ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್‌ ಪಡೆಗೆ ಹೀನಾಯ ಸೋಲು

ಅಮೋಘ ಬೌಲಿಂಗ್ ಮಾಡಿದ ರೈಡರ್ಸ್ ತಂಡಕ್ಕೆ 82 ರನ್ ಗೆಲುವು
Last Updated 23 ಏಪ್ರಿಲ್ 2017, 20:22 IST
ಅಕ್ಷರ ಗಾತ್ರ

ಕೋಲ್ಕತ್ತ: ಗೆಲುವಿಗೆ ಸಾಧಾರಣ ಗುರಿ ಯಿದ್ದರೂ ಅತ್ಯಂತ ಕಳಪೆ ಬ್ಯಾಟಿಂಗ್ ಮಾಡಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ  ಐಪಿಎಲ್ ಹತ್ತನೇ ಆವೃತ್ತಿಯ ಭಾನು ವಾರದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಎದುರು ಹೀನಾಯವಾಗಿ ಸೋಲು ಅನುಭವಿಸಿತು.

ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರೈಡರ್ಸ್‌ ತಂಡ 19.3 ಓವರ್‌ಗಳಲ್ಲಿ 131 ರನ್ ಗಳಿಸಿ ಆಲೌಟ್‌ ಆಯಿತು.

ವಿರಾಟ್‌ ಕೊಹ್ಲಿ ನಾಯಕತ್ವದ ಆರ್‌ಸಿಬಿ ತಂಡ ರೈಡರ್ಸ್ ತಂಡದ ಕರಾರುವಾಕ್ಕಾದ ಬೌಲಿಂಗ್ ಎದುರು ತತ್ತರಿಸಿ ಹೋಯಿತು. ಬೆಂಗಳೂರಿನ ತಂಡ ಅಂತಿಮವಾಗಿ 9.4 ಓವರ್‌ಗಳಲ್ಲಿ  ಕೇವಲ 49 ರನ್‌ಗಳಿಗೆ ಆಲೌಟ್‌ ಆಯಿತು. ಇದು ಐಪಿಎಲ್ ಇತಿಹಾಸದಲ್ಲಿ ತಂಡವೊಂದು ಗಳಿಸಿದ ಅತಿಕಡಿಮೆ ಮೊತ್ತ ಎನಿಸಿತು. 2009ರಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್‌ 58 ರನ್‌ಗೆ ಆಲೌಟ್‌ ಆಗಿದ್ದು ಹಿಂದಿನ ಕಡಿಮೆ ಮೊತ್ತವಾಗಿತ್ತು.

ಕಾಲಿನ್‌ ಡಿ ಗ್ರಾಂಡ್‌ಹೊಮ್ಮೆ (1.4–0–4–3), ನಥಾನ್‌ ಕಲ್ಟರ್‌ ನೈಲ್‌ (3–0–21–3) ಮತ್ತು ಕ್ರಿಸ್‌ ವೋಕ್ಸ್‌ (2–0–6–3) ಅವರು ತಲಾ ಮೂರು ವಿಕೆಟ್‌ ಗಳನ್ನು ಕಬಳಿಸಿ ರೈಡರ್ಸ್ ತಂಡದ ಸ್ಮರಣೀಯ ಗೆಲುವಿಗೆ ಕಾರಣರಾದರು.

ಕೈಕೊಟ್ಟ ಬ್ಯಾಟಿಂಗ್: ಬ್ಯಾಟಿಂಗ್ ಶಕ್ತಿ ಎನಿಸಿದ್ದ  ಕ್ರಿಸ್‌ ಗೇಲ್‌ (7), ವಿರಾಟ್‌ ಕೊಹ್ಲಿ (0), ಮನದೀಪ್‌ ಸಿಂಗ್ (1), ಡಿವಿಲಿಯರ್ಸ್‌ (8) ಮತ್ತು ಕೇದಾರ್ ಜಾಧವ್‌ (9) ಬೇಗನೆ ವಿಕೆಟ್‌ ಒಪ್ಪಿಸಿದರು.

ಅಚ್ಚರಿಯೆಂದರೆ ಆರ್‌ಸಿಬಿ ತಂಡದ ಒಬ್ಬ ಬ್ಯಾಟ್ಸ್‌ಮನ್‌ ಕೂಡ ಎರಡಂಕಿಯ ಮೊತ್ತ  ಮುಟ್ಟಲಿಲ್ಲ. ಅಷ್ಟೇ ಏಕೆ, ಕ್ರಿಸ್‌ ಗೇಲ್ ಅವರನ್ನು ಹೊರತುಪಡಿಸಿದರೆ ಉಳಿದ ಯಾವ ಬ್ಯಾಟ್ಸ್‌ಮನ್‌ ಕೂಡ ಎರಡಂಕಿಯ ಎಸೆತ ಎದುರಿಸಲಿಲ್ಲ!

ವಿರಾಟ್‌ ಕೊಹ್ಲಿ ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಔಟಾದರು. ನಂತ ರದ ಎರಡು ಓವರ್‌ಗಳಲ್ಲಿ ಕ್ರಮವಾಗಿ ಮನದೀಪ್‌  ಮತ್ತು ಡಿವಿಲಿಯರ್ಸ್‌ ವಿಕೆಟ್‌ ಒಪ್ಪಿಸಿದರು. ಹೀಗೆ ಪ್ರತಿ ಓವರ್‌ಗೂ ಒಂದೊಂದು ವಿಕೆಟ್‌ ಕೈ ಚೆಲ್ಲಿದ ಆರ್‌ಸಿಬಿ ತಂಡ 24 ರನ್ ಗಳಿ ಸುಷ್ಟರಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದು ಕೊಂಡಿತ್ತು.

ಐದನೇ ವಿಕೆಟ್‌ಗೆ ಕ್ರಿಸ್‌ ಗೇಲ್‌ ಮತ್ತು ಸ್ಟುವರ್ಟ್‌ ಬಿನ್ನಿ ಕೆಲ ಹೊತ್ತು ಕ್ರೀಸ್‌ನಲ್ಲಿದ್ದು ರಕ್ಷಣಾತ್ಮಕ ಆಟಕ್ಕೆ ಮುಂದಾದರು. ಏಳನೇ ಓವರ್‌ನಲ್ಲಿ ಗೇಲ್‌ ಔಟಾಗುತ್ತಿದ್ದಂತೆ ಆರ್‌ಸಿಬಿ ತಂಡ ದ ಗೆಲುವಿನ ಆಸೆ ಕಮರಿ ಹೋಯಿತು.

ಬೆಂಗಳೂರಿನ ತಂಡ ತನ್ನ ಹಿಂದಿನ ಪಂದ್ಯದಲ್ಲಿ ಗುಜರಾತ್‌ ಲಯನ್ಸ್ ಎದುರು 213 ರನ್ ಗಳಿಸಿತ್ತು. ಗೇಲ್‌, ಕೊಹ್ಲಿ,  ಕೇದಾರ್ ಅಬ್ಬರಿಸಿದ್ದರಿಂದ ತಂಡಕ್ಕೆ ಸವಾಲಿನ ಮೊತ್ತ ಗಳಿಸಲು ಸಾಧ್ಯವಾಗಿತ್ತು. ಇವರ ಆಟ ರೈಡರ್ಸ್ ಬೌಲರ್‌ಗಳ ಮುಂದೆ ನಡೆಯಲಿಲ್ಲ.

ಪಂದ್ಯದ ಬಳಿಕ ಇದರ ಬಗ್ಗೆ ಮಾತನಾಡಿದ ನಾಯಕ ಕೊಹ್ಲಿ ‘ಹಿಂದಿನ ಪಂದ್ಯದಲ್ಲಿ 200ಕ್ಕಿಂತಲೂ ಹೆಚ್ಚು ರನ್ ಗಳಿಸಿ, ಇಲ್ಲಿ ಇಷ್ಟೊಂದು ಕೆಟ್ಟದಾಗಿ ಬ್ಯಾಟ್‌ ಮಾಡುತ್ತೇವೆ ಎಂದು ಕನಸಿ ನಲ್ಲಿಯೂ ಅಂದುಕೊಂಡಿರಲಿಲ್ಲ. ಇದು ಅತ್ಯಂತ ಕಳಪೆ ಬ್ಯಾಟಿಂಗ್’ ಎಂದು ಬೇಸರ ವ್ಯಕ್ತಪಡಿಸಿದರು.

ಬೌಲರ್‌ಗಳ ಮಿಂಚು: ಬ್ಯಾಟ್ಸ್‌ಮನ್‌ಗಳ ಮೇಲಾಟವೇ ಹೆಚ್ಚಾಗಿರುವ ಐಪಿಎಲ್‌ನಲ್ಲಿ ಎರಡೂ ತಂಡಗಳ ಬೌಲರ್‌ಗಳು ಮಿಂಚಿದ್ದು ವಿಶೇಷ. ಐಪಿಎಲ್‌ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಎರಡೂ ತಂಡಗಳು ಆಲೌಟ್‌ ಆಗಿದ್ದು ಇದು ಎರಡನೇ ಬಾರಿ.

ಉತ್ತಮ ಆರಂಭ: ರೈಡರ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಸುನಿಲ್ ನಾರಾಯಣ್ ಮತ್ತು ಗಂಭೀರ್ ಮೊದಲ ವಿಕೆಟ್‌ ಜೊತೆಯಾಟದಲ್ಲಿ ಕೇವಲ 22 ಎಸೆತಗಳಲ್ಲಿ 48 ರನ್ ಗಳಿಸಿ ಗಟ್ಟಿ ಬುನಾದಿ ನಿರ್ಮಿಸಿಕೊಟ್ಟರು. 

ಉತ್ತಮ ಆರಂಭ ಪಡೆದಿದ್ದ ಕಾರಣ ರೈಡರ್ಸ್ ತಂಡ ಮೊದಲ ಹತ್ತು ಓವರ್‌ ಗಳು ಮುಗಿದಾಗ 87 ರನ್‌ಗಳನ್ನು ಗಳಿಸಿತ್ತು. ಕೊನೆಯ ಹತ್ತು ಓವರ್‌ಗಳಲ್ಲಿ ಆರ್‌ಸಿಬಿ ಬೌಲರ್‌ಗಳು ಚುರುಕಿನ ದಾಳಿ ನಡೆಸಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಿದರು. ಆದರೆ ಕಳಪೆ ಬ್ಯಾಟಿಂಗ್ ಮಾಡಿದ ಕಾರಣ ಆರ್‌ಸಿಬಿ ಬೌಲರ್‌ಗಳ ಶ್ರಮವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಯಿತು.

ಸಂಕ್ಷಿಪ್ತ ಸ್ಕೋರು: ಕೋಲ್ಕತ್ತ ನೈಟ್‌ ರೈಡರ್ಸ್‌: 19.3 ಓವರ್‌ಗಳಲ್ಲಿ 131 (ಸುನಿಲ್‌ ನಾರಾ ಯಣ್ 34, ರಾಬಿನ್ ಉತ್ತಪ್ಪ 11, ಮನೀಷ್‌ ಪಾಂಡೆ 15, ಸೂರ್ಯಕುಮಾರ್ ಯಾದವ್ 15, ಕ್ರಿಸ್‌ ವೋಕ್ಸ್‌ 18; ಸ್ಯಾಮುಯೆಲ್‌ ಬದ್ರಿ 33ಕ್ಕೆ1, ಟೈಮಲ್‌ ಮಿಲ್ಸ್‌ 31ಕ್ಕೆ2, ಎಸ್‌. ಅರ ವಿಂದ್ 27ಕ್ಕೆ1, ಸ್ಟುವರ್ಟ್‌ ಬಿನ್ನಿ 9ಕ್ಕೆ1, ಯಜುವೇಂದ್ರ ಚಾಹಲ್‌ 16ಕ್ಕೆ3, ಪವನ್ ನೇಗಿ 15ಕ್ಕೆ2). 

ಆರ್‌ಸಿಬಿ: 9.4 ಓವರ್‌ಗಳಲ್ಲಿ 49 (ಕ್ರಿಸ್‌ ಗೇಲ್‌ 7, ಡಿವಿಲಿಯರ್ಸ್ 8, ಕೇದಾರ್ ಜಾಧವ್‌ 9; ನಥಾನ್ ಕಲ್ಟರ್ ನೈಲ್ 21ಕ್ಕೆ3, ಉಮೇಶ್‌ ಯಾದವ್ 15ಕ್ಕೆ1, ಕ್ರಿಸ್‌ ವೋಕ್ಸ್‌ 6ಕ್ಕೆ3, ಕಾಲಿನ್‌ ಗ್ರಾಂಡ್‌ಹೊಮ್ಮೆ 4ಕ್ಕೆ3).
ಫಲಿತಾಂಶ:ನೈಟ್ ರೈಡರ್ಸ್‌ಗೆ 82 ರನ್‌ ಗೆಲುವು. ಪಂದ್ಯ ಶ್ರೇಷ್ಠ: ಕಲ್ಟರ್‌ ನೈಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT