ಹಾಕಿ ಗಿರಾಕಿಗಳನ್ನು ಸಂಪರ್ಕಿಸುತ್ತಿದ್ದ. ಜತೆಗೆ ವಾಟ್ಸ್‌ಆ್ಯಪ್‌ ಮೂಲಕವೂ ಚಿತ್ರಗಳನ್ನು ಕಳುಹಿಸುತ್ತಿದ್ದ.’

‘ಮುಂಬೈನಿಂದ ಯುವತಿಯರನ್ನು ವಿಮಾನದಲ್ಲಿ ಕರೆಸುತ್ತಿದ್ದ ಆರೋಪಿಗಳು, ವಾರದಲ್ಲಿ ಮೂರು ದಿನ ಅವರನ್ನು ಬಂಗಲೆಯಲ್ಲಿ ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಗ್ರಾಹಕರಿಂದ ₹25,000ರಿಂದ ₹30,000 ಪಡೆಯುತ್ತಿದ್ದ ಆರೋಪಿಗಳು, ಹಣ ಪಡೆಯಲು ಸ್ವೈಪಿಂಗ್‌ ಯಂತ್ರವನ್ನು ಬಳಕೆ ಮಾಡುತ್ತಿದ್ದರು. ಆನ್‌ಲೈನ್‌ ಬ್ಯಾಂಕಿಂಗ್‌ ಮೂಲಕವೂ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು’ ಎಂದು ಮಾಹಿತಿ ನೀಡಿದರು.

ಪತ್ನಿಯೂ ಹೆಡ್‌ ಕಾನ್‌ಸ್ಟೆಬಲ್‌

ಬಂಧಿತ ಕರಿಬಸವಯ್ಯ ಅವರ ಪತ್ನಿಯೂ ಹೆಡ್‌ ಕಾನ್‌ಸ್ಟೆಬಲ್‌ ಆಗಿದ್ದು, ನಗರದ ಠಾಣೆಯಲ್ಲೇ ಕೆಲಸ ಮಾಡುತ್ತಿದ್ದಾರೆ. ಪತಿಯ ಕೃತ್ಯವೂ ಅವರಿಗೆ ಗೊತ್ತಿತ್ತು ಎನ್ನಲಾಗಿದ್ದು, ಅವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

‘ವಸೂಲಿ ಮಾಡಿದ್ದ ಹಣದಲ್ಲೇ  ಹೆಡ್‌ ಕಾನ್‌ಸ್ಟೆಬಲ್‌, ನಗರದಲ್ಲಿ ಮೂರು ನಿವೇಶನಗಳನ್ನು ಖರೀದಿಸಿದ್ದಾರೆ. ಒಂದು ನಿವೇಶನದಲ್ಲಿ ಮನೆಯನ್ನೂ ಕಟ್ಟಿಸುತ್ತಿದ್ದಾರೆ. ಅವರ ಬ್ಯಾಂಕ್‌ ಖಾತೆಗೆ ಆರೋಪಿಗಳು ಹಣ ವರ್ಗಾಯಿಸಿದ್ದಕ್ಕೆ ಪುರಾವೆಗಳು ಸಿಕ್ಕಿದ್ದು, ಖಾತೆ ಜಪ್ತಿ ಮಾಡಿದ್ದೇವೆ’ ಎಂದು ತನಿಖಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT