ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

27 ಹಳ್ಳಿಗಳಿಗೆ ಟ್ಯಾಂಕರ್ ನೀರು ಪೂರೈಕೆ

Last Updated 24 ಏಪ್ರಿಲ್ 2017, 4:43 IST
ಅಕ್ಷರ ಗಾತ್ರ

ಹಿರಿಯೂರು: ‘ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುತ್ತಿದ್ದು, ಪ್ರಸ್ತುತ 27 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸ
ಲಾಗುತ್ತಿದೆ.  ಈ ರೀತಿಯ ವ್ಯವಸ್ಥೆಯನ್ನು ಇನ್ನಷ್ಟು ಹೆಚ್ಚಿಸಬೇಕಾಗುತ್ತದೆ’ ಎಂದು ಎಂದು ಗ್ರಾಮೀಣ ನೈರ್ಮಲ್ಯ ಮತ್ತು ಕುಡಿಯುವ ನೀರು ಸರಬರಾಜು ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ತಿಳಿಸಿದರು.

ನಗರದ ಸಾಮರ್ಥ್ಯ ಸೌಧದಲ್ಲಿ ಶನಿವಾರ ಶಾಸಕ ಡಿ.ಸುಧಾಕರ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಶ್ರೀಧರ ಬಾರಿಕೇರ್  ಮಾತನಾಡಿ, ‘ಕುಡಿಯುವ ನೀರಿನ ಸಮಸ್ಯೆ ನಿರ್ವಹಿಸುವ ಸಲುವಾಗಿ ವಿವಿಧ ಗ್ರಾಮಗಳಲ್ಲಿ ಒಟ್ಟು 23 ಖಾಸಗಿ ಕೊಳವೆಬಾವಿಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದರು.

ಇದಕ್ಕೆ ದನಿಗೂಡಿಸಿದ ಮಂಜುನಾಥ್, ‘ಹುಚ್ಚವ್ವನಹಳ್ಳಿ, ಸೂರಪ್ಪನಹಟ್ಟಿ, ಸರಸ್ವತಿಹಟ್ಟಿ, ಮುಂಗುಸವಳ್ಳಿ, ಸಕ್ಕರ, ರಂಗೇನಹಳ್ಳಿ
ಗಳಲ್ಲಿ ಕೊರೆಸಿದ್ದ ಹತ್ತಾರು ಕೊಳವೆಬಾವಿಗಳು ಬತ್ತಿ ಹೋಗಿವೆ. ಹೀಗಾಗಿ ನೀರು ಪೂರೈಕೆ ಸವಾಲಿನ ಕೆಲಸವಾಗಿದೆ’ ಎಂದರು.

‘ಅಂತರ್ಜಲ ಕುಸಿದಿದ್ದು, ಸರ್ಕಾರ ಕೊಳವೆಬಾವಿ ಕೊರೆಸದಂತೆ ಆದೇಶ ಹೊರಡಿಸಿದೆ. ಆದ್ದರಿಂದ ಎಲ್ಲಿ ನೀರು ಸಿಗುತ್ತದೋ ಅಲ್ಲಿಂದ ಟ್ಯಾಂಕರ್‌ಗಳ ಮೂಲಕ ಜನರಿಗೆ ನೀರು ಕೊಡಿ. ಪದೇಪದೇ ಕೊಳವೆಬಾವಿ ಕೊರೆಸುವ ಪ್ರಸ್ತಾಪ ತರಬೇಡಿ’ ಎಂದು ಶಾಸಕರು ಸೂಚಿಸಿದರು.

‘ವಾಣಿ ವಿಲಾಸ ಜಲಾಶಯದ ಅಚ್ಚುಕಟ್ಟು ಪ್ರದೇಶ ಹೊರತುಪಡಿಸಿ ಉಳಿದ ಕಡೆ ಫ್ಲೋರೈಡ್ ಅಂಶ ಹೆಚ್ಚಿದ್ದು, ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ನೀರೇ ಸಿಗುತ್ತಿಲ್ಲ. ಕನಿಷ್ಠ 60 ಗ್ರಾಮಗಳಲ್ಲಿ ಫ್ಲೋರೈಡ್ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿದೆ’ ಎಂದು ಮಂಜುನಾಥ್ ತಿಳಿಸಿದರು.

‘ತಾಲ್ಲೂಕಿನಲ್ಲಿ ನೀರಿಗಾಗಿ ಜನ ಪರದಾಡುತ್ತಿದ್ದರೆ, ನಗರ ಪ್ರದೇಶದಲ್ಲಿ ನೀರು ಪೋಲಾಗುತ್ತಿದೆ ಎಂಬ ದೂರುಕೇಳಿಬಂದಿದೆ. ನಲ್ಲಿಗಳಿಗೆ ನಿಯಂತ್ರಣ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆ ಕಾರಣ. ಮೀಟರ್ ಅಳವಡಿಸಿ, ಅನಧಿಕೃತ ನಲ್ಲಿಗಳ ಸಂಪರ್ಕ ಕಡಿತಗೊಳಿಸಿ’ ಎಂದು ಆಯುಕ್ತರಿಗೆ ಶಾಸಕರು ತಾಕೀತು ಮಾಡಿದರು.

ಆಗಸ್ಟ್‌ವರೆಗೆ ಕುಡಿಯುವ ನೀರು: ‘ತಾಲ್ಲೂಕಿನ ವಾಣಿ ವಿಲಾಸ ಜಲಾಶಯದಲ್ಲಿ 65.15 ಅಡಿಗಳಷ್ಟು ನೀರಿದ್ದು, ಆಗಸ್ಟ್ ತಿಂಗಳವರೆಗೆ ಕುಡಿಯುವ ನೀರಿಗೆ ಸಮಸ್ಯೆ ಆಗದು’ ಎಂದು ನೀರಾವರಿ ನಿಗಮದ ಎಂಜಿನಿಯರ್ ವೀರಭದ್ರಸ್ವಾಮಿ ತಿಳಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಶಂಕರ ಮೂರ್ತಿ ಮಾತನಾಡಿ, ‘ವಾಣಿ ವಿಲಾಸ ಅಚ್ಚುಕಟ್ಟು ಪ್ರದೇಶದಲ್ಲಿ ಸಾವಿರಾರು ಎಕರೆ ತೆಂಗು, ಅಡಿಕೆ ಬೆಳೆ
ನೀರಿಲ್ಲದೆ ಒಣಗುತ್ತಿದ್ದು, ಮಾನವೀಯ ಹಿನ್ನೆಲೆಯಲ್ಲಿ ಜಲಾಶಯದ ನೀರನ್ನು ಹರಿಸಬೇಕು’ ಎಂದು ಮನವಿ ಮಾಡಿದರು.

ಸಭೆಗೆ ಪೂರಕ ಮಾಹಿತಿ ನೀಡದ ಎಂಟು ಇಲಾಖೆ ಅಧಿಕಾರಿಗಳು ಹಾಗೂ ಸಭೆಗೆ ಗೈರುಹಾಜರಾದ ಇಲಾಖೆಗಳ ಅಧಿಕಾರಿಗಳ ವಿರುದ್ಧ ಗರಂ ಆದ ಶಾಸಕರು ಮುಂದಿನ ಸಭೆಗೆ ಸಮಗ್ರ ಮಾಹಿತಿಯೊಂದಿಗೆ ಹಾಜರಾಗಲು ಸೂಚಿಸುವಂತೆ ಕಾರ್ಯ ನಿರ್ವಾಹಕ ಅಧಿಕಾರಿಗೆ ಹೇಳಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚಂದ್ರಪ್ಪ, ಉಪಾಧ್ಯಕ್ಷೆ ಚಂದ್ರಕಲಾ, ಕಾಂತರಾಜ್, ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT