ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿದ ಮತ್ತಿನಲ್ಲಿ ಯುವತಿಯರ ರಂಪಾಟ, ಪೊಲೀಸರಿಗೆ ಬೆದರಿಕೆ

ವಿಶೇಷ ಕಾರ್ಯಾಚರಣೆ
Last Updated 23 ಏಪ್ರಿಲ್ 2017, 20:14 IST
ಅಕ್ಷರ ಗಾತ್ರ

ಬೆಂಗಳೂರು: ರಿಚ್ಮಂಡ್ ವೃತ್ತದಲ್ಲಿ ಶನಿವಾರ ರಾತ್ರಿ ಸಂಚಾರ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ  ಕುಡಿದ ಮತ್ತಿನಲ್ಲಿದ್ದ ನಾಲ್ವರು ಯುವತಿಯರು ರಂಪಾಟ ಮಾಡಿದ್ದಾರೆ.

ಕುಡಿದು ವಾಹನ ಚಲಾಯಿಸುವರ ಪತ್ತೆಗಾಗಿ ಹಲಸೂರು ಗೇಟ್‌ ಸಂಚಾರ ಠಾಣೆಯ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಅದರ ಪ್ರಯುಕ್ತ ರಮಣಶ್ರೀ ಹೋಟೆಲ್‌ ಮುಂಭಾಗದ ರಸ್ತೆ ಬದಿಯಲ್ಲಿ ತಡರಾತ್ರಿ ನಿಂತು ಚಾಲಕರನ್ನು ತಪಾಸಣೆಗೆ ಒಳಪಡಿಸುತ್ತಿದ್ದರು.

ಇದೇ ವೇಳೆ ಎರಡು ಸ್ಕೂಟರ್‌ನಲ್ಲಿ ಬರುತ್ತಿದ್ದ ನಾಲ್ವರು ಯುವತಿಯರನ್ನು ಪೊಲೀಸರು ತಡೆದಿದ್ದರು. ಯುವತಿಯರಿಂದ ಮದ್ಯದ ವಾಸನೆ ಬರುತ್ತಿತ್ತು. ಆಗ ಪೊಲೀಸರು, ಅಲ್ಕೋಮೀಟರ್‌ನಲ್ಲಿ (ಮದ್ಯದ ಪ್ರಮಾಣ ಪರೀಕ್ಷೆ ಯಂತ್ರ) ಊದುವಂತೆ ಹೇಳಿದ್ದರು. ಅದನ್ನು ನಿರಾಕರಿಸಿದ ಯುವತಿಯರು ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದರು.

ಈ ವೇಳೆ ಪೊಲೀಸರಿಗೆ ಬೆದರಿಕೆ ಹಾಕಿದ್ದ ಒಬ್ಬ ಯುವತಿ, ‘ನಾನು ರಾಷ್ಟ್ರೀಯಮಟ್ಟದ ಆಂಗ್ಲ ಪತ್ರಿಕೆಯೊಂದರ ವರದಿಗಾರ್ತಿ’ ಎಂದು ಹೇಳಿದ್ದರು. ಅದಕ್ಕೆ ಸೊಪ್ಪು ಹಾಕದ ಪೊಲೀಸರು, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಾಹನಗಳನ್ನು ಜಪ್ತಿ ಮಾಡಿದರು.

‘ಯುವತಿಯರಿಗೆ ನೋಟಿಸ್‌ ಕೊಟ್ಟಿದ್ದೇವೆ. ನ್ಯಾಯಾಲಯದಲ್ಲಿ ದಂಡ ಕಟ್ಟಿದ ಬಳಿಕವೇ ವಾಹನಗಳನ್ನು ಅವರಿಗೆ ವಾಪಸ್‌ ಕೊಡುತ್ತೇವೆ’ ಎಂದು ಹಲಸೂರು ಗೇಟ್‌ ಪೊಲೀಸರು ತಿಳಿಸಿದರು.

ಇರಾನ್‌ ಪ್ರಜೆ ವಿರುದ್ಧ ಪ್ರಕರಣ: ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದ ಇರಾನ್‌ ಪ್ರಜೆ ಆ್ಯಂಡ್ರೊ ಮೌಸಿನ್ ವಿರುದ್ಧ ವಿಲ್ಸನ್‌ಗಾರ್ಡನ್‌ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

‘ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿರುವ ಆ್ಯಂಡ್ರೊ, ಶನಿವಾರ ರಾತ್ರಿ ಸ್ನೇಹಿತೆಯೊಂದಿಗೆ ಎಂ.ಜಿ.ರಸ್ತೆಯ ಬಾರ್‌ಗೆ ಬಂದಿದ್ದ. ಮದ್ಯ ಕುಡಿದ ಬಳಿಕ ಕಾರಿನಲ್ಲಿ  ಶಾಂತಿನಗರ ಬಸ್ ನಿಲ್ದಾಣದ ಕಡೆಗೆ ಹೋಗುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.

‘ಈ ವೇಳೆ ತಪಾಸಣೆಗಾಗಿ ಕಾರು ತಡೆಯಲು ಪೊಲೀಸರು ಯತ್ನಿಸಿದ್ದರು. ಆಗ ಕಾರನ್ನು ಹಿಂದಕ್ಕೆ ಚಲಿಸಿ ತಪ್ಪಿಸಿಕೊಳ್ಳಲು ಆ್ಯಂಡ್ರೊ ಮುಂದಾಗಿದ್ದ.  ಆತನನ್ನು ಬೆನ್ನಟ್ಟಿದ್ದ ಪೊಲೀಸರು, ಶಾಂತಿನಗರ ಬಸ್‌ ನಿಲ್ದಾಣ ಸಮೀಪವೇ ತಡೆದು ನಿಲ್ಲಿಸಿದ್ದರು.’

ಬಳಿಕ ತಪಾಸಣೆ ವೇಳೆ  ಅನುಚಿತವಾಗಿ ವರ್ತಿಸಿದ ಆ್ಯಂಡ್ರೊ, ಬೆದರಿಕೆಯನ್ನೂ ಹಾಕಿದ್ದ’ ಎಂದು ಪೊಲೀಸರು ತಿಳಿಸಿದರು.

‘ಆರೋಪಿ ಹಾಗೂ ಆತನ ಸ್ನೇಹಿತೆಯನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ಮಾಡಿಸಿದ್ದೆವು. ಮದ್ಯ ಕುಡಿದಿದ್ದು  ದೃಢಪಟ್ಟಿದ್ದು, ಪ್ರಕರಣ ದಾಖಲಿಸಿಕೊಂಡು ಮನೆಗೆ ಕಳುಹಿಸಿದ್ದೇವೆ. ಆರೋಪಿ ಬಳಿ ಚಾಲನಾ ಪರವಾನಗಿ (ಡಿಎಲ್‌) ಸಹ ಇರಲಿಲ್ಲ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT