ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳವೆ ಬಾವಿಯಿಂದ ಎದ್ದು ಬಂದಿದ್ದ ಕಲ್ಲವ್ವ...

Last Updated 23 ಏಪ್ರಿಲ್ 2017, 20:24 IST
ಅಕ್ಷರ ಗಾತ್ರ

ಬಾಗಲಕೋಟೆ: ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಝುಂಜರವಾಡ ಗ್ರಾಮದ ಕೊಳವಿ ಬಾವಿಯೊಳಗೆ ಆರು ವರ್ಷದ ಬಾಲಕಿ ಕಾವೇರಿ ಅಜಿತ್‌ ಮಾದರ ಬಿದ್ದಿದ್ದು, ಈಕೆ ಬದುಕಿ ಉಳಿಯಲೆಂದು ರಾಜ್ಯದ ಅನೇಕ ಕಡೆ ಪ್ರಾರ್ಥನೆ, ಪೂಜೆ–ಪುನಸ್ಕಾರಗಳು ನಡೆಯುತ್ತಿವೆ. ಇಂಥದೇ ಒಂದು ಘಟನೆ ತಾಲ್ಲೂಕಿನಲ್ಲಿ 2006ರಲ್ಲಿ ನಡೆದಿದ್ದು, ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಹಿಳೆಯೊಬ್ಬರನ್ನು ಆಗ ರಕ್ಷಿಸಲಾಗಿತ್ತು.

ಸಾವು ಗೆದ್ದ ಮಹಿಳೆ: ಬಾಗಲಕೋಟೆ ತಾಲ್ಲೂಕಿನ ಶೀಗಿಕೇರಿ ಗ್ರಾಮದ ಕಲ್ಲವ್ವ ಶ್ರೀಶೈಲ ಗದಿಗೆನ್ನವರ ಎಂಬ ಮಹಿಳೆ ಬಾಬು ಯಲಿಗಾರ ಅವರ ಹೊಲದಲ್ಲಿರುವ 27 ಅಡಿಯ ಕೊಳವೆ ಬಾವಿಯಲ್ಲಿ 2006ರ ಆಗಸ್ಟ್‌ 25ರಂದು ರಾತ್ರಿ 7 ಗಂಟೆಗೆ ಬಿದ್ದಿದ್ದರು. ಬಾವಿಗೆ ಬಿದ್ದು 3 ಗಂಟೆ ಆದರೂ ಯಾರಿಗೂ ವಿಷಯ ಗೊತ್ತಾಗಿರಲ್ಲಿಲ್ಲ. ಆದರೆ, ಬೆಳಗಿನ ಜಾವ 3 ಗಂಟೆಗೆ ಕಲ್ಲವ್ವನ ಚೀರಾಟ  ಕೇಳಿಸಿಕೊಂಡ ಗ್ರಾಮಸ್ಥರು ಪೊಲೀಸರಿಗೆ ಮತ್ತು ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು.

ಮಹಿಳೆ ಬಾವಿಗೆ ಬಿದ್ದ ವಿಷಯ ತಿಳಿದ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆಗೆ ಜೆಸಿಬಿ, ಅಗ್ನಿ ಶಾಮಕ ದಳದ ಸಿಬ್ಬಂದಿಗಳು ನಡೆಸಿದ ಸತತ ನಾಲ್ಕು ತಾಸಿನ ಕಾರ್ಯಾಚರಣೆಯ ಫಲದಿಂದ ಕಲ್ಲವ್ವ ಬದುಕಿ ಉಳಿದರು.

ಕ್ಷಿಪ್ರ ಕಾರ್ಯಾಚರಣೆ: ಕಲ್ಲವ್ವ ಬಾವಿಗೆ ಬಿದ್ದ ಸುದ್ದಿ ತಿಳಿದ ನಂತರ ಗಂಡನ ಮುಖ ಕಳೆಗುಂದಿತ್ತು. ಕಲ್ಲವ್ವ ಬದುಕಿ ಬರಲಿ ಎಂದು ಇಡೀ ಊರಿನ ಜನರು ಹಾರೈಸಿದ್ದರು. ಜನರ ಹಾರೈಕೆ, ಅವಳ ಅದೃಷ್ಟ ಹಾಗೂ ಸಿಬ್ಬಂದಿಗಳ ಕಾರ್ಯಾಚರಣೆಯ ಫಲವಾಗಿ ಆಕೆ ಬದುಕಿ ಉಳಿದರು.

ತುಂಬಿದ ಸಂಸಾರ: ಅಂದು ಬಾವಿಗೆ ಬಿದ್ದು ಸಾವನ್ನು ಗೆದ್ದು ಬಂದಿರುವ ಕಲ್ಲವ್ವ ಈಗ ಬಾಗಲಕೋಟೆ ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ ವಾಸವಾಗಿದ್ದಾರೆ. ಅವರಿಗೆ ಪುತ್ರಿ ಮತ್ತು ಇಬ್ಬರು ಪುತ್ರರಿದ್ದಾರೆ. ಇದೇ ಗ್ರಾಮದಲ್ಲಿ ಹೊಲ ಲಾವಣಿ ಪಡೆದುಕೊಂಡು ಮಕ್ಕಳು ಹಾಗೂ ಗಂಡನ ಜೊತೆಗೆ ಸಂಸಾರ ನಡೆಸುತ್ತಿದ್ದಾರೆ.

ರಾಜ್ಯದಲ್ಲಿ ಅನೇಕ ಕಡೆಗೆ ಇಂತಹ ಕೊಳವೆ ಬಾವಿಗಳ ದುರಂತ ನಡೆದಿವೆ. ಅದರಲ್ಲಿ ಬದುಕಿ ಬಂದಿರುವ ಇತಿಹಾಸವಿಲ್ಲ. ಅಂದು ಅದೃಷ್ಟವಾಗಿ ಕಲ್ಲವ್ವ ಬದುಕಿ ಬಂದಿದ್ದು ವಿಶೇಷ. ಆದರೆ 2014ರಲ್ಲಿ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಸೂಳಿಕೇರಿ ಗ್ರಾಮದಲ್ಲಿ ತಿಮ್ಮಣ್ಣ ಕೊಳವೆ ಬಾವಿಗೆ ಬಿದ್ದು ಸಾವಿಗೀಡಾದ ಘಟನೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT